More

    ಸಂಪರ್ಕ ಪತ್ತೆಗೆ ಅಡ್ಡಿಪಡಿಸಿದರೆ ಮೊಕದ್ದಮೆ

    ಹಾವೇರಿ: ಕೋವಿಡ್ ಸೋಂಕಿನ ಪಾಸಿಟಿವ್ ವ್ಯಕ್ತಿಗಳ ಪ್ರಾಥಮಿಕ ಹಾಗೂ ದ್ವಿತೀಯ ಸಂರ್ಪತರ ಪತ್ತೆಗೆ ಅಡ್ಡಿಪಡಿಸುವವರ ವಿರುದ್ಧ ಮೊಕದ್ದಮೆ ದಾಖಲಿಸಿ ಎಂದು ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಸಂಜಯ ಶೆಟ್ಟೆಣ್ಣವರ ಸೂಚಿಸಿದರು.

    ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಕೋವಿಡ್ ನಿಯಂತ್ರಣ ಕುರಿತು ಅಧಿಕಾರಿಗಳೊಂದಿಗೆ ಗುರುವಾರ ಏರ್ಪಡಿಸಿದ್ದ ಸಭೆಯಲ್ಲಿ ಮಾತನಾಡಿದ ಅವರು, ಪಾಸಿಟಿವ್ ಪ್ರಕರಣಗಳಲ್ಲಿ ಸಂರ್ಪತರ ಪತ್ತೆ ನೂರಕ್ಕೆ ನೂರರಷ್ಟು ಆಗಬೇಕು. ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ ಎಂದು ವೈದ್ಯಾಧಿಕಾರಿಗಳಿಗೆ ಸೂಚಿಸಿದರು.

    ಕೋವಿಡ್ 2ನೇ ಅಲೆಯ ಪರಿಣಾಮವನ್ನು ಎದುರಿಸಲು ಎಲ್ಲರೂ ಸಿದ್ಧರಾಗಿರಬೇಕು. ಮುಂಜಾಗ್ರತಾ ಕ್ರಮವಾಗಿ ಬಸಾಪುರ ಕಿತ್ತೂರಾಣಿ ಚನ್ನಮ್ಮ ವಸತಿ ಶಾಲೆಯನ್ನು ಕೋವಿಡ್ ಆರೈಕೆ ಕೇಂದ್ರವಾಗಿ ಸಿದ್ಧಗೊಳಿಸಬೇಕು. ಸ್ಯಾನಿಟೈಸ್ ಮಾಡಿ ಅಗತ್ಯ ಬೆಡ್, ಕುಡಿಯುವ ನೀರಿನ ವ್ಯವಸ್ಥೆ ಕೈಗೊಳ್ಳಬೇಕು. ಕೋವಿಡ್ ಆರೈಕೆ ಕೇಂದ್ರಕ್ಕೆ ಬರುವ ರೋಗಿಗಳಿಗೆ ಗುಣಮಟ್ಟದ ಊಟದ ವ್ಯವಸ್ಥೆ ಸೇರಿ ಅಗತ್ಯ ಸೌಲಭ್ಯಗಳನ್ನು ಕಲ್ಪಿಸಬೇಕು. ಇಲ್ಲಿ ವಾಸವಿರುವ ವಿದ್ಯಾರ್ಥಿಗಳನ್ನು ಸ್ಥಳೀಯ ವಸತಿ ನಿಲಯಗಳಿಗೆ ಸ್ಥಳಾಂತರಿಸಿ. ಜಿಲ್ಲೆಯಲ್ಲಿ ಕೋವಿಡ್ ಲಸಿಕೆ ನೀಡುವ ಪ್ರಮಾಣ, ತಪಾಸಣೆ ಪ್ರಮಾಣವನ್ನು ಚುರುಕುಗೊಳಿಸಬೇಕು ಎಂದರು.

    ದೂರು ದಾಖಲಿಸಿ: ಗುತ್ತಲ ಮತ್ತು ಶಿಗ್ಗಾಂವಿಯಲ್ಲಿ ಕೋವಿಡ್ ಪಾಸಿಟಿವ್ ವ್ಯಕ್ತಿಗಳ ಸಂರ್ಪತರ ಪತ್ತೆಗೆ ಮುಂದಾದ ಆರೋಗ್ಯ ಇಲಾಖಾ ಕಾರ್ಯಕರ್ತರೊಂದಿಗೆ ಮನೆಯವರು ಸಹಕರಿಸಲು ನಿರಾಕರಿಸಿದ್ದಾರೆ. ವೈದ್ಯರೊಂದಿಗೆ ದುರ್ವರ್ತನೆ ತೋರುತ್ತಿರುವ ಕುರಿತು ಡಿಎಚ್​ಒ ಡಾ. ಎಚ್.ಎಸ್. ರಾಘವೇಂದ್ರಸ್ವಾಮಿ ಜಿಲ್ಲಾಧಿಕಾರಿ ಗಮನಕ್ಕೆ ತಂದರು. ಆಗ ಜಿಲ್ಲಾಧಿಕಾರಿ, ‘ಸಾರ್ವಜನಿಕರ ಆರೋಗ್ಯ ಮುಖ್ಯವಾಗಿದೆ. ಅಸಹಕಾರ ನೀಡುವ ಇಂತಹ ವ್ಯಕ್ತಿಗಳ ಮೇಲೆ ಕಠಿಣ ಕ್ರಮಕೈಗೊಳ್ಳಿ. ಪೊಲೀಸ್ ಇಲಾಖೆಯ ನೆರವು ಪಡೆದು ದೂರು ದಾಖಲಿಸಿ, ಆ ಮನೆಯನ್ನು ಕಂಟೇನ್ಮೆಂಟ್ ಜೋನ್ ಆಗಿ ನಿರ್ಬಂಧಿಸಿ’ ಎಂದರು.

    ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ಎಚ್.ಎ. ಜಮಖಾನೆ, ಟಿಎಚ್​ಒ ಡಾ. ಪ್ರಭಾಕರ ಕುಂದೂರ, ಡಿಡಿಪಿಐ ಅಂದಾನೆಪ್ಪ ವಡಗೇರಿ, ಪಪೂ ಶಿಕ್ಷಣ ಇಲಾಖೆ ಉಪನಿರ್ದೇಶಕ ನಾಗರಾಜ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪನಿರ್ದೇಶಕ ಶ್ರೀನಿವಾಸ ಆಲದಾರ್ತಿ, ಸಮಾಜಕಲ್ಯಾಣ ಇಲಾಖೆ ಉಪನಿರ್ದೇಶಕ ಜಗದೀಶ ಹೆಬ್ಬಳ್ಳಿ, ವಾರ್ತಾಧಿಕಾರಿ ಡಾ. ಬಿ.ಆರ್. ರಂಗನಾಥ ಇತರರಿದ್ದರು.

    ಜಿಲ್ಲೆಯಲ್ಲಿ 27 ಜನರಿಗೆ ಕರೊನಾ ಪಾಸಿಟಿವ್: ಜಿಲ್ಲೆಯಲ್ಲಿ ಗುರುವಾರ 27 ಜನರಿಗೆ ಕರೊನಾ ಪಾಸಿಟಿವ್ ದೃಢಪಟ್ಟಿದೆ. 5 ಜನ ಗುಣವಾಗಿ ಬಿಡುಗಡೆಗೊಂಡಿದ್ದಾರೆ ಎಂದು ಡಿಎಚ್​ಒ ಡಾ. ಎಚ್.ಎಸ್. ರಾಘವೇಂದ್ರಸ್ವಾಮಿ ತಿಳಿಸಿದ್ದಾರೆ. ರಾಣೆಬೆನ್ನೂರ ತಾಲೂಕಿನಲ್ಲಿ 13, ಹಾನಗಲ್ಲ ತಾಲೂಕಿನಲ್ಲಿ 8, ಬ್ಯಾಡಗಿ 4, ಶಿಗ್ಗಾಂವಿ, ಸವಣೂರ ತಾಲೂಕಿನಲ್ಲಿ ತಲಾ ಒಬ್ಬರಿಗೆ ಗುರುವಾರ ಪಾಸಿಟಿವ್ ವರದಿಯಾಗಿದೆ. ಹಿರೇಕೆರೂರ ತಾಲೂಕಿನ ಇಬ್ಬರು, ಹಾನಗಲ್ಲ, ಸವಣೂರ, ಶಿಗ್ಗಾಂವಿ ತಾಲೂಕಿನಲ್ಲಿ ತಲಾ ಒಬ್ಬರು ಗುಣವಾಗಿ ಬಿಡುಗಡೆಯಾಗಿದ್ದಾರೆ. ಜಿಲ್ಲೆಯಲ್ಲಿ ಇದುವರೆಗೆ 11,544 ಪ್ರಕರಣ ದೃಢಪಟ್ಟಿದ್ದು, ಇದರಲ್ಲಿ 11,147 ಜನ ಗುಣವಾಗಿದ್ದಾರೆ. ಇದುವರೆಗೆ 197 ಜನರು ಕೋವಿಡ್​ಗೆ ಬಲಿಯಾಗಿದ್ದು, ಸದ್ಯ 200 ಸಕ್ರಿಯ ಪ್ರಕರಣಗಳಿದ್ದು, 199 ಜನರು ಸರ್ಕಾರಿ ಆಸ್ಪತ್ರೆಗಳಲ್ಲಿ ಚಿಕಿತ್ಸೆಗೆ ದಾಖಲಾಗಿದ್ದಾರೆ. ಒಬ್ಬರು ಹೋಮ್ ಐಸೋಲೇಷನ್​ನಲ್ಲಿದ್ದಾರೆ.

    ಕೋವಿಡ್ ಪತ್ತೆ ತಪಾಸಣೆ ಚುರುಕುಗೊಳಿಸಲು ಮೊಬೈಲ್ ಯುನಿಟ್ ಅನ್ನು ಹೆಚ್ಚಿಸಲಾಗಿದೆ. ಕೋವಿಡ್ ಪಾಸಿಟಿವ್ ಸಂರ್ಪತರ ಪತ್ತೆ ಕಾರ್ಯ, ಕ್ವಾರಂಟೈನ್ ವಾಚ್ ಗಂಭೀರವಾಗಿ ಪರಿಗಣಿಸಿ. ಕೋವಿಡ್ ತಪಾಸಣೆ ಕಾರ್ಯ ನಿಗದಿತ ಗುರಿ ತಲುಪುತ್ತಿರುವ ಕುರಿತು ಪರಿಶೀಲನೆ ನಡೆಸಬೇಕು. ಹಿರೇಕೆರೂರ, ಹಾನಗಲ್ಲ ಸೇರಿದಂತೆ ಕೆಲವೆಡೆ ತಪಾಸಣೆ ನಿಗದಿತ ಗುರಿ ಸಾಧನೆಯಾಗುತ್ತಿಲ್ಲ.

    | ಮಹಮ್ಮದ್ ರೋಷನ್ ಜಿಪಂ ಸಿಇಒ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts