More

    ಹಿರಿಯ ವಕೀಲರ ವಾದ ಆಲಿಸಿ ಅನುಭವ ಗಳಿಸಿ


    ಮಳವಳ್ಳಿ: ವಕೀಲರು ಪ್ರತಿದಿನ ಅಧ್ಯಯನ ಹಾಗೂ ಕ್ರಿಯಾಶೀಲರಾಗಿರುವುದರ ಜತೆಗೆ ನ್ಯಾಯಾಲಯದಲ್ಲಿ ತಮ್ಮ ಪ್ರಕರಣಗಳ ಮಂಡನೆ ಬಳಿಕ ಇತರ ಕಲಾಪಗಳನ್ನು ಕುಳಿತು ಆಲಿಸುವ ಪ್ರವೃತ್ತಿಯನ್ನು ರೂಢಿಸಿಕೊಳ್ಳಬೇಕು ಎಂದು ಜೆಎಂಎಫ್‌ಸಿ ಹಿರಿಯ ಸಿವಿಲ್ ನ್ಯಾಯಾಧೀಶ ವಿ.ಮಾದೇಶ್ ಸಲಹೆ ನೀಡಿದರು.

    ಪಟ್ಟಣದ ನ್ಯಾಯಾಲಯದ ಆವರಣದಲ್ಲಿ ತಾಲೂಕು ವಕೀಲರ ಸಂಘದ ವತಿಯಿಂದ ಶುಕ್ರವಾರ ಹಮ್ಮಿಕೊಂಡಿದ್ದ ವಕೀಲರ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಇತ್ತೀಚಿನ ದಿನಗಳಲ್ಲಿ ಬಹಳಷ್ಟು ಕಿರಿಯ ವಕೀಲರು ತಮ್ಮ ಕೇಸ್‌ಗಳಿಗೆ ಸಂಬಂಧಿಸಿದ ವಾದ ಮಂಡನೆ ಮುಗಿಯುತ್ತಿದ್ದಂತೆ ಕೋರ್ಟ್ ಹಾಲ್ನಿಂದ ಹೊರನಡೆಯುತ್ತಾರೆ. ವಕೀಲ ವೃತ್ತಿಗೆ ಅಧ್ಯಯನ ಮಾಡಿದರೆ ಸಾಲದು. ಇತರ ಹಿರಿಯ ವಕೀಲರು ವಿವಿಧ ಪ್ರಕರಣಗಳ ಬಗ್ಗೆ ಮಂಡಿಸುವ ವಾದಗಳನ್ನು ಆಲಿಸುವ ಮೂಲಕ ಕಲಾಪಗಳ ವೀಕ್ಷಣೆ ಮಾಡುವುದರಿಂದ ಬಹಳಷ್ಟು ಅನುಭವ ಪಡೆದುಕೊಳ್ಳಬಹುದು ಎಂದರು.

    ಶಾಸಕ ನರೇಂದ್ರಸ್ವಾಮಿ ಮಾತನಾಡಿ, ಹುಟ್ಟು, ಸಾವು ಜೀವ ಸಂಕುಲಕ್ಕೆ ಖಚಿತವಾಗಿದ್ದು, ಜಗತ್ತಿನಲ್ಲಿ ಯಾರೊಬ್ಬರೂ ಪರಿಪೂರ್ಣರಾಗಿರುವುದಿಲ್ಲ. ಮನುಷ್ಯ ಬದುಕಿರುವ ಪ್ರತಿಯೊಂದು ದಿನವೂ ಹೊಸತನದಿಂದ ಕೂಡಿರುವುದರಿಂದ ಅರಿವಿನ ಜ್ಞಾನವನ್ನು ಹೆಚ್ಚಿಸಿಕೊಂಡು ಉತ್ತಮ ಜೀವನ ಸಾಗಿಸಬೇಕು. ಆ ಮೂಲಕ ದೇಹ ಅಳಿದ ನಂತರವೂ ವ್ಯಕ್ತಿಯ ಹೆಸರನ್ನು ಮುಂದಿನ ಪೀಳಿಗೆ ಸ್ಮರಿಸುವಂತಹ ಒಳ್ಳೆಯ ಕೆಲಸಗಳನ್ನು ಮಾಡಬೇಕೆಂದು ತಿಳಿಸಿದರು.

    ಇದೇ ಸಂದರ್ಭದಲ್ಲಿ ವಕೀಲರ ಡೈರಿ ಹಾಗೂ ದಿನದರ್ಶಿಕೆ ಬಿಡುಗಡೆ ಮಾಡಲಾಯಿತು. ಪ್ರಧಾನ ಸಿವಿಲ್ ನ್ಯಾಯಾಧೀಶ ಸಚಿನ್ ಶಿವಪೂಜೆ, ವಕೀಲರ ಸಂಘದ ಅಧ್ಯಕ್ಷ ಡಿ.ಎಂ.ಸುಂದರ್, ಉಪಾಧ್ಯಕ್ಷ ವಿ.ಮಲ್ಲಪ್ಪ, ಪ್ರಧಾನ ಕಾರ್ಯದರ್ಶಿ ಸಿ.ಎಂ.ನಟೇಶ್, ಹಿರಿಯ ನ್ಯಾಯವಾದಿಗಳಾದ ಕೆಂಪರಾಜು, ಮುತ್ತುರಾಜು, ಎಚ್.ವಿ.ನಾಗರಾಜು, ಜಿಪಂ ಮಾಜಿ ಸದಸ್ಯ ಆರ್.ಎನ್.ವಿಶ್ವಾಸ್ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts