More

    ವಿಜಯೇಂದ್ರ ಟೀಮ್ ಸಿದ್ಧ: ಯುವ, ಅನುಭವದ ಸಮ್ಮಿಲನ, ಬಿಜೆಪಿ ಪದಾಧಿಕಾರಿಗಳ ಪಟ್ಟಿ ಪ್ರಕಟ

    ಬೆಂಗಳೂರು: ಸಂಘಟನೆಗೆ ದುಡಿದು ದಣಿದವರಿಗೆ ವಿಶ್ರಾಂತಿ, ಹೊಸ ಮುಖಗಳಿಗೆ ಅವಕಾಶ ನೀಡುವ ಸೂತ್ರದಲ್ಲಿ ರಚಿತವಾದ ಬಿಜೆಪಿ ರಾಜ್ಯ ನೂತನ ಪದಾಧಿಕಾರಿಗಳ ಪಟ್ಟಿ ಶನಿವಾರ ಪ್ರಕಟವಾಗಿದ್ದು, ಹೊಸ ತಂಡವು ಯುವ ಚೈತನ್ಯ ಹಾಗೂ ಅನುಭವದ ಸಮ್ಮಿಲನವಾಗಿದೆ.

    ಮುಂದಿನ ಲೋಕಸಭೆ ಚುನಾವಣೆಗೆ ನಿಗದಿತ ಗುರಿ ಸಾಧನೆ, ಜೆಡಿಎಸ್ ಜತೆಗೆ ಮೈತ್ರಿ ಧರ್ಮ ಪಾಲನೆಗಾಗಿ ಪಕ್ಷದ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರು ತಮಗೆ ಅಗತ್ಯವಾದ ತಂಡವನ್ನು ಕಟ್ಟಿಕೊಂಡಿದ್ದಾರೆ. ಹಾಲಿ-ಮಾಜಿ ಶಾಸಕರು, ವಿಧಾನಸಭೆ ಚುನಾವಣೆಯಲ್ಲಿ ಸೋತವರು, ಟಿಕೆಟ್ ವಂಚಿತರಿಗೂ ಮಣೆ ಹಾಕಿದ್ದು, ಪಕ್ಷ ಸಂಘಟನೆಗೆ ದುಡಿದವರನ್ನು ಸೂಕ್ತ ಸ್ಥಾನಮಾನ ಅರಸಿಕೊಂಡು ಬರುತ್ತವೆ ಎಂಬ ಸಂದೇಶವನ್ನು ರವಾನಿಸಲಾಗಿದೆ. ಹೊಸ ಮುಖಗಳು, ಅನುಭವ ಉಳ್ಳವರಿಗೆ ಆದ್ಯತೆ ನೀಡಲಾಗಿದೆ. ಸಂಭಾವ್ಯ ಕಾರ್ಯಕಾರಿಣಿ ಸಮಿತಿಗೆ ಸದಸ್ಯರ ನೇಮಕದಲ್ಲಿ ಹಿರಿಯರಿಗೆ ಮಣೆ, ಮೋರ್ಚಾಗಳನ್ನು ಪೂರ್ಣ ಪ್ರಮಾಣದಲ್ಲಿ ರಚಿಸುವ ವೇಳೆ ಸಂಭಾವ್ಯ ಅಪಸ್ವರ ಹೋಗಲಾಡಿಸುವ ಪ್ರಯತ್ನಗಳಾಗುವ ನಿರೀಕ್ಷೆಯಿದೆ.

    ಸಮತೋಲನ-ಸಮೀಕರಣ
    ತಲಾ 10 ಉಪಾಧ್ಯಕ್ಷರು, ಕಾರ್ಯದರ್ಶಿಗಳು, ನಾಲ್ಕು ಪ್ರಧಾನ ಕಾರ್ಯದರ್ಶಿಗಳು, ಒಬ್ಬ ಖಜಾಂಚಿ ಹಾಗೂ ಏಳು ಮೋರ್ಚಾಗಳಿಗೆ ಅಧ್ಯಕ್ಷರು ಹೊಸದಾಗಿ ನೇಮಕವಾಗಿದ್ದಾರೆ. ಪಕ್ಷದ ಪದಾಧಿಕಾರಿಗಳ ಹುದ್ದೆ ಹಂಚಿಕೆಯಲ್ಲೂ ಪ್ರಾದೇಶಿಕ ಸಮತೋಲನ, ಜಾತಿ ಮತ್ತು ವರ್ಗಗಳ ಸಮೀಕರಣ, ಮಹಿಳೆಯರಿಗೆ ಆದ್ಯತೆ ನೀಡಲಾಗಿದೆ. ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಮತ್ತು ಬಿ.ವೈ. ವಿಜಯೇಂದ್ರ ಅಪೇಕ್ಷೆಗೆ ವರಿಷ್ಠರು ಅಸ್ತು ಎಂದಿದ್ದು, ಲೋಕ ಚುನಾವಣೆ ತಯಾರಿಗೆ ಬಲ ತುಂಬಿರುವುದು ಮೇಲ್ನೋಟಕ್ಕೆ ಕಾಣುತ್ತದೆ. ಪಕ್ಷದ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ನೇಮಕವಾದ ಬಳಿಕ, ವಿಧಾನ ಪ್ರತಿಪಕ್ಷ ನಾಯಕರಾಗಿ ಆರ್.ಅಶೋಕ್ ಆಯ್ಕೆಯಾದರು. ಬಿಎಸ್​ವೈ ಅನುಭವ, ನಾಯಕತ್ವ ಮತ್ತು ವರ್ಚಸ್ಸು ಪೂರ್ತಿ ಬಳಸಿಕೊಳ್ಳಬೇಕೆಂಬ ಕೂಗಿಗೆ ದೆಹಲಿ ನಾಯಕರು ಓಗೊಟ್ಟಿದ್ದಾರೆ.

    ವರಿಷ್ಠರಿಂದ ಗ್ರೀನ್​ಸಿಗ್ನಲ್
    ಕಳೆದ ಮೂರು ದಿನಗಳಿಂದ ವಿಜಯೇಂದ್ರ ದೆಹಲಿಯಲ್ಲಿ ಬಿಡಾರ ಹೂಡಿದ್ದಾರೆ. ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಷಾ ಸೇರಿ ಹಲವು ಹಿರಿಯ ನಾಯಕರನ್ನು ಭೇಟಿ ಮಾಡಿ, ಪಕ್ಷದ ರಾಷ್ಟ್ರೀಯ ಪದಾಧಿಕಾರಿಗಳ ಸಭೆಯಲ್ಲಿ ಪಾಲ್ಗೊಂಡು ಸಲಹೆ-ಸೂಚನೆಗಳನ್ನು ಪಡೆದಿದ್ದಾರೆ. ದೆಹಲಿ ವರಿಷ್ಠರಿಂದ ಪಟ್ಟಿಗೆ ಗ್ರೀನ್​ಸಿಗ್ನಲ್ ಪಡೆದು, ಅಧಿಕೃತವಾಗಿ ಶನಿವಾರ ಪ್ರಕಟಿಸಿದ್ದಾರೆ.

    ಜನವರಿಗೆ ಉಳಿದ ಪಟ್ಟಿ
    ಮೋರ್ಚಾಗಳಿಗೆ ಪದಾಧಿಕಾರಿಗಳು ಹಾಗೂ ಪ್ರಕೋಷ್ಠಗಳಿಗೆ ನೇಮಕಾತಿಯೂ ಜನವರಿ ಅಂತ್ಯಕ್ಕೆ ಆಗಲಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.

    ನೂತನ ಪದಾಧಿಕಾರಿಗಳು

    ಉಪಾಧ್ಯಕ್ಷರು

    *ಮುರುಗೇಶ್ ನಿರಾಣಿ ಬಾಗಲಕೋಟೆ

    * ಬೈರತಿ ಬಸವರಾಜ ಬೆಂಗಳೂರು

    * ರಾಜೂಗೌಡ ನಾಯಕ್ ಯಾದಗಿರಿ

    * ಎನ್. ಮಹೇಶ್ ಚಾಮರಾಜನಗರ

    * ಅನಿಲ್ ಬೆನಕೆ ಬೆಳಗಾವಿ

    * ಹರತಾಳು ಹಾಲಪ್ಪ ಶಿವಮೊಗ್ಗ

    * ರೂಪಾಲಿ ನಾಯಕ್ ಉತ್ತರಕನ್ನಡ

    * ಡಾ.ಬಸವರಾಜ ಕೇಲಗಾರ ಹಾವೇರಿ

    * ಮಾಳವಿಕಾ ಅವಿನಾಶ ಬೆಂಗಳೂರು

    * ಎಂ.ರಾಜೇಂದ್ರ ಮೈಸೂರು.

    ಪ್ರಧಾನ ಕಾರ್ಯದರ್ಶಿಗಳು

    * ವಿ. ಸುನೀಲ್​ಕುಮಾರ್ ಉಡುಪಿ

    * ಪಿ.ರಾಜೀವ್ ಬೆಳಗಾವಿ

    * ಎನ್.ಎಸ್.ನಂದೀಶರೆಡ್ಡಿ ಬೆಂಗಳೂರು

    * ಜೆ.ಪ್ರೀತಮ್ ಗೌಡ ಹಾಸನ.

    ಕಾರ್ಯದರ್ಶಿಗಳು

    * ಶೈಲೇಂದ್ರ ಬೆಲ್ದಾಳೆ ಬೀದರ್

    * ಡಿ.ಎಸ್. ಅರುಣ್ ಶಿವಮೊಗ್ಗ

    * ಬಸವರಾಜ ಮತ್ತೀಮೋಡ್ ಕಲಬುರ್ಗಿ

    * ಸಿ. ಮುನಿರಾಜು ಚಿಕ್ಕಬಳ್ಳಾಪುರ

    * ವಿನಯ್ ಬಿದರೆ ತುಮಕೂರು

    * ಕ್ಯಾಪ್ಟನ್ ರಾಜೇಶ್ ಚೌಟ ದಕ್ಷಿಣಕನ್ನಡ

    * ಶರಣು ತಳ್ಳಿಕೇರಿ ಕೊಪ್ಪಳ

    * ಲಲಿತಾ ಅನಾಪುರ ಯಾದಗಿರಿ

    * ಡಾ.ಲಕ್ಷ್ಮೀ ಅಶ್ವಿನ್ ಗೌಡ ಮಂಡ್ಯ

    * ಅಂಬಿಕಾ ಹುಲಿನಾಯ್ಕರ್ ತುಮಕೂರು.

    * ಖಜಾಂಚಿ- ಸುಬ್ಬನರಸಿಂಹ ಬೆಂಗಳೂರು

    ಮೋರ್ಚಾಗಳ ರಾಜ್ಯ ಅಧ್ಯಕ್ಷರು

    * ಮಹಿಳಾ ಮೋರ್ಚಾ- ಸಿ.ಮಂಜುಳಾ ಶಿವಮೊಗ್ಗ

    * ಯುವ ಮೋರ್ಚಾ- ಧೀರಜ್ ಮುನಿರಾಜು ಬೆಂಗಳೂರು ಗ್ರಾಮಾಂತರ

    * ಎಸ್​ಟಿ ಮೋರ್ಚಾ- ಬಂಗಾರು ಹನುಮಂತು ಬಳ್ಳಾರಿ

    * ಎಸ್​ಸಿ ಮೋರ್ಚಾ- ಎಸ್. ಮಂಜುನಾಥ್ (ಸಿಮೆಂಟ್ ಮಂಜು) ಹಾಸನ

    * ಹಿಂದುಳಿದ ವರ್ಗಗಳ ಮೋರ್ಚಾ- ರಘು ಕೌಟಿಲ್ಯ ಮೈಸೂರು

    * ರೈತ ಮೋರ್ಚಾ- ಎ.ಎಸ್. ಪಾಟೀಲ್ ನಡಹಳ್ಳಿ ವಿಜಯಪುರ

    * ಅಲ್ಪಸಂಖ್ಯಾತ ಮೋರ್ಚಾ- ಅನಿಲ್ ಥಾಮಸ್.

    ಗುರುತರ ಹೊಣೆಗಾರಿಕೆ
    ಲೋಕಸಭೆ ಚುನಾವಣೆಯಲ್ಲಿ ಜೆಡಿಎಸ್ ಜತೆಗೆ ಮೈತ್ರಿ, ಸ್ಥಾನಗಳ ಹಂಚಿಕೆ ಮತ್ತು ಕ್ಷೇತ್ರಗಳ ಹೊಂದಾಣಿಕೆ ನಿರ್ಧಾರವನ್ನು ವರಿಷ್ಠರು ತಮ್ಮ ವಿವೇಚನೆಗೆ ಕಾದಿಟ್ಟು ಕೊಂಡಿದ್ದಾರೆ. ಆ ಮೂಲಕ ಬಿ.ಎಸ್.ಯಡಿಯೂರಪ್ಪ ಮತ್ತು ಬಿ.ವೈ.ವಿಜಯೇಂದ್ರ ಹೆಗಲಿಗೆ ಲೋಕಸಭೆ ಚುನಾವಣೆಯಲ್ಲಿ ಹೆಚ್ಚಿನ ಸ್ಥಾನಗಳನ್ನು ಗೆಲ್ಲಿಸಿ ಕೊಡುವ ಗುರುತರ ಜವಾಬ್ದಾರಿಯನ್ನು ವರಿಷ್ಠರು ಒಪ್ಪಿಸಿರುವುದು ನಿಚ್ಚಳವಾಗಿದೆ ಎಂದು ಮೂಲಗಳು ತಿಳಿಸಿವೆ.

    ಹೆಚ್ಚಾಗಲಿದೆ ಜೆಎನ್​.1 ಪ್ರಕರಣಗಳ ಸಂಖ್ಯೆ, ಹೆದರುವ ಅಗತ್ಯವಿಲ್ಲ: ಹೀಗೆಂದು ಹೇಳಿದೆ ಉನ್ನತ ವೈದ್ಯಕೀಯ ಸಂಸ್ಥೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts