More

    ಮದ್ಯದಂಗಡಿ ಬೇಕೇಬೇಕು.. ಬೇಡವೇ ಬೇಡ…

    ರಿಪ್ಪನ್‌ಪೇಟೆ: ಮದ್ಯದಂಗಡಿ ತೆರೆಯದಂತೆ ಆಗ್ರಹಿಸಿ ಕೆಲವರು ಪ್ರತಿಭಟನೆ ನಡೆಸಿದರೆ, ಮತ್ತೆ ಕೆಲವರು ಅಂಗಡಿ ಆರಂಭಿಸಲು ಅವಕಾಶ ನೀಡುವಂತೆ ಆಗ್ರಹಿಸಿ ಮನವಿ ಸಲ್ಲಿಸಿದರು.ಈ ಸಂಬಂಧ ಆರೋಪ-ಪ್ರತ್ಯಾರೋಪಗಳು ಕೇಳಿಬಂದಿದ್ದು, ಪರ-ವಿರೋಧ ದೂರು ದಾಖಲಾಗಿದೆ.

    ಇಲ್ಲಿನ ನೆಹರು ಬಡಾವಣೆಯಲ್ಲಿ ನೂತನವಾಗಿ ಮಂಜೂರಾಗಿರುವ ಮದ್ಯದಂಗಡಿ ಸಿಎಲ್-7ಗೆ ವಿರೋಧ ವ್ಯಕ್ತಪಡಿಸಿ, ಅಂಗಡಿಗೆ ಮದ್ಯ ಇಳಿಸದಂತೆ ಆಗ್ರಹಿಸಿ ಗ್ರಾಪಂ ಸದಸ್ಯ ಆಸೀಫ್ ನೇತೃತ್ವದಲ್ಲಿ ಗ್ರಾಮಸ್ಥರು ಶುಕ್ರವಾರ ಸಂಜೆ ಪ್ರತಿಭಟನೆ ನಡೆಸಿದರು. ಮದ್ಯದಂಗಡಿ ತೆರೆಯಲು ಲೈಸೆನ್ಸ್ ಹೊಂದಿರುವ ಮಾಲೀಕ ರಂಗನಾಥ ತನ್ನ ಅಂಗಡಿಗೆ ಸಾಗರದಲ್ಲಿರುವ ಸರ್ಕಾರಿ ಸ್ವಾಮ್ಯದ ಕೆಎಸ್‌ಬಿಸಿಎಲ್‌ನಿಂದ ಮದ್ಯ ತಂದು ಇಳಿಸುವ ಸಂದರ್ಭದಲ್ಲಿ ಗ್ರಾಮಸ್ಥರು ವಿರೋಧ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ರಂಗನಾಥ ಹಾಗೂ ಗ್ರಾಮಸ್ಥರ ನಡುವೆ ಮಾತಿನಚಕಮಕಿ ಉಂಟಾಗಿದ್ದು ಸುದ್ದಿ ತಿಳಿಯುತ್ತಿದ್ದಂತೆ ಸ್ಥಳಕ್ಕಾಗಮಿಸಿದ ಪೊಲೀಸರು ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತಂದರು.
    ಈ ಸಂಬಂಧ ಏನೇ ಆರೋಪ, ಪ್ರತ್ಯಾರೋಪಗಳಿದ್ದರು ಪೊಲೀಸ್ ಠಾಣೆಗೆ ಆಗಮಿಸಿ ದೂರು ನೀಡುವಂತೆ ಸೂಚಿಸಿದ ಪೊಲೀಸರು ಮದ್ಯ ಸಮೇತ ವಾಹನವನ್ನು ಠಾಣೆಗೆ ತೆಗೆದುಕೊಂಡು ಹೋದರು.
    ಲೈಸೆನ್ಸ್ ಹೊಂದಿದ ಮದ್ಯ ಹಾಗೂ ವಾಹನವನ್ನು ತಡೆದು ತೊಂದರೆ ನೀಡಿದ್ದಾರೆ ಎಂದು ಅಂಗಡಿ ಮಾಲೀಕ ರಂಗನಾಥ ದೂರು ನೀಡಿದರೆ, ನನ್ನ ಮೇಲೆ ವಾಹನ ಹಾಯಿಸಲು ಬಂದು ಹಲ್ಲೆ ನಡೆಸಲು ಮುಂದಾಗಿದ್ದರು ಎಂದು ಗ್ರಾಪಂ ಸದಸ್ಯ ಆಸೀಫ್ ಪ್ರತಿದೂರು ದಾಖಲಿಸಿದ್ದಾರೆ.
    ಶನಿವಾರ ಬೆಳಗ್ಗೆ ತೀರ್ಥಹಳ್ಳಿ ಡಿವೈಎಸ್‌ಪಿ ಗಜಾನನ ವಾಮನ ಸುತಾರ, ಅಬಕಾರಿ ಉಪ ಅಧೀಕ್ಷಕ ಶಿವಪ್ರಸಾದ್ ನೂತನ ಮದ್ಯದಂಗಡಿಗೆ ತೆರಳಿ ಪರಿಶೀಲನೆ ನಡೆಸಿದರು. ಈ ವೇಳೆ ಪೊಲೀಸ್ ಠಾಣೆಗೆ ಆಗಮಿಸಿದ ಸಾರ್ವಜನಿಕರು ನೆಹರು ಬಡಾವಣೆ ಜನವಸತಿ ಪ್ರದೇಶವಾಗಿರುವುದರಿಂದ ಮದ್ಯದಂಗಡಿ ಆರಂಭಕ್ಕೆ ಅವಕಾಶ ಕಲ್ಪಿಸಿಕೊಡಬಾರದಾಗಿ ಮನವಿ ಸಲ್ಲಿಸಿದರು. ಅಬಕಾರಿ ನಿರೀಕ್ಷಕ ನಾಗರಾಜ್, ಉಪ ನಿರೀಕ್ಷಕಿ ವಾಸವಿ, ಪಿಎಸ್‌ಐ ಸಿ.ಆರ್.ಪ್ರವೀಣ್, ಕೆಂಚನಾಲ ಗ್ರಾಪಂ ಅಧ್ಯಕ್ಷ ಉಬೇದುಲ್ಲಾ ಷರೀಫ್, ಗ್ರಾಪಂ ಸದಸ್ಯರಾದ ವೇದಾವತಿ, ಧನಲಕ್ಷ್ಮೀ, ಸಾರಾಬಿ ಹೈದರ್, ಪ್ರಮುಖರಾದ ಎಂ.ಎಂ.ಪರಮೇಶ್, ಕುಮಾರ್, ಮೋಣುಸಾಬ್, ರಫೀಕ್ ಇತರರಿದ್ದರು.

    ಮದ್ಯದಂಗಡಿ ತೆರೆಯುವಂತೆ ಬೇಡಿಕೆ
    ಇದೇ ಸಂದರ್ಭದಲ್ಲಿ ಕೆಲವರು ಸದರಿ ಜಾಗ ಮದ್ಯದಂಗಡಿ ತೆರೆಯಲು ಅನುಕೂಲಕರವಾಗಿದ್ದು ಸಾರ್ವಜನಿಕರಿಗೆ ಉಪಯುಕ್ತವಾಗಲಿದೆ. ಈ ಭಾಗದ ಗ್ರಾಹಕರಿಗೆ ಅಗತ್ಯವಿರುವುದರಿಂದ ಅಲ್ಲಿಯೇ ಮದ್ಯದಂಗಡಿ ಆರಂಭಿಸಬೇಕು ಎಂದು ಮನವಿ ಸಲ್ಲಿಸಿದರು. ಮನವಿ ಸ್ವೀಕರಿಸಿದ ಅಬಕಾರಿ ಉಪ ಅಧೀಕ್ಷಕ ಶಿವಪ್ರಸಾದ್ ಮಾತನಾಡಿ, ಮದ್ಯದಂಗಡಿಯ ಸ್ಥಳ ಅಬಕಾರಿ ನಿಯಮದಂತೆ ಸೂಕ್ತವಾಗಿದೆ. ಈ ಪ್ರದೇಶದ ಗ್ರಾಮಸ್ಥರ ವಿರೋಧ ಇರುವುದರಿಂದ ತಾತ್ಕಾಲಿಕವಾಗಿ ಮದ್ಯವನ್ನು ಹೊಸನಗರ ಅಬಕಾರಿ ಕಚೇರಿಯಲ್ಲಿ ಇರಿಸಲಾಗುವುದು. ಮೇಲಧಿಕಾರಿಗಳ ಗಮನಕ್ಕೆ ತಂದು ಮುಂದಿನ ಕ್ರಮ ಜರುಗಿಸಲಾಗುವುದು ಎಂದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts