More

    7ನೇ ಬಾರಿ ಪ್ರತಿಷ್ಠಿತ ಬ್ಯಾಲನ್ ಡಿಓರ್ ಪ್ರಶಸ್ತಿ ಜಯಿಸಿದ ಲಿಯೋನೆಲ್ ಮೆಸ್ಸಿ

    ಪ್ಯಾರಿಸ್: ಅರ್ಜೆಂಟೀನಾ ಪರ ಮೊಟ್ಟಮೊದಲ ಪ್ರಶಸ್ತಿ ಗೆದ್ದ ಮತ್ತು ಬಾರ್ಸಿಲೋನಾ ಪರ ಕೊನೆಯದಾಗಿ ಆಡಿದ ಫುಟ್‌ಬಾಲ್ ಋತುವಿನ ಅಮೋಘ ಸಾಧನೆಗಾಗಿ ಲಿಯೋನೆಲ್ ಮೆಸ್ಸಿ ಪ್ರತಿಷ್ಠಿತ ಬ್ಯಾಲನ್ ಡಿಓರ್ (ಚಿನ್ನದ ಚೆಂಡು) ಪ್ರಶಸ್ತಿಯನ್ನು ದಾಖಲೆಯ 7ನೇ ಬಾರಿ ಒಲಿಸಿಕೊಂಡಿದ್ದಾರೆ. ಸ್ಪೇನ್ ಆಟಗಾರ್ತಿ ಅಲೆಕ್ಸಿಯಾ ಪುಟೆಲ್ಲಾಸ್ ಮಹಿಳಾ ವಿಭಾಗದಲ್ಲಿ ಈ ಪ್ರಶಸ್ತಿಗೆ ಭಾಜನರಾಗಿದ್ದಾರೆ.

    34 ವರ್ಷದ ಮೆಸ್ಸಿ ಕಳೆದ ಜುಲೈನಲ್ಲಿ ಅರ್ಜೆಂಟೀನಾ ತಂಡವನ್ನು ಕೋಪಾ ಅಮೆರಿಕ ಪ್ರಶಸ್ತಿ ಗೆಲುವಿನತ್ತ ಮುನ್ನಡೆಸಿದ್ದರು. ಅರ್ಜೆಂಟೀನಾ ಪರ ಆಡಿದ 4 ಪ್ರಮುಖ ಟೂರ್ನಿಗಳ ಫೈನಲ್ ಸೋಲಿನ ಬಳಿಕ ಮೆಸ್ಸಿ ಚೊಚ್ಚಲ ಪ್ರಶಸ್ತಿ ಒಲಿಸಿಕೊಂಡಿದ್ದರು. ‘ನಾನು ಮತ್ತೊಮ್ಮೆ ಈ ಪ್ರಶಸ್ತಿ ಗೆದ್ದಿರುವುದಕ್ಕೆ ಖುಷಿಯಾಗುತ್ತಿದೆ. ಹೊಸ ಪ್ರಶಸ್ತಿಗಳಿಗಾಗಿ ಹೋರಾಡುತ್ತಿರುವ ಖುಷಿಯೂ ಇದೆ. ನಾನಿನ್ನೂ ಎಷ್ಟು ವರ್ಷಗಳ ಕಾಲ ಆಡುವೆನೆಂದು ಗೊತ್ತಿಲ್ಲ. ಆದರೆ ಇನ್ನೂ ಸಾಕಷ್ಟು ವರ್ಷಗಳ ಕಾಲ ಆಡುವ ಆಸೆ ಇದೆ. ಈ ಪ್ರಶಸ್ತಿಗಾಗಿ ಬಾರ್ಸಿಲೋನಾ ಮತ್ತು ಅರ್ಜೆಂಟೀನಾ ತಂಡದ ಎಲ್ಲ ಸಹ-ಆಟಗಾರರಿಗೆ ಧನ್ಯವಾದ ಹೇಳುವೆ’ ಎಂದು ಮೆಸ್ಸಿ ಪ್ರಶಸ್ತಿ ಸ್ವೀಕರಿಸಿ ನುಡಿದರು.

    ಮೆಸ್ಸಿ 613 ಅಂಕ ಗಳಿಸಿ ಪ್ರಶಸ್ತಿ ಗೆದ್ದರೆ, 580 ಅಂಕ ಗಳಿಸಿದ ಪೋಲೆಂಡ್ ಮತ್ತು ಬೇಯನ್ ಮ್ಯೂನಿಚ್ ಸ್ಟ್ರೈಕರ್ ರಾಬರ್ಟ್ ಲೆವಾಂಡೋವ್‌ಸ್ಕಿ 2ನೇ ಸ್ಥಾನಕ್ಕೆ ತೃಪ್ತಿಪಟ್ಟರು. ಪೋರ್ಚುಗಲ್ ತಾರೆ ಹಾಗೂ 5 ಬಾರಿಯ ವಿಜೇತ ಕ್ರಿಶ್ಚಿಯಾನೊ ರೊನಾಲ್ಡೊ ಈ ಬಾರಿ ಪ್ರಶಸ್ತಿ ರೇಸ್‌ನಲ್ಲಿ 6ನೇ ಸ್ಥಾನಕ್ಕೆ ಕುಸಿದರು.

    ಫ್ರಾನ್ಸ್ ಫುಟ್‌ಬಾಲ್ ಮ್ಯಾಗಝಿನ್‌ನಿಂದ 1956ರಿಂದ ಈ ಪ್ರಶಸ್ತಿಯನ್ನು ವರ್ಷದ ಅತ್ಯುತ್ತಮ ಫುಟ್‌ಬಾಲ್ ಆಟಗಾರನಿಗೆ ಕೊಡಲಾಗುತ್ತಿದೆ. ಕರೊನಾ ಹಾವಳಿಯಿಂದಾಗಿ ಫುಟ್‌ಬಾಲ್ ಚಟುವಟಿಕೆ ಸಾಕಷ್ಟು ಸ್ಥಗಿತಗೊಂಡಿದ್ದ ಕಾರಣ ಕಳೆದ ವರ್ಷ ಈ ಪ್ರಶಸ್ತಿ ನೀಡಲಾಗಿರಲಿಲ್ಲ. ಮೆಸ್ಸಿ ಈ ಮುನ್ನ 2009, 2010, 2011, 2012, 2015, 2019ರಲ್ಲಿ ಬ್ಯಾಲನ್ ಡಿಓರ್ ಪ್ರಶಸ್ತಿ ಗೆದ್ದಿದ್ದರು. ಈಗ ಫ್ರಾನ್ಸ್‌ನ ಪ್ಯಾರಿಸ್ ಸೇಂಟ್-ಜರ್ಮೈನ್ ತಂಡದ ಆಟಗಾರರಾಗಿರುವ ಮೆಸ್ಸಿ, ಬಾರ್ಸಿಲೋನಾ ಪರ ಆಡಿದ ಕೊನೇ ಋತುವಿನಲ್ಲಿ 38 ಗೋಲು ಬಾರಿಸಿದ್ದರು. ಕೋಪಾ ಅಮೆರಿಕ ಟೂರ್ನಿಯಲ್ಲಿ ಅರ್ಜೆಂಟೀನಾ ಪರ 4 ಗೋಲು ಸಿಡಿಸಿದ್ದರು ಮತ್ತು 5 ಗೋಲು ಗಳಿಕೆಗೆ ನೆರವಾಗಿದ್ದರು.

    ಐಪಿಎಲ್ ಇತಿಹಾಸದಲ್ಲೇ ದುಬಾರಿ ಮೊತ್ತಕ್ಕೆ ತಂಡವೊಂದರ ಪಾಲಾಗಲಿದ್ದಾರೆ ಕನ್ನಡಿಗ ಕೆಎಲ್ ರಾಹುಲ್..?

    PHOTO: ಟೀಮ್ ಇಂಡಿಯಾ ವೇಗಿ ಶಾರ್ದೂಲ್ ಠಾಕೂರ್ ನಿಶ್ಚಿತಾರ್ಥ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts