More

    ಲಿಂಗಾಯತ ಧರ್ಮ ಜಾಗೃತಿ ಕಾರ್ಯಕ್ರಮ

    ಕೊಳ್ಳೇಗಾಲ: ಲಿಂಗಾಯತ ಧರ್ಮ ಬಸವಣ್ಣನವರಿಂದಲೇ ಸ್ಥಾಪಿತವಾಗಿದ್ದು, ಕೆಲವರು ಇದರ ಬಗ್ಗೆ ಅನವಶ್ಯಕವಾಗಿ ಗೊಂದಲ ಮೂಡಿಸುತ್ತಿದ್ದಾರೆ ಎಂದು ಮುಡಿಗುಂಡ ವಿರಕ್ತ ಮಠದ ಶ್ರೀಕಂಠಸ್ವಾಮೀಜಿ ಹೇಳಿದರು.

    ಪಟ್ಟಣದ ಬಸವೇಶ್ವರ ಭವನದ (ಹೋಟೆಲ್) ಸಭಾಂಗಣದಲ್ಲಿ ಸೋಮವಾರ ಜಾಗತಿಕ ಲಿಂಗಾಯತ ಮಹಾಸಭಾ ವತಿಯಿಂದ ಆಯೋಜಿಸಿದ್ದ ಲಿಂಗಾಯತ ಧರ್ಮ ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿದರು.

    ಲಿಂಗಾಯತ ಧರ್ಮ ಸ್ವಯಂ ಬಸವಣ್ಣನವರಿಂದಲೇ ಸ್ಥಾಪಿತವಾಗಿ, ಮೌಢ್ಯ-ಕಂದಾಚಾರಗಳಿಗೆ ಸೆಡ್ಡು ಹೊಡೆದು ಸಮಾನತೆ ಸಾರಿತು. ಸರ್ವರೂ ಒಂದೇ ಎಂದು ಬೋಧಿಸುವ ಮೂಲಕ ಧಾರ್ಮಿಕ ಸಂಕೋಲೆಗಳಿಗೆ ನಾಂದಿ ಹಾಡಿತು. ನಾವು ಸಂವಿಧಾನದ ಚೌಕಟ್ಟಿನಲ್ಲಿ ಬದುಕುತ್ತಿರುವುದರಿಂದ ಸ್ವತಂತ್ರ ಧರ್ಮದ ಮುದ್ರೆ ಅಗತ್ಯವಾಗಿದ್ದು, ಸ್ವತಂತ್ರ ಧರ್ಮದ ಹೋರಾಟ ಬಹಳ ದಿನಗಳಿಂದ ನಡೆಯುತ್ತಿದೆ ಎಂದರು.

    ‘ಸ್ವತಂತ್ರ ಧರ್ಮದ ಮಾನ್ಯತೆಗಾಗಿ ವೀರಶೈವ-ಲಿಂಗಾಯತ ಧರ್ಮ’ ಎಂಬ ತಲೆೆಬರಹದಲ್ಲಿ ಎರಡು ಬಾರಿ ಕೇಂದ್ರಕ್ಕೆ ಪ್ರಸ್ತಾವನೆ ಕಳುಹಿಸಲಾಗಿತ್ತು. ಆದರೆ, ವೀರಶೈವ ಪದವು ಹಿಂದು ಧರ್ಮದ ಆಚರಣೆಯ ಭಾಗವೆಂದು ಪರಿಗಣಿಸಿ, ಕೋರಿಕೆಯನ್ನು ವಾಪಸ್ ಮಾಡಲಾಯಿತು. ಸ್ವತಂತ್ರ ಧರ್ಮ ನಡೆಯುತ್ತಿರುವ ಹೋರಾಟ ಇನ್ನೂ ನಿಂತಿಲ್ಲ. ಜಾಗತಿಕ ಲಿಂಗಾಯತ ಮಹಾಸಭಾ ಸುಮಾರು ಆರು ವರ್ಷಗಳಿಂದಲೂ ಈ ಹೋರಾಟದಲ್ಲಿ ಮುಂಚೂಣಿ ವಹಿಸಿದೆ ಎಂದರು.

    ಹಿರಿಯ ನ್ಯಾಯವಾದಿ ವಿರೂಪಾಕ್ಷ ಮಾತನಾಡಿ, ಲಿಂಗಾಯತ ಸ್ವತಂತ್ರ ಧರ್ಮವಾಗಿದ್ದು, ಜಗಜ್ಯೋತಿ ಬಸವಣ್ಣನವರು ಸ್ಥಾಪಿಸಿದ ಜಗತ್ತಿನ ಸರ್ವಶ್ರೇಷ್ಠ ಧರ್ಮ ಎನಿಸಿದೆ. ಇದಕ್ಕೆ ಬಸವಾದಿ ಶರಣರ ವಚನಗಳು ದಾಖಲೆಯಾಗಿವೆ ಎಂದರು.

    ನಮ್ಮೊಡನೆ ಬನ್ನಿ : ಅಖಿಲ ಭಾರತ ವೀರಶೈವ-ಲಿಂಗಾಯತ ಮಹಾಸಭಾ ವತಿಯಿಂದ ಸ್ವತಂತ್ರ ಧರ್ಮ ಮಾನ್ಯತೆಗಾಗಿ ಎರಡು ಬಾರಿ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ. ಹಾಗಾಗಿ, ಅವರು ಸುಮ್ಮನಿದ್ದು ನಮ್ಮೊಡನೆ ಬರಲಿ. ನಾವು ಅಗತ್ಯ ದಾಖಲೆಗಳನ್ನು ಕೇಂದ್ರಕ್ಕೆ ಸಲ್ಲಿಸಿ ಜಯಶೀಲರಾಗುತ್ತೇವೆ. ನೀವು ನಮಗೆ ಅವಕಾಶ ಕೊಟ್ಟು ಸುಮ್ಮನೆ ಇದ್ದು ಬಿಡಿ ಎಂದು ಶ್ರೀಕಂಠ ಸ್ವಾಮೀಜಿ ಕರೆ ನೀಡಿದರು.

    ಕುಂತೂರು ಮಠದ ಶಿವಪ್ರಭುಸ್ವಾಮೀಜಿ, ಚಿಲಕವಾಡಿ ಗುರುಸಿದ್ಧರಾಮೇಶ್ವರ ಮಠದ ಗುರುಸಿದ್ಧ ಸ್ವಾಮೀಜಿ, ಚಿಕ್ಕಿಂದವಾಡಿ ಮಠದ ಬಾಲಷಡಕ್ಷರಿ ಸ್ವಾಮೀಜಿ, ಜಾಗತಿಕ ಲಿಂಗಾಯತ ಮಹಾಸಭಾ ಜಿಲ್ಲಾ ಕಾರ್ಯದರ್ಶಿ ಶಿವಪ್ರಕಾಶ್, ಜಿಲ್ಲಾಧ್ಯಕ್ಷ ಕಾಳನಹುಂಡಿ ಗುರುಸ್ವಾಮಿ, ತಾಲೂಕು ಅಧ್ಯಕ್ಷ ಲೋಕೇಶ್, ಮುಖಂಡರಾದ ಕೋಡಿಮೋಳೆ ರಾಜಶೇಖರ್, ಮುಡಿಗುಂಡ ಸುಂದ್ರಪ್ಪ, ಲಕ್ಕರನಪಾಳ್ಯ ಪರಶಿವಪ್ಪ, ಮಠದ ಬೀದಿ ಬಸವರಾಜು, ಷಣ್ಮುಖಸ್ವಾಮಿ, ಶಶಿಕುಮಾರ, ಗುರುಸ್ವಾಮಿ ಮತ್ತಿತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts