More

    ಸತ್ಯದ ಸತ್ಪಥದಿಂದ ಜೀವನ ಪರಿವರ್ತನೆ

    ಗುತ್ತಲ: ಚತುರ್ವಿಧ ಪುರುಷಾರ್ಥಗಳಲ್ಲಿ ಮನುಷ್ಯ ಒಂದನ್ನಾದರೂ ಸಂಪಾದಿಸದಿದ್ದರೆ ಜೀವನ ವ್ಯರ್ಥ. ನಮ್ಮ ನಡೆ ನುಡಿಗಳು ಸತ್ಯದ ಪರವಾಗಿರಬೇಕು. ಸತ್ಯದ ಸತ್ಪಥದಿಂದ ಜೀವನ ಪರಿವರ್ತನೆಗೊಳ್ಳಲು ಸಾಧ್ಯ ಎಂದು ಬಾಳೆಹೊನ್ನೂರು ರಂಭಾಪುರಿಪೀಠದ ಶ್ರೀ ಜಗದ್ಗುರು ಡಾ. ವೀರಸೋಮೇಶ್ವರ ಶಿವಾಚಾರ್ಯ ಭಗವತ್ಪಾದರು ಹೇಳಿದರು.

    ಸಮೀಪದ ನೆಗಳೂರು ಹಿರೇಮಠದ ಕರ್ತೃ ಶ್ರೀ ಗುರುಶಾಂತೇಶ್ವರ ಮಂದಿರದ ನೂತನ ಗೋಪುರ ಉದ್ಘಾಟನೆ, ಕಳಸಾರೋಹಣ ಹಾಗೂ ಸಾಮೂಹಿಕ ವಿವಾಹ ಧರ್ಮ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು. ಸಜ್ಜನರಿಗೆ ಬರುವ ಆಪತ್ತು, ದುರ್ಜನರಿಗೆ ಬರುವ ಸಂಪತ್ತು ಬಹಳ ಕಾಲ ಉಳಿಯುವುದಿಲ್ಲ. ಸುಳ್ಳಿನ ಜತೆ ದುಷ್ಟ ಶಕ್ತಿಯಿದ್ದರೆ ಸತ್ಯದ ಜತೆ ದೈವಶಕ್ತಿ ಇರುತ್ತದೆ. ನೋಡುವ ದೃಷ್ಟಿ ಸರಿಯಿದ್ದರೆ ಎಲ್ಲವೂ ಒಳ್ಳೆಯದೇ ಆಗುತ್ತದೆ. ಸಂಪತ್ತು ಮತ್ತು ಬಯಕೆ ಹೊಂದಿರುವ ಮನುಷ್ಯ ಮೊದಲು ಧರ್ಮ ಮಾರ್ಗದಲ್ಲಿ ನಡೆಯಬೇಕೆಂದು ಶ್ರೀರೇಣುಕಾಚಾರ್ಯರು ವೀರಶೈವ ಧರ್ಮ ಸಂವಿಧಾನದಲ್ಲಿ ನಿರೂಪಿಸಿದ್ದಾರೆ. ಜೀವನ ವಿಕಾಸ ಮತ್ತು ಸಂಸ್ಕಾರ ಪಡೆಯಲು ಗುರುವಿನ ಆಶ್ರಯ ಮುಖ್ಯ. ಕರ್ತೃ ಶ್ರೀ ಗುರುಶಾಂತೇಶ್ವರರು ತಪಸ್ವಿಗಳಾಗಿದ್ದರು. ಭಕ್ತರ ಸಂಕಷ್ಟಗಳನ್ನು ಪರಿಹರಿಸುವ ಶಕ್ತಿ ಹೊಂದಿದ್ದರು ಎಂದರು.

    ದುಂದು ವೆಚ್ಚ ತಡೆಗಟ್ಟಲು ಸಾಮೂಹಿಕ ವಿವಾಹ ಸಮಾರಂಭಗಳ ಅವಶ್ಯಕತೆಯಿದೆ ಎಂದ ಶ್ರೀಗಳು ದಾಂಪತ್ಯ ಜೀವನಕ್ಕೆ ಪದಾರ್ಪಣೆ ಮಾಡಿರುವ 19 ಜೋಡಿಗಳ ಬಾಳು ಉಜ್ವಲವಾಗಲಿ ಎಂದು ಅಕ್ಷತಾರೋಪಣ ಮಾಡಿ ಶುಭ ಹಾರೈಸಿದರು.

    ನೆಗಳೂರು ಹಿರೇಮಠದ ಗುರುಶಾಂತೇಶ್ವರ ಶಿವಾಚಾರ್ಯ ಸ್ವಾಮಿಗಳಿಗೆ ಫಲ ಪುಷ್ಪ ಸ್ಮರಣಿಕೆ ನೀಡಿ ಶ್ರೀಗಳು ಶುಭ ಹಾರೈಸಿದರು.

    ಪ್ರಾಸ್ತಾವಿಕವಾಗಿ ಮಾತನಾಡಿದ ಗುರುಶಾಂತೇಶ್ವರ ಶಿವಾಚಾರ್ಯ ಸ್ವಾಮಿಗಳು, ಸತಿ-ಪತಿ ಯಾವಾಗಲೂ ಸಾಮರಸ್ಯದಿಂದ ಬಾಳಬೇಕು. ಮುತ್ತೈದೆಯರಿಗೆ ವೀರಶೈವ ಪಂಚ ಪೀಠಗಳು ಹಸಿರು ಬಳೆ, ಕುಂಕುಮ, ಕರಿಮಣಿ ಸರ, ಮೂಗುನತ್ತು ಮತ್ತು ಮಾಂಗಲ್ಯ ಕೊಟ್ಟು ಶುಭ ಹಾರೈಸಿದ್ದನ್ನು ಎಂದಿಗೂ ಮರೆಯಲಾಗದು ಎಂದರು.

    ಸಮಾರಂಭದ ನೇತೃತ್ವ ವಹಿಸಿದ ಬಂಕಾಪುರ ಅರಳೆಲೆ ಹಿರೇಮಠದ ರೇವಣಸಿದ್ಧೇಶ್ವರ ಶಿವಾಚಾರ್ಯ ಸ್ವಾಮಿಗಳು ಮಾತನಾಡಿ, ಜಗತ್ತಿನಲ್ಲಿ ಗುರು ಶಕ್ತಿಗಿಂತ ಮಿಗಿಲಾದುದು ಇನ್ನೊಂದಿಲ್ಲ. ಗುರು ಕಾರುಣ್ಯವೊಂದಿದ್ದರೆ ಏನೆಲ್ಲ ಸೌಭಾಗ್ಯ, ಸಂಪತ್ತು ಪಡೆಯಲು ಸಾಧ್ಯ ಎಂದರು.

    ಅಮ್ಮಿನಬಾವಿಯ ಅಭಿನವ ಶಾಂತಲಿಂಗ ಶಿವಾಚಾರ್ಯರು, ಹಾವೇರಿಯ ಅಭಿನವ ರುದ್ರ ಚನ್ನಮಲ್ಲಿಕಾರ್ಜುನ ಶಿವಾಚಾರ್ಯರು, ಅಂಗೂರಿನ ಶಿವಯೋಗೀಶ್ವರ ಶಿವಾಚಾರ್ಯರು, ಲಕ್ಷ್ಮೇಶ್ವರದ ಮಳೆಮಲ್ಲಿಕಾರ್ಜುನ ಶಿವಾಚಾರ್ಯರು, ತುಪ್ಪದಕುರಹಟ್ಟಿಯ ಡಾ. ವಾಗೀಶ ಪಂಡಿತಾರಾಧ್ಯ ಶಿವಾಚಾರ್ಯರು, ಕುಂದಗೋಳದ ಶಿತಿಕಂಠೇಶ್ವರ ಶಿವಾಚಾರ್ಯರು, ಹಂಪಸಾಗರದ ಅಭಿನವ ಶಿವಲಿಂಗ ರುದ್ರಮುನಿ ಶಿವಾಚಾರ್ಯರು, ಬೆಳಗುಂಪದ ಅಭಿನವ ಪರ್ವತೇಶ್ವರ ಶಿವಾಚಾರ್ಯರು, ಕುಂದರಗಿಯ ವೀರಸಂಗಮೇಶ್ವರ ಶಿವಾಚಾರ್ಯರು, ಹಾವನೂರಿನ ಶಿವಕುಮಾರ ಸ್ವಾಮಿಗಳು, ಶ್ರೀರಂಭಾಪುರಿ ಪೀಠದ ಆಡಳಿತಾಧಿಕಾರಿ ಎಸ್.ಬಿ. ಹಿರೇಮಠ, ಜಾತ್ರಾ ಕಮಿಟಿ ಅಧ್ಯಕ್ಷ ಸುನೀಲ್ ತಾವರೆ, ಉಪಾಧ್ಯಕ್ಷ ನಾಗರಾಜ ಹುಲಗೂರ, ಕಾರ್ಯದರ್ಶಿ ನಿಂಗಪ್ಪ ಹಳ್ಳಾಕಾರ, ನಿಕಟಪೂರ್ವ ಅಧ್ಯಕ್ಷ ಸಿದ್ದಪ್ಪ ಬಾಲಣ್ಣನವರ, ಶಿವಬಸಪ್ಪ ಹುಂಬಿ, ಮಾಲತೇಶ ಅಂಗಡಿ, ತಿರಕಪ್ಪ ಮುದಿಯಣ್ಣನವರ, ಶಿವಕುಮಾರ ಮಾವುರ, ಕೆ.ಎಂ. ಮೈದೂರ, ಕೃಷ್ಣರಡ್ಡಿ ಚಪ್ಪರದ, ಎಸ್.ಬಿ. ಮೈದೂರ, ಕೊಟ್ರಯ್ಯಸ್ವಾಮಿ ಕೋವಳ್ಳಿಮಠ, ಕೊಟ್ರೇಶ ಅಂಗಡಿ ಇತರರಿದ್ದರು. ಡಾ. ಗುರುಪಾದಯ್ಯ ಸಾಲಿಮಠ ಕಾರ್ಯಕ್ರಮ ನಿರೂಪಿಸಿದರು.

    ಭಕ್ತರಿಗೆ ಅನ್ನ ದಾಸೋಹ ಏರ್ಪಡಿಸಲಾಗಿತ್ತು. ಸಂಜೆ ಶ್ರೀಗುರುಶಾಂತೇಶ್ವರ ಶಿವಯೋಗಿಗಳವರ ರಜತ ಮೂರ್ತಿಯ ಉತ್ಸವ ಸಕಲ ವಾದ್ಯ ವೈಭವ ಕಲಾಮೇಳದೊಂದಿಗೆ ಜರುಗಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts