More

    ಗಣೇಶ ಸಂಭ್ರಮಕ್ಕೆ ಮತ್ತೆ ಜೀವಕಳೆ

    *ಕಲಾವಿದರ ಕೈಯಲ್ಲಿ ಸುಂದರವಾಗಿ ಅರಳಿ ನಿಂತಿವೆ ವಕ್ರತುಂಡನ ಮೂರ್ತಿಗಳು
    *ಕರೊನಾ ಆರ್ಭಟದಿಂದ 2 ವರ್ಷ ಕಳೆಗುಂದಿದ್ದ ಹಬ್ಬ


    ಅವಿನಾಶ್ ಜೈನಹಳ್ಳಿ ಮೈಸೂರು
    ಮಹಾಮಾರಿ ಕರೊನಾ ಆರ್ಭಟದಿಂದ ಎರಡು ವರ್ಷ ಕಳೆಗುಂದಿದ್ದ ಗಣೇಶ ಚತುರ್ಥಿ ಆಚರಣೆ ಸಂಭ್ರಮಕ್ಕೆ ಮತ್ತೆ ಜೀವಕಳೆ ಬಂದಿದ್ದು, ಮೈಸೂರಿನ ವಿವಿಧ ಭಾಗಗಳಲ್ಲಿ ಬಗೆ ಬಗೆಯ ಗಣಪತಿ ಮೂರ್ತಿಗಳು ಕಲಾವಿದರ ಕೈಯಲ್ಲಿ ಸುಂದರವಾಗಿ ಅರಳಿ ನಿಂತಿವೆ.
    ವಿಘ್ನನಿವಾರಕನ ಆಗಮನಕ್ಕೆ ಒಂದು ವಾರ ಬಾಕಿ ಇದ್ದು, ನಗರದ ವಿವಿಧ ಭಾಗಗಳಲ್ಲಿ 30ಕ್ಕೂ ಹೆಚ್ಚು ಕುಟುಂಬಗಳು 50 ಸಾವಿರ ಗಣಪತಿ-ಗೌರಿ ಮೂರ್ತಿಗಳನ್ನು ಸಿದ್ಧಪಡಿಸಿದ್ದು, ನೋಡುಗರನ್ನು ಸೂಜಿಗಲ್ಲಿನಂತೆ ಸೆಳೆಯುತ್ತಿದೆ.

    ಎಂಟು-ಹತ್ತು ತಿಂಗಳಿನಿಂದ ಗಣೇಶ ಮೂರ್ತಿ ತಯಾರಕರು ಗಣೇಶನೊಂದಿಗೆ ಪುನೀತ್ ರಾಜ್‌ಕುಮಾರ್ ಇರುವ ವಿಶಿಷ್ಟ ಮೂರ್ತಿ, ಜಾವ್ಲಿನ್ ಎಸೆಯುತ್ತಿರುವ ಗಣೇಶ, ಬಂದೂಕು ದಾರಿ ಗಣೇಶ ಹಾಗೂ ಗೌರಿ ಜತೆ ಕುಳಿತಿರುವ ಗಣಪ ಸೇರಿದಂತೆ ವಿಭಿನ್ನ ಸ್ವರೂಪದ ಮೂರ್ತಿಗಳನ್ನು ಸಿದ್ಧಪಡಿಸಿದ್ದಾರೆ. ಮನೆ, ವಠಾರ, ಬಡಾವಣೆ, ದೇಗುಲ, ಸಂಘ-ಸಂಸ್ಥೆ, ಕಚೇರಿ ಸೇರಿದಂತೆ ಸಾರ್ವಜನಿಕ ಸ್ಥಳಗಳಲ್ಲಿ ಗಣೇಶನನ್ನು ಇಡಲು ಅರ್ಧ ಅಡಿಯಿಂದ ಹಿಡಿದು ಆರು ಅಡಿ ಎತ್ತರದ ಪರಿಸರ ಸ್ನೇಹಿ ಗಣೇಶ ಮೂರ್ತಿಗಳೂ ಮಾರುಕಟ್ಟೆಗೆ ಈಗಾಗಲೇ ಅಡಿಯಿಟ್ಟಿವೆ.

    ಪರಿಸರ ಸ್ನೇಹಿ ವಿನಾಯಕನಿಗೆ ಡಿಮಾಂಡ್: ಇತ್ತೀಚೆಗೆ ಜನರಲ್ಲಿ ಪರಿಸರ ಕಾಳಜಿ ಹೆಚ್ಚುತ್ತಿರುವುದರಿಂದ ಎಲ್ಲೆಡೆ ಗಣೇಶ ಚತುರ್ಥಿಯಂದು ಪರಿಸರ ಸ್ನೇಹಿ ಗಣೇಶ ಮೂರ್ತಿ ಪ್ರತಿಷ್ಠಾಪನೆಗೆ ಒತ್ತು ನೀಡಲಾಗುತ್ತಿದೆ. ಈ ಹಿನ್ನೆಲೆ ನೈಸರ್ಗಿಕ ಬಣ್ಣ ಲೇಪನದೊಂದಿಗೆ ಮಣ್ಣಿನಿಂದ ತಯಾರಿಸಿದ ಗಣಪತಿ ಮೂರ್ತಿಗಳ ಖರೀದಿಗೆ ಜನರು ಹೆಚ್ಚು ಉತ್ಸುಕರಾಗಿದ್ದು, ಸಾವಿರಾರು ಮೂರ್ತಿಗಳಿಗೆ ಮುಂಗಡ ಹಣ ನೀಡಿದ್ದಾರೆ. ಜತೆಗೆ ತಯಾರಕರು ಅರ್ಧ ಅಡಿಯಿಂದ ಹಿಡಿದು ಆರು ಅಡಿ ಎತ್ತರದವರೆಗಿನ ಪರಿಸರ ಸ್ನೇಹಿ ಗಣೇಶ ಮೂರ್ತಿಗಳನ್ನು ಸಿದ್ಧಪಡಿಸಿದ್ದು, ಒಂದೊಂದು ಮೂರ್ತಿಯೂ ವಿಭಿನ್ನ ಶೈಲಿ, ಬಣ್ಣ, ಭಂಗಿಯೊಂದಿಗೆ ನೋಡುಗರನ್ನು ಆಕರ್ಷಿಸುತ್ತಿವೆ.

    ಭರವಸೆ ಹೆಚ್ಚಿಸಿದ ಹಬ್ಬ: ಎರಡು ವರ್ಷ ಕೋವಿಡ್ ಕಾರಣದಿಂದ ಸಾರ್ವಜನಿಕವಾಗಿ ಗಣೇಶ ಹಬ್ಬ ಆಚರಣೆ ಮಾಡದ ಹಿನ್ನೆಲೆಯಲ್ಲಿ ಮೂರ್ತಿ ತಯಾರಕರು ಸಂಕಷ್ಟಕ್ಕೆ ಸಿಲುಕಿದ್ದರು. ಸದ್ಯಕ್ಕೆ ಸೋಂಕಿನ ತೀವ್ರತೆ ನಿಯಂತ್ರಣದಲ್ಲಿದ್ದು, ಈ ಬಾರಿ ಅದ್ದೂರಿಯಾಗಿ ಹಬ್ಬ ಆಚರಿಸುತ್ತಿರುವುದರಿಂದ ಗಣೇಶ ಮೂರ್ತಿಗಳಿಗೆ ಬೇಡಿಕೆ ಹೆಚ್ಚಾಗಿದೆ. 8-10 ತಿಂಗಳಿನಿಂದ ಮೂರ್ತಿ ತಯಾರಿಕೆಯಲ್ಲಿ ತೊಡಗಿಸಿಕೊಂಡಿರುವ ಕುಟುಂಬಗಳು ತಲಾ 3 ರಿಂದ 4 ಸಾವಿರ ಗಣೇಶ-ಗೌರಿ ಮೂರ್ತಿಗಳನ್ನು ಸಿದ್ಧಪಡಿಸಿರುವುದಲ್ಲದೆ, ವ್ಯಾಪಾರವು ಉತ್ತಮವಾಗಿದೆ. ಈ ಮೂಲಕ 2 ವರ್ಷ ನಷ್ಟ ಅನುಭವಿಸಿದ್ದ ಮೂರ್ತಿ ತಯಾರಕರಿಗೆ 2022ರ ಗಣೇಶ ಚತುರ್ಥಿ ಭರವಸೆ ಮೂಡಿಸಿದೆ.

    ಗಣಪನೊಂದಿಗೆ ಅಪ್ಪು!
    ನಗರದ ಹೆಬ್ಬಾಳದಲ್ಲಿರುವ ಸುಮಿತ್ರಾ-ನಂಜುಂಡ ದಂಪತಿ ಪುತ್ರ ಸುನೀಲ್, ಈ ಬಾರಿಯ ಗಣೇಶೋತ್ಸವಕ್ಕೆ ವಿಶಿಷ್ಟ ರೀತಿಯ ಮೂರ್ತಿಗಳನ್ನು ಸಿದ್ಧಪಡಿಸಿದ್ದಾರೆ. ಇತ್ತೀಚೆಗೆ ಅಗಲಿದೆ ಚಿತ್ರನಟ ಪುನೀತ್ ರಾಜ್‌ಕುಮಾರ್ ಅವರ ಸ್ಮರಣೆಗಾಗಿ ಗಣೇಶನೊಂದಿಗೆ ಪುನೀತ್ ರಾಜ್‌ಕುಮಾರ್ ಇರುವ ವಿಶಿಷ್ಟ ಮೂರ್ತಿಗಳನ್ನು ತಯಾರಿಸಿರುವುದು ವಿಶೇಷವಾಗಿದೆ.
    ಈಗಾಗಲೇ 10ಕ್ಕೂ ಹೆಚ್ಚು ಗಣೇಶ-ಅಪ್ಪು ಇರುವ ಮೂರ್ತಿಗಳನ್ನು ಸಿದ್ಧಪಡಿಸಿ, ಮಾರಾಟ ಮಾಡಲಾಗಿದ್ದು, ಅಪ್ಪು ಅಭಿಮಾನಿಗಳ ಬೇಡಿಕೆಗೆ ಅನುಗುಣವಾಗಿ ಮೂರ್ತಿಗಳನ್ನು ಸಿದ್ಧಪಡಿಸಿದ್ದಾರೆ. ಜತೆಗೆ ಕಾಮನ್ ವೆಲ್ತ್ ಕ್ರೀಡಾಕೂಟದಲ್ಲಿ ದೇಶಕ್ಕೆ ಕೀರ್ತಿತಂದ ಕ್ರೀಡಾಪಟುಗಳಿಗೆ ಗೌರವ ಸಲ್ಲಿಸುವ ಸಲುವಾಗಿ ಜಾವ್ಲಿನ್ ಎಸೆಯುತ್ತಿರುವ ಗಣೇಶ ಮೂರ್ತಿ, ಸ್ವಾತಂತ್ರೃದ ಅಮೃತ ಮಹೋತ್ಸವದ ಅಂಗವಾಗಿ ಬಂದೂಕು ದಾರಿ ಗಣೇಶ ಪ್ರಮುಖ ಆಕರ್ಷಣೆಯಾಗಿದೆ. ಹಾಗೆಯೇ ತಾಯಿ ಗೌರಿ ಜತೆ ಕುಳಿತಿರುವ ಬಾಲ ಗಣಪ ಎಲ್ಲರ ಗಮನ ಸೆಳೆಯುತ್ತಿದೆ.

    ಮಾರುಕಟ್ಟೆಯಲ್ಲಿ ಪಿಒಪಿ ಮೂರ್ತಿಗಳ ಹಾವಳಿ ಪರಿಸರಕ್ಕೆ ಮಾರಕವಾಗಿರುವ ಪ್ಲಾಸ್ಟರ್ ಆಫ್ ಪ್ಯಾರಿಸ್ ಗಣೇಶ ಮೂರ್ತಿಗಳ ಮಾರಾಟ ಮತ್ತು ತಯಾರಿಕೆಯನ್ನು ಸರ್ಕಾರ ನಿಷೇಧಿಸಿದ್ದರೂ ಕೆಲವೆಡೆ ಪಿಒಪಿ ಗಣೇಶ ಮೂರ್ತಿಗಳು ಮಾರುಕಟ್ಟೆ ಪ್ರವೇಶಿಸಿವೆ. ಇದರಿಂದ ಸಹಜವಾಗಿಯೇ ನೈಸರ್ಗಿಕ ಉತ್ಪನ್ನಗಳನ್ನು ಬಳಕೆ ಮಾಡಿಕೊಂಡು ತಯಾರಿಸಲಾದ ಪರಿಸರ ಸ್ನೇಹಿ ಗಣೇಶ ಮೂರ್ತಿಗಳಿಗೆ ಬೇಡಿಕೆ ತಗ್ಗಲಿದೆ ಎಂಬುದು ಗಣೇಶ ಮೂರ್ತಿ ತಯಾರಕರ ಆತಂಕವಾಗಿದೆ.
    ಮಣ್ಣಿನಿಂದ ತಯಾರಿಸಿದ ಮೂರ್ತಿಗಳು ಸಾಮಾನ್ಯವಾಗಿ 6 ಅಡಿ ಎತ್ತರ ಮಾತ್ರ ಇರಲಿವೆ. ಆದರೆ 8ರಿಂದ 10 ಅಡಿ ಎತ್ತರದ ಮೂರ್ತಿಗಳು ಬೇಕಾದರೆ ಪಿಒಪಿ ಬಳಸಬೇಕು. ಕೆಲವರು ಎತ್ತರದ ಗಣೇಶನಿಗಾಗಿ ಪಿಒಪಿ ಮೂರ್ತಿಗಳ ಮೊರೆ ಹೋಗುತ್ತಿರುವುದು ಸಾಮಾನ್ಯವಾಗಿದೆ.

    40 ವರ್ಷಗಳಿಂದ ಗಣೇಶ ಮೂರ್ತಿಗಳನ್ನು ತಯಾರಿಸುತ್ತಿದ್ದು, ಇದೇ ನಮ್ಮ ವೃತ್ತಿಯಾಗಿದೆ. ಎರಡು ವರ್ಷ ಕೋವಿಡ್‌ನಿಂದ ನಷ್ಟ ಅನುಭವಿಸಿದ್ದೆವು. ಈ ಬಾರಿ ಬೇಡಿಕೆ ಹೆಚ್ಚಿದ್ದು, ವಿವಿಧ ಅಳತೆಯ 4 ಸಾವಿರ ಗಣೇಶ ಮೂರ್ತಿಗಳನ್ನು ಸಿದ್ಧಪಡಿಸಿದ್ದೇವೆ.
    ಪಿ.ಗೋಪಾಲಕೃಷ್ಣ ಗಣಪತಿ ಮೂರ್ತಿ ತಯಾರಕರು, ಹೆಬ್ಬಾಳು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts