More

    ಸೂರಿಲ್ಲದೆ ಸೊರಗುತ್ತಿವೆ ಗ್ರಂಥಾಲಯಗಳು ; ಸ್ವಂತ ಕಟ್ಟಡ, ಕನಿಷ್ಠ ಮೂಲಸೌಕರ್ಯ ಇಲ್ಲ

    ಚೇಳೂರು: ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳ ಅಸಡ್ಡೆಯಿಂದಾಗಿ ಜಿಲ್ಲೆಯಲ್ಲಿನ ಬಹುತೇಕ ಗ್ರಾಮೀಣ ಗ್ರಂಥಾಲಯಗಳು ಮೂಲ ಸೌಕರ್ಯಗಳ ಕೊರತೆಯಿಂದ ನಲುಗುತ್ತಿವೆ. ಸ್ವಂತ ಸೂರಿಲ್ಲದೆ ಶಿಥಿಲಾವಸ್ಥೆಯ ಕಟ್ಟಡಗಳು, ಅನೈರ್ಮಲ್ಯ, ಪುಸ್ತಕಗಳ ಸಂಗ್ರಹಕ್ಕೆ ಜಾಗದ ಕೊರತೆ, ಓದುಗರ ಸಂಖ್ಯೆಗೆ ಅನುಗುಣವಾಗಿ ಪರಿಕರಗಳು ಇಲ್ಲದೆ ಸೊರಗುತ್ತಿವೆ.

    ನೂತನ ತಾಲೂಕು ಚೇಳೂರು ವ್ಯಾಪ್ತಿಯಲ್ಲಿ 6 ಗ್ರಾಮ ಪಂಚಾಯಿತಿಗಳಿವೆ. ನಿಯಮಾನುಸಾರ ಪ್ರತಿ ಗ್ರಾಪಂನಲ್ಲೂ ಗ್ರಂಥಾಲಯ ಇರಬೇಕು. ಪುಲ್ಲಗಲ್ಲುವಿನಲ್ಲಿ ಸ್ವಂತ ಕಟ್ಟಡ ಇದ್ದರೆ ಉಳಿದಂತೆ ಪಾಳ್ಯಕೆರೆ, ಚಾಕವೇಲು, ರಾಶ್ಚೆರವು ಗ್ರಾಪಂ ಗ್ರಂಥಾಲಯಗಳು ಸಣ್ಣ ಅಂಗಡಿಯ ಕೊಠಡಿಯಲ್ಲಿ ನಡೆಯುತ್ತಿವೆ. ಎಂ.ನಲ್ಲಗುಟ್ಲಪಲ್ಲಿಯಲ್ಲಿ ಹಿಂದೆ ಖಾಸಗಿ ಕಟ್ಟಡದಲ್ಲಿ ಗ್ರಂಥಾಲಯ ನಡೆಯುತ್ತಿದ್ದು, ಕಟ್ಟಡ ಮಾಲೀಕರಿಗೆ ಬಾಡಿಗೆ ನೀಡಿದ ಕಾರಣ ಬೀಗ ಬಿದ್ದಿದೆ.

    ಚೇಳೂರಿನಲ್ಲಿ 10 ವರ್ಷದಿಂದ ಗ್ರಾಪಂ ಕಟ್ಟಡದಲ್ಲಿ ನಡೆಯುತ್ತಿದ್ದ ಗ್ರಂಥಾಲಯವನ್ನು ಕಟ್ಟಡ ನವೀಕರಣ ನೆಪದಲ್ಲಿ ವರ್ಷದ ಹಿಂದೆ ಒಂದು ಸಣ್ಣ ಅಂಗಡಿಗೆ ಸ್ಥಳಾಂತರಿಸಲಾಗಿದೆ. ಇದುವರೆಗೂ ಪಂಚಾಯಿತಿ ಕಟ್ಟಡ ನವೀಕರಣವಾಗದೆ ಗ್ರಂಥಾಲಯಕ್ಕೆ ಸ್ವಂತ ಕಟ್ಟಡ ಇಲ್ಲವಾಗಿದೆ.

    ಮೊದಲೇ ಕೊಠಡಿ ತುಂಬಾ ಚಿಕ್ಕದಾಗಿದ್ದು ಇಬ್ಬರು ಇಲ್ಲವೇ ಮೂವರು ಬಂದರೆ ಕುಳಿತುಕೊಳ್ಳುವುದಿರಲಿ ನಿಂತು ಓದಲು ಸಾಧ್ಯವಿಲ್ಲ, ಪುಸ್ತಕಗಳನ್ನು ಜೋಡಿಸಲು ಸರಿಯಾದ ಜಾಗ ಇಲ್ಲದೆ ಎಲ್ಲೆಂದರಲ್ಲಿ ಇಡಲಾಗಿದೆ. ರಸ್ತೆ ಪಕ್ಕದಲ್ಲೇ ಗ್ರಂಥಾಲಯ ಇರುವುದರಿಂದ ಪುಸ್ತಕಗಳಿಗೆ ಧೂಳು ಮೆಚ್ಚಿಕೊಂಡಿದ್ದು ಓದಲು ಬಂದವರು ಮುಜುಗರ ಪಡುವಂತಾಗಿದೆ.

    ಓದುಗರ ಸಂಖ್ಯೆಯು ಹೆಚ್ಚಾಗಿದೆ, ಆದರೆ ಸೌಲಭ್ಯಗಳಿಲ್ಲದೆ ಗ್ರಂಥಾಲಯ ಇದ್ದೂ ಇಲ್ಲದಂತಿದೆ. ಸೂಕ್ತ ಕಟ್ಟಡದ ವ್ಯವಸ್ಥೆ ಮಾಡುವಂತೆ ಓದುಗರು ಹಾಗೂ ಗ್ರಂಥಾಲಯ ಸಿಬ್ಬಂದಿ ಹಲವು ಬಾರಿ ಗ್ರಾಮ ಪಂಚಾಯಿತಿ ಗಮನಕ್ಕೆ ತಂದಿದ್ದಾರೆ. ಆದರೆ ಒಂದು ಕಡೆಯಿಂದ ಮತ್ತೊಂದು ಕಡೆಗೆ ಸ್ಥಳಾಂತರಿಸುವುದೇ ಸಾಧನೆಯಾಗಿದೆ ಹೊರತು ಸುಸಜ್ಜಿತ ಕಟ್ಟಡ ನಿರ್ಮಿಸುವತ್ತ ಅಧಿಕಾರಿಗಳು, ಜನಪ್ರತಿನಿಧಿಗಳು ಗಮನ ಹರಿಸಿಲ್ಲ.

    ಕೂರೋಕು ಜಾಗವಿಲ್ಲ: ಸುಸಜ್ಜಿತ ಸ್ವಂತ ಕಟ್ಟಡ ಇಲ್ಲದೆ ಗ್ರಂಥಾಲಯಗಳು ಚಿಕ್ಕ ಅಂಗಡಿಗಳಲ್ಲಿ ಕಾರ್ಯನಿರ್ವಹಿಸುತ್ತಿದೆ. ಒಮ್ಮೆಲೆ ಐದಾರು ಜನರು ಬಂದರೆ ಕುಳಿತು ಕೊಳ್ಳುವುದಿರಲಿ ನಿಂತು ಓದುವುದಕ್ಕೂ ಜಾಗವಿಲ್ಲದಾಗಿದೆ. ಕಟ್ಟಡ, ಮೂಲಸೌಲಭ್ಯಗಳ ಕೊರತೆ ಜತೆಗೆ ಪತ್ರಿಕೆಗಳು ಹಾಗೂ ಪುಸ್ತಕಗಳು ಕಡಿಮೆ ಎಂದುಕೊಂಡು ಓದುಗರು ದೂರ ಉಳಿಯುವಂತಾಗಿದೆ.

    136 ಲೈಬ್ರರಿಗಳು ಸ್ವಂತ ಕಟ್ಟಡವಿಲ್ಲ: ಜಿಲ್ಲೆಯಲ್ಲಿ 157 ಗ್ರಾಪಂಗಳಿವೆ. ಇವುಗಳಲ್ಲಿ 21 ಗ್ರಂಥಾಲಯಗಳು ಮಾತ್ರ ಸ್ವಂತ ಕಟ್ಟಡದಲ್ಲಿ ಕಾರ್ಯ ನಿರ್ವಹಿಸುತ್ತಿದ್ದರೆ 136 ಗ್ರಂಥಾಲಯಗಳಿಗೆ ಕಟ್ಟಡದ ಭಾಗ್ಯವೇ ಇಲ್ಲ. ಗ್ರಾಮೀಣ ಗ್ರಂಥಾಲಯ ನಿರ್ವಹಣೆಯನ್ನು ಸಾರ್ವಜನಿಕ ಗ್ರಂಥಾಲಯ ಇಲಾಖೆ ವತಿಯಿಂದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಗೆ ವಹಿಸಲಾಗಿದೆಯಾದರೂ ಯಾವುದೇ ಸುಧಾರಣೆ, ಬದಲಾವಣೆ ಮಾತ್ರ ಕಂಡಿಲ್ಲ.

    ಮೇಲ್ದರ್ಜೆಗೇರಿಸಲು ನಿರ್ಲಕ್ಷ್ಯ: ಜನರಲ್ಲಿ ಓದುವ ಹವ್ಯಾಸ ಬೆಳೆಸಲು ಪ್ರೋತ್ಸಾಹ, ವಿದ್ಯಾರ್ಥಿಗಳ ಕಲಿಕೆಗೆ ಸಹಕಾರಿ, ಸಾಕ್ಷರತಾ ಪ್ರಮಾಣ ಹೆಚ್ಚಳ ಸೇರಿ ನಾನಾ ಉದ್ದೇಶದಿಂದ ಪ್ರತಿ ಗ್ರಾಪಂಗಳಲ್ಲೂ ಗ್ರಾಮೀಣ ಗ್ರಂಥಾಲಯಗಳನ್ನು ತೆರೆಯಲಾಗಿದ್ದು, ತಲಾ ಒಬ್ಬರು ಮೇಲ್ವಿಚಾರಕರನ್ನು ನಿಯೋಜಿಸಲಾಗಿದೆ, ಆದರೆ ಗ್ರಂಥಾಲಯದ ಅಭಿವೃದ್ಧಿಯ ಕಡೆಗೆ ಸರ್ಕಾರ ಸಮರ್ಪಕವಾಗಿ ಗಮನಹರಿಸಿಲ್ಲ.

    ಯೋಜನೆಗಳನ್ನು ಬಳಸಿಕೊಳ್ಳಬಹುದು: ಉದ್ಯೋಗ ಖಾತ್ರಿ ಯೋಜನೆ, ವಿಶೇಷ ಅನುದಾನ, ಗ್ರಾಮೀಣ ಮೂಲ ಸೌಕರ್ಯ ಅನುದಾನ ಸೇರಿ ವಿವಿಧ ಯೋಜನೆಗಳಡಿ ಗ್ರಂಥಾಲಯವನ್ನು ಮೇಲ್ದರ್ಜೆಗೇರಿಸಿ ಅಭಿವೃದ್ಧಿಪಡಿಸಬಹುದಾಗಿದೆ. ಸಂಸದರು, ಸಚಿವರು ಮತ್ತು ಆಯಾ ಕ್ಷೇತ್ರದ ಶಾಸಕರ ವಿಶೇಷ ಅನುದಾನವನ್ನು ಸದ್ವಿನಿಯೋಗಪಡಿಸಿಕೊಳ್ಳಬಹುದು. ಆದರೆ, ತಾತ್ಸಾರ ಧೋರಣೆಯಿಂದ ಸ್ವಂತ ನೆಲೆ ಇಲ್ಲದೇ ಶಿಥಿಲಾವಸ್ಥೆಯ ಕಟ್ಟಡಗಳಲ್ಲಿ ಕಾರ್ಯ ನಿರ್ವಹಿಸುವಂತಾಗಿದೆ.

    ಸೌಕರ್ಯಗಳ ಕೊರತೆಯ ಗ್ರಂಥಾಲಯವು ಇದ್ದು ಇಲ್ಲದಂತೆ ಇದೆ. ಗ್ರಂಥಾಲಯವು ಒಂದು ಚಿಕ್ಕ ಅಂಗಡಿಯ ಕೊಠಡಿಯಲ್ಲಿರುವುದರಿಂದ ಒಳಗಡೆ ಪುಸ್ತಕ ಓದಲು ತೊಂದರೆಯಾಗುತ್ತಿದೆ.
    ಕಲ್ಲೂರಿ ಸೂರ್ಯನಾರಾಯಣ, ಪುಸ್ತಕ ಪ್ರೇಮಿ, ಚೇಳೂರು

    ಗ್ರಂಥಾಲಯದ ಹೊಸ ಕಟ್ಟಡದ ನಿರ್ಮಾಣಕ್ಕೆ ಸರ್ಕಾರ ಆದೇಶಿಸಿದೆ. ಆದಷ್ಟು ಬೇಗ ಗ್ರಾಮದಲ್ಲಿ ಸೂಕ್ತ ಜಾಗ ಗುರುತಿಸಲಾಗುವುದು. ತಾತ್ಕಾಲಿಕವಾಗಿ ಅನುಕೂಲಕರ ಕಟ್ಟಡಕ್ಕೆ ಗ್ರಂಥಾಲಯವನ್ನು ಸ್ಥಳಾಂತರಿಸಲು ಮುಂದಿನ ಸಭೆಯಲ್ಲಿ ತೀರ್ಮಾನಿಸಲಾಗುವುದು.
    ಗೌಸ್‌ಫೀರ್, ಪಿಡಿಒ, ಚೇಳೂರು ಗ್ರಾಪಂ

    ಓದುಗರ ಒತ್ತಡದ ಬಗ್ಗೆ ಹಲವು ಬಾರಿ ಅಧಿಕಾರಿಗಳಿಗೆ ಹಾಗೂ ಜನಪ್ರತಿನಿಧಿಗಳ ಗಮನಕ್ಕೆ ತರಲಾಗಿದೆ. ಸಮಸ್ಯೆಯನ್ನು ಬಗೆಹರಿಸಲು ಮತ್ತೊಮ್ಮೆ ಮನವಿ ಸಲ್ಲಿಸಲಾಗುವುದು.
    ರಾಬೀಯಾ, ಗ್ರಂಥಾಲಯದ ಮೇಲ್ವಿಚಾರಕಿ, ಚೇಳೂರು.

    ನಗರ, ಪಟ್ಟಣ ಪ್ರದೇಶಗಳಿಗೆ ತೆರಳುವುದರ ಬದಲು ಗ್ರಾಮೀಣ ಗ್ರಂಥಾಲಯಗಳಲ್ಲಿ ಜ್ಞಾನಾರ್ಜನೆಯ ಪುಸ್ತಕಗಳನ್ನು ಓದುವುದು ಅನುಕೂಲಕರ. ಆದರೆ, ಇಲ್ಲಿನ ಅವ್ಯವಸ್ಥೆಗೆ ಹೋಗುವುದೇ ಬೇಡ ಎನಿಸುತ್ತದೆ. ಸಂಬಂಧಪಟ್ಟವರು ಗ್ರಾಮೀಣ ಗ್ರಂಥಾಲಯಗಳ ಮೇಲ್ದರ್ಜೆಗೇರಿಸಲು ಕ್ರಮ ಕೈಗೊಳ್ಳಬೇಕು.
    ಸುಜಾತಾ, ವಿದ್ಯಾರ್ಥಿನಿ, ಚಿಕ್ಕಬಳ್ಳಾಪುರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts