More

    ಸಂಪಾದಕೀಯ: ಅಪರಾಧ ಮಟ್ಟಹಾಕಿ

    ರಾಜ್ಯದಲ್ಲಿ ಇತ್ತೀಚಿನ ದಿನಗಳಲ್ಲಿ ಹಾಡಹಗಲೇ ಯಾರ ಭಯವೂ ಇಲ್ಲದೇ ಅಪರಾಧ ಕೃತ್ಯಗಳು ನಡೆಯಲಾರಂಭಿಸಿವೆ. ಕಳೆದ ಎರಡೇ ದಿನಗಳಲ್ಲಿ ರಾಜಧಾನಿ ಸೇರಿದಂತೆ ರಾಜ್ಯದ ವಿವಿಧೆಡೆ 6 ಜನರ ಕೊಲೆ ಪ್ರಕರಣಗಳು, ಎರಡು ಕಡೆ ಗಲಾಟೆ-ಹಲ್ಲೆ ಪ್ರಕರಣಗಳು ಸಂಭವಿಸಿವೆ.

    ಬೆಂಗಳೂರಿನಲ್ಲಿ ಇತ್ತೀಚೆಗೆ ಶ್ರೀರಾಮನವಮಿ ಆಚರಣೆಯ ವೇಳೆ ಜೈ ಶ್ರೀರಾಮ್ ಘೊಷಣೆ ಕೂಗಿದ ಯುವಕರ ಮೇಲೆ ಹಲ್ಲೆ ನಡೆದಿತ್ತು. ನಟಿ ಹರ್ಷಿಕಾ ಪೂಣಚ್ಚ ಕುಟುಂಬದ ಮೇಲೂ ಕ್ಷುಲ್ಲಕ ಕಾರಣಕ್ಕೆ ಗುಂಪು ಹಲ್ಲೆ ನಡೆದಿದೆ. ಹುಬ್ಬಳ್ಳಿಯಲ್ಲಿ ವಿದ್ಯಾರ್ಥಿನಿಯೊಬ್ಬಳನ್ನು ಯುವಕನೊಬ್ಬ ಕಾಲೇಜು ಕ್ಯಾಂಪಸ್​ನಲ್ಲೇ ಇರಿದು ಕೊಂದಿದ್ದಾನೆ. ಮಡಿಕೇರಿಯಲ್ಲಿ ಚುನಾವಣಾ ಪ್ರಚಾರ ಕಾರ್ಯದಲ್ಲಿ ವ್ಯಸ್ತರಾಗಿದ್ದ ಬಿಜೆಪಿ ಕಾರ್ಯಕರ್ತರೊಬ್ಬರ ಮೇಲೆ ಕಾರು ಹರಿಸಿ ಕೊಲೆಗೈಯಲಾಗಿದೆ. ಗದಗ್​ನಲ್ಲಿ ಮನೆಗೆ ನುಗ್ಗಿ ನಾಲ್ವರನ್ನು ಕೊಲ್ಲಲಾಗಿದೆ. ಈ ಎಲ್ಲ ಘಟನೆಗಳಿಂದ ಆತಂಕಿತರಾಗಿರುವ ಜನರು ಬೀದಿಗಳಲ್ಲಿ ಭಯವಿಲ್ಲದೇ ಓಡಾಡಲು ಸಾಧ್ಯವಾಗದ ಪರಿಸ್ಥಿತಿ ನಿರ್ವಣವಾಗಿದೆ.

    ಸಾರ್ವತ್ರಿಕ ಚುನಾವಣೆ ನಡೆಯುತ್ತಿರುವ ಸಮಯದಲ್ಲಿ ಅಧಿಕಾರಸ್ಥ ರಾಜಕಾರಣಿಗಳು ಮತ್ತು ಅಧಿಕಾರಿಗಳು ಚುನಾವಣಾಸಂಬಂಧಿ ಕಾರ್ಯಗಳಲ್ಲಿ ವ್ಯಸ್ತರಾಗುವುದು ಅತ್ಯಂತ ಸಹಜ. ರಾಜಕಾರಣಿಗಳು ರಾಜಕೀಯ ಸಭೆ, ಸಮಾವೇಶಗಳಿಗೆ ಹೆಚ್ಚು ಸಮಯ ವ್ಯಯಿಸುತ್ತಿರುತ್ತಾರೆ. ತಮಗೆ ಸಂಬಂಧಪಟ್ಟ ಇಲಾಖೆಗಳ ಆಗುಹೋಗುಗಳ ಬಗ್ಗೆ ಅವರಿಗೆ ಈ ಸಮಯದಲ್ಲಿ ಹೆಚ್ಚು ಗಮನ ಹರಿಸಲು ಆಗುವುದಿಲ್ಲ. ಅದರಲ್ಲೂ ಬಹುತೇಕ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿ ಸಂಪೂರ್ಣ ಸಮಯವನ್ನು ಆ ಕೆಲಸಗಳಲ್ಲೇ ವಿನಿಯೋಗಿಸುತ್ತಿರುತ್ತಾರೆ. ಹೆಚ್ಚಿನ ಪೊಲೀಸರನ್ನು ಎಲೆಕ್ಷನ್ ಕೆಲಸಗಳಿಗೆ ನಿಯೋಜನೆ ಮಾಡುವುದರಿಂದ ಠಾಣೆಗಳಲ್ಲಿ ಕೇವಲ ಬೆರಳೆಣಿಕೆಯಷ್ಟು ಸಿಬ್ಬಂದಿ ಹಾಜರಿರುತ್ತಾರೆ.

    ಹೀಗಾಗಿ ಅಪರಾಧ ಪ್ರಕರಣಗಳ ಬಗ್ಗೆ ತ್ವರಿತವಾಗಿ ತನಿಖೆ ನಡೆಸಿ ಅವುಗಳನ್ನು ಭೇದಿಸಲು ಅಥವಾ ಅವು ನಡೆಯದಂತೆ ಮುನ್ನೆಚ್ಚರಿಕೆ ವಹಿಸಲು ಅವರಿಗೆ ಸಮಯ ಸಾಲುವುದಿಲ್ಲ. ಸಾರ್ವಜನಿಕರು ತಾವೇ ಠಾಣೆಗೆ ಬಂದು ದೂರುಗಳನ್ನು ಕೊಟ್ಟರೂ ಗಂಭೀರವಾಗಿ ಪರಿಗಣಿಸಿ ಕ್ರಮ ಕೈಗೊಳ್ಳುವಲ್ಲಿ ಪೊಲೀಸರು ವಿಫಲರಾಗುತ್ತಾರೆ. ಅಪರಾಧ ಎಸಗಿದ ಸಮಾಜಘಾತುಕರನ್ನು ಹಿಡಿದು ಶಿಕ್ಷಿಸುವಲ್ಲಿ ನಿಧಾನಗತಿಯ ಧೋರಣೆ ಅನುಸರಿಸುತ್ತಾರೆ. ಇದೇ ಸರಿಯಾದ ಸಮಯ ಎಂದುಕೊಳ್ಳುವ ಸಮಾಜಘಾತುಕ ಶಕ್ತಿಗಳು ಇನ್ನೂ ಹೆಚ್ಚು ಅಪರಾಧ ಕೃತ್ಯಗಳನ್ನು ಎಸಗಲು ಮುಂದಾಗುತ್ತವೆ.

    ಈ ಕಾರಣದಿಂದಾಗಿ ಕೃತ್ಯಗಳ ಸಂಖ್ಯೆಯೂ ಹೆಚ್ಚಾಗುತ್ತದೆ. ಗಂಭೀರ ಕೇಸ್​ಗಳಲ್ಲಿ ಪ್ರಬುದ್ಧತೆ ಮೆರೆಯಬೇಕಾದ ಜನಪ್ರತಿನಿಧಿಗಳೂ ಕೆಲವೊಮ್ಮೆ ಬೇಕಾಬಿಟ್ಟಿ ಹೇಳಿಕೆ ನೀಡುವ ಮೂಲಕ ಪ್ರಕರಣದ ಕಾವು ಇನ್ನಷ್ಟು ಹೆಚ್ಚಲು ಕಾರಣರಾಗುತ್ತಾರೆ. ಆದರೆ, ಎಂಥದೇ ಸಂದರ್ಭದಲ್ಲಿಯೂ ಅಧಿಕಾರಿಗಳಿಗೆ ಮತ್ತು ಆಡಳಿತದ ಚುಕ್ಕಾಣಿ ಹಿಡಿದಿರುವ ರಾಜಕಾರಣಿಗಳಿಗೆ ರಾಜ್ಯದ ಕಾನೂನು- ಸುವ್ಯವಸ್ಥೆಯನ್ನು ಕಾಪಾಡುವುದು ಪ್ರಥಮ ಆದ್ಯತೆ ಆಗಿರಬೇಕು.

    ಹುಬ್ಬಳ್ಳಿಯ ನೇಹಾ ಹತ್ಯೆ ಕೇಸ್​: ಆರೋಪಿ ಫಯಾಜ್ ತಲೆ ಕಡಿದವರಿಗೆ 10 ಲಕ್ಷ ರೂ. ಬಹುಮಾನ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts