More

    ರಾಷ್ಟ್ರ ಮುನ್ನೆಡಸಲು ಮತ ಚಲಾಯಿಸೋಣ: ನಟ ರಮೇಶ್ ಅರವಿಂದ ಮನವಿ

    ಬೆಂಗಳೂರು: ನಮ್ಮ ರಾಷ್ಟ್ರವನ್ನು ಮುನ್ನೆಡಸಲು ಎಲ್ಲರೂ ಒಂದಾಗಿ ತಪ್ಪದೆ ಮತ ಚಲಾಯಿಸೋಣ ಎಂದು ಚುನಾವಣಾ ರಾಯಭಾರಿ, ಚಿತ್ರನಟ ರಮೇಶ್ ಅರವಿಂದ ಅವರು ಯುವ ಸಮೂಹಕ್ಕೆ ಕರೆ ನೀಡಿದ್ದಾರೆ.

    ನಗರದ ಬಸವನಗುಡಿಯ ಬಿಎಂಎಸ್ ಮಹಿಳಾ ಕಾಲೇಜಿನಲ್ಲಿ ಸೋಮವಾರ ನಡೆದ ಮತದಾನ ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನಾವೆಲ್ಲರೂ ಒಟ್ಟಾಗಿ ಪ್ರಜಾಪ್ರಭುತ್ವಕ್ಕೆ ಹಲೋ ಎಂದಾಗ ಮಾತ್ರ ಪ್ರಜಾಪ್ರಭುತ್ವಕ್ಕೆ ನ್ಯಾಯ ಒದಗಿಸಲು ಸಾಧ್ಯ. ಶೇ.20 ಮಂದಿ ಒಂದಾಗಿ ಕೂಗಿದಾಗ ಹೆಚ್ಚು ಶಬ್ದ ಬರಲು ಸಾಧ್ಯವಿಲ್ಲ. ಅದೇ ಶೇ.100 ಮಂದಿ ಒಟ್ಟಾಗಿ ಕೂಗಿದಾಗ ಶಬ್ದ ಜೊರಾಗಿ ಬರಲಿದೆ. ಅದೇ ರೀತಿ ಚುನಾವಣೆಯಲ್ಲಿಯೂ ಶೇ.20 ಮತದಾನ ಮಾಡಿದರೆ ಯಾವುದೇ ಪ್ರಯೋಜನವಿಲ್ಲ. ಶೇ.100 ಮತ ಚಲಾಯಿಸಿದಾಗ ಮಾತ್ರ ಉತ್ತಮ ಪ್ರಜಾಪ್ರಭುತ್ವವನ್ನು ಕಟ್ಟಲು ಸಾಧ್ಯ ಎಂದು ಪ್ರತಿಪಾದಿಸಿದರು.

    ಯೋಚಿಸಿ ಮತದಾನ ಮಾಡಿ:

    ಚುನಾವಣೆಯಲ್ಲಿ ತಮಗೆ ಸರಿ ಎಣಿಸುವ ಅಭ್ಯರ್ಥಿಗೆ ಮತ ಹಾಕಿ ಆಯ್ಕೆ ಮಾಡಿಕೊಳ್ಳಬಹುದು. ಗೂಗಲ್ನಲ್ಲಿ ನಿಮ್ಮ ಕ್ಷೇತ್ರದ ಆಭ್ಯರ್ಥಿ ಯಾರು, ಏನೇನು ಕೆಲಸ ಮಾಡಿದ್ದಾರೆ, ಅವರ ಹಿನ್ನೆಲೆ ಏನು, ನೀಡಿದ್ದ ಪ್ರಣಾಳಿಕೆಯಲ್ಲಿ ಕಳೆದ 5 ವರ್ಷಗಳಲ್ಲಿ ಏನೆಲ್ಲ ಈಡೇರಿಸಿದ್ದಾರೆ ಎಂಬುದನ್ನು ಪರಿಶೀಲಿಸಿ. ಯಾವ ಅಭ್ಯರ್ಥಿಗೆ ಮತದಾನ ಮಾಡಿದರೆ ಅವರು ನಮಗೆ ಏನು ಮಾಡುತ್ತಾರೆಂಬುದನ್ನು ಆಲೋಚಿಸಿ ಮತದಾನ ಮಾಡಿ ಎಂದು ಅವರು ಕಿವಿಮಾತು ಹೇಳಿದರು.

    ಪ್ರತಿಜ್ಞಾ ವಿಧಿ ಸ್ವೀಕಾರ:

    ಇದೇ ವೇಳೆ ಚುನಾವಣೆ ಹಿನ್ನೆಲೆ ಬಿಎಂಎಸ್ ಕಾಲೇಜಿನ ಎಲ್ಲ ವಿದ್ಯಾರ್ಥಿಗಳು ಮತದಾನ ಪ್ರತಿಜ್ಞಾ ವಿಧಿಯನ್ನು ಸ್ವೀಕರಿಸಿ ತಪ್ಪದೆ ಮತದಾನ ಮಾಡುವುದಾಗಿ ವಾಗ್ದಾನ ನೀಡಿದರು.

    ಕಾರ್ಯಕ್ರಮದಲ್ಲಿ ಜಿಲ್ಲಾ ಸ್ವೀಪ್ ನೋಡಲ್ ಅಧಿಕಾರಿ ಪ್ರತಿಭಾ, ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರದ ಸ್ವೀಪ್ ನೋಡಲ್ ಅಧಿಕಾರಿ ರಮಾಮಣಿ, ಬಿಎಂಎಸ್ ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ವಸುಂದರಾ ಸೇರಿ 1,500ಕ್ಕೂ ಹೆಚ್ಚು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

    ಲೋಕಸಭಾ ಚುನಾವಣೆಯ ಮತದಾನ ಸಮೀಪಿಸುತ್ತಿದ್ದು, ಹೆಚ್ಚು ಜನಜಾಗೃತಿಗೆ ಒತ್ತು ನೀಡಲಾಗಿದೆ. ಈ ಬಾರಿ ಮತ ಪ್ರಮಾಣ ಹೆಚ್ಚಿಸಲು ವಿವಿಧ ಕಾರ್ಯಕ್ರಮಗಳನ್ನು ಜಾರಿಗೊಳಿಸಲಾಗುತ್ತಿದೆ. ಯುವ ಮತದಾರರು ಏ.26ರಂದು ಬೆಳಗ್ಗೆ 6ರಿಂದ ಸಂಜೆ 6 ಗಂಟೆಯವರೆಗೆ ಮತದಾನ ಮಾಡುವ ಅವಕಾಶವಿದ್ದು, ಎಲ್ಲರೂ ತಪ್ಪದೆ ಮತ ಚಲಾಯಿಸಬೇಕು.
    – ಪಿ.ಎಸ್.ಕಾಂತರಾಜು, ನಗರ ಜಿಲ್ಲಾ ಸ್ವೀಪ್ ಸಮಿತಿ ಅಧ್ಯಕ್ಷ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts