More

    ನಾವು ಉಳಿಯುವುದಕ್ಕಾದರೂ ಭೂಮಿ ಉಳಿಸೋಣ

    ಅರಣ್ಯವೆಂದರೆ ಅದು ಜೀವಸಂಕುಲದ ಸಂಪತ್ತು. ಪ್ರಾಕೃತಿಕವಾಗಿ ಬೆಳೆದ ಸಾವಿರಾರು ಜಾತಿಯ ಮರಗಳು, ಅನೇಕ ಖಗ-ಮೃಗಗಳು, ಜೀವಸಂಕುಲ, ಸ್ವತಂತ್ರವಾಗಿ ಜೀವಿಸುವ ತಾಣವಾಗಿತ್ತು. ಅದರಿಂದ ಪ್ರಕೃತಿಯಲ್ಲಿ ಸಮತೋಲನವಿತ್ತು. ಇತ್ತೀಚಿನ ದಶಕಗಳಲ್ಲಿ ಆಧುನಿಕತೆ ಹೆಸರಲ್ಲಿ ಪ್ರಕೃತಿ ಮೇಲೆ ಶೋಷಣೆ ಹೆಚ್ಚಿರುವುದು ಕಳವಳಕಾರಿ.

    ನಾವು ಉಳಿಯುವುದಕ್ಕಾದರೂ ಭೂಮಿ ಉಳಿಸೋಣ ಭೂಮಿ ನಮ್ಮ ತಾಯಿ. ಆ ತಾಯಿಯ ಸೃಷ್ಟಿ ಅದ್ಭುತ. ವನರಾಶಿಗಳು, ಜಲಝುರಿಗಳು, ಸಾಗರ, ಬೆಟ್ಟಗುಡ್ಡಗಳು, ಹಿಮಪರ್ವತಗಳು, ಜೀವರಾಶಿಗಳು ವೈವಿಧ್ಯದ ಆಗರ. ತನ್ನ ಒಡಲಾಳದಲ್ಲಿ ಅದ್ಭುತಗಳನ್ನು ಅಡಗಿಸಿಟ್ಟುಕೊಂಡಿರುವ ಆಕೆ ಒಂದು ವಿಸ್ಮಯ. ಭೂಮಿತಾಯಿಯ ವಿಸ್ಮಯದ ಸೃಷ್ಟಿಯಲಿ ಮನುಷ್ಯರಾಗಿ ನಾವು ಜೀವಿಸುತ್ತಿದ್ದೇವೆ ಎನ್ನುವುದು ನಮ್ಮ ಪುಣ್ಯ. ಹಾಗಾಗಿ ವಿಶೇಷವಾಗಿ ನಮ್ಮ ಪೂರ್ವಜರು ಭೂಮಿಗೆ ದೇವರ ಸ್ಥಾನ-ಮಾನ ನೀಡಿದ್ದಾರೆ. ಭೂಮಾತೆ ಎಂದು ಕರೆದಿದ್ದಾರೆ. ಆಕೆಗೆ ಪ್ರತಿನಿತ್ಯ ನಮಸ್ಕರಿಸುವ ಪರಿಪಾಠ ಹೊಂದಿದ್ದರು. ಬೆಳಗ್ಗೆ ಎದ್ದು ನಿತ್ಯ ಕೆಲಸಕಾರ್ಯ ಪ್ರಾರಂಭಿಸುವ ಮೊದಲು ಭೂಮಿತಾಯಿಯನ್ನು ರ್ಸ³ಸಿ, ನಮಸ್ಕಾರ ಮಾಡುತ್ತಿದ್ದರು.

    ಸಮುದ್ರ – ವಸನೇ ದೇವಿ, ಪರ್ವತ-ಸ್ತನ-ಮಂಡಿತೇ |
    ವಿಷ್ಣು-ಪತ್ನಿ ನಮಸ್ತುಭ್ಯಂ, ಪಾದ-ಸ್ಪರ್ಶಂ ಕ್ಷಮಸ್ವಮೇ ||

    ‘ಓ ಭೂಮಾತೆ, ವಿಷ್ಣುವಿನ ಪತ್ನಿಯೇ, ಪರ್ವತದಂತಹ ಎದೆಯಿಂದ ಅಲಂಕರಿಸಲ್ಪಟ್ಟವಳೇ, ಸಾಗರದಂತಹ ವಸ್ತ್ರಗಳನ್ನು ಧರಿಸಿದವಳೇ, ನಿನ್ನನ್ನು ನನ್ನ ಪಾದಗಳು ಮುಟ್ಟಿದ್ದಕ್ಕಾಗಿ ನನ್ನನ್ನು ಕ್ಷಮಿಸು’ ಎಂದು ಪ್ರಾರ್ಥಿಸಿಕೊಳ್ಳುತ್ತಿದ್ದರು. ಅಷ್ಟೊಂದು ಭಕ್ತಿ-ಗೌರವದ ಭಾವ ನಮ್ಮ ಸನಾತನ ಸಂಪ್ರದಾಯದಲ್ಲಿ ರೂಢಿಸಿಕೊಂಡು ಬಂದಿದ್ದೇವೆ.

    ಭೂಮಿತಾಯಿಯ ಹೆಸರಿನಲ್ಲಿ ಅನೇಕ ಹಬ್ಬಗಳನ್ನು ಆಚರಿಸುತ್ತೇವೆ. ಈ ಹಬ್ಬಗಳನ್ನು ಪ್ರಕೃತಿಯ ರಕ್ಷಣೆಗೆಂದೇ ಆಚರಿಸಲಾಗುತ್ತದೆ. ನಮ್ಮ ಹಿರಿಯರ ಜೀವನ ಮಣ್ಣಿನೊಂದಿಗೆ ಬೆಸೆದುಕೊಂಡಿತ್ತು. ಆದರೆ ನಿಧಾನವಾಗಿ ಕಾಲ ಬದಲಾದಂತೆ ಆಧುನಿಕತೆಗೆ ನಾವು ತೆರದುಕೊಂಡಂತೆ ಪ್ರಕೃತಿಯೊಂದಿಗಿನ ಬೆಸುಗೆಯನ್ನು ಕಳಚುತ್ತಲೇ ಬಂದಿದ್ದೇವೆ ಎಂಬುದು ಗಮನಿಸಬೇಕಾದ ಅಂಶ.

    ಹಿಂದಿನ ಕಾಲವನ್ನು ಒಮ್ಮೆ ಮೆಲುಕು ಹಾಕಿಕೊಳ್ಳೋಣ. ಆಗ ಈಗಿನ ಜನಾಂಗ ಎಡವುತ್ತಿರುವುದು ಎಲ್ಲಿ ಎಂಬ ಸ್ಪಷ್ಟತೆ ದೊರೆಯುತ್ತದೆ. ಹಿಂದೆ ಹೆಚ್ಚಿನ ಎಲ್ಲ ನಾಗರಿಕತೆಗಳು ನೀರಿನ ಸಮೀಪ, ಅಂದರೆ ನದಿಯ ಸಮೀಪ ಬೆಳೆದಿದ್ದು, ಕೃಷಿಯೋಗ್ಯ ಸಮೃದ್ಧ ಹಸಿರು ಪರಿಸರ ಹೊಂದಿದ್ದ ಪ್ರದೇಶದಲ್ಲೇ ಮನುಷ್ಯ ಬದುಕು ಕಟ್ಟಿಕೊಳ್ಳುತ್ತಿದ್ದ. ನೀರಿನ ನೆಲೆ ಇದ್ದಲ್ಲಿ ಊರುಗಳು ಇದ್ದವು. ಊರಿನಲ್ಲಿ ಒಂದು ನದಿಯಾದರೂ ಹಾದು ಹೋಗುತ್ತಿತ್ತು. ಅಥವಾ ನಾಲೆ ಅಥವಾ ಬೃಹತ್ ಕೆರೆಯಿರುತ್ತಿತ್ತು ಇಲ್ಲವೇ ಕೆರೆ ನಿರ್ವಿುಸುತ್ತಿದ್ದರು. ಪರಿಶುದ್ಧವಾದ ನೀರನ್ನು ಗಂಗಾಮಾತೆ, ಗಂಗಾಜಲ ಎಂದೇ ಪರಿಗಣಿಸುತ್ತ ಅದು ನಮ್ಮ ಬದುಕಿನ ಜೀವಜಲ ಎಂದು ಅದರ ಸಂರಕ್ಷಣೆಗೆ ಹೆಚ್ಚಿನ ಆದ್ಯತೆ ಕೊಡಲಾಗುತ್ತಿತ್ತು. ಹಾಗಾಗಿ ಆ ಕೆರೆಗಳಿಗೆ, ಹಳ್ಳಗಳಿಗೆ ದೇವರ ಹೆಸರನ್ನಿಡುತ್ತಿದ್ದರು. ಮೃತ್ಯುಂಜಯ ನದಿ, ಕಪಿಲಾ ನದಿ, ದೇವಿರಮ್ಮನ ಕೆರೆ, ಇತ್ಯಾದಿ. ಯಾರೇ ಆಗಲಿ ಆ ನದಿ, ಹಳ್ಳ ಕೆರೆಗಳ ನೀರನ್ನು ಹಾಳು ಮಾಡಬಾರದು. ಪರಿಶುದ್ಧವಾಗಿ ಪವಿತ್ರವಾಗಿರಬೇಕು ಎಂಬ ಉದ್ದೇಶ ಇತ್ತು. ಹಾಗಾಗಿ ದೇವರ ಹೆಸರಿನಿಂದ ಸಂಬೋಧಿಸುತ್ತಿದ್ದರು. ಕೆಲವೊಂದು ನದಿ, ಕೆರೆಗಳ ಸಮೀಪ ದೇವಸ್ಥಾನವನ್ನೂ ನಿರ್ವಿುಸಿ ಸುತ್ತಲಿನ ಪರಿಸರವನ್ನು ಶುಚಿಯಾಗಿಟ್ಟುಕೊಳ್ಳುತ್ತಿದ್ದರು. ಅಂತಹ ಕೆರೆ-ಕೊಳದಲ್ಲಿ ನೀರಿನ ಪರಿಶುದ್ಧತೆಗಾಗಿ ಮೀನು, ಕಪ್ಪೆ, ಆಮೆಗಳಂತಹ ಜಲಚರಗಳ ಸಂರಕ್ಷಣೆ ಮಾಡುತ್ತಿದ್ದರು. ಅಲ್ಲಿ ಒಂದು ದೈವಿಕಸ್ಪರ್ಶವೂ ಇರುತ್ತಿತ್ತು. ಇದರಿಂದ ಅಪ್ಪಿ-ತಪ್ಪಿಯೂ ಯಾರೂ ಕೂಡ ಆ ಪ್ರದೇಶದಲ್ಲಿ ತ್ಯಾಜ್ಯ ಎಸೆಯುತ್ತಿರಲಿಲ್ಲ. ಕೆರೆಗಳನ್ನು ಕಲುಷಿತಗೊಳಿಸುತ್ತಿರಲಿಲ್ಲ. ಜಲಸಂರಕ್ಷಣೆ ಜತೆಗೆ ಅಂತರ್ಜಲವೂ ವೃದ್ಧಿಯಾಗುತ್ತಿತ್ತು. ಪ್ರಕೃತಿಯೂ ಹಚ್ಚ ಹಸುರಾಗಿ ಉಳಿಯುತ್ತಿತ್ತು.

    ದೇವಸ್ಥಾನದ ಸುತ್ತಮುತ್ತ ಔಷಧೀಯ ಗಿಡಗಳನ್ನು ಆಲದ ಮರ, ನವಗ್ರಹವನ, ಅಶ್ವತ್ಥ ಮರ ನೆಡುತ್ತಿದ್ದರು. ನಾಗಬನ ನಿರ್ವಿುಸಿ ಸುತ್ತಲೂ ಅಮೂಲ್ಯ ಸಸ್ಯಸಂಪತ್ತನ್ನು ಬೆಳೆಸುತ್ತಿದ್ದರು. ಇದರಿಂದಾಗಿ ಶುದ್ಧಗಾಳಿಯೂ ಲಭ್ಯವಾಗುತ್ತಿತ್ತು. ಆರೋಗ್ಯವರ್ಧನೆಗೆ ಇವೆಲ್ಲವೂ ಸಹಕಾರಿಯಾಗಿತ್ತು. ಎಲ್ಲ ಊರುಗಳಲ್ಲೂ ದಟ್ಟ ಅರಣ್ಯ ಇತ್ತು. ಅರಣ್ಯವೆಂದರೆ ಅದು ಜೀವಸಂಕುಲದ ಸಂಪತ್ತು. ಪ್ರಾಕೃತಿಕವಾಗಿ ಬೆಳೆದ ಸಾವಿರಾರು ಜಾತಿಯ ಮರಗಳು, ಅನೇಕ ಖಗ-ಮೃಗಗಳು, ಜೀವಸಂಕುಲ, ಸ್ವತಂತ್ರವಾಗಿ ಜೀವಿಸುವ ತಾಣವಾಗಿತ್ತು. ಪ್ರಕೃತಿಯಲ್ಲಿ ಸಮತೋಲನವಿತ್ತು.

    ಕೆಲವು ದಶಕಗಳ ಹಿಂದಿನ ಜನಜೀವನದ ಮೆಲುಕು ಮಾಡಿ ಇಂದಿನ ಜೀವನಶೈಲಿಗೆ ತುಲನೆ ಮಾಡಿದಾಗ ಅನೇಕ ವೈರುಧ್ಯಗಳು ಕಾಣುತ್ತವೆ. ಪ್ರಕೃತಿಸ್ನೇಹಿ ಜೀವನದಿಂದ ನಾವು ಹೊರಬಂದು ಬರಗಾಲ, ಅತಿವೃಷ್ಟಿ, ಅನಾವೃಷ್ಟಿ, ಭೂಕಂಪ, ಬಿಸಿಗಾಳಿ, ಚಂಡಮಾರುತ, ಕಲುಷಿತ ಗಾಳಿ, ನೀರು, ಹವಾಮಾನ ವೈಪರೀತ್ಯ, ಜಾಗತಿಕ ತಾಪಮಾನ ಏರಿಕೆಯಂತಹ ಸಮಸ್ಯೆಗಳನ್ನು ಎದುರಿಸುತ್ತಿದ್ದೇವೆ. ಈ ಅಸಮತೋಲನವನ್ನು ಸರಿಪಡಿಸುವ ಬಗ್ಗೆ ಮತ್ತು ಪ್ರಕೃತಿಯ ರಕ್ಷಣೆ ಜತೆಗೆ ಸುಸ್ಥಿರ ಅಭಿವೃದ್ಧಿ ಮಾಡುವ ವಿಧಾನದ ಕುರಿತು ಜಾಗತಿಕ ಮಟ್ಟದಲ್ಲಿ ನಾಯಕರು ಚರ್ಚೆ ನಡೆಸಿದ ಸುದ್ದಿ ನಾವು ಪತ್ರಿಕೆಯಲ್ಲಿ ಓದಿದ್ದೇವೆ. ಈ ಬಗ್ಗೆ ತುಲನಾತ್ಮಕ ಚಿಂತನೆ ನಡೆಸಿದರೆ ಹತ್ತು ಹಲವು ಸಮಸ್ಯೆಗಳಿಗೆ ಉತ್ತರ ಸಿಗಬಹುದು. ಪ್ರಕೃತಿಸ್ನೇಹಿ ಜೀವನದಿಂದ ಮಾತ್ರ ಬರಗಾಲ, ನೀರಿನ ಕೊರತೆ ಮುಂತಾದ ಅನೇಕ ಪ್ರಾಕೃತಿಕ ಸಮಸ್ಯೆಗಳನ್ನು ಅಳಿಸಬಹುದು ಎಂಬುದು ವಾಸ್ತವ.

    ಶ್ರೀಕ್ಷೇತ್ರ ಧರ್ಮಸ್ಥಳದ ವತಿಯಿಂದ ಪರಿಸರ ಸಂರಕ್ಷಣೆಗಾಗಿ ನಾವು ಸಾಕಷ್ಟು ಕಾರ್ಯಕ್ರಮಗಳನ್ನು ಮಾಡಿದ್ದೇವೆ. ಆರಂಭದಲ್ಲಿ ಅಲ್ಲಲ್ಲಿ ವನಮಹೋತ್ಸವ ನಡೆಸುವುದರೊಂದಿಗೆ ಬೀಜದುಂಡೆಗಳನ್ನು ತಯಾರಿಸಿ ಅವುಗಳನ್ನು ಕಾಡಿನಲ್ಲಿ ಅಲ್ಲಲ್ಲಿ ಹರಡುತ್ತಿದ್ದೆವು. ಆ ಬಳಿಕ ಲಕ್ಷ ವೃಕ್ಷ ಅಭಿಯಾನವನ್ನು ಕೈಗೊಂಡು ವಿವಿಧ ಜಾತಿಯ ಗಿಡಗಳನ್ನು ನೆಡುವ ಕಾರ್ಯಕ್ರಮ ಗ್ರಾಮಾಭಿವೃದ್ಧಿ ಯೋಜನೆ ಮೂಲಕ ನಡೆಯಿತು. ಇತ್ತೀಚಿನ ಕೆಲವು ವರ್ಷಗಳಲ್ಲಿ ಕಾಡುಪ್ರಾಣಿಗಳು ಆಹಾರವನ್ನು ಅರಸಿಕೊಂಡು ಕಾಡಂಚಿನ ಗ್ರಾಮಗಳಿಗೆ ಬಂದು ರೈತರ ಬೆಳೆಗಳನ್ನೆಲ್ಲ ಕಬಳಿಸುತ್ತಿರುವುದು ಸಾಮಾನ್ಯವಾಗಿದೆ. ಕಾಡಿನಲ್ಲಿ ಅವುಗಳಿಗೆ ಸಮರ್ಪಕ ಆಹಾರ ದೊರೆಯದೆ ಇದ್ದಾಗ ಅವು ತಮ್ಮ ಉಳಿವಿಗಾಗಿ ನಾಡಿಗೆ ಲಗ್ಗೆ ಇಡುತ್ತವೆ. ಪರಿಣಾಮವಾಗಿ ಕೃಷಿಯನ್ನೇ ನಂಬಿಕೊಂಡು ಬದುಕುತ್ತಿರುವ ರೈತರು ಸಂಕಷ್ಟ ಅನುಭವಿಸಬೇಕಾಗುತ್ತದೆ. ಇದನ್ನು ಮನಗಂಡ ನಾವು ಪ್ರಾಣಿ-ಪಕ್ಷಿಗಳಿಗೆ ಕಾಡಿನಲ್ಲೇ ಆಹಾರ ಒದಗಿಸಿದರೆ ಅವು ನಾಡಿಗೆ ಬರಲಾರವು ಎಂಬ ದೃಷ್ಟಿಯಿಂದ ಕಾಡಿನಲ್ಲಿ ಹಣ್ಣು-ಹಂಪಲಿನ ಗಿಡಗಳನ್ನು ಬೃಹತ್ ಪ್ರಮಾಣದಲ್ಲಿ ನೆಡುವ ಕಾರ್ಯವನ್ನು ಹಮ್ಮಿಕೊಂಡಿದ್ದೆವು. ಇದಲ್ಲದೆ ನೀರಿನ ಸಮಸ್ಯೆಯನ್ನು ಮನಗಂಡು ಅಲ್ಲಲ್ಲಿ ಪಾಳು ಬಿದ್ದಿದ್ದ ಹಾಗೂ ಹೂಳು ತುಂಬಿಕೊಂಡಿದ್ದ ಕೆರೆಗಳನ್ನು ಪುನಶ್ಚೇತನಗೊಳಿಸುವ ಕಾರ್ಯಕ್ರಮವನ್ನು ಗ್ರಾಮಾಭಿವೃದ್ಧಿ ಯೋಜನೆ ಮೂಲಕ ಹಮ್ಮಿಕೊಳ್ಳಲಾಯಿತು. ನಮ್ಮ ಈ ಕಾರ್ಯಕ್ರಮಕ್ಕೆ ಊರವರು, ಸಂಘಸಂಸ್ಥೆಗಳು ಮಾತ್ರವಲ್ಲದೆ ಸರ್ಕಾರ ಕೂಡ ಸಹಕಾರ ನೀಡಿತು. ಹೀಗೆ ಕೆರೆಗಳ ಪುನಶ್ಚೇತನ ಕಾರ್ಯ ನಿರಂತರವಾಗಿ ಸಾಗಿದೆ.

    ಬಿಸಿಲಿನ ಝುಳ ಹೆಚ್ಚಿದೆ. ತಾಪಮಾನ ನಿರಂತರ ಏರುತ್ತಿದೆ. ಬೆಂಗಳೂರು ಸೇರಿದಂತೆ ವಿವಿಧ ಪ್ರದೇಶಗಳಲ್ಲಿ ನೀರಿನ ಸಮಸ್ಯೆ ಬಹುವಾಗಿ ಕಾಡುತ್ತಿದೆ. ಸಾಕಷ್ಟು ಕೆರೆಗಳು, ಬಾವಿಗಳು ಬತ್ತಿ ಹೋಗಿವೆ. ಆದರೆ ನಾವು ಪುನಶ್ಚೇತನಗೊಳಿಸಿದ ಬಹುತೇಕ ಕೆರೆಗಳಲ್ಲಿ ನೀರು ತುಂಬಿದ್ದು, ಜನರು ಕುಡಿಯಲು, ನಿತ್ಯ ಉಪಯೋಗ ಹಾಗೂ ಕೃಷಿಗೂ ಅವನ್ನು ಬಳಸುತ್ತಿದ್ದಾರೆ ಎಂಬ ವಿಚಾರ ಕೇಳಿ ಬಹಳ ಸಂತೋಷವಾಯಿತು. ನಮ್ಮ ಈ ಕೆರೆ ಹೂಳೆತ್ತುವ ಕಾರ್ಯಕ್ರಮದ ಶ್ರಮಕ್ಕೆ ಫಲ ನೀಡಿದೆ ಎಂದು ಭಾವಿಸುತ್ತೇನೆ. ನೀರಿಗಾಗಿ ಹಾಹಾಕಾರ ಇರುವ ಈ ಸಂದರ್ಭದಲ್ಲಿ ನೀರು ಪೋಲು ಆಗದಂತೆ ಎಚ್ಚರವಹಿಸುವುದು ಅಗತ್ಯ. ಅನೇಕ ಉತ್ಸವ, ಮದುವೆ ಇನ್ನಿತರ ಸಮಾರಂಭಗಳು ನಡೆಯುವ ಈ ಹೊತ್ತಿನಲ್ಲಿ ನೀರಿನ ಮಿತಬಳಕೆ ಬಗ್ಗೆ ಜಾಗೃತಿ ಮೂಡಿಸುವುದು ಮತ್ತು ಮಿತವಾಗಿ ಬಳಸುವುದು ನಮ್ಮ ಕರ್ತವ್ಯವೂ ಹೌದು.

    ಈ ಸಂದರ್ಭದಲ್ಲಿ ನೆನಪಿಸಿಕೊಳ್ಳಬೇಕಾದ ವಿಚಾರವೇನೆಂದರೆ 1999ರಲ್ಲಿ ಡಾ. ಬಿ. ಯಶೋವರ್ಮ ಅವರ ಮುತುವರ್ಜಿಯಿಂದ ಅಪರೂಪದ ಸಸ್ಯಸೌರಭಗಳನ್ನು, ಪಶ್ಚಿಮಘಟ್ಟದ ಅಪರೂಪದ ಸಸ್ಯಸಂಕುಲಗಳನ್ನು ಸಂರಕ್ಷಿಸುವ ಮತ್ತು ಅವುಗಳ ತಳಿಗಳನ್ನು ದಾಖಲಿಸುವ ಸಲುವಾಗಿ ಉಜಿರೆಯ ಸಿದ್ಧವನ ಸಮೀಪ 8 ಎಕರೆ ಪ್ರದೇಶದಲ್ಲಿ ಸಸ್ಯೋದ್ಯಾನ ನಿರ್ವಿುಸಲಾಯಿತು. ಎಸ್.ಡಿ.ಎಂ. ಶಿಕ್ಷಣ ಸಂಸ್ಥೆ ಆರ್ಬೇರೇಟಂ (ಸಸ್ಯೋದ್ಯಾನ) ಹೆಸರಿನಲ್ಲಿ ಈ ಸಂರಕ್ಷಣಾ ವನ ಸ್ಥಾಪಿಸಲಾಯಿತು. ಡಾ. ಯಶೋವರ್ಮರ ಸಾಧನೆಯಿಂದ ರೂಪುಗೊಂಡ ಈ ಹಸಿರುಕ್ರಾಂತಿ ಸಸ್ಯೋದ್ಯಾನಕ್ಕೆ ಅವರ ಸ್ಮರಣಾರ್ಥ ‘ಯಶೋವನ’ ಎಂದು ಇತ್ತೀಚೆಗೆ ಮರುನಾಮಕರಣ ಮಾಡಲಾಯಿತು. ‘ಯಶೋವನ’ದಲ್ಲಿ ಬಾಲಿಯ ಲಿಂಪುಯಂಗ್ ದೇವಾಲಯದ ಆವರಣದಲ್ಲಿರುವ ವಿಶ್ವವಿಖ್ಯಾತ ‘ಗೇಟ್ ಆಫ್ ಹೆವನ್’ (ಸ್ವರ್ಗದ ದ್ವಾರ) ಮಾದರಿ ನಿರ್ವಿುಸಲಾಗಿದೆ. ಗೋಪುರದ ಮೂಲಕ ಸ್ವರ್ಗಸದೃಶ ಪ್ರಕೃತಿಯ ಲೋಕಕ್ಕೆ ಎಲ್ಲರಿಗೂ ಸ್ವಾಗತ ಕೋರುವಂತೆ ರಚನೆ ಮಾಡಲಾಗಿದೆ.

    ಉಜಿರೆ ಮುಖ್ಯರಸ್ತೆಗಳಲ್ಲಿ ಬೆಳೆದಿರುವ ಹಸಿರುಕ್ರಾಂತಿ ಅವರ ಕೊಡುಗೆಯಾಗಿದ್ದು, ಯಾತ್ರಾರ್ಥಿಗಳು ಬಂದಾಗ ಉಜಿರೆ ಪರಿಸರವನ್ನು ವಿದೇಶದ ಸೌಂದರ್ಯಕ್ಕೆ ಹೋಲಿಸುತ್ತಾರೆ. ಇದರಿಂದ ಉಜಿರೆಯ ಹಸಿರುಕ್ರಾಂತಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಿಂಚಿದೆ. ನಮಗೆ ಗೊತ್ತಿಲ್ಲದಯೇ ಅನೇಕ ತಪ್ಪುಗಳನ್ನು ಭೂಮಿಗೆ ನಾವು ಮಾಡುತ್ತೇವೆ. ಆದರೆ ಗೊತ್ತಿದ್ದೂ ಮಾಡುವ ತಪ್ಪುಗಳಿಂದ ಭೂಮಾತೆ ಸದಾ ಪರಿತಪಿಸುತ್ತಾಳೆ ಎನ್ನುವುದು ನಮ್ಮ ಮನದಲ್ಲಿ ಸದಾ ಇರಲಿ. ನಮಗೆಲ್ಲ ತಿಳಿದಿರುವ ಹಾಗೆ ಇಡೀ ಸೌರಮಂಡಲದಲ್ಲಿ ಇರುವುದೊಂದೇ ಭೂಮಿ. ಮಾನವನ ವಾಸಕ್ಕೆ ಬೇರೆ ಯಾವುದಾದರೂ ಗ್ರಹವಿದೆಯೋ ಎಂಬುದನ್ನು ಪತ್ತೆಹಚ್ಚುವಲ್ಲಿ ವಿಜ್ಞಾನಿಗಳು ನಿರತರಾಗಿದ್ದಾರೆ. ಒಂದು ವೇಳೆ ಬೇರೆ ಭೂಮಿ ಸಿಕ್ಕರೂ ಅಲ್ಲಿ ಹೋಗಿ ಜೀವಿಸುವುದು ಸುಲಭದ ಮಾತಲ್ಲ. ಆದ್ದರಿಂದ ಇರುವ ಒಂದು ಭೂಮಿಯನ್ನು ಸಂರಕ್ಷಿಸಲು ಎಲ್ಲರೂ ಪಣ ತೊಡೋಣ. ಹನಿಹನಿ ಸೇರಿ ಸಾಗರವಾಗುವಂತೆ ಪ್ರತಿಯೊಬ್ಬರೂ ಪರಿಸರ ಸಂರಕ್ಷಣೆಯಲ್ಲಿ ತಮ್ಮ ಕೈಲಾಗುವಷ್ಟು ಪ್ರಯತ್ನ ಪಟ್ಟರೆ ಮುಂದಿನ ದಿನಗಳಲ್ಲಿ ನೆಮ್ಮದಿಯ ಜೀವನ ನಡೆಸಬಹುದು. ಕನಿಷ್ಠಪಕ್ಷ ನಾವು ಉಳಿಯುವುದಕ್ಕಾದರೂ ಭೂಮಿಯನ್ನು ಉಳಿಸಲೇಬೇಕು.

    (ಲೇಖಕರು ಶ್ರೀಕ್ಷೇತ್ರ ಧರ್ಮಸ್ಥಳದ ಧರ್ವಧಿಕಾರಿಗಳು)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts