More

    ಮಹಿಳೆಯರು ದೇಶ ಆಳುವಂತಾಗಲಿ

    ಶಿಗ್ಗಾಂವಿ: ಹೆಣ್ಣು ಎಷ್ಟೇ ಓದಿದರೂ ಅವಳಲ್ಲಿನ ತಾಯ್ತನ ಕಡಿಮೆಯಾಗುವುದಿಲ್ಲ. ಹೆಣ್ಣು ಮಕ್ಕಳು ಮನೆಗೆಲಸಕ್ಕೆ ಸೀಮಿತವಾಗಬಾರದು. ಅವಳು ದೇಶ, ಸಮಾಜ ಆಳುವಂತಾಗಬೇಕು ಎಂದು ಖ್ಯಾತ ರಂಗಕರ್ವಿು ಬಿ. ಜಯಶ್ರೀ ಹೇಳಿದರು.

    ಶ್ರೀಮತಿ ಗಂಗಮ್ಮ ಸೋಮಪ್ಪ ಬೊಮ್ಮಾಯಿ ಟ್ರಸ್ಟ್ ವತಿಯಿಂದ ತಾಲೂಕಿನ ಶಿಶುವಿನಹಾಳ ಗ್ರಾಮದಲ್ಲಿ ಭಾನುವಾರ ಸಂಜೆ ಏರ್ಪಡಿಸಿದ್ದ ಪ್ರಶಸ್ತಿ ಪ್ರದಾನ ಹಾಗೂ ಕೃತಿ ಬಿಡುಗಡೆ ಸಮಾರಂಭದಲ್ಲಿ ಅವರು ಮಾತನಾಡಿದರು.

    ಪುರುಷ ಸಮಾಜ ಇಂದಿಗೂ ಹೆಣ್ಣು ಮಕ್ಕಳನ್ನು ಓದಿಸುವುದಕ್ಕೆ ಹಿಂದೆ ಮುಂದೆ ನೋಡುತ್ತಿರುವುದು ನೋವಿನ ಸಂಗತಿ. ಇದಕ್ಕೆ ಬಸವರಾಜ ಬೊಮ್ಮಾಯಿ ಅವರ ತಾಯಿ ಗಂಗಮ್ಮ ಒಂದು ಉದಾಹರಣೆ. ಗಂಗಮ್ಮ ಅವರಿಗೆ ಓದಿನಲ್ಲಿ ತುಂಬಾ ಆಸಕ್ತಿ ಇತ್ತು ಎಂದು ಸ್ಮರಿಸಿದರು. ಯಶಸ್ವಿ ಗಂಡಿನ ಹಿಂದೆ ಹೆಣ್ಣು ಇರುತ್ತಾಳೆ ಎನ್ನುವಂತೆ ಒಬ್ಬ ಯಶಸ್ವಿ ಹೆಣ್ಣಿನ ಹಿಂದೆ ಗಂಡು ಇರಬೇಕೆನ್ನುವುದು ನನ್ನ ಕಳಕಳಿ ಎಂದರು.

    ಸಚಿವ ಬಸವರಾಜ ಬೊಮ್ಮಾಯಿ ಮಾತನಾಡಿ, ತಾಯಿ ಸಂಬಂಧ ನಾವು ಭೂಮಿಗೆ ಬರುವುದಕ್ಕಿಂತ ಮುಂಚಿನದ್ದು. ಇನ್ನಿತರ ಸಂಬಂಧಗಳು ಜನ್ಮದ ನಂತರದವು. ಪ್ರತಿಯೊಬ್ಬರಲ್ಲೂ ತಾಯ್ತನ ಇದ್ದೇ ಇರುತ್ತದೆ. ಎಲ್ಲರೂ ಅದನ್ನು ಜಾಗೃತಗೊಳಿಸಬೇಕು. ಅದರ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳಬೇಕು. ಸಾಮಾನ್ಯರಲ್ಲಿ ಅಸಾಮಾನ್ಯ ತಾಯಿ ಕುರಿತು ಕೃತಿಯೊಂದನ್ನು ತರಲು ತೀರ್ವನಿಸಿದ್ದೇವೆ. ರಾಜಕಾರಣ ಜತೆಗೆ ಸಾಹಿತ್ಯ, ಸಂಸ್ಕೃತಿ, ಸಂಸ್ಕಾರವನ್ನು ಕಟ್ಟುವ ಕೆಲಸ ಮಾಡೋಣ ಎಂದರು.

    ಸಾಹಿತಿ ಡಾ. ವೀರಣ್ಣ ರಾಜೂರ ಮಾತನಾಡಿ, ಗಂಡಿರಲಿ, ಹೆಣ್ಣಿರಲಿ ಎಲ್ಲರಲ್ಲೂ ತಾಯ್ತನದ ಭಾವವನ್ನು ತಾಯಿಯೇ ತುಂಬಿರುತ್ತಾಳೆ. ನಂತರದ ದಿನಗಳಲ್ಲಿ ಬದುಕಿನ ಅನೇಕ ಆವರಣಗಳು ಆ ಅಂತಃಕರಣವನ್ನು ಮೆಟ್ಟಿ ಮಾತೃತ್ವವನ್ನು ಮರೆಮಾಡುತ್ತದೆ ಎಂದರು.

    ನಾಡೋಜ ಮನು ಬಳಿಗಾರ ಮಾತನಾಡಿ, ಶ್ರೀಮತಿ ಗಂಗಮ್ಮ ಬೊಮ್ಮಾಯಿ ಟ್ರಸ್ಟ್ ಮೂಲಕ ಬಸವರಾಜ ಬೊಮ್ಮಾಯಿ ಅವರು ತಾಯಿ ಮಹತ್ವ, ಮಾನವೀಯ ಮೌಲ್ಯಗಳನ್ನು ಜಾನಪದ ಸಾಹಿತ್ಯ, ಕಾವ್ಯ, ಕಥೆ, ನಾಟಕಗಳಿಂದ ನಾಡಿಗೆ ಮನದಟ್ಟು ಮಾಡುತ್ತಿರುವುದು ಶ್ಲಾಘನೀಯ ಎಂದರು. ಸಂಸದ ಶಿವಕುಮಾರ ಉದಾಸಿ, ಮಾಜಿ ಸಂಸದ ಐ.ಜಿ. ಸನದಿ, ಚನ್ನಮ್ಮ ಬೊಮ್ಮಾಯಿ, ಬಿಜೆಪಿ ಮಂಡಲ ಅಧ್ಯಕ್ಷ ಶಿವಾನಂದ ಮ್ಯಾಗೇರಿ ಇತರರಿದ್ದರು.

    ಪ್ರಶಸ್ತಿ ಪ್ರದಾನ: ಎಚ್.ಆರ್. ಸುಜಾತಾ ಅವರ ‘ನೀಲಿ ಮೂಗಿನ ನತ್ತು’ ಕೃತಿಗೆ ಅಕ್ಕ ಪ್ರಶಸ್ತಿ, ಸನ್ನಿಧಿ ಟಿ. ಅವರ ‘ಅಮರಾವತಿ’ ಕೃತಿಗೆ ಅರಳುಮೊಗ್ಗು ಪ್ರಶಸ್ತಿ, ಡಾ. ಕೆ. ಶಶಿಕಾಂತ ಅವರ ‘ಅವ್ವ ಹಾಡಿದ ಕಾಳಿಂಗರಾಯನ ಹಾಡು’ ಕೃತಿಗೆ ಜಾನಪದ ಸಿರಿ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಲೇಖಕ ಚಂದ್ರಶೇಖರ ವಸ್ತ್ರದ ಸಂಪಾದಿಸಿದ ‘ನಾಟಕಗಳಲ್ಲಿ ಅವ್ವ’ ಕೃತಿಯನ್ನು ಸಾಹಿತಿ ಡಾ. ವೀರಣ್ಣ ರಾಜೂರ ಬಿಡುಗಡೆ ಮಾಡಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts