More

    ಓದುಗರ ಪ್ರೀತಿ-ವಿಶ್ವಾಸವೇ ದಶ ಶಕ್ತಿ; ವಿಜಯವಾಣಿ ಶತಮಾನೋತ್ಸವ ಆಚರಿಸಲಿ: ಸಿದ್ದರಾಮಯ್ಯ

    | ಸಿದ್ದರಾಮಯ್ಯ ವಿಧಾನಸಭೆ ವಿರೋಧ ಪಕ್ಷದ ನಾಯಕ

    ಸಾಮಾಜಿಕ ಜಾಲತಾಣಗಳ ಪೈಪೋಟಿಯಿಂದಾಗಿ ಜಗತ್ತಿನಾದ್ಯಂತ ಮುದ್ರಣ ಮಾಧ್ಯಮದ ಬೆಳವಣಿಗೆ ಕುಂಠಿತಗೊಳ್ಳುತ್ತಿದೆ. ಪ್ರಮುಖವಾಗಿ ಇಂದಿನ ಯುವಜನಾಂಗ ಮುದ್ರಿತ ಪತ್ರಿಕೆಗಳನ್ನು ಓದುವ ಬದಲಿಗೆ ಕಂಪ್ಯೂಟರ್, ಮೊಬೈಲ್, ಐಪಾಡ್​ಗಳ ಮೂಲಕ ಪತ್ರಿಕೆಗಳನ್ನು ಓದುವ ಇಲ್ಲವೆ ಟಿವಿ ಚಾನೆಲ್​ಗಳನ್ನು ನೋಡುವ ಹವ್ಯಾಸವನ್ನು ಬೆಳೆಸಿಕೊಳ್ಳುತ್ತಿದ್ದಾರೆ. ಆದರೆ ಭಾರತದಲ್ಲಿ ಅದರಲ್ಲಿಯೂ ಮುಖ್ಯವಾಗಿ ಭಾಷಾ ಪತ್ರಿಕೋದ್ಯಮದ ಮೇಲೆ ಈ ನವ ಮಾಧ್ಯಮ ಹೆಚ್ಚು ಪರಿಣಾಮ ಬೀರಿದ ಹಾಗೆ ಕಾಣುತ್ತಿಲ್ಲ. ಇದಕ್ಕೆ ಉತ್ತಮ ಉದಾಹರಣೆ ವಿಜಯವಾಣಿ ಪತ್ರಿಕೆ. ವೃತ್ತಿಯಲ್ಲಿ ಉದ್ಯಮಿಯಾಗಿರುವ ವಿಜಯ ಸಂಕೇಶ್ವರ ಅವರು ತಮ್ಮ ವ್ಯವಹಾರಿಕ ಕೌಶಲವನ್ನು ಸಂಪೂರ್ಣವಾಗಿ ಧಾರೆ ಎರೆದು ಪತ್ರಿಕೆಯನ್ನು ಯಶಸ್ಸಿನ ಪಥದಲ್ಲಿ ಮುನ್ನಡೆಸುತ್ತಿದ್ದಾರೆ.

    ನಮ್ಮಲ್ಲಿರುವ ಬಹುತೇಕ ಪ್ರಮುಖ ಕನ್ನಡ ದಿನಪತ್ರಿಕೆಗಳು 30ರಿಂದ 60 ವರ್ಷಗಳಷ್ಟು ಹಳೆಯದು. ಹೀಗಿದ್ದರೂ ಹೊಸ ಪತ್ರಿಕೆಯನ್ನು ಪ್ರಾರಂಭಿಸುವ ಸಾಹಸಕ್ಕೆ ಯಾರೂ ಕೈ ಹಾಕಿರಲಿಲ್ಲ. ಆದರೆ ವಿಜಯ ಸಂಕೇಶ್ವರ ಅವರು ವಿಜಯ ಕರ್ನಾಟಕ ಪತ್ರಿಕೆ ಪ್ರಾರಂಭಿಸುವ ಮೂಲಕ ಹೊಸ ಪ್ರಯೋಗಕ್ಕೆ ನಾಂದಿ ಹಾಡಿದ್ದರು. ವಿಜಯ ಕರ್ನಾಟಕ ಪತ್ರಿಕೆಯನ್ನು ಬಹುಬೇಡಿಕೆಯ ಕನ್ನಡ ದಿನಪತ್ರಿಕೆಯನ್ನಾಗಿ ಬೆಳೆಸಿದ ಸಂಕೇಶ್ವರ ಅವರು ವಿಜಯವಾಣಿಯನ್ನೂ ಅದೇ ದಾರಿಯಲ್ಲಿ ಕೊಂಡೊಯ್ದಿದ್ದಾರೆ. ಅಧಿಕೃತ ಮೂಲಗಳ ಪ್ರಕಾರ, ವಿಜಯವಾಣಿ ಪತ್ರಿಕೆಯೇ ಈಗ ನಂಬರ್ ಒನ್.

    ರಾಜ್ಯದ ಓದುಗರು ಪ್ರಜ್ಞಾವಂತರಿದ್ದಾರೆ. ಯಾವುದೇ ಹೊಸದು ಬಂದರೂ ಅದನ್ನು ಮುಕ್ತಮನಸ್ಸಿನಲ್ಲಿ ಸ್ವೀಕರಿಸಲು ಸಿದ್ಧರಿದ್ದಾರೆ ಎನ್ನುವುದಕ್ಕೆ ವಿಜಯವಾಣಿಯೇ ಸಾಕ್ಷಿ. ಸುದ್ದಿಗಳ ಪ್ರಕಟಣೆ ಇಲ್ಲವೆ ಪ್ರಸಾರವಷ್ಟೇ ಮಾಧ್ಯಮಗಳ ಕೆಲಸ ಅಲ್ಲ, ವರದಿ, ವಿಶ್ಲೇಷಣೆ, ಲೇಖನಗಳ ಮೂಲಕ ಸರಿಯಾದ ಮಾಹಿತಿ ಕೊಟ್ಟು ಸಮಾಜದಲ್ಲಿ ಜಾಗೃತಿ ಉಂಟುಮಾಡುವುದು ಮಾಧ್ಯಮಗಳ ಮೂಲಭೂತ ಕರ್ತವ್ಯವಾಗಿದೆ. ಸಂವಿಧಾನದ ಆಶಯಗಳಾದ ಸಮಾನ ನ್ಯಾಯ, ಸ್ವಾತಂತ್ರ್ಯ, ಸಮಾನತೆ, ಸೋದರತ್ವ ಮತ್ತು ಜಾತ್ಯತೀತತೆಯನ್ನು ಗೌರವಿಸಿ ಪಾಲಿಸಿಕೊಂಡು ಹೋಗಬೇಕಾಗಿರುವುದು ಮಾಧ್ಯಮರಂಗದ ಕರ್ತವ್ಯ ಕೂಡ ಆಗಿದೆ. ನಮ್ಮದು ಏಕ ಸಂಸ್ಕೃತಿಯ ದೇಶವಲ್ಲ, ಬಹುತ್ವ ನಮ್ಮ ಹೆಗ್ಗುರುತು. ಬಹುಸಂಸ್ಕೃತಿಯನ್ನು ಒಡೆಯಲು ಅಲ್ಲ, ಕಟ್ಟಲು ಬಳಸಬೇಕು. ಪ್ರೀತಿ, ವಿಶ್ವಾಸ, ಸೋದರತ್ವ ಮತ್ತು ಸೌಹಾರ್ದತೆಯ ಮೂಲಕ ಸಮಾಜವನ್ನು ಒಂದಾಗಿ ಕಟ್ಟುವ ಪ್ರಯತ್ನಕ್ಕೆ ಮಾಧ್ಯಮಗಳು ಸಹಕಾರ ನೀಡಬೇಕು. ರೋಚಕತೆಯ ಬೆನ್ನತ್ತಿಯೋ, ಇನ್ನು ಯಾವುದೋ ದುರುದ್ದೇಶದಿಂದಲೋ ಸಮಾಜವನ್ನು ಒಡೆಯುವ, ದ್ವೇಷಾಸೂಯೆಗಳನ್ನು ಹರಡುವ ಕೆಲಸ ಮಾಡಬಾರದು. ಒಂದು ಕಾಲದಲ್ಲಿ ಸ್ವಾತಂತ್ರ್ಯ ಹೋರಾಟದ ಭಾಗವಾಗಿದ್ದ, ನಂತರದ ದಿನಗಳಲ್ಲಿ ಅಭಿವೃದ್ಧಿ ಮತ್ತು ಬದಲಾವಣೆಯ ಸಾಧನವಾಗಿದ್ದ ಮಾಧ್ಯಮ ಕ್ಷೇತ್ರ ಕೇವಲ ವೃತ್ತಿಯಾಗಿ ಉಳಿಯದೆ ಉದ್ಯಮವಾಗಿರುವುದು ನಿಜ. ಆದರೆ, ಜನತೆ ಮಾಧ್ಯಮ ಕ್ಷೇತ್ರವನ್ನು ಸಾಮಾಜಿಕ ಸೇವಾ ಸಂಸ್ಥೆಯಾಗಿ ಮತ್ತು ಪತ್ರಕರ್ತರನ್ನು ಸಮಾಜ ಸೇವಕರ ದೃಷ್ಟಿಯಿಂದಲೇ ನೋಡುತ್ತಾರೆ ಎನ್ನುವುದನ್ನು ಮರೆಯಬಾರದು. ಆದ್ದರಿಂದ ಪತ್ರಕರ್ತರು ಸಾಮಾಜಿಕ ಜವಾಬ್ದಾರಿಯನ್ನು ಮರೆಯಬಾರದು. ಮಾಧ್ಯಮಗಳು ಕೇವಲ ಟೀಕೆ-ಟಿಪ್ಪಣಿಗಳನ್ನಷ್ಟೇ ಮಾಡಿ ರೋಚಕತೆಯ ಬೆನ್ನು ಬೀಳದೆ ಆಗಿರುವ ಲೋಪಗಳನ್ನು ಎತ್ತಿತೋರಿಸುವ ಜತೆಯಲ್ಲಿಯೇ ಅವುಗಳನ್ನು ಸರಿಪಡಿಸಲು ಅಗತ್ಯ ಇರುವಡೆ ರಚನಾತ್ಮಕವಾದ ಪರಿಹಾರಗಳನ್ನು ಕೂಡ ಸೂಚಿಸಬೇಕು. ಇದು ಜವಾಬ್ದಾರಿಯುತವಾದ ಪತ್ರಿಕೋದ್ಯಮ ಎಂದು ನಾನು ತಿಳಿದಿದ್ದೇನೆ.

    ದಶಮಾನೋತ್ಸವ ಆಚರಿಸುತ್ತಿರುವ ವಿಜಯವಾಣಿಗೆ ಅಭಿನಂದನೆ ಸಲ್ಲಿಸುತ್ತೇನೆ. ಇದೇ ರೀತಿ ಓದುಗರ ಪ್ರೀತಿ-ವಿಶ್ವಾಸವನ್ನು ಗಳಿಸಿ ಶತಮಾನೋತ್ಸವ ಆಚರಿಸುವವರೆಗೆ ಬೆಳೆಯಲಿ, ಕನ್ನಡವನ್ನು, ಕನ್ನಡಿಗರನ್ನು ಬೆಳೆಸಲಿ ಎಂದು ಹಾರೈಸುತ್ತೇನೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts