More

    ಬೆಳಕು ತರುವವರಿಗೆ ಕತ್ತಲು ಎದುರಾಗದಿರಲಿ ಎಂದು ದಿಕ್ಸೂಚಿಯಲ್ಲಿ ನಾಗರಾಜ ಇಳೆಗುಂಡಿ ಆಶಯ ವ್ಯಕ್ತಪಡಿಸಿದ್ದಾರೆ

    ಬೆಳಕು ತರುವವರಿಗೆ ಕತ್ತಲು ಎದುರಾಗದಿರಲಿ ಎಂದು ದಿಕ್ಸೂಚಿಯಲ್ಲಿ ನಾಗರಾಜ ಇಳೆಗುಂಡಿ ಆಶಯ ವ್ಯಕ್ತಪಡಿಸಿದ್ದಾರೆ

    ಭಾರತದಲ್ಲಿ ಮಾತ್ರವಲ್ಲ, ಈ ಕರೊನಾ ಮಾರಿ ಬಂದಂದಿನಿಂದ ಬ್ರಿಟನ್, ಅಮೆರಿಕ ಮತ್ತು ಚೀನಾ ಮುಂತಾದ ದೇಶಗಳಲ್ಲಿ ಕೂಡ ಕೌಟುಂಬಿಕ ಹಿಂಸೆ ಪ್ರಮಾಣ ಹೆಚ್ಚಿದೆ ಎಂದು ಅಂಕಿಅಂಶಗಳು ಹೇಳುತ್ತವೆ. ಎಲ್ಲೋ ಕೆಲವರು ಹೀಗೆ ವರ್ತಿಸುತ್ತಿದ್ದಾರೆ ಎಂಬುದು ನಿಜವಾದರೂ ಈ ಲಾಕ್​ಡೌನ್ ಎಂಬುದು ಮನುಷ್ಯನ ಬಗೆಬಗೆ ವರ್ತನೆಗಳನ್ನು ಹೇಗೆಲ್ಲ ಅನಾವರಣಗೊಳಿಸುತ್ತಿದೆಯಲ್ಲವೆ?

    ಮನೆ ಎಂಬ ಎರಡಕ್ಷರದಲ್ಲಿ ಎಷ್ಟೊಂದು ಶಕ್ತಿ ಇದೆ! ತನ್ನೊಡಲಲ್ಲಿ ಅದು ಎಷ್ಟೆಲ್ಲ ವೈವಿಧ್ಯಗಳನ್ನು ಹುದುಗಿಸಿಕೊಂಡಿದೆ! ಅದಕ್ಕೇ ‘ಮನೆಯೇ ಮಂತ್ರಾಲಯ’ ಎಂದು ಹೇಳುವುದು ತಾನೆ… ಕರೊನಾ ಮಾರಿಯನ್ನು ನಿಯಂತ್ರಿಸುವ ಸಲುವಾಗಿ ದೇಶಾದ್ಯಂತ ದಿಗ್ಬಂಧನ ವಿಧಿಸಿರುವುದರಿಂದಾಗಿ ಕೆಲವರನ್ನು ಬಿಟ್ಟರೆ ಉಳಿದಂತೆ ಬಹುತೇಕ ಜನರು ಮನೆಯಲ್ಲೇ ಲಾಕ್ ಆಗಿದ್ದಾರೆ. ಮನೆಯ ಅನೇಕ ಸದಸ್ಯರು- ಹಿರಿಕಿರಿಯರು ಎಲ್ಲರೂ- ಒಟ್ಟಿಗೆ ಹಲವು ದಿನಗಳ ಕಾಲ ಇರುವುದರಿಂದಾಗಿ ಸಹಜವಾಗಿಯೇ ಪ್ರತಿ ಮನೆಯಿಂದಲೂ ಬಗೆಬಗೆಯ ಘಟನೆಗಳು ವರದಿಯಾಗುತ್ತಿವೆ. ಮನೆಗೆಲಸದಲ್ಲಿ ಮತ್ತು ಅಡುಗೆಯಲ್ಲಿ ಪುರುಷರು ಸಹಕರಿಸುವುದು ಭರ್ಜರಿ ಸುದ್ದಿಯಾಗುತ್ತಿದೆ. ಎಷ್ಟೆಂದರೂ, ‘ಭೀಮಸೇನ ನಳಮಹರಾಜರು ಗಂಡಸರಲ್ಲವೆ?’ ಮನೆಯ ಹೆಂಗಸರು ಸಹ ಇದನ್ನು ಖುಷಿಯಿಂದ, ಹೆಮ್ಮೆಯಿಂದ ಹೇಳಿಕೊಳ್ಳುತ್ತಾರೆ- ‘ನಮ್ಮ ಸಂಸಾರ ಆನಂದ ಸಾಗರ’. ಆದರೆ ಇದೆಲ್ಲ ಎಷ್ಟು ದಿನ? ಲಾಕ್​ಡೌನ್ ಮುಗಿದು ಹೊರಜಗತ್ತು ‘ಓಪನ್’ ಆಗುವವರೆಗೆ. ನಂತರ ಅವರವರ ಕೆಲಸದಲ್ಲಿ ವ್ಯಸ್ತರಾಗುತ್ತಾರೆ. ಬಹುತೇಕ ಗಂಡಸರು ದುಡಿಯಲೆಂದು ಹೊರಗೆ ಹೊರಟರೆ, ಉದ್ಯೋಗಸ್ಥ ಮಹಿಳೆಯರು ಮನೆಗೆಲಸ ಮತ್ತು ನೌಕರಿ ಎರಡನ್ನೂ ನಿಭಾಯಿಸಬೇಕು. ಉಳಿದಂತೆ, ಗೃಹಿಣಿಗೆ ಮನೆಗೆಲಸ ಮುಗಿಯುವುದೇ ಇಲ್ಲ! ಇದು ಲೋಕನಿಯಮವೇ ಎನ್ನಿ. ಆದರೂ, ಮನೆಯಲ್ಲಿರುವ ಗೃಹಿಣಿಯರು ಮಾಡುವ ಕೆಲಸದ ಲೆಕ್ಕ ಸಿಗುವುದೇ ಇಲ್ಲ ಎಂಬ ಮಾತು ಮೊದಲಿಂದಲೂ ಇದೆ. ನೌಕರಿ ಮಾಡುವವರಿಗೆ ಮಾಸಿಕ ವೇತನ ನಿಗದಿಯಾಗಿರುತ್ತದೆ. ಮನೆಯಲ್ಲೇ ಇರುವ ಗೃಹಿಣಿ ದಿನವಿಡೀ ಕೆಲಸ ಮಾಡಿದರೂ ನಿರ್ದಿಷ್ಟ ಪಗಾರು ಎಂಬುದಿಲ್ಲ. ಆರ್ಥಿಕ ಸಹಕಾರ ಮತ್ತು ಅಭಿವೃದ್ಧಿ ಸಂಸ್ಥೆ(ಒಇಸಿಡಿ) 2015ರಲ್ಲಿ ನೀಡಿದ ಒಂದು ವರದಿ ಪ್ರಕಾರ, ಉಳಿದ ದೇಶಗಳಿಗೆ ಹೋಲಿಸಿದರೆ ಭಾರತದ ಗೃಹಿಣಿಯರು ದಿನವೊಂದಕ್ಕೆ ಮಾಡುವ ‘ವೇತನರಹಿತ ಕೆಲಸ’ದ ಅವಧಿ ಸುಮಾರು ಆರು ತಾಸು ಹೆಚ್ಚಂತೆ. ಈ ಕಾರಣಕ್ಕಾಗಿಯೇ ಗೃಹಿಣಿಯ ಕೆಲಸಕ್ಕೂ ಒಂದು ಪಗಾರು ಅಂತ ನಿಶ್ಚಯ ಮಾಡಬೇಕು ಎಂಬ ಪ್ರತಿಪಾದನೆ ಬಹು ವರ್ಷಗಳಿಂದ ಇದ್ದೇ ಇದೆ.

    ಈ ನಡುವೆಯೇ, ಮನೆಯೊಳಗಿಂದ ನಲಿವಿನ ಪ್ರಸಂಗಗಳ ಜತೆಗೆ ನೋವಿನ ಕಥೆಗಳು ಸಹ ಹೊರಬರುತ್ತಿರುವದಕ್ಕೆ ಏನೆನ್ನುವುದು? ರಾಷ್ಟ್ರೀಯ ಮಹಿಳಾ ಆಯೋಗ ಮತ್ತು ಕರ್ನಾಟಕ ರಾಜ್ಯ ಮಹಿಳಾ ಆಯೋಗಗಳಿಗೆ ಈಚಿನ ದಿನಗಳಲ್ಲಿ ಬರುತ್ತಿರುವ ಹೆಚ್ಚಿನ ದೂರುಗಳು ಕೌಟುಂಬಿಕ ದೌರ್ಜನ್ಯದ್ದೇ ಆಗಿವೆ. ಪತಿಯಿಂದ ಪತ್ನಿ ಮೇಲೆ ಹಲ್ಲೆ, ನಿಂದನೆ ಇತ್ಯಾದಿ ಆಗುತ್ತಿವೆ (ಪತ್ನಿಯಿಂದ ಹಿಂಸೆ ಆಗುತ್ತಿದೆ ಎಂಬುದಾಗಿ ಕೂಡ ದೂರು ಕ್ವಚಿತ್ತಾಗಿ ಬಂದಿವೆ. ಅದು ಬೇರೆ ಮಾತು!). ಅದರಲ್ಲೂ ಮದ್ಯವ್ಯಸನಿ ಪತಿಯಿಂದ ಆಗುವ ಹಿಂಸೆಯ ಬಗ್ಗೆ ಅನೇಕ ಮಹಿಳೆಯರು ಹೇಳಿಕೊಳ್ಳುತ್ತಿದ್ದಾರೆ. ಈಗ ಮದ್ಯ ಮಾರಾಟಕ್ಕೆ ನಿರ್ಬಂಧ ಇರುವುದರಿಂದ ಈ ಚಟಕ್ಕೆ ಒಗ್ಗಿಹೋದವರು ಮನೆಯಲ್ಲೇ ಕುಳಿತು ಚಡಪಡಿಸುತ್ತಿದ್ದಾರೆ. ಇದರ ಪರಿಣಾಮ ಮನೆಯವರ ಮೇಲೆ ಆಗುತ್ತಿದೆ. ಮದ್ಯದ ಚಟದ ಗಂಡನಿಂದ ಆಗುತ್ತಿರುವ ಹಿಂಸೆ ಬಗ್ಗೆ ಆಶಾ ಕಾರ್ಯಕರ್ತೆಯೊಬ್ಬರು ಮಹಿಳಾ ಸಹಾಯವಾಣಿಗೆ ಹೇಳಿಕೊಂಡಿದ್ದು ಇದಕ್ಕೊಂದು ತಾಜಾ ನಿದರ್ಶನ. ಮತ್ತೊಬ್ಬ ಪತಿಗೆ ವರದಕ್ಷಿಣೆ ಕಿರುಕುಳ ನೀಡಲು ಇದೇ ‘ಸೂಕ್ತ ಸಮಯ’. ವಿಪರ್ಯಾಸ ನೋಡಿ. ಈಗ ನಿರ್ಬಂಧ ಇರುವುದರಿಂದಾಗಿ, ಯಾರದಾದರೂ ಮೇಲೆ ಹಲ್ಲೆ, ದೌರ್ಜನ್ಯ ನಡೆದರೂ ಹೊರಗೆ ಹೋಗಿ ಸಂಬಂಧಪಟ್ಟ ಠಾಣೆಗೋ ಅಥವಾ ಕಚೇರಿಗೋ ಹೋಗಿ ದೂರು ಕೊಡುವ ಸನ್ನಿವೇಶವೂ ಇಲ್ಲ. ಮಹಿಳಾ ಆಯೋಗದ ಸಹಾಯವಾಣಿಗೆ ಇಂಥ ದೂರುಹೋದಾಗ, ಅವರು ಆರೋಪಿಗಳಿಗೆ ಫೋನ್ ಮಾಡಿ ಎಚ್ಚರಿಕೆ ನೀಡುತ್ತಿದ್ದಾರಾದರೂ ಎಲ್ಲರೂ ಮಾತು ಕೇಳಬೇಕಲ್ಲ? ಹೀಗಾಗಿ ಲಾಕ್​ಡೌನ್ ಮುಗಿದ ಮೇಲಷ್ಟೆ ಇಂಥ ರಗಳೆಗಳಿಗೆ ಪರಿಹಾರ ಸಿಗಬಹುದಾಗಿದೆ. ರಾಷ್ಟ್ರೀಯ ಮಹಿಳಾ ಆಯೋಗದ ಅಧ್ಯಕ್ಷೆ ರೇಖಾ ಶರ್ಮಾ ಅವರ ಪ್ರಕಾರ, ಮಾರ್ಚ್ 24ರಿಂದ ಏಪ್ರಿಲ್ 1ರವರೆಗಿನ ಲಾಕ್​ಡೌನ್ ಅವಧಿಯಲ್ಲಿ ಆಯೋಗಕ್ಕೆ ಬಂದ ದೂರಿನಲ್ಲಿ ಕೌಟುಂಬಿಕ ಹಿಂಸೆಯ ದೂರುಗಳ ಪ್ರಮಾಣ ಎರಡು ಪಟ್ಟು ಹೆಚ್ಚಿದೆ. ಮಹಿಳೆಯರ ವಿರುದ್ಧದ ಬೇರೆ ಬೇರೆ ಅಪರಾಧಗಳ 257 ದೂರುಗಳು ಬಂದಿವೆ ಎಂದು ಅವರು ಮಾಹಿತಿ ನೀಡಿದ್ದಾರೆ.

    ಭಾರತದಲ್ಲಿ ಮಾತ್ರವಲ್ಲ, ಈ ಕರೊನಾ ಮಾರಿ ಬಂದಂದಿನಿಂದ ಬ್ರಿಟನ್, ಅಮೆರಿಕ ಮತ್ತು ಚೀನಾ ಮುಂತಾದ ದೇಶಗಳಲ್ಲಿ ಕೂಡ ಕೌಟುಂಬಿಕ ಹಿಂಸೆ ಪ್ರಮಾಣ ಹೆಚ್ಚಿದೆ ಎಂದು ಅಂಕಿಅಂಶಗಳು ಹೇಳುತ್ತವೆ. ಎಲ್ಲೋ ಕೆಲವರು ಹೀಗೆ ವರ್ತಿಸುತ್ತಿದ್ದಾರೆ ಎಂಬುದು ನಿಜವಾದರೂ ಈ ಲಾಕ್​ಡೌನ್ ಎಂಬುದು ಮನುಷ್ಯನ ಬಗೆಬಗೆ ವರ್ತನೆಗಳನ್ನು ಹೇಗೆಲ್ಲ ಅನಾವರಣಗೊಳಿಸುತ್ತಿದೆಯಲ್ಲವೆ? ಮನಸ್ಸೇ ‘ಲಾಕ್​ಡೌನ್’ ಆದರೆ ಏನುಮಾಡುವುದು!

    ಇನ್ನು, ಕರೊನಾ ವೈರಸ್ ವಿಚಾರಕ್ಕೆ ಬರುವುದಾದರೆ, ಅದಕ್ಕೆ ಸ್ತ್ರೀ-ಪುರುಷ, ಮಕ್ಕಳು-ಮುದುಕರು ಎಂಬ ಭೇದವಿಲ್ಲ. ಯಾರಿಗೆ ಬೇಕಾದರೂ ಅದು ಬರಬಹುದು. ಆದರೂ ಕರೊನಾಪೀಡಿತರಲ್ಲಿ ಪುರುಷರ ಸಂಖ್ಯೆ ಮಹಿಳೆಯರಿಗಿಂತ ಸ್ವಲ್ಪ ಜಾಸ್ತಿ. ಹಾಗೇ, ಸೋಂಕಿತರಲ್ಲಿ 40-50 ವಯೋಮಾನದವರ ಪ್ರಮಾಣ ಅಧಿಕವಾಗಿದ್ದರೆ, ಸಾವಿನ ಲೆಕ್ಕಾಚಾರದಲ್ಲಿ 60ಕ್ಕಿಂತ ಮೇಲ್ಪಟ್ಟ ವಯಸ್ಸಿನವರ ಸಂಖ್ಯೆ ಜಾಸ್ತಿ ಇದೆ. ಇದಕ್ಕೆ ಕಾರಣಗಳು ಬೇರೆ ಬೇರೆ.

    ಕರೊನಾ ವಿರುದ್ಧ ಹೋರಾಡುತ್ತಿರುವವರಲ್ಲಿ ಪುರುಷರೂ ಇದ್ದಾರೆ, ಮಹಿಳೆಯರೂ ಇದ್ದಾರೆ. ಇಲ್ಲಿ ಅವರು ಹೆಚ್ಚು ಇವರು ಕಡಿಮೆ ಎಂಬ ಮಾತಿಗೆ ಆಸ್ಪದವಿಲ್ಲ. ಎಲ್ಲರೂ ಅವರವರ ನೆಲೆಯಲ್ಲಿ, ಈ ಅಗೋಚರ ವೈರಾಣುವಿನ ವಿರುದ್ಧದ ಹೋರಾಟದಲ್ಲಿ ತೊಡಗಿಸಿಕೊಂಡಿದ್ದಾರೆ. ಹೀಗಿದ್ದರೂ, ಈ ಕರೊನಾ ಸಮಯ, ಮುಂದಿನ ದಿನಗಳಲ್ಲಿ ಆಗುವ ಪರಿಣಾಮಗಳು ಇತ್ಯಾದಿ ಹಿನ್ನೆಲೆಯಲ್ಲಿ ನಾವು ನೋಡಿದಾಗ ಭಿನ್ನ ಚಿತ್ರಣಗಳು ಕಂಡುಬರುತ್ತವೆ.

    ಆರೋಗ್ಯ ವಲಯವನ್ನೇ ತೆಗೆದುಕೊಳ್ಳೋಣ. ವೈದ್ಯಕೀಯ ಬೆಂಬಲ ಮತ್ತು ಎರಡನೆಯ ಹಂತದ ಆರೋಗ್ಯ ಕಾರ್ಯಕರ್ತರ ಪೈಕಿ ನರ್ಸ್​ಗಳು, ಪ್ರಸೂತಿ ಸಹಾಯಕರು ಮತ್ತು ಆಶಾ ಕಾರ್ಯಕರ್ತರಲ್ಲಿ ಸುಮಾರು ಶೇ.80 ಮಹಿಳೆಯರು (ಜಾಗತಿಕವಾಗಿಯೂ ಆರೋಗ್ಯ ಕಾರ್ಯಕರ್ತರಲ್ಲಿ ಮಹಿಳೆಯರ ಸಂಖ್ಯೆಯೇ ಹೆಚ್ಚು. ಈ ಪ್ರಮಾಣ ಶೇ.70ರಷ್ಟಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಅಂದಾಜಿಸಿದೆ). ಯಾವುದೇ ಆರೋಗ್ಯ ಎಮರ್ಜೆನ್ಸಿ ಅಥವಾ ಬಿಕ್ಕಟ್ಟಿನ ಸಮಯದಲ್ಲಿ ಇವರು ಕೂಡ ಮುಂಚೂಣಿ ವಾರಿಯರ್​ಗಳಾಗಿ ಕಾರ್ಯನಿರ್ವಹಿಸುತ್ತಾರೆ. ಈಗ ಕರೊನಾ ವಿರುದ್ಧದ ಹೋರಾಟದಲ್ಲಿ ಇದು ನಮ್ಮ ಅನುಭವಕ್ಕೇ ಬರುತ್ತಿದೆ. ಮನೆಮನೆಗೆ ಹೋಗಿ ಮಾಹಿತಿ ಸಂಗ್ರಹ ಮಾಡುವುದರಲ್ಲಿ ಆಶಾ ಕಾರ್ಯಕರ್ತರು ಮುಖ್ಯ ಪಾತ್ರ ನಿರ್ವಹಿಸುತ್ತಿದ್ದಾರೆ. ಈ ಸಮಯದಲ್ಲಿ ಅನೇಕರು ಬೆದರಿಕೆ ಎದುರಿಸಿದ್ದೂ ಇದೆ. ಅಷ್ಟೇ ಅಲ್ಲ, ಹಲ್ಲೆಯೂ ಆಗಿದ್ದಿದೆ. ಅನೇಕ ಕಡೆಗಳಲ್ಲಿ ವೈದ್ಯರ ಮೇಲೆಯೂ ಹಲ್ಲೆಗಳಾಗಿವೆ. ಈ ಹಿನ್ನೆಲೆಯಲ್ಲಿಯೇ ಕೇಂದ್ರ ಮತ್ತು ಕರ್ನಾಟಕ ಸರ್ಕಾರಗಳು, ವೈದ್ಯರು ಮತ್ತು ಆರೋಗ್ಯ ಕಾರ್ಯಕರ್ತರ ಕರ್ತವ್ಯಕ್ಕೆ ತಡೆ, ನಿಂದನೆ ಮತ್ತು ಹಲ್ಲೆಯನ್ನು ಶಿಕ್ಷಾರ್ಹ ಅಪರಾಧವಾಗಿಸುವ ಕಾನೂನು ರೂಪಿಸಿ ಸುಗ್ರೀವಾಜ್ಞೆಯನ್ನೇ ಹೊರಡಿಸಿವೆ. ಅದರಲ್ಲೂ ಈ ಕರೊನಾ ಎಂಬುದಿದೆಯಲ್ಲ, ಹೊಸ ಬಗೆಯ ವೈರಸ್ ಆದುದರಿಂದ ಎಷ್ಟು ಮಾಹಿತಿ ಪಡೆದರೂ ಕಡಿಮೆಯೇ. ದಿನದಿನವೂ ಕರೊನಾ ಸೋಂಕಿತರ ಚಿಕಿತ್ಸೆ ಮಾಡುವಾಗ, ಸೋಂಕಿತರು ಇರುವ ಪ್ರದೇಶಗಳಿಗೆ ಹೋಗುವಾಗ ಸಹಜವಾಗಿಯೇ ಹೆದರಿಕೆ ಇರುತ್ತದೆ. ಆದರೂ, ನೌಕರಿ ಮತ್ತು ಕರ್ತವ್ಯ ಬಿಡಲಾಗದಲ್ಲ? ಇಟಲಿಯಂತಹ ದೇಶದಲ್ಲಿ ನೂರಾರು ವೈದ್ಯರೇ ಸಾವನ್ನಪ್ಪಿದ್ದಾರೆ. ನಮ್ಮ ದೇಶದ ಅನೇಕ ರಾಜ್ಯಗಳಲ್ಲಿ ಕೂಡ ನೂರಾರು ಮಂದಿ ವೈದ್ಯರು, ನರ್ಸ್​ಗಳು ಮತ್ತು ಇತರೆ ಸಿಬ್ಬಂದಿ ಕರೊನಾ ಸೋಂಕಿಗೆ ಒಳಗಾಗಿದ್ದಾರೆ. ತಜ್ಞರು ಹೇಳುವ ಪ್ರಕಾರ, ಕರೊನಾ ಕಾಟ ಒಂದೆರಡು ತಿಂಗಳಿಗೆ ಮುಗಿಯುವ ಲಕ್ಷಣಗಳಿಲ್ಲ. ಅಂದರೆ, ಆರೋಗ್ಯ ವಲಯದ ಮೇಲೆ ಇನ್ನಷ್ಟು ಜವಾಬ್ದಾರಿ, ಒತ್ತಡ ಇದೆ ಅಂತಲೇ ಅರ್ಥ.

    ಇನ್ನು, ಕರೊನಾ ಇರಲಿ, ಸಾರ್ಸ್ ಇರಲಿ, ಎಬೊಲಾ ಇರಲಿ ಅಥವಾ ಯುದ್ಧದಂತಹ ಬಿಕ್ಕಟ್ಟಿರಲಿ ಇಂಥ ಸಂದರ್ಭದಲ್ಲಿ ಆರ್ಥಿಕತೆ ಮೇಲೆ ತೀವ್ರ ಪರಿಣಾಮವಾಗಿ ಉದ್ಯೋಗ ಮತ್ತು ವೇತನದ ಮೇಲೂ ಅದರ ಛಾಯೆ ಕಂಡುಬರುವುದು ಸಹಜವೇ. ಇಲ್ಲಿಯೂ ಮಹಿಳೆಯರ ಮೇಲೆ ಹೆಚ್ಚು ಪರಿಣಾಮವಾಗುತ್ತದೆ ಎಂದು ಅನೇಕ ಅಧ್ಯಯನ ವರದಿಗಳು ಹೇಳಿವೆ. ಅದರಲ್ಲೂ, ಫ್ಲೈಟ್ ಅಟೆಂಡೆಂಟ್, ರಿಸೆಪ್ಷನಿಸ್ಟ್, ಬೇರೆ ಬೇರೆ ವ್ಯಾಪಾರವ್ಯವಹಾರಗಳ ಸೇಲ್ಸ್ ವಿಭಾಗ, ಹೋಟೆಲ್​ಗಳಲ್ಲಿ ಸ್ವಾಗತಕಾರಿಣಿಯರು ಮುಂತಾದವರ ಮೇಲೆ ಹೆಚ್ಚು ಪರಿಣಾಮ ಕಂಡುಬರುತ್ತದೆ ಎಂದು ಮಾರುಕಟ್ಟೆ ಅಧ್ಯಯನಗಳು ಬೊಟ್ಟುಮಾಡುತ್ತವೆ. ಇದರರ್ಥ, ಆಯಾ ಕುಟುಂಬದ ಆದಾಯದಲ್ಲಿ ಅಷ್ಟು ಖೋತಾ ಅಂತ. ಇದು ಹೀಗೇ ಮುಂದುವರಿದಲ್ಲಿ, ಭಾರತದಲ್ಲಿ ಮಹಿಳಾ ಕಾರ್ವಿುಕರ ಭಾಗವಹಿಸುವಿಕೆ ಪ್ರಮಾಣ (ಎಫ್​ಎಲ್​ಇಪಿ) ಮತ್ತಷ್ಟು ತಗ್ಗಬಹುದೆಂಬ ಆತಂಕ ವ್ಯಕ್ತವಾಗಿದೆ. ಈ ಪ್ರಮಾಣ 2005-06ರಲ್ಲಿ ಶೇ.36 ಇದ್ದುದು 2015-16ರ ಹೊತ್ತಿಗೆ ಶೇ.24ಕ್ಕೆ ಕುಸಿದಿದೆ ಎಂದು 2017-18ರ ಆರ್ಥಿಕ ಸಮೀಕ್ಷೆ ವರದಿ ಹೇಳಿದೆ.

    ಇನ್ನು, ಈ ಸಮಸ್ಯೆಯ ಮತ್ತೊಂದು ಮಗ್ಗುಲು ನೋಡಿ. ಉತ್ತರ ಕರ್ನಾಟಕದ ಕಡೆಯಿಂದಲೋ ಅಥವಾ ತಮಿಳುನಾಡು, ಆಂಧ್ರದ ಕಡೆಯಿಂದಲೋ ಜೀವನೋಪಾಯಕ್ಕೆಂದು ಕೆಲಸ ಹುಡುಕಿಕೊಂಡು ಬೆಂಗಳೂರಿನತ್ತ ಹೆಜ್ಜೆಹಾಕುವ ಮಂದಿಯ ಸಾಲಿನಲ್ಲಿ ತಲೆಮೇಲೆ ಗಂಟುಮೂಟೆ ಹೊತ್ತುಕೊಂಡು ಬರುವ ಮಹಿಳೆಯರು, ಮಕ್ಕಳೂ ದೊಡ್ಡ ಸಂಖ್ಯೆಯಲ್ಲಿ ಕಣ್ಣಿಗೆ ಬೀಳುತ್ತಾರೆ. ಪಾಪ, ಇವರು ಈಗ ಇಲ್ಲಿಯೂ ಇರಲಾಗದೆ ಊರಿಗೂ ಹೋಗಲಾಗದೆ ಎಲ್ಲೆಲ್ಲೋ ಉಳಿಯಬೇಕಾದ ಪರಿಸ್ಥಿತಿ ಎದುರಾಗಿದೆ. ಕೆಲಸ ಸ್ಥಳದಲ್ಲೇ ಹೊರಗೆ ಒಲೆ ಹೂಡಿಕೊಂಡು ಅಲ್ಲೆ ರೊಟ್ಟಿ ತಟ್ಟಿ ಹೇಗೋ ಹೊಟ್ಟೆ ತುಂಬಿಸಿಕೊಳ್ಳುತ್ತಿದ್ದವರಿಗೂ ಕರೊನಾ ಮಾರಕ ಹೊಡೆತ ನೀಡಿದೆ. ಸರ್ಕಾರವೇನೋ ಸದ್ಯಕ್ಕೆ ನೆರವು ನೀಡುತ್ತಿದೆ. ಆದರೂ ಇದೆಲ್ಲ ಎಷ್ಟು ದಿನ? ಅವರವರ ರಟ್ಟೆ ಬಲವೇ ಗಟ್ಟಿಯಲ್ಲವೆ? ವಲಸೆ ಕಾರ್ವಿುಕರಿಗೆ ಊರಿಗೆ ತೆರಳಲು ಅವಕಾಶ ನೀಡಬೇಕೆಂದು ರಾಜ್ಯ ಸರ್ಕಾರ ಸೂಚಿಸಿದೆಯೆಂಬುದು ಲೇಟೆಸ್ಟ್ ಸುದ್ದಿ. ಒಟ್ಟಿನಲ್ಲಿ ಅವರ ಹೊಟ್ಟೆ ತಣ್ಣಗಿರಲಿ.

    ಕೊನೇ ಮಾತು: ದೂರದರ್ಶನದಲ್ಲಿ ಮೂಡಿಬರುತ್ತಿರುವ ರಾಮಾಯಣ ಧಾರಾವಾಹಿಯಲ್ಲಿ, ರಾಮ ವನವಾಸ ಮುಗಿಸಿ, ರಾವಣ ವಧೆಗೈದು ಪಟ್ಟಾಭಿಷಿಕ್ತನಾದ ಕಂತು ಪ್ರಸಾರವಾಗಿದೆ (ಈಗ ಸೀತೆ ಕಾಡಿಗೆ ಹೊರಟಾಗಿದೆ ಎನ್ನಿ). ಹಾಗೆ, ಕರೊನಾ ಎಂಬ ರಾಕ್ಷಸನ ವಧೆ ಬೇಗ ಆಗಲಿ, ಮನೆಮನೆಯಲ್ಲಿ ಅನುಭವಿಸುತ್ತಿರುವ ಈ ‘ವನವಾಸ’ ಬೇಗ ಮುಗಿದು ಜನರು ಎಂದಿನಂತೆ ಚಟುವಟಿಕೆಯಲ್ಲಿ ತೊಡಗುವಂತಾಗಲಿ ಎಂದು ಹಾರೈಸೋಣ. ಜಗತ್ತು ಸ್ಥಗಿತವಾಗಲಾಗದಲ್ಲ, ಚಲನೆಯಲ್ಲಿರಬೇಕಲ್ಲ…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts