More

    ಯುವ ಪೀಳಿಗೆಗೆ ಸಂತನ ವಿಚಾರಧಾರೆ ಅನುಸರಿಸಲಿ

    ಮಳವಳ್ಳಿ: ಸಮ ಸಮಾಜ ನಿರ್ಮಾಣಕ್ಕಾಗಿ ವಚನ ಸಾಹಿತ್ಯದ ಮೂಲಕ ಜಾಗೃತಿ ಮೂಡಿಸುವುದರ ಜತೆಗೆ ಮೇಲು-ಕೀಳು ಎಂಬ ಭಾವನೆಯನ್ನು ದೂರ ಮಾಡಲು ಶ್ರಮಿಸಿದ ಮಹಾನ್ ಸಂತ ಬಸವಣ್ಣ ಎಂದು ಗ್ರೇಡ್ 2 ತಹಸೀಲ್ದಾರ್ ಬಿ.ವಿ.ಕುಮಾರ್ ತಿಳಿಸಿದರು.

    ಪಟ್ಟಣದ ತಾಲೂಕು ಕಚೇರಿಯಲ್ಲಿ ತಾಲೂಕು ಆಡಳಿತ ವತಿಯಿಂದ ಶುಕ್ರವಾರ ಆಯೋಜಿಸಿದ್ದ 891ನೇ ಬಸವೇಶ್ವರ ಜಯಂತಿ ಹಾಗೂ ಹೇಮರಡ್ಡಿ ಮಲ್ಲಮ್ಮ ಜಯಂತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ವಿಶ್ವವೇ ಬಸವಣ್ಣನ ತತ್ವಾದರ್ಶಗಳನ್ನು ಒಪ್ಪಿಕೊಂಡು ಗೌರವಿಸುತ್ತಿದ್ದು, ಇವರ ವಿಚಾರಧಾರೆಗಳನ್ನು ಪ್ರಸ್ತುತ ಯುವ ಪೀಳಿಗೆ ಅನುಕರಿಸುವ ಅಗತ್ಯವಿದೆ ಎಂದರು.

    ಇಂತಹ ಮಹಾನ್ ಮಾನವತಾವಾದಿಯ ಜಯಂತಿಯನ್ನು ವಿಜೃಂಭಣೆಯಿಂದ ಆಚರಿಸುವ ಮೂಲಕ ಜನರಲ್ಲಿ ಜಾಗೃತಿ ಮೂಡಿಸುವುದು ಅತ್ಯಗತ್ಯವಾಗಿದ್ದು, ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿರುವುದರಿಂದ ಸರಳವಾಗಿ ಆಚರಿಸಲಾಗುತ್ತಿದೆ ಎಂದರು.

    ಬಿಇಒ ಚಂದ್ರಪಾಟೀಲ್ ಮಾತನಾಡಿ, ಸಂಪರ್ಕ-ಸಾಧನಗಳಿಲ್ಲದ ದಿನಮಾನಗಳಲ್ಲೇ ಸಮೂಹವನ್ನು ಸಂಘಟಿಸಿ ಸಮಾನತೆಗಾಗಿ ಪ್ರಚಾರ ಮಾಡಿದವರು ಬಸವಣ್ಣ. ಮಾನವೀಯ ಮೌಲ್ಯಗಳ ಬಗ್ಗೆ ಸರಳವಾಗಿ ತಮ್ಮ ವಚನ ಸಾಹಿತ್ಯದ ಮೂಲಕ ಸಂದೇಶ ನೀಡುವುದರ ಜತೆಗೆ ಸ್ತ್ರೀ ಸಮಾನತೆಗಾಗಿ ಹೊರಟ ಮಾಡಿದ್ದರು ಎಂದು ಸ್ಮರಿಸಿದರು.

    ಶತಮಾನಗಳ ಹಿಂದೆಯೇ ಬಸವೇಶ್ವರರು ರಚಿಸಿದ ವಚನಸಾಹಿತ್ಯ ಇಂದಿಗೂ ಪ್ರಚಲಿತದಲ್ಲಿದ್ದು, ಅದರಲ್ಲಿರುವ ವಾಸ್ತವ ಮತ್ತು ಸತ್ವಗಳಿಂದಾಗಿ ಇಂದಿಗೂ ಉಳಿದಿದೆ ಎಂದು ತಿಳಿಸಿದರು.

    ವೀರಶೈವ-ಲಿಂಗಾಯತ ಮುಖಂಡ ಅಶೋಕ್ ಕ್ಯಾತನಹಳ್ಳಿ ಮಾತನಾಡಿ, ಅಸ್ಪೃಶ್ಯತೆ, ಕಂದಾಚಾರದ ವಿರುದ್ಧ ಬುದ್ಧನ ನಂತರ ಹೋರಾಟ ಮಾಡಿದ ಮಹಾನ್ ಮಾನವತಾವಾದಿ ಬಸವಣ್ಣ. ಅನುಭವ ಮಂಟಪದ ಮೂಲಕ ಸಮಾಜದ ಎಲ್ಲ ಸಮುದಾಯವನ್ನು ಒಗ್ಗೂಡಿಸಿ ವಿಚಾರಧಾರೆಗಳನ್ನು ಸಮಾಜಕ್ಕೆ ಬಿತ್ತಿದರು. ಆದರೆ ಅದನ್ನು ಅನುಸರಿಸುವಲ್ಲಿ ಜನ ಸಮೂಹ ವಿಫಲವಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.

    ಪಟ್ಟಣದ ಸಾರಿಗೆ ಬಸ್ ನಿಲ್ದಾಣ ಬಳಿ ಬಸವೇಶ್ವರ ಪುತ್ಥಳಿ ನಿರ್ಮಾಣ ಮಾಡುವುದರ ಜತೆಗೆ ಬಸವೇಶ್ವರ ವೃತ್ತ ಎಂದು ನಾಮಕರಣ ಮಾಡಬೇಕೆಂದು ಮನವಿ ಸಲ್ಲಿಸಲಾಗುತ್ತಿದ್ದು, ಇದನ್ನು ಕಾರ್ಯಗತಗೊಳಿಸಬೇಕೆಂದು ಒತ್ತಾಯಿಸಿದರು.

    ಹಿಂದುಳಿದ ವರ್ಗಗಳ ತಾಲೂಕು ಕಲ್ಯಾಣಾಧಿಕಾರಿ ನಾಗರಾಜು, ಕಸಾಪ ತಾಲೂಕು ಅಧ್ಯಕ್ಷ ಚೇತನ್‌ಕುಮಾರ್, ಬಸವ ಕೇಂದ್ರ ಪಟ್ಟಣ ಅಧ್ಯಕ್ಷ ಮಲ್ಲೇಶ್, ವೀರಶೈವ ಸರ್ಕಾರಿ ನೌಕರ ಸಂಘದ ತಾಲೂಕು ಅಧ್ಯಕ್ಷ ಗಂಗಾಧರ್, ಹರೀಶ್ ಪಾಟೀಲ್, ಜಗದೀಶ್, ಸೋಮಶೇಖರ್ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts