More

    ಕೇಳುಗರ ಸಂಕಟವನ್ನು ಕವಿಗಳು ಅರಿಯುವಂತಾಗಲಿ

    ಕುಶಾಲನಗರ: ಕವನವನ್ನು ಓದುವುದರ ಜತೆಗೆ ಕೇಳುಗರ ಸಂಕಟವನ್ನೂ ಕವನ ವಾಚಿಸುವ ಕವಿಗಳು ಅರಿಯಬೇಕು ಎಂದು ಸಾಹಿತಿ ಭಾರದ್ವಾಜ್.ಕೆ.ಆನಂದತೀರ್ಥ ಸಲಹೆ ನೀಡಿದರು.

    ಕನ್ನಡ ಸಾಹಿತ್ಯ ಪರಿಷತ್‌ನ ಹೆಬ್ಬಾಲೆ ಘಟಕ ವತಿಯಿಂದ ಹೆಬ್ಬಾಲೆ ಬನಶಂಕರಿ ಹಬ್ಬದ ಪ್ರಯುಕ್ತ ಬನಶಂಕರಿ ದೇವಸ್ಥಾನ ಆವರಣದಲ್ಲಿ ಭಾನುವಾರ ಆಯೋಜಿಸಿದ್ದ ಕವಿಗೋಷ್ಠಿ ಉದ್ಘಾಟಿಸಿ ಮಾತನಾಡಿದ ಅವರು, ಈಗಾಗಲೇ ಕವಿಗೋಷ್ಠಿಗಳಿಗೆ ಸಾರ್ವಜನಿಕರು ಬರುವುದು ಕಡಿಮೆ. ಹೀಗಿರುವಾಗ ಕವಿಗಳು ತಮಗೆ ಇಷ್ಟ ಬಂದ ಹಾಗೆ ಬರೆದು ಜನರಲ್ಲಿ ಸಾಹಿತ್ಯಾಸಕ್ತಿಯನ್ನು ಮತ್ತಷ್ಟು ಕಡಿಮೆ ಮಾಡಬಾರದು ಎಂದರು.

    ಮೀನುಗಾರಿಕೆ ಇಲಾಖೆಯ ಸೋಮವಾರಪೇಟೆ ತಾಲೂಕು ಸಹಾಯಕ ನಿರ್ದೇಶಕಿ ಮಿಲನಾ ಭರತ್ ಮಾತನಾಡಿ, ಗ್ರಾಮೀಣ ಭಾಗದಲ್ಲಿ ಕವಿಗೋಷ್ಠಿ ನಡೆಸುವ ಮೂಲಕ ಕನ್ನಡ ಭಾಷೆಯ ಗೌರವವನ್ನು ಹೆಚ್ಚಿಸಲಾಗುತ್ತಿದೆ. ಕೊಡಗಿನಲ್ಲಿ ಮಹಿಳಾ ಬರಹಗಾರರ ಸಂಖ್ಯೆ ಕಡಿಮೆ ಇತ್ತು ಎನ್ನುತ್ತಿದ್ದರು. ಆದರೆ ಪ್ರಸ್ತುತ ಮಹಿಳೆಯರೇ ಹೆಚ್ಚು ಇರುವುದು ಸಂತಸದ ವಿಚಾರ ಎಂದರು.

    ಕೊಡಗು ನಿಸರ್ಗ, ವೀರರ ನಾಡು, ಕಾವೇರಿ ನದಿ, ಸೈನಿಕರ ತವರೂರು. ಆದರೆ ಬರಹಗಾರರು ಕೂಡ ಕೇವಲ ಇದೇ ವಿಚಾರಗಳಿಗೆ ಸೀಮಿತಗೊಳ್ಳದೆ ಹೆಚ್ಚು ಓದುವ ಮೂಲಕ ಹೊರಜಗತ್ತಿಗೆ ತೆರೆದುಕೊಳ್ಳಬೇಕು ಎಂದು ಸಲಹೆ ನೀಡಿದರು.

    ಕನ್ನಡ ಸಾಹಿತ್ಯ ಪರಿಷತ್‌ನ ಕುಶಾಲನಗರ ತಾಲೂಕು ಅಧ್ಯಕ್ಷ ಕೆ.ಎಸ್.ನಾಗೇಶ್ ಮಾತನಾಡಿದರು. ಜಿಲ್ಲೆಯ ವಿವಿಧೆಡೆಯಿಂದ 20ಕ್ಕೂ ಹೆಚ್ಚು ಕವಿಗಳು ಆಗಮಿಸಿ ತಮ್ಮ ಸ್ವರಚಿತಾ ಕವನಗಳನ್ನು ವಾಚಿಸಿದರು. ಸಭಾ ಅಧ್ಯಕ್ಷರಾಗಿ ಹೆಬ್ಬಾಲೆ ಘಟಕದ ಅಧ್ಯಕ್ಷ ಎಂ.ಎನ್. ಮೂರ್ತಿ, ಹೆಬ್ಬಾಲೆ ಪ್ರೌಢಶಾಲೆಯ ಹಿರಿಯ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷ ಎಚ್.ವಿ.ಶಿವಪ್ಪ, ಜಿಲ್ಲಾ ಸಮಿತಿಯ ಫ್ಯಾನ್ಸಿ ಮುತ್ತಣ್ಣ, ಹೆಬ್ಬಾಲೆ ದೇವಾಲಯ ಸಮಿತಿ ಅಧ್ಯಕ್ಷ ಬಸವರಾಜಪ್ಪ, ಕುಶಾಲನಗರ ತಾಲೂಕು ಕಸಾಪ ಕಾರ್ಯದರ್ಶಿ ಎಸ್.ನಾಗರಾಜ್, ಹೆಬ್ಬಾಲೆ ಘಟಕದ ಕಾರ್ಯದರ್ಶಿ ಕವಿತಾ, ಸದಸ್ಯರಾದ ಎಂ.ಎನ್.ಕಾಳಪ್ಪ, ಡಿ.ಎಸ್.ಸೋಮಶೇಖರ್, ನಿವೃತ್ತ ಸೈನಿಕ ಪುಟ್ಟೇಗೌಡ, ಜಯಮ್ಮ ಮತ್ತಿತರರು ಹಾಜರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts