More

    ಸರ್ಕಾರದ ಕ್ರೀಡಾ ಸೌಲಭ್ಯ ಸದ್ಭಳಕೆಯಾಗಲಿ; ಓಲಂಪಿಯನ್ ಕ್ರೀಡಾಪಟು ಸಹನಾಕುಮಾರಿ

    ವಿಜಯಪುರ: ಕ್ರೀಡಾಕ್ಷೇತ್ರದಲ್ಲಿ ಅನೇಕ ಉದ್ಯೋಗ ಅವಕಾಶಗಳಿವೆ. ಅವುಗಳನ್ನು ವಿದ್ಯಾರ್ಥಿನಿಯರು ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಅಂತರ ರಾಷ್ಟ್ರೀಯ ಓಲಂಪಿಯನ್ ಕ್ರೀಡಾಪಟು ಸಹನಾಕುಮಾರಿ ಹೇಳಿದರು.

    ನಗರದ ಹೊರ ವಲಯದ ಅಕ್ಕಮಹಾದೇವಿ ಮಹಿಳಾ ವಿವಿಯಲ್ಲಿ ಬುಧವಾರ ಕ್ರೀಡಾ ನಿರ್ದೇಶನಾಲಯ ಹಾಗೂ ದೈಹಿಕ ಶಿಕ್ಷಣ ಅಧ್ಯಯನ ಮತ್ತು ಕ್ರೀಡಾ ವಿಜ್ಞಾನ ವಿಭಾಗದ ಸಂಯುಕ್ತಾಶ್ರಯದಲ್ಲಿ ಜರುಗಿದ 17ನೇ ಅಂತರ ಮಹಿಳಾ ಮಹಾವಿದ್ಯಾಲಯಗಳ ಅಥ್ಲೇಟಿಕ್ ಕ್ರೀಡಾಕೂಟ 2023-24 ರ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.

    ವಿದ್ಯಾರ್ಥಿ ವೇತನ ಮತ್ತು ಬೆಂಗಳೂರಿನ ಯವನಿಕಾದಲ್ಲಿ ಸಿಗುವ ಸೌಲಭ್ಯಗಳನ್ನು ವಿವಿ ಕ್ರೀಡಾಪಟುಗಳು ಬಳಸಿಕೊಳ್ಳಬೇಕು ಮತ್ತು ಸರ್ಕಾರದಿಂದ ದೊರೆಯುವ ಸಕಲ ಕ್ರೀಡಾ ಸೌಲಭ್ಯಗಳನ್ನು ಪಡೆದುಕೊಂಡು ಕ್ರೀಡಾರಂಗದಲ್ಲಿ ಹೊಸ ಮೈಲಿಗಲ್ಲು ಸ್ಥಾಪಿಸಬೇಕು ಎಂದು ಸಲಹೆ ನೀಡಿದರು.

    ಟ್ರ್ಯಾಕ್ ಶೂಟ್ ಮತ್ತು ಕೈಗಡಿಯಾರವನ್ನು ಕ್ರೀಡಾಪಟುಗಳು ಧರಿಸುವುದರಿಂದ ಸಮಯದ ಮಹತ್ವ ಮತ್ತು ಕ್ರೀಡೆಯ ಮಹತ್ವವನ್ನು ಅರಿಯಲು ಸಾಂಕೇತಿಕವಾಗಿ ಅವು ನೆರವಾಗುತ್ತವೆ ಎಂದು ಕ್ರೀಡಾ ಉಡುಗೆ ತೊಡುಗೆಯ ಮಹತ್ವವನ್ನು ಅರ್ಥಗರ್ಭಿತವಾಗಿ ವಿವರಿಸಿದರು.

    ಮಹಿಳೆಯರು ಅಡುಗೆ ಮನೆಯಲ್ಲಿ ಕಾಲಕಳೆಯುವುದಕ್ಕಿಂತ ಕ್ರೀಡಾಂಗಣದಲ್ಲಿ ಹೆಚ್ಚು ಸಮಯ ಕಳೆಯಬೇಕು. ನನ್ನ ಈ ಸಾಧನೆಗೆ ಯೋಗ ಧ್ಯಾನವೇ ಕಾರಣ. ಪ್ರತಿಯೊಬ್ಬರು ಯೋಗ ಧ್ಯಾನ ಮಾಡುವ ಮೂಲಕ ಮನಃಶಾಂತಿ ಪಡೆಯುವುದರೊಂದಿಗೆ ಪ್ರತಿಯೊಂದು ಕ್ಷೇತ್ರದಲ್ಲಿ ಯಶಸ್ಸು ಪಡೆದುಕೊಳ್ಳಬೇಕು ಎಂದು ಸಲಹೆ ನೀಡಿದರು.

    ಕೆನರಾ ಬ್ಯಾಂಕ್ ಪ್ರಾದೇಶಿಕ ಕಚೇರಿಯ ಸಹಾಯಕ ಮಹಾ ಪ್ರಬಂಧಕಿ ಕಿರಣ ಎನ್.ಎಸ್ ಮಾತನಾಡಿ, ಪ್ರತಿವರ್ಷವೂ ವಿವಿಯ ಕ್ರೀಡಾ ಕೂಟಕ್ಕೆ ಕೈಲಾದ ಸಹಾಯ ಸಹಕಾರ ನೀಡುತ್ತಾ ಬಂದಿದ್ದೇವೆ. ಹಾಗೆಯೇ ಈ ಬಾರಿಯೂ ಮಲ್ಟಿ ಜಿಮ್ ಗೆ ನಮ್ಮ ಬ್ಯಾಂಕ್‌ನಿಂದ 3 ಲಕ್ಷ ರೂ.ವರೆಗೆ ಅನುದಾನ ನೀಡುವುದಾಗಿ ಘೋಷಿಸಿದರು.

    ಕುಲಪತಿ ಪ್ರೊ. ಬಿ.ಕೆ. ತುಳಸಿಮಾಲ ಅಧ್ಯಕ್ಷತೆ ವಹಿಸಿದ್ದರು. ಕುಲಸಚಿವ ಶಂಕರಗೌಡ ಎಸ್. ಸೋಮನಾಳ, ಮೌಲ್ಯಮಾಪನ ಕುಲಸಚಿವ ಪ್ರೊ.ಎಚ್.ಎಂ. ಚಂದ್ರಶೇಖರ, ಪ್ರೊ. ರಾಜಕುಮಾರ ಮಾಲಿಪಾಟೀಲ, ಡಾ.ವಿಶ್ವನಾಥ ನಡಕಟ್ಟಿ ಮತ್ತಿತರರಿದ್ದರು.

    ಕ್ರೀಡಾ ನಿರ್ದೇಶಕ ಪ್ರೊ. ಹೂವಣ್ಣ ಸಕ್ಪಾಲ್ ಸ್ವಾಗತಿಸಿದರು. ಡಾ. ಅಶ್ವಿನಿ ಕೆ.ಎನ್. ಪರಿಚಯಿಸಿದರು. ಡಾ. ಜ್ಯೋತಿ ಉಪಾಧ್ಯಾಯ ವಂದಿಸಿದರು. ಡಾ. ಹಣಮಂತ ಪೂಜಾರಿ ನಿರೂಪಿಸಿದರು.

    ಅಖಿಲ ಭಾರತ ಮಟ್ಟದ ಕ್ರೀಡಾ ಕೂಟಕ್ಕೆ ಆಯ್ಕೆಯಾದ ಮಹಿಳಾ ವಿವಿಯ ಕ್ರೀಡಾ ಪಟು ಸಂಜನಾ ರಾಠೋಡ ಮತ್ತು ತರಬೇತುದಾರ ಅರುಣ ರಾಠೋಡ ಅವರನ್ನು ಸನ್ಮಾನಿಸಿ 10 ಸಾವಿರ ರೂಪಾಯಿ ನಗದು ಬಹುಮಾನ ನೀಡಿ ಗೌರವಿಸಲಾಯಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts