More

    ಗ್ಯಾರಂಟಿ ಯೋಜನೆ ಟೀಕಾರಾರರ ಮನಸ್ಥಿತಿ ಬದಲಾಗಲಿ

    ಕಡೂರು: ರಾಜ್ಯ ಸರ್ಕಾರದ ಐದು ಗ್ಯಾರಂಟಿ ಯೋಜನೆಗಳು ಬಡವರ ಬದುಕಿಗೆ ಆಸರೆಯಾಗಿವೆ. ಇದನ್ನು ಸಹಿಸದೆ ಬಡವರು ಬಡವರಾಗಿಯೇ ಉಳಿದು ಶ್ರೀಮಂತರ ಮನೆಯ ಕೆಲಸದ ಆಳುಗಳಾಗಿರಬೇಕೆಂಬ ಮನಸ್ಥಿತಿಯಿಂದ ಟೀಕಾಕಾರರು ಹೊರಬರಬೇಕು ಎಂದು ಶಾಸಕ ಕೆ.ಎಸ್.ಆನಂದ್ ಹೇಳಿದರು.

    ಹಿರೇನಲ್ಲೂರು ಗ್ರಾಮದಲ್ಲಿ ಶುಕ್ರವಾರ ಏರ್ಪಡಿಸಿದ್ದ ಹೋಬಳಿ ಮಟ್ಟದ ಜನಸ್ಪಂದನ ಕಾರ್ಯಕ್ರಮದಲ್ಲಿ ಮಾತನಾಡಿ, ಕಾಂಗ್ರೆಸ್ ಚುನಾವಣಾ ಪೂರ್ವದಲ್ಲಿ ಗ್ಯಾರಂಟಿ ಯೋಜನೆಗಳನ್ನು ಘೋಷಣೆ ಮಾಡಿದಾಗ ಜಾರಿ ಮಾಡಲು ಸಾಧ್ಯವಿಲ್ಲ ಎಂದವರು ಯೋಜನೆ ಜಾರಿಯಾಗುತ್ತಿದ್ದಂತೆ ದೇಶ ದಿವಾಳಿಯಾಗುತ್ತದೆ ಎಂದು ಟೀಕಿಸಲಾರಂಭಿಸಿದರು. ಆದರೆ ಕೇಂದ್ರ ಸರ್ಕಾರ ದೊಡ್ಡ ಉದ್ಯಮಿಗಳ 4 ಲಕ್ಷ ಕೋಟಿ ರೂಪಾಯಿ ಸಾಲ ಮನ್ನಾ ಮಾಡಿದಾಗ ತುಟಿ ಬಿಚ್ಚಲಿಲ್ಲ. ಗ್ಯಾರಂಟಿ ಯೋಜನೆಗಳಿಂದ ಕೂಲಿ ಕಾರ್ಮಿಕರ ಸಮಸ್ಯೆ ಎದುರಾಗಿದೆ ಎನ್ನುತ್ತಾರೆ. ಬಡವರಿಗೆ ಸವಲತ್ತುಗಳನ್ನು ನೀಡಿದರೆ ದೇಶ ದಿವಾಳಿಯಾಗುತ್ತದೆ ಎನ್ನುವ ಸಂಕುಚಿತ ಭಾವದಿಂದ ಹೊರಬರಬೇಕು ಎಂದರು.
    ಗೃಹಲಕ್ಷ್ಮೀ ಯೋಜನೆಯಡಿ 400 ಕೋಟಿ ರೂಪಾಯಿ ಮೀಸಲಿಡಲಾಗಿದೆ. ಕುಟುಂಬದಿಂದ ಹೊರಗುಳಿದಿರುವ ಅತ್ತೆಯರು ಯೋಜನೆಯಿಂದ ವಂಚಿತರಾಗಿ ಸಾಕಷ್ಟು ಯಾತನೆ ಪಡುತ್ತಿದ್ದಾರೆ. ವಿಶೇಷ ಪ್ರಕರಣಗಳಿಗೆ ಹೊಸದಾಗಿ ಪಡಿತರ ಚೀಟಿ ನೋಂದಾಯಿಸುವ ಪ್ರಕ್ರಿಯೆ ಶೀಘ್ರದಲ್ಲಿ ಆರಂಭಿಸಿ ಅವರನ್ನೂ ಗೃಹಲಕ್ಷ್ಮೀ ಯೋಜನೆಗೆ ಸೇರಿಸುವ ಕೆಲಸವಾಗಲಿದೆ. ಕ್ಷೇತ್ರದಲ್ಲಿ ಮುಖ್ಯವಾಗಿ ಹಿರೇನಲ್ಲೂರು ಗ್ರಾಮದಲ್ಲಿ 281 ಗೃಹಲಕ್ಷ್ಮೀ ಯೋಜನೆಯ ಅರ್ಜಿದಾರರಿಗೆ ತಾಂತ್ರಿಕ ಸಮಸ್ಯೆಯಿಂದ ಯೋಜನೆಯ ಹಣ ದೊರಕಿಲ್ಲ. ಅದನ್ನು ಕೂಡಲೇ ಪರಿಶೀಲಿಸಿ ಬಗೆಹರಿಸುವಂತೆ ಸಿಡಿಪಿಒ ಅವರಿಗೆ ಸೂಚಿಸಿದರು.
    ಜನರ ಸಮಸ್ಯೆಗಳನ್ನು ಅರಿಯಲು ನಾವಾಗಿಯೇ ಅವರ ಬಳಿ ಹೋಗುತ್ತಿದ್ದೇವೆ. ಹಾಗಾಗಿ ಜನಸ್ಪಂದನ ಕಾರ್ಯಕ್ರಮದಲ್ಲಿ ಬರುವ ಅರ್ಜಿಗಳಿಗೆ ಸ್ಥಳದಲ್ಲಿಯೇ ಪರಿಹಾರ ದೊರಕಿಸಬೇಕು. ಸ್ಥಳದಲ್ಲಿ ಪರಿಹಾರವಾಗದ ಸಮಸ್ಯೆಗಳಿದ್ದರೆ ಒಂದು ವಾರದೊಳಗಾಗಿ ಅರ್ಜಿದಾರರಿಗೆ ಮಾಹಿತಿ ನೀಡಿ ಸಮಸ್ಯೆ ಬಗೆಹರಿಸಬೇಕು ಎಂದು ಅಧಿಕಾರಿಗಳಿಗೆ ತಾಕೀತು ಮಾಡಿದರು.
    ಗಿರಿಯಾಪುರ ಗ್ರಾಪಂನಲ್ಲಿ ಪರಿಶಿಷ್ಟ ಜಾತಿ ಮೀಸಲಾತಿ ಸದಸ್ಯ ಸ್ಥಾನಕ್ಕೆ ಇದುವರೆಗೂ ಯಾರು ಆಯ್ಕೆಗೊಳ್ಳದೆ ಖಾಲಿ ಉಳಿಸಿಕೊಂಡಿರುವ ಬಗ್ಗೆ ತಹಸೀಲ್ದಾರ್ ಪರಿಶೀಲಿಸಿ ಚುನಾವಣೆ ನಡೆಸಲು ಸಿದ್ಧತೆ ನಡೆಸಬೇಕು ಎಂದು ಶಾಸಕ ಕೆ.ಎಸ್.ಆನಂದ್ ತಿಳಿಸಿದರು. ಮೀಸಲಾತಿಯಡಿ ಆಯ್ಕೆಯಾಗಲು ಸಂವಿಧಾನ ಅವಕಾಶ ನೀಡಿದೆ. ಸಂವಿಧಾನ ಮತ್ತು ಅಂಬೇಡ್ಕರ್ ಅವರಿಗೆ ಗೌರವ ಸಲ್ಲಿಸಬೇಕು. ಬಸವಣನವರ ವಚನಗಳನ್ನು ಹೇಳುವುದಕ್ಕೆ ಸೀಮಿತಗೊಳಿಸದೆ ಅವರ ತತ್ವಾದರ್ಶಗಳಂತೆ ನಡೆದುಕೊಳ್ಳಬೇಕು. ಬಸವಣ್ಣನವರು ಜಾತಿ ರಹಿತ ಸಮಾಜ ನಿರ್ಮಾಣಕ್ಕೆ ಕ್ರಾಂತಿಕಾರಕ ಹೆಜ್ಜೆ ಹಾಕಿದರು. ಅದನ್ನು ಪಾಲಿಸುವುದು ನಮ್ಮ ಕರ್ತವ್ಯ ಎಂದರು.
    ತಹಸೀಲ್ದಾರ್ ಎಂ.ಪಿ.ಕವಿರಾಜ್, ಇಒ ಸಿ.ಆರ್.ಪ್ರವೀಣ್, ಬಿಸಿಲೆರೆ, ಹಿರೇನಲ್ಲೂರು, ಕಾಮನಕೆರೆ, ಗಿರಿಯಾಪುರ, ಬಾಸೂರು ಗ್ರಾಪಂ ಅಧ್ಯಕ್ಷರಾದ ರೇಣುಕಮ್ಮ, ಎನ್.ಆರ್.ಗಿರೀಶ್, ಡಿ.ಎಂ.ಶೇಖರ್, ಸಿ.ಎಂ.ಸುಧಾ, ಎಚ್.ಕವಿತಾ, ಸಿಡಿಪಿಒ ಶಿವಪ್ರಕಾಶ್, ಆಹಾರ ನಿರೀಕ್ಷಕರಾದ ಶಿಲ್ಪಾ, ಶ್ರೀನಿವಾಸ್, ಹಿರೇನಲ್ಲೂರು ಪಿಡಿಒ ಇಸ್ಮಾಯಿಲ್, ತಾಲೂಕು ಮಟ್ಟದ ಅಧಿಕಾರಿಗಳು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts