More

    ಕಚ್ಚಾ ವಸ್ತುಗಳ ಕೊರತೆ ಇದ್ದರೆ ಮಾಹಿತಿ ನೀಡಿ

    ಧಾರವಾಡ: ಕೋವಿಡ್ ನಿಯಂತ್ರಣಕ್ಕಾಗಿ ಲಾಕ್​ಡೌನ್ ಜಾರಿಗೊಳಿಸಿದ ಪರಿಣಾಮ ಸ್ಥಗಿತಗೊಂಡಿದ್ದ ಕಟ್ಟಡ, ರಸ್ತೆ ನಿರ್ಮಾಣ ಚಟುವಟಿಕೆ ಹಾಗೂ ಕೈಗಾರಿಕಾ ಘಟಕಗಳು ಪುನರಾರಂಭವಾಗಲು ಅವಕಾಶ ಕಲ್ಪಿಸಲಾಗಿದೆ. ಕರಕುಶಲ ಕೆಲಸಗಾರರು ಹಾಗೂ ಕಚ್ಚಾ ವಸ್ತುಗಳ ಕೊರತೆ ಇದ್ದರೆ ಜಿಲ್ಲಾಡಳಿತದ ಮೂಲಕ ಸರ್ಕಾರಕ್ಕೆ ಮಾಹಿತಿ ನೀಡಿದರೆ ಅವುಗಳ ಕೊರತೆ ನೀಗಿಸಲಾಗುವುದು. ಕೈಗಾರಿಕೆಗಳು ಪೂರ್ಣ ಪ್ರಮಾಣದಲ್ಲಿ ಚಟುವಟಿಕೆ ಪ್ರಾರಂಭಿಸಬೇಕು ಎಂದು ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿ ಹಾಗೂ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಗೌರವ್ ಗುಪ್ತಾ ಹೇಳಿದರು.

    ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಗುರುವಾರ ಏರ್ಪಡಿಸಿದ್ದ ಕೋವಿಡ್ 19 ನಿಯಂತ್ರಣ ಕುರಿತು ಜಿಲ್ಲಾ ಮಟ್ಟದ ಅಧಿಕಾರಿಗಳೊಂದಿಗೆ ಪರಿಶೀಲನೆ ಸಭೆಯಲ್ಲಿ ಅವರು ಮಾತನಾಡಿದರು.

    ಕೈಗಾರಿಕೆಗಳು ರಾತ್ರಿ ಪಾಳಿಯಲ್ಲಿ ಮತ್ತು ಭಾನುವಾರ ಕಾರ್ಯ ನಿರ್ವಹಿಸಲು ಅವಕಾಶ ಕಲ್ಪಿಸಲಾಗಿದೆ. ಜಿಲ್ಲೆಯ ಎಲ್ಲ ಕೈಗಾರಿಕಾ ಅಭಿವೃದ್ಧಿ ಪ್ರದೇಶಗಳಲ್ಲಿ ಇರುವ ಕೈಗಾರಿಕೆ ಘಟಕಗಳು ಉತ್ಪಾದನಾ ಚಟುವಟಿಕೆ ಪ್ರಾರಂಭಿಸಬೇಕು. ಕುಶಲಕರ್ವಿು ಕೆಲಸಗಾರರು ಹಾಗೂ ಕಚ್ಚಾ ವಸ್ತುಗಳ ಕೊರತೆ ಇದ್ದರೆ ತಕ್ಷಣ ಜಿಲ್ಲಾಡಳಿತದ ಗಮನಕ್ಕೆ ತರಬೇಕು. ಲಭ್ಯವಿರುವ ಸ್ಥಳಗಳಿಂದ ಕೆಲಸಗಾರರು ಮತ್ತು ಕಚ್ಚಾ ವಸ್ತುಗಳನ್ನು ಒದಗಿಸಲಾಗುವುದು ಎಂದರು.

    ವಿವಿಧ ವರ್ಗಗಳ ಜನರಿಗೆ ನೀಡಿರುವ ಆರ್ಥಿಕ ನೆರವು ಪಡೆಯಲು ಉತ್ತೇಜನ

    ನೀಡುವ ಕೆಲಸಗಳನ್ನು ಸಂಬಂಧಿಸಿದ ಇಲಾಖೆಗಳು ಕೈಗೊಳ್ಳಬೇಕು. ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಪ್ರಾಧಿಕಾರ, ಲೋಕೋಪಯೋಗಿ, ಪಂಚಾಯತ್ ರಾಜ್ ಇಂಜಿನಿಯರಿಂಗ್ ವಿಭಾಗ, ಮಹಾನಗರ ಪಾಲಿಕೆ, ಸ್ಮಾರ್ಟ್ ಸಿಟಿ ಸೇರಿ ವಿವಿಧ ನಿರ್ಮಾಣ ಸಂಬಂಧಿ ಇಲಾಖೆಗಳು ಕೋವಿಡ್ ಪೂರ್ವದಲ್ಲಿ ಕೈಗೊಂಡಿದ್ದ ನಿರ್ಮಾಣ ಕಾರ್ಯಗಳು ಪೂರ್ಣ ಪ್ರಮಾಣದಲ್ಲಿ ಮರು ಆರಂಭವಾಗಬೇಕು. ಸರ್ಕಾರ ನೀಡಿದ ಮಾರ್ಗಸೂಚಿಗಳನ್ನು ಹೊರತುಪಡಿಸಿ ಸ್ಥಳೀಯವಾಗಿ ಯಾವುದೇ ವಾಣಿಜ್ಯ ವಹಿವಾಟು, ಅಂಗಡಿ ಮುಂಗಟ್ಟುಗಳನ್ನು ಸ್ಥಗಿತಗೊಳಿಸಬಾರದು ಎಂದು ಸೂಚಿಸಿದರು.

    ಜಿಲ್ಲಾಧಿಕಾರಿ ದೀಪಾ ಚೋಳನ್ ಮಾತನಾಡಿ, ಜಿಲ್ಲೆಯ ಕೋವಿಡ್ ಪಾಸಿಟಿವ್ ಪ್ರಕರಣಗಳು, ಗುಣಮುಖರಾದವರು, ಸಕ್ರಿಯ ಪ್ರಕರಣಗಳು, ಕ್ವಾರಂಟೈನ್ ಸೌಲಭ್ಯ ಕೇಂದ್ರಗಳು, ಸೀಲ್​ಡೌನ್ ಪ್ರದೇಶಗಳ ಮಾಹಿತಿ ನೀಡಿದರು. ಜಿ.ಪಂ. ಸಿಇಒ ಡಾ. ಬಿ.ಸಿ. ಸತೀಶ, ಪೊಲೀಸ್ ಆಯುಕ್ತ ಆರ್. ದಿಲೀಪ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವರ್ತಿಕಾ ಕಟಿಯಾರ್, ಡಿಸಿಪಿ ಕೃಷ್ಣಕಾಂತ, ಪಾಲಿಕೆ ಆಯುಕ್ತ ಡಾ. ಸುರೇಶ ಇಟ್ನಾಳ, ಜಿಲ್ಲಾ ವಿಪತ್ತು ನಿರ್ವಹಣಾ ಕೋಶದ ಸಂಯೋಜಕ ಪ್ರಕಾಶ ಹಾಗೂ ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು, ತಹಸೀಲ್ದಾರರು ಹಾಜರಿದ್ದರು.

    ಕ್ವಾರಂಟೈನ್ ಕೇಂದ್ರಗಳಿಗೆ ಭೇಟಿ: ಹೊರರಾಜ್ಯಗಳಿಂದ ಆಗಮಿಸಿದ ಜನರನ್ನು ಪ್ರತ್ಯೇಕವಾಗಿ ಸಾಂಸ್ಥಿಕ ಮತ್ತು ಹೋಟೆಲ್ ಕ್ವಾರಂಟೈನ್ ಮಾಡಲಾಗಿರುವ ಸ್ಥಳಗಳಿಗೆ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಗೌರವ್ ಗುಪ್ತಾ ಭೇಟಿ ನೀಡಿದರು. ಕ್ವಾರಂಟೈನ್​ನಲ್ಲಿರುವ ಜನರೊಂದಿಗೆ ಮಾತುಕತೆ ನಡೆಸಿದ ಅವರು, ಅಲ್ಲಿ ದೊರೆಯುತ್ತಿರುವ ಸೌಲಭ್ಯಗಳು, ಲಾಕ್​ಡೌನ್ ಕಾರಣದಿಂದ ಎದುರಾಗಿರುವ ಅವರ ವೃತ್ತಿಸಂಬಂಧಿ ಸವಾಲುಗಳು, ಮುಂಬರುವ ದಿನಗಳಲ್ಲಿ ಜೀವನ ನಿರ್ವಹಣೆಗೆ ಹಾಕಿಕೊಂಡಿರುವ ಯೋಜನೆಗಳ ಕುರಿತು ಮಾಹಿತಿ ಪಡೆದರು. ಜಂಟಿ ಕೈಗಾರಿಕಾ ನಿರ್ದೇಶಕ ಮೋಹನ ಭರಮಕ್ಕನವರ, ಧಾರವಾಡ ತಹಸೀಲ್ದಾರ್ ಸಂತೋಷ ಬಿರಾದಾರ, ಹುಬ್ಬಳ್ಳಿ ತಹಸೀಲ್ದಾರ್ ಶಶಿಧರ ಮಾಡ್ಯಾಳ, ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts