More

    ಶಿಕ್ಷಕರು ಮಕ್ಕಳಲ್ಲಿ ಶಿಸ್ತು ಮೂಡಿಸಲಿ

    ಅರಕಲಗೂಡು : ವಿದ್ಯಾರ್ಥಿ ಜೀವನದಲ್ಲೇ ಶಿಸ್ತು, ರಾಷ್ಟ್ರಧ್ವಜದ ಬಗ್ಗೆ ಗೌರವ ಹಾಗೂ ದೇಶಪ್ರೇಮ ಕಲಿಸಿ ಅವರನ್ನು ಉತ್ತಮ ವ್ಯಕ್ತಿಗಳಾಗಿ ರೂಪಿಸಲು ಶಿಕ್ಷಕರು ಗಮನ ನೀಡಬೇಕೆಂದು ಶಾಸಕ ಎ.ಮಂಜು ತಿಳಿಸಿದರು.

    ಪಟ್ಟಣದ ಶಿಕ್ಷಕರ ಭವನದಲ್ಲಿ ಭಾರತ ಸೇವಾದಳದ ಶತಮಾನೋತ್ಸವ ಸಂಭ್ರಮದ ಅಂಗವಾಗಿ ಜಿಲ್ಲಾ ಭಾರತ ಸೇವಾದಳ ಅರಕಲಗೂಡು, ಆಲೂರು, ಹೊಳೆನರಸೀಪುರ, ಚನ್ನರಾಯಪಟ್ಟಣ ತಾಲೂಕುಗಳ ಹೊಸದಾಗಿ ನೇಮಕವಾಗಿರುವ ಜಿಪಿಟಿ ಶಿಕ್ಷಕರಿಗೆ ಇತ್ತೀಚೆಗೆ ಹಮ್ಮಿಕೊಂಡಿದ್ದ ಭಾರತ ಸೇವಾದಳ ಸಹಾಯಕ ಶಿಕ್ಷಣ ತರಬೇತಿ ಶಿಬಿರದ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು.

    1923ರಲ್ಲಿ ಸ್ವಾತಂತ್ರ್ಯ ಹೋರಾಟದಲ್ಲಿ ಶಿಸ್ತನ್ನು ತರಲು ಮಹಾತ್ಮಗಾಂಧಿ, ಜವಾಹರಲಾಲ್ ನೆಹರು ಅವರಂತಹ ಮಹನೀಯರು ಹುಟ್ಟುಹಾಕಿದ ಭಾರತ ಸೇವಾದಳ ಶತಮಾನೋತ್ಸವ ಸಂಭ್ರಮ ಆಚರಿಸುತ್ತಿದೆ ಎಂದರು.

    ಇಂದಿನ ಮಕ್ಕಳು ದೈಹಿಕ ವ್ಯಾಯಾಮ, ಕ್ರೀಡಾ ಚಟುವಟಿಗಳನ್ನು ಮರೆತು ಮೊಬೈಲ್ ಗೀಳಿಗೆ ಸಿಲುಕಿದ್ದಾರೆ. ಇದು ಅವರ ದೈಹಿಕ, ಮಾನಸಿಕ ಮತ್ತು ಕುಟುಂಬದ ಮೇಲೆ ಕೆಟ್ಟ ಪರಿಣಾಮ ಬೀರುತ್ತಿದೆ. ಇಂತಹ ಮಕ್ಕಳಲ್ಲಿ ಶಿಸ್ತು ಮೂಡಿಸಿ ಅವರನ್ನು ಆಟ, ಪಾಠಗಳಲ್ಲಿ ತೊಡಗುವಂತೆ ಮಾಡುವ ದೊಡ್ಡ ಜವಾಬ್ದಾರಿ ಶಿಕ್ಷಕರ ಮೇಲಿದೆ. ಬಹಳಷ್ಟು ಶಾಲೆಗಳಲ್ಲಿ ಆಟದ ಮೈದಾನವೇ ಇಲ್ಲ. ಖಾಸಗಿ ಶಾಲೆಗಳಂತೂ ಕಲಿಕೆ ಬಿಟ್ಟರೆ ಕ್ರೀಡಾ ಚಟುವಟಿಕೆಗಳಿಗೆ ಗಮನ ಹರಿಸುತ್ತಿಲ್ಲ. ಈ ಕುರಿತು ಸರ್ಕಾರ ಹಾಗೂ ಶಿಕ್ಷಣ ಇಲಾಖೆ ಗಮನ ಹರಿಸಬೇಕು ಎಂದು ಆಗ್ರಹಿಸಿದರು.

    ಬಿಇಒ ದೇವರಾಜ್ ಮಾತನಾಡಿ, ಮಕ್ಕಳಲ್ಲಿ ಬದಲಾವಣೆ ತರುವ ಮೂಲಕ ಶಿಸ್ತುಬದ್ದ ಸಮಾಜ ರೂಪಿಸಲು ಶಿಕ್ಷಕರು ಕೊಡುಗೆ ನೀಡಬೇಕು ಎಂದು ಸಲಹೆ ನೀಡಿದರು.

    ಭಾರತ ಸೇವಾದಳದ ಜಿಲ್ಲಾಧ್ಯಕ್ಷ ಎಂ.ಕೆ.ಕಮಲ್ ಕುಮಾರ್ ಅಧ್ಯಕ್ಷತೆ ವಹಿಸಿದ್ದರು. ತಾಲೂಕು ಘಟಕದ ಅಧ್ಯಕ್ಷ ಎಂ.ಎಂ.ಸುರೇಶ್, ಮಲ್ಲಿಪಟ್ಟಣ ಗ್ರಾಪಂ ಅಧ್ಯಕ್ಷ ಯೋಗೇಶ್, ತಾಲೂಕು ದೈಹಿಕ ಶಿಕ್ಷಣ ಪರಿವೀಕ್ಷಕ ನಿಂಗಯ್ಯ, ತಾಪಂ ಮಾಜಿ ಅಧ್ಯಕ್ಷ ನರಸೇಗೌಡ, ಜಿಲ್ಲಾ ಸೇವಾದಳದ ವಲಯ ಸಂಘಟಕಿ ಹಾಗೂ ಶಿಬಿರಾಧಿಕಾರಿ ವಿ.ಎಸ್.ರಾಣಿ, ಉಪಶಿಬಿರಾಧಿಪತಿ ಬಿ.ಎನ್ ಮಹೇಶ್, ಕಾರ್ಯದರ್ಶಿ ಜಿ.ದೀಪ, ಸಹಕಾರ್ಯದರ್ಶಿ ಸಂಜೀವ್ ಕುಮಾರ್, ವಸ್ತು ನಾಯಕರಾದ ಎಚ್.ಮಹೇಶ್, ಎಸ್.ಎಂ. ನಿರ್ವಾಣಪ್ಪ, ಸಂಪನ್ಮೂಲ ವ್ಯಕ್ತಿ ಪ್ರೇಮಾನಂದ್, ಶಿಬಿರದ ಸಹಾಯಕಿ ಆರ್.ರತ್ನಕುಮಾರಿ ಇದ್ದರು. ಶಿಬಿರಾರ್ಥಿಗಳು ವಿವಿಧ ಕವಾಯತುಗಳ ಪ್ರದರ್ಶನ ನೀಡಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts