More

    ವಿದ್ಯಾರ್ಥಿಗಳು ಜ್ಞಾನದತ್ತ ದೃಷ್ಟಿ ಹರಿಸಲಿ

    ಹುಬ್ಬಳ್ಳಿ: ನಗರದ ಕೆಎಲ್‌ಇ ಸಂಸ್ಥೆಯ ಪರಪ್ಪ ಚನ್ನಪ್ಪ ಜಾಬಿನ ಪದವಿಪೂರ್ವ ವಿಜ್ಞಾನ ಮಹಾವಿದ್ಯಾಲಯದಲ್ಲಿ ‘ಅನ್ವೇಷಣೆ-3.0’ ವಿಜ್ಞಾನ ವಸ್ತುಪ್ರದರ್ಶನ ಕಾರ್ಯಕ್ರಮಕ್ಕೆ ಬುಧವಾರ ಚಾಲನೆ ನೀಡಲಾಯಿತು.
    ಹುಬ್ಬಳ್ಳಿ ಶಹರ ಕ್ಷೇತ್‌ರ ಶಿಕ್ಷಣಾಧಿಕಾರಿ ಚನ್ನಪ್ಪಗೌಡ ಉದ್ಘಾಟಿಸಿ ಮಾತನಾಡಿ, ವಿಜ್ಞಾನ ಎಂದರೆ ಸತ್ಯದ ಅನ್ವೇಷಣೆ. ವಿಜ್ಞಾನ ಬೆಳೆಯುವುದು ವಿದ್ಯಾರ್ಥಿಗಳಲ್ಲಿಯ ಜ್ಞಾನದಿಂದ. ಆದ್ದರಿಂದ ವಿದ್ಯಾರ್ಥಿಗಳ ನೋಟ ಸತ್ಯದ ಕಡೆಗಿರಬೇಕು. ದೇಶ ಕಂಡ ಅತ್ಯಂತ ಮಹತ್ವದ ವಿಜ್ಞಾನಿ ಎಂದರೆ ಅದು ಎ.ಪಿ.ಜೆ. ಅಬ್ದುಲ್ ಕಲಾಂ. ಯಾವ ಸೌಲಭ್ಯಗಳಿಲ್ಲದೆ ಬೆಳೆದ ಅಬ್ದುಲ್ ಕಲಾಂ ಅವರು ರಾಷ್ಟ್ರದ ಅತ್ಯುನ್ನತ ರಾಷ್ಟ್ರಪತಿ ಸ್ಥಾನ ಅಲಂಕರಿಸಿ ಅಮರರಾದ ಮಹಾತ್ಮರಂತೆ ವಿದ್ಯಾರ್ಥಿಗಳೂ ಆಗಬೇಕೆಂದರು.
    ಆಡಳಿತ ಮಂಡಳಿ ನಿರ್ದೇಶಕ ಶಂಕರಣ್ಣ ಮುನವಳ್ಳಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ವಿದ್ಯಾರ್ಥಿಗಳು ಅತೀ ಉತ್ಸಾಹದಿಂದ ಭಾಗವಹಿಸಬೇಕು. ಕೇವಲ ಪುಸ್ತಕದ ಹುಳುಗಳಾಗದೆ, ಪಠ್ಯೇತರ ಚಟುವಟಿಕೆಗಳಲ್ಲಿ ಭಾಗವಹಿಸಿ ಎಂದು ಸಲಹೆ ನೀಡಿದರು.
    ವಿಜ್ಞಾನ ವಸ್ತುಪ್ರದರ್ಶನ ಕಾರ್ಯಕ್ರಮದಲ್ಲಿ ಒಟ್ಟು 65 ವಿಜ್ಞಾನದ ಮಾದರಿಗಳು, 75 ವಿಜ್ಞಾನದ ಭಿತ್ತಿ ಚಿತ್ರಗಳನ್ನು ಹುಬ್ಬಳ್ಳಿ ಹಾಗೂ ಹುಬ್ಬಳ್ಳಿ ಗ್ರಾಮೀಣ ಪ್ರದೇಶದಿಂದ ಬಂದ ಪ್ರೌಢಶಾಲಾ ವಿದ್ಯಾರ್ಥಿಗಳು ಪ್ರದರ್ಶಿಸಿದರು. ಪರಪ್ಪ ಚನ್ನಪ್ಪ ಜಾಬಿನ ಪದವಿ ಪೂರ್ವ ವಿಜ್ಞಾನ ಮಹಾವಿದ್ಯಾಲಯದ ವಿದ್ಯಾರ್ಥಿಗಳು ಒಟ್ಟು 140 ಮಾದರಿಗಳನ್ನು ಸಿದ್ಧಪಡಿಸಿದ್ದರು.
    ಪದವಿ ಪ್ರಾಚಾರ್ಯ ಡಾ.ಎಲ್.ಡಿ. ಹೊರಕೇರಿ ಮಾತನಾಡಿ, ಸೋಲು -ಗೆಲುವು ಮುಖ್ಯವಲ್ಲ. ಸ್ಪರ್ಧೆಯಲ್ಲಿ ಭಾಗಹಿಸುವದು ಅತಿಮುಖ್ಯ. ವಿಜ್ಞಾನದ ವಿಷಯಗಳಲ್ಲಿ ಶೋಧನೆ ಮಾಡುತ್ತ ವಿಜ್ಞಾನಿಗಳಾಗಿ ನಮ್ಮ ದೇಶಕ್ಕೆ ಅಳಿಲು ಸೇವೆ ನೀಡಿ ಎಂದರು.
    ಕಾಲೇಜು ವೇದಿಕೆ ಉಪಾಧ್ಯಕ್ಷ ವೇಣುಗೋಪಾಲ ಎಚ್.ಆರ್., ಕ್ರೀಡಾ ವಿಭಾಗದ ಉಪಾಧ್ಯಕ್ಷ ಡಾ. ದೀಪಕ ಮುನವಳ್ಳಿ, ಕನ್ನಡ ಉಪನ್ಯಾಸಕಿ ಗಿರಿಜಾ ಬೆಳಗಾವಿ, ಸವಿತಾ ಎಸ್.ಎಚ್. ಇತರರು ಇದ್ದರು. ಪದವಿ ಪೂರ್ವ ಪ್ರಾಚಾರ್ಯ ವಿ.ಆರ್. ವಾಘಮೋಡಿ ಸ್ವಾಗತಿಸಿ, ಅತಿಥಿಗಳನ್ನು ಪರಿಚಯಿಸಿದರು.
    ಸಮಾರೋಪ: ವಸ್ತುಪ್ರದರ್ಶನದ ಸಮಾರೋಪ ಸಮಾರಂಭವನ್ನು ಬಿಇಒ ಉಮೇಶ ಬೊಮ್ಮಕ್ಕನವರ ಉದ್ಘಾಟಿಸಿದರು. ನಂತರ ಗೆದ್ದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts