More

    ಶರಣರ ವಿಚಾರಧಾರೆ ದಾರಿದೀಪವಾಗಲಿ

    ರಾವಂದೂರು: ಶರಣರ ವಿಚಾರಧಾರೆಗಳು ಯುವ ಪೀಳಿಗೆಗೆ ದಾರಿದೀಪವಾಗಬೇಕು ಎಂದು ಪ್ರಾಧ್ಯಾಪಕ ಡಾ.ಆರ್.ಗುರುಸ್ವಾಮಿ ಅಭಿಪ್ರಾಯಪಟ್ಟರು.

    ಪಿರಿಯಾಪಟ್ಟಣ ತಾಲೂಕು ರಾವಂದೂರು ಗ್ರಾಮದ ಮುರುಗ ಮಠದ ಆವರಣದಲ್ಲಿ ಭಾನುವಾರ ಏರ್ಪಡಿಸಲಾಗಿದ್ದ ಶರಣ ಸಂಸ್ಕೃತಿ ಉತ್ಸವ ಮತ್ತು ಬಸವ ತತ್ವ ಸಮಾವೇಶ ಹಾಗೂ ಲಿಂಗೈಕ್ಯ ಜಗದ್ಗುರು ಮಲ್ಲಿಕಾರ್ಜುನ ಮುರುಘಾ ರಾಜೇಂದ್ರ ಶ್ರೀಗಳ 30ನೇ ವರ್ಷದ ಸ್ಮರಣೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿ, ಈಗಿನ ಸರ್ಕಾರವು ಬಸವಣ್ಣ ಅವರನ್ನು ಕರ್ನಾಟಕದ ರಾಯಭಾರಿ ಎಂದು ಘೋಷಿಸಿರುವುದು ಸಂತಸದ ವಿಚಾರ. ಇದು ಹಿಂದೆಯೇ ಆಗಬೇಕಿತ್ತು. ಬಸವಣ್ಣ ಅವರ 14,000 ವಚನಗಳನ್ನು ಬೇರೆ ದೇಶಗಳಲ್ಲಿ ತಮ್ಮ ಭಾಷೆಗಳಿಗೆ ತರ್ಜುಮೆ ಮಾಡಿಕೊಂಡು ಅವುಗಳನ್ನು ಓದಿ ಅರ್ಥೈಸಿಕೊಂಡು ಅನುಸರಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಬಸವಣ್ಣ ಅವರ ವಿಚಾರಧಾರೆಗಳನ್ನು ತಿಳಿದುಕೊಂಡು ಅವರ ತತ್ವ, ಆದರ್ಶಗಳನ್ನು ಪಾಲಿಸುವುದರ ಜತೆಗೆ ಇತರರು ಅನುಸರಿಸುವಂತೆ ಪ್ರೇರೇಪಿಸಬೇಕು, ಆಗ ಮಾತ್ರ ಬಸವಣ್ಣ ಅವರ ಕನಸು ನನಸಾಗಿ ಸುಂದರ ಸಮಾಜ ನಿರ್ಮಾಣ ಸಾಧ್ಯವಾಗಲಿದೆ ಎಂದರು.

    ರಾವಂದೂರು ಮುರುಘಾ ಮಠದ ಮೋಕ್ಷಪತಿ ಸ್ವಾಮೀಜಿ ಮಾತನಾಡಿ, ಶರಣರ ವಿಚಾರಧಾರೆಗಳು ಯುವ ಪೀಳಿಗೆಗೆ ದಾರಿದೀಪವಾಗಬೇಕು. ಈ ನಿಟ್ಟಿನಲ್ಲಿ ಪಾಲಕರು ಸಹ ತಮ್ಮ ಮಕ್ಕಳಿಗೆ ಸಂಸ್ಕಾರಯುತ ಶಿಕ್ಷಣ ಕೊಡಿಸುವುದರ ಜತೆಗೆ ಶರಣರ ವಿಚಾರಧಾರೆಗಳನ್ನು ತಿಳಿಸಿಕೊಡುವ ಕೆಲಸ ಮಾಡಬೇಕಿದೆ ಎಂದರು.

    ಪ್ರಸ್ತುತ ಮನುಷ್ಯನು ಒತ್ತಡದ ಜೀವನದಲ್ಲಿ ನೆಮ್ಮದಿಯನ್ನು ಕಳೆದುಕೊಳ್ಳುತ್ತಿದ್ದಾರೆ. ಉತ್ತಮ ಜೀವನ ನಡೆಸಬೇಕಾದರೆ ಮನುಷ್ಯನಿಗೆ ಧ್ಯಾನ ಬಹು ಮುಖ್ಯವಾಗಿದೆ ಎಂದರು. ಈ ಸಂದರ್ಭದಲ್ಲಿ ಬೆಂಗಳೂರು ಬೃಹತ್ ನಗರ ಯೋಜನೆಯ ಅಪರ ನಿರ್ದೇಶಕ ಬಿ.ಎಸ್. ಗಿರೀಶ್ ಅವರನ್ನು ಸನ್ಮಾನಿಸಲಾಯಿತು. ಆರ್.ಎಸ್. ಕನ್ಸ್ಟ್ರಕ್ಷನ್ ಮತ್ತು ಇಂಟೀರಿಯರ್ಸ್ ವತಿಯಿಂದ ಆರೋಗ್ಯ ತಪಾಸಣೆ ಉಚಿತ ಶಿಬಿರವನ್ನು ಏರ್ಪಡಿಸಲಾಗಿತ್ತು. ಅಲ್ಲದೆ ಶ್ರೀಗಳ ಭಾವಚಿತ್ರವನ್ನು ರಾವಂದೂರಿನ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಲಾಯಿತು.

    ಕಾರ್ಯಕ್ರಮದಲ್ಲಿ ತಾಲೂಕು ವೀರಶೈವ ಸಮಾಜದ ಅಧ್ಯಕ್ಷ ಚಂದ್ರಶೇಖರ್, ತಾಲೂಕು ವೀರಶೈವ ನೌಕರರ ಸಂಘದ ಅಧ್ಯಕ್ಷ ಬಿ.ಪಿ. ಮಹದೇವಪ್ಪ , ಡಾ.ಆರ್.ಡಿ.ಸತೀಶ್ ಡಾ. ಚನ್ನಬಸಪ್ಪ , ವೀರಶೈವ ಸಮಾಜದ ಅಧ್ಯಕ್ಷ ಆರ್.ವಿ.ಶಿವಮೂರ್ತಿ , ಆರ್.ಎಸ್.ಶಶಿಧರ್ , ಆರ್.ಎಸ್.ಸುರೇಶ್ ಮತ್ತಿತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts