More

    ದೇಹ ಕಲಿಸುವ ಪಾಠ; ಮನೋಲ್ಲಾಸ

    ದೇಹ ಕಲಿಸುವ ಪಾಠ; ಮನೋಲ್ಲಾಸ| ರಾಮಸುಬ್ರಾಯ ಶೇಟ್​

    ಅಂದ ನೋಡಲು ನಯನವೆರಡಿಹು

    ದೊಂದೆ ಬಾಯಿದೆ ಕರಗಳೆರಡಿವೆ

    ಬಂದ ಭಾಗ್ಯದ ಹಿರಿದು ಪಾಲನು ಭುವನಕರ್ಪಿಸಲು |

    ಚೆಂದದಾ ನುಡಿಯೊಂದ ನುಡಿಯುತ

    ಕುಂದ ತರದಿಹ ನೂರ ಕೇಳುತ

    ತಂದೆ ನರಹರಿ ಮೆಚ್ಚುವಂದದಿ ಜಗದಿ ನೀ ಬಾಳು ||

    ಮಾತು ಕಡಿಮೆ ಹೆಚ್ಚು ದುಡಿಮೆ. ಅದಕ್ಕಾಗಿ ನಮಗೆ ಒಂದೇ ನಾಲಿಗೆ, ಆದರೆ ಎರಡು ಕೈಗಳು, ಎರಡು ಕಾಲುಗಳು, ಇಪ್ಪತ್ತು ಬೆರಳುಗಳು. ಇದರ ಅರ್ಥ ಎಷ್ಟು ಕಡಿಮೆ ಮಾತನಾಡಿದಷ್ಟೂ ಒಳಿತು. ಹಾಗೆಯೇ ಎರಡು ಕಿವಿಗಳು, ಅಂದರೆ ಒಳಿತನ್ನು ಗಮನವಿಟ್ಟು ಆಲಿಸಬೇಕು. ಕೇಳಿ ಅರಗಿಸಿಕೊಳ್ಳಬೇಕು. ಸತ್ಸಂಗದಲ್ಲಿ ಸಂಕೀರ್ತನೆ, ಸನ್ನುಡಿಗಳನ್ನೇ ಕೇಳುತ್ತಿದ್ದರೆ ನಮ್ಮ ನಡತೆಯಲ್ಲಿ ಸನ್ನಡತೆ, ಸುಕೃತಿ ಮೈಗೂಡಿ ಬರುತ್ತದೆ.

    ಎಂಥವರ ಜೊತೆ ಬೆರೆಯಬೇಕು, ಎಂಥವರ ಜೊತೆ ಸೇರಬಾರದು, ಇದನ್ನು ವಿವೇಚನೆಯಿಂದ ನಿರ್ಧರಿಸಬೇಕು. ವಿಶೇಷವಾಗಿ ಎಳೆಯರಲ್ಲಿ ಬೇಗನೆ ಈ ದುರ್ಗಣ ಅಂಟಿಕೊಂಡು ಬರುತ್ತದೆ. ಒಂದೇ ತಾಯಿಗೆ ಹುಟ್ಟಿದ ಎರಡು ಗಿಳಿಗಳಲ್ಲಿ ಒಂದು ಕಟುಕರಲ್ಲಿ, ಇನ್ನೊಂದು ಋಷಿಯಾಶ್ರಮದಲ್ಲಿ ಬೆಳೆಯುತ್ತಿದ್ದಾಗ ಅವರ ಸ್ವಭಾವದಲ್ಲಿ ಹೇಗೆ ವಿರೋಧವಿತ್ತು ಎಂಬುದು ಪಂಚತಂತ್ರದಿಂದ ಗೊತ್ತಾಗುತ್ತದೆ. ಹೂವಿನ ಸಹವಾಸ, ನಾರಿಗೂ ದೇವರ ಮುಡಿಯ ಯೋಗ.

    ಅನೇಕರ ಹುಟ್ಟುಗುಣವೆಂದರೆ ಅವರೆಂದೂ ಇತರರ ಮಾತುಗಳನ್ನು ಕೇಳುವುದೇ ಇಲ್ಲ. ತಮ್ಮ ಮಾತುಗಳನ್ನೇ ಇತರರು ಕೇಳಬೇಕು. ಇನ್ನು ಕೆಲವರು ಒಂದೇ ಒಂದು ಕೆಲಸವನ್ನೂ ಮಾಡುವವರಲ್ಲ. ಮಾತನ್ನೇ ಉಣಬಡಿಸಿ, ಸೌಧವನ್ನು ನಿರ್ಮಾಣ ಮಾಡುತ್ತಾರೆ.

    ಮಾತನಾಡುವಲ್ಲಿ, ರುಚಿ ನೋಡುವಲ್ಲಿ ಎರಡರಲ್ಲೂ ನಾಲಿಗೆಯ ಹಿಡಿತ ಸಾಧಿಸಬೇಕು. ಯಾವುದು ಅತಿಯಾದರೂ ಅಪಾಯ ತಪ್ಪಿದ್ದಲ್ಲ. ಮೂರೂ ಭದ್ರವಾಗಿರಬೇಕು. ಅದರಲ್ಲಿ ಬಾಯಿಯೂ ಒಂದು. ಒಂದು ಬಾಯಿಗೆ ಕೈಕಾಲುಗಳು ನಾಲ್ಕು. ಅಂದರೆ ಹೆಚ್ಚು ದುಡಿಮೆ, ಸೇವಿಸುವುದು ಕಡಿಮೆ. ಅದೂ ನ್ಯಾಯಮಾರ್ಗದ ಗಳಿಕೆ. ಮತ್ತೆ ಕಡಿಮೆ ತಿನ್ನುವುದೆಂದರೆ ಅರೆ ಹೊಟ್ಟೆಯೆಂದಲ್ಲ. ಹೊಟ್ಟೆಬಾಕತನವಿರಕೂಡದು. ‘ತ್ಯಜಿಸಿ ಭುಜಿಸಲ್ಕಲಿತವನೇ ಜಗಕೆ ಮಾನ್ಯನಹನು’- ನಮ್ಮ ಗಳಿಕೆಯ ಒಂದಿಷ್ಟಾದರೂ ದಾನಕ್ಕಾಗಿ ವಿನಿಯೋಗ ಆಗಲಿ. ತ್ಯಾಗಿ, ಕೊನೆಯ ತನಕ ಮಾನ್ಯನಾಗಿ ಇರುತ್ತಾನೆ. ಭೋಗಿ ಮಿಂಚುಹುಳದಂತೆ ನಿಕೃಷ್ಟನಾಗುತ್ತಾನೆ. ಮಾನವ ತಿನ್ನುವುದಕ್ಕೇ ಬದುಕುವುದಲ್ಲ. ದೇಹಪೋಷಣೆಗೆ ಮಾತ್ರ! ಎಷ್ಟೇ ಸಂಪತ್ತು ಗಳಿಸಿದರೂ, ಹೋಗುವಾಗ ಬರಿಗೈ. ವಾರಸುದಾರರ ಕೈಗೆ ಹೋದರೂ ಅದು ಸದ್ವಿನಿಯೋಗವಾಗುತ್ತದೆ ಎಂಬುದಕ್ಕೇನು ಖಾತ್ರಿ? ಹಾಗಾಗಿ ಪ್ರಕೃತಿಯಿಂದ, ನಮ್ಮ ದೇಹದ ರಚನೆಯಿಂದ ನಾವು ಉನ್ನತ ವಿಚಾರಗಳನ್ನು ಕಲಿಯಬೇಕು. ನಮ್ಮ ಸುವಿಚಾರ, ಸನ್ನಡತೆ ದೈವ ಮೆಚ್ಚುವಂತಿದ್ದು, ಜೀವನ ಸಾರ್ಥಕವಾಗುವಂತಿರಬೇಕು.

    (ಲೇಖಕರು ಗಮಕ ವ್ಯಾಖ್ಯಾನಕಾರರು)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts