More

  ಅಧಿಕ ಬೆಲೆಗೆ ಮಾಸ್ಕ್ ಮಾರಿದರೆ ಕಠಿಣ ಕ್ರಮ

  ಬೆಳಗಾವಿ: ಔಷಧ ಅಂಗಡಿಗಳು ಅಥವಾ ಔಷಧ ಮಳಿಗೆಯವರು ಎಂಆರ್‌ಪಿಗಿಂತ ಹೆಚ್ಚಿನ ದರದಲ್ಲಿ ಮಾಸ್ಕ್ ಮಾರಾಟ ಮಾಡಿದರೆ ಅಂತಹ ಅಂಗಡಿಗಳ ಲೈಸನ್ಸ್ ರದ್ದು ಮಾಡಿ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಡಾ. ಎಸ್.ಬಿ. ಬೊಮ್ಮನಹಳ್ಳಿ ಎಚ್ಚರಿಕೆ ನೀಡಿದ್ದಾರೆ.

  ನಗರದ ಡಿಸಿ ಕಚೇರಿ ಸಭಾಂಗಣದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಜಿಲ್ಲಾ ಸಮೀಕ್ಷಾ ಘಟಕದ ವತಿಯಿಂದ ಶುಕ್ರವಾರ ಹಮ್ಮಿಕೊಂಡಿದ್ದ ಜಿಲ್ಲಾ ಸಮನ್ವಯ ಸಮಿತಿ ಸಭೆಯಲ್ಲಿ ಅವರು ಈ ಸೂಚನೆ ನೀಡಿದರು.

  ಕರೊನಾ ಹರಡುವ ಭೀತಿಯಿಂದ ಹೆಚ್ಚಿನ ಸಂಖ್ಯೆಯ ಜನರು ಮಾಸ್ಕ್ ಖರೀದಿಸುತ್ತಿದ್ದಾರೆ. ಅಂಗಡಿ ಮಾಲೀಕರು ಪರಿಸ್ಥಿತಿಯನ್ನು ದುರ್ಬಳಕೆ ಮಾಡಿಕೊಂಡರೆ ಕಠಿಣ ಕ್ರಮ ಎದುರಿಸಬೇಕಾಗುತ್ತದೆ. ಮಾಸ್ಕ್‌ಗಳನ್ನು ಯಾರಾದರೂ ರಸ್ತೆಬದಿ ಮಾರಾಟ ಮಾಡುವುದು ಕಂಡುಬಂದರೆ ಅವರ ವಿರುದ್ಧವೂ ತಕ್ಷಣ ಕ್ರಮ ಜರುಗಿಸಬೇಕು ಎಂದು ಅಧಿಕಾರಿಗಳಿಗೆ ತಾಕೀತು ಮಾಡಿದರು.

  ಪ್ರತ್ಯೇಕ ವಾರ್ಡ್: ಸೋಂಕಿತರಿದ್ದಲ್ಲಿ ಅವರಿಗೆ ತುರ್ತು ಚಿಕಿತ್ಸೆ ನೀಡಲು ಜಿಲ್ಲಾ ಆಸ್ಪತ್ರೆಯಲ್ಲಿ ಪ್ರತ್ಯೇಕ ವಾರ್ಡ್ ಸ್ಥಾಪಿಸಲಾಗಿದೆ. ಅದೇ ಮಾದರಿಯಲ್ಲಿ ತಾಲೂಕು ಆಸ್ಪತ್ರೆಗಳಲ್ಲೂ ಪ್ರತ್ಯೇಕ ವಾರ್ಡ್ ಸ್ಥಾಪಿಸಬೇಕು. ಅಗತ್ಯ ಔಷಧ ಸಂಗ್ರಹ ಮಾಡಿಟ್ಟುಕೊಳ್ಳಬೇಕು ಎಂದು ಸಂಬಂಧಪಟ್ಟ ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು. ಗ್ರಾಮೀಣ ಪ್ರದೇಶಗಳಲ್ಲಿ ಜಾಗೃತಿ ಮೂಡಿಸಲು ತಾಲೂಕು ಪಂಚಾಯಿತಿ ಮತ್ತು ಗ್ರಾಮ ಪಂಚಾಯಿತಿಗಳಲ್ಲಿ ಸಮಿತಿ ರಚಿಸಬೇಕು. ಜನರಲ್ಲಿ ಇರುವ ಆತಂಕ ದೂರ ಮಾಡಲು ಬಸ್ ನಿಲ್ದಾಣ, ರೈಲ್ವೆ ನಿಲ್ದಾಣ ಸೇರಿ ಸಾರ್ವಜನಿಕರು ಸಂಚರಿಸುವ ಸ್ಥಳಗಳಲ್ಲಿ ಜಾಗೃತಿ ಮೂಡಿಸಲು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾ ಸರ್ವೇಕ್ಷಣಾ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಡಾ. ಬೊಮ್ಮನಹಳ್ಳಿ ಸೂಚಿಸಿದರು.

  ಪಾಲಿಕೆ ಆಯುಕ್ತ ಜಗದೀಶ ಕೆ.ಎಚ್., ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಎಸ್.ವಿ. ಮುನ್ಯಾಳ, ಬಿಮ್ಸ್ ನಿರ್ದೇಶಕ ಡಾ.ವಿನಯ ದಾಸ್ತಿಕೊಪ್ಪ ಹಾಗೂ ವಿವಿಧ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದ್ದರು.

  See also  ಶಿಕ್ಷಣ ಭವಿಷ್ಯದ ದಾರಿದೀಪ

  ಕರೊನಾ ಸಾಂಕ್ರಾಮಿಕ ಕಾಯಿಲೆ

  ತೀವ್ರ ಜ್ವರದ ಪ್ರಾರಂಭ, ನೆಗಡಿ, ಕೆಮ್ಮು, ಉಸಿರಾಟದ ತೊಂದರೆ, ಎದೆನೋವು, ತೀವ್ರ ಎದೆಬಡಿತ, ಕಿಡ್ನಿ ವೈಫಲ್ಯ, ತಲೆನೋವು, ಗಂಟಲು ನೋವು ಹಾಗೂ ಭೇದಿ ಕರೊನಾದ ಲಕ್ಷಣಗಳಾಗಿವೆ. ಸಾಮಾನ್ಯ ಫ್ಲೂ ರೀತಿಯಲ್ಲಿಯೇ ಕರೊನಾ ಹರಡುತ್ತದೆ. ಸೋಂಕಿತರು ಕೆಮ್ಮಿದಾಗ ಅಥವಾ ಸೀನಿದಾಗ ಈ ವೈರಸ್ ಹರಡುತ್ತವೆ. ಹೀಗಾಗಿ ಮಾಸ್ಕ್ ಧರಿಸಿದರೆ ರೋಗದಿಂದ ತಪ್ಪಿಸಿಕೊಳ್ಳಬಹುದು ಎಂದು ಜಿಲ್ಲಾ ಸರ್ವೇಕ್ಷಣಾ ಅಧಿಕಾರಿ ಡಾ. ಬಿ.ಎನ್. ತುಕ್ಕಾರ ತಿಳಿಸಿದರು.

  ವಿದೇಶದಿಂದ ವಿಮಾನದ ಮೂಲಕ ಜಿಲ್ಲೆಗೆ ಬರುವ ಪ್ರಯಾಣಿಕರ ಮಾಹಿತಿ ಸಂಗ್ರಹಿಸಬೇಕು. ಅಲ್ಲದೆ, ವಿಮಾನ ನಿಲ್ದಾಣದಲ್ಲಿಯೂ ಮುಂಜಾಗ್ರತಾ ಕ್ರಮ ಕೈಗೊಳ್ಳಬೇಕು. ಜಿಲ್ಲೆಯಲ್ಲಿ ಸಾಕಷ್ಟು ಕಾರ್ಖಾನೆ ಹಾಗೂ ಕಂಪನಿಗಳು ಇರುವುದರಿಂದ ಆ ಪ್ರದೇಶದಲ್ಲಿ ಇರುವ ವಿದೇಶಿಗರ ಬಗ್ಗೆ ಮಾಹಿತಿ ಕಲೆ ಹಾಕಿ. ಅಕ್ಕಪಕ್ಕದ ರಾಜ್ಯಗಳಿಂದ ವಿದೇಶಿಗರು ಬಂದು ಇಲ್ಲಿನ ಹೋಟೆಲ್‌ಗಳಲ್ಲಿ ವಾಸವಾಗಿದ್ದರೂ ಹೋಟೆಲ್‌ಗಳಿಂದ ಅಧಿಕಾರಿಗಳು ಮಾಹಿತಿ ಸಂಗ್ರಹಿಸಬೇಕು.
  | ಡಾ. ಕೆ.ವಿ. ರಾಜೇಂದ್ರ ಜಿಪಂ ಸಿಇಒ

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts