More

    ರಾಜ್ಯದಲ್ಲಿ ನಾಯಕತ್ವ ಬದಲಿಲ್ಲ:  ಡಿಸಿಎಂ ಅಶ್ವತ್ಥನಾರಾಯಣ ಸ್ಪಷ್ಟನೆ

    ಮಾಗಡಿ: ರಾಜ್ಯದಲ್ಲಿ ನಾಯಕತ್ವ ಬದಲಾವಣೆಯಿಲ್ಲ. ಮುಖ್ಯಮಂತ್ರಿ ಬಿ.ಎಸ್.ಯಡಿಯೂರನವರೇ ಮುಂದುವರಿಯಲಿದ್ದಾರೆ. ಅವರೇ ನಮ್ಮ ನಾಯಕರು ಎಂದು ಉಪಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ ಸ್ಪಷ್ಟಪಡಿಸಿದರು.

    ತಾಲೂಕಿನಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಗುರುವಾರ ಭೂಮಿಪೂಜೆ ಮತ್ತು ಉದ್ಘಾಟನೆ ಮಾಡಿ ಮಾತನಾಡಿ, ಯಾರಿಗೆ ಸಚಿವ ಸ್ಥಾನ ನೀಡಬೇಕೆಂದು ವರಿಷ್ಠರ ಜತೆ ಮುಖ್ಯಮಂತ್ರಿಗಳು ಸಮಾಲೋಚನೆ ಮಾಡಲಿದ್ದಾರೆ. ಇದನ್ನು ಎಲ್ಲರೂ ಒಪ್ಪಿಕೊಳ್ಳಲಿದ್ದಾರೆ. ಪಕ್ಷಕ್ಕಾಗಿ ದುಡಿದಿರುವ ವಿಧಾನ ಪರಿಷತ್ ಸದಸ್ಯ ಸಿ.ಪಿ. ಯೋಗೇಶ್ವರ್ ಸಚಿವರಾಗಬೇಕು ಎಂದು ಸಿಪಿವೈ ಪರ ಬ್ಯಾಟಿಂಗ್ ಮಾಡಿದರು.

    ತಿಪ್ಪಸಂದ್ರ ಹೋಬಳಿಯಲ್ಲಿ ಸಂಸ್ಕೃತ ವಿವಿ ನಿರ್ವಣದ ಬಗ್ಗೆ ನೀಲಿನಕ್ಷೆ ತಯಾರಿಸಲಾಗುತ್ತಿದೆ. ಡಿಸೆಂಬರ್ ಮೊದಲ ವಾರದಲ್ಲಿ ಸಂಬಂಧಪಟ್ಟವರೊಂದಿಗೆ ಸಭೆ ನಡೆಸಿ ವಿವಿ ನಿರ್ವಿುಸಲಾಗುವುದು ಎಂದು ಭರವಸೆ ನೀಡಿದರು.

    ಒಕ್ಕಲಿಗ ಸಮುದಾಯಕ್ಕೆ ನಿಗಮದ ಅವಶ್ಯಕತೆಯಿದ್ದು, ಒಕ್ಕಲಿಗರ ಅಭಿವೃದ್ಧಿ ನಿಗಮ ಸ್ಥಾಪಿಸುವ ಸಂಬಂಧ ಸರ್ಕಾರದ ಮೇಲೆ ಒತ್ತಡ ಹೇರಿ ಶೀಘ್ರವೇ ಕಾರ್ಯರೂಪಕ್ಕೆ ತರಲಾಗುವುದು ಎಂದರು.

    ಕರ್ನಾಟಕ ಬಂದ್​ಗೆ ಸರ್ಕಾರ ಒಪ್ಪುವುದಿಲ್ಲ. ಕನ್ನಡ ಸಂಘಟನೆಗಳು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಮರಾಠ ಸಮುದಾಯಕ್ಕೆ ಅಭಿವೃದ್ಧಿ ನಿಗಮದ ಅವಶ್ಯಕತೆಯಿದ್ದು ಸರ್ಕಾರ ಅದನ್ನು ಪೂರೈಸುವ ಕೆಲಸ ಮಾಡಿದೆ ಎಂದರು.

    ಜೇನುಕಲ್ಲುಪಾಳ್ಯ ಕಾಡಿನಂಚಿನಲ್ಲಿ ಸರ್ಕಾರಿ ಜಮೀನಿನಲ್ಲಿ ವಾಸಿಸುತ್ತಿದ್ದ 16 ಮಂದಿಗೆ ಹಕ್ಕುಪತ್ರ ವಿತರಿಸಲಾಗಿದೆ. ಹಕ್ಕುಪತ್ರ ಪಡೆದುಕೊಂಡವರು ಮನೆ ನಿರ್ಮಾಣ ಮಾಡಿಕೊಂಡು ಉತ್ತಮ ರೀತಿಯ ಜೀವನ ನಡೆಸುವಂತೆ ಡಿಸಿಎಂ ಶುಭ ಕೋರಿದರು.

    ವಿಧಾನ ಪರಿಷತ್ ಸದಸ್ಯ ಅ.ದೇವೇಗೌಡ, ಜಿಪಂ ಅಧ್ಯಕ್ಷ ಎಚ್.ಎನ್. ಅಶೋಕ್, ಸದಸ್ಯೆ ಚಂದ್ರಮ್ಮ, ಮಾಜಿ ಸದಸ್ಯ ವಿಜಯ್ ಕುಮಾರ್, ಬೆಂಗಳೂರು ಡೇರಿ ಅಧ್ಯಕ್ಷ ನರಸಿಂಹಮೂರ್ತಿ, ಬಿಎಂಆರ್​ಡಿಎ ಅಧ್ಯಕ್ಷ ರಂಗಧಾಮಯ್ಯ, ಮಾಜಿ ಅಧ್ಯಕ್ಷ ಕೆ. ಕೃಷ್ಣಮೂರ್ತಿ, ದಿಶಾ ಸಮಿತಿ ಸದಸ್ಯ ಜೆ.ಪಿ. ಚಂದ್ರೇಗೌಡ, ಕೆಡಿಪಿ ಸದಸ್ಯ ಗುಡೇಮಾರನಹಳ್ಳಿ ನಾಗರಾಜು, ಬಿಜೆಪಿ ಜಿಲ್ಲಾಧ್ಯಕ್ಷ ಹುಲುವಾಡಿ ದೇವರಾಜು, ತಾಪಂ ಸದಸ್ಯ ಸುಮಾ ರಮೇಶ್, ಪುರಸಭೆ ಅಧ್ಯಕ್ಷೆ ಭಾಗ್ಯಮ್ಮ, ತಾಲೂಕು ಜೆಡಿಎಸ್ ಅಧ್ಯಕ್ಷ ಪೊಲೀಸ್ ರಾಮಣ್ಣ, ಮಹಿಳಾ ಘಟಕದ ಅಧ್ಯಕ್ಷೆ ಶೈಲಜಾ, ಯುವ ಘಟಕ ಅಧ್ಯಕ್ಷ ವಿಜಯ್ ಕುಮಾರ್ ಇತರರು ಇದ್ದರು.

    ಹೇಮಾವತಿ ಯೋಜನೆ ಶೀಘ್ರ ಪೂರ್ಣ

    ಶಾಸಕ ಎ.ಮಂಜುನಾಥ್ ಮಾತನಾಡಿ, ಕ್ಷೇತ್ರದ ಸರ್ವತೋಮುಖ ಅಭಿವೃದ್ಧಿಗೆ ಪಕ್ಷಭೇದ ಮರೆತು ಉಪಮುಖ್ಯಮಂತ್ರಿಗಳು ಕೈಜೋಡಿಸಿದ್ದು, ಶಾಶ್ವತ ಕಾಮಗಾರಿಗಳಿಗೆ ಚಾಲನೆ ನೀಡಲಾಗಿದೆ, ಶೀಘ್ರವೇ ಹೇಮಾವತಿ ನೀರಾವರಿ ಯೋಜನೆ ಕಾಮಗಾರಿ ಪೂರ್ಣಗೊಳಿಸಿ ತಾಲೂಕಿನ ಕೆರೆಗಳಿಗೆ ನೀರು ಹರಿಸುವ ಕೆಲಸ ಮಾಡುವುದಾಗಿ ತಿಳಿಸಿದರು.

    ಮಾವು ಸಂಸ್ಕರಣಾ ಘಟಕಕ್ಕೆ ಸಿದ್ಧತೆ

    ಮಾವು ಸಂಸ್ಕರಣಾ ಘಟಕ ಆರಂಭಿಸಲು 15 ಎಕರೆ ಜಮೀನನ್ನು ತೋಟಗಾರಿಕೆ ಇಲಾಖೆಗೆ ನೀಡಲಾಗಿದೆ. ಈ ಬಗ್ಗೆ ರೂಪುರೇಷೆ ಸಿದ್ಧಪಡಿಸಲು ಎಕ್ಸ್​ಪ್ರೆಷನ್ ಆಫ್ ಇಂಟರೆಸ್ಟ್ ಸಹ ಕರೆಯಲಾಗುವುದು. ಮಾವಿನ ಜತೆಗೆ ತರಕಾರಿ ಬೆಳೆಗಳಿಗೂ ಆದ್ಯತೆ ನೀಡಿ ಸಂಸ್ಕರಣಾ ಘಟಕ ಸಿದ್ಧಪಡಿಸಲಾಗುವುದು ಹಾಗೂ ಈ ಬಗ್ಗೆ ಜಾಗೃತಿ ಮೂಡಿಸಲಾಗುವುದು. ವರ್ಷಪೂರ್ತಿ ರೈತರಿಗೆ ಅನುಕೂಲವಾಗುವ ರೀತಿ ಸಂಸ್ಕರಣಾ ಘಟಕ ಸಿದ್ಧಪಡಿಸಲಾಗುವುದು ಎಂದು ಡಿಸಿಎಂ ಹೇಳಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts