More

    ಹೊಸಹೊಳಲು ದೇಗುಲಕ್ಕೆ ಯುನೆಸ್ಕೋ ಸದಸ್ಯರ ಭೇಟಿ: ಹೊಯ್ಸಳರ ಶಿಲ್ಪಕಲಾ ವೈಭವಕ್ಕೆ ಮನಸೋತ ತಂಡ

    ಕೆ.ಆರ್.ಪೇಟೆ: ತಾಲೂಕಿನ ಹೊಸಹೊಳಲು ಗ್ರಾಮದಲ್ಲಿರುವ ಹೊಯ್ಸಳ ಶಿಲ್ಪಕಲೆಯ ಶ್ರೀ ಲಕ್ಷ್ಮೀ ನಾರಾಯಣಸ್ವಾಮಿ ದೇವಾಲಯಕ್ಕೆ ಯುನೆಸ್ಕೋ ತಂಡದ ಸದಸ್ಯರು ಹಾಗೂ ಇನ್ಫೋಸಿಸ್ ಫೌಂಡೇಷನ್ ಅಧ್ಯಕ್ಷೆ ಸುಧಾಮೂರ್ತಿ ಭೇಟಿ ನೀಡಿ ದೇವರ ದರ್ಶನ ಪಡೆದರು.
    ಮಲೇಷ್ಯಾದಿಂದ ಆಗಮಿಸಿದ್ದ ಯುನೆಸ್ಕೋ ತಂಡದ 15 ಸದಸ್ಯರ ತಂಡವನ್ನು ತಹಸೀಲ್ದಾರ್ ಎಂ.ವಿ.ರೂಪಾ ಆತ್ಮೀಯವಾಗಿ ಬರಮಾಡಿಕೊಂಡರು. ದೇವಾಲಯದ ಸುತ್ತಲೂ ಒಂದು ಸುತ್ತು ಹಾಕಿ ಅಪರೂಪದ ಶಿಲ್ಪಗಳು, ರಾಮಾಯಣ, ಮಹಾಭಾರತ ಕುರಿತು ಶಿಲೆಯಲ್ಲಿ ಕೆತ್ತಿರುವ ಮೂರ್ತಿಗಳನ್ನು ವೀಕ್ಷಿಸಿ ಮಾಹಿತಿ ಪಡೆದುಕೊಂಡರು. ಹೆಬ್ಬೆರಳು ಗಾತ್ರದ ಆಂಜನೇಯ ಎಳನೀರು ಕುಡಿಯುತ್ತಿರುವ ಭಂಗಿಯನ್ನು ಕಣ್ತುಂಬಿಕೊಂಡು ರೋಮಾಂಚನಗೊಂಡರು.
    ದೇವಾಲಯದ ಒಳಭಾಗದ ತ್ರಿಕೂಟಾಚಲದಲ್ಲಿ ಪ್ರಧಾನ ಗರ್ಭಗುಡಿಯಲ್ಲಿ ವಿರಾಜಮಾನವಾಗಿರುವ ನಂಬಿ ನಾರಾಯಣಸ್ವಾಮಿ, ಎಡಭಾಗದ ಗುಡಿಯಲ್ಲಿರುವ ಶ್ರೀ ಕೊಳಲು ಗೋಪಾಲಸ್ವಾಮಿ ಹಾಗೂ ಬಲಭಾಗದ ಗರ್ಭಗುಡಿಯಲ್ಲಿ ಪ್ರಹ್ಲಾದನ ಸಮೇತವಾಗಿರುವ ಶ್ರೀ ಲಕ್ಷ್ಮೀ ನರಸಿಂಹಸ್ವಾಮಿಯ ದರ್ಶನ ಪಡೆದು ಕೃತಾರ್ಥರಾದರು.
    ಗ್ರಾಮದ ಜನರು ಜೀವಂತ ಸ್ಮಾರಕವಾದ ದೇವಾಲಯವನ್ನು ಕಾಪಾಡಿಕೊಳ್ಳಬೇಕು. ಹಬ್ಬ ಹರಿದಿನಗಳು ಹಾಗೂ ವಿಶೇಷ ಸಮಾರಂಭಗಳಲ್ಲಿ ದೇವಾಲಯದಲ್ಲಿ ನಡೆಯುವ ಪೂಜಾ ಕಾರ್ಯಕ್ರಮದಲ್ಲಿ ತಪ್ಪದೇ ಭಾಗವಹಿಸಬೇಕು ಎಂದು ಸುಧಾಮೂರ್ತಿ ಸಲಹೆ ನೀಡಿದರು.
    ರಾಜ್ಯ ಪುರಾತತ್ವ ಪ್ರಾಚ್ಯವಸ್ತು ಇಲಾಖೆಯ ನಿರ್ದೇಶಕ ಡಾ.ದೇವರಾಜು, ಮುಜರಾಯಿ ಇಲಾಖೆಯ ಕಾರ್ಯದರ್ಶಿ ಸತ್ಯವತಿ, ತಹಸೀಲ್ದಾರ್ ರೂಪಾ, ಉಪತಹಸೀಲ್ದಾರ್ ಲಕ್ಷ್ಮೀಕಾಂತ್, ರಾಜಸ್ವ ನಿರೀಕ್ಷಕಿ ಚಂದ್ರಕಲಾ, ಮಂಡ್ಯ ಜಿಲ್ಲೆ ಗ್ರಾಮ ಲೆಕ್ಕಾಧಿಕಾರಿಗಳ ಸಂಘದ ಅಧ್ಯಕ್ಷ ಹರೀಶ್, ಪಟ್ಟಣ ಠಾಣೆಯ ಇನ್ಸ್‌ಪೆಕ್ಟರ್ ಎಂ.ಕೆ.ದೀಪಕ್ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts