More

    ಜಾತಿಯೆಂಬ ಕ್ಯಾನ್ಸರ್‌ಗೆ ಚಿಕಿತ್ಸೆ ಫಲಿಸುತ್ತಿಲ್ಲ : ಲಂಕೇಶ್ ಸಪ್ತಾಹದಲ್ಲಿ ಶಾಸಕ ರಮೇಶ್‌ಕುಮಾರ್ ಅಭಿಪ್ರಾಯ

    ಕೋಲಾರ : ಜಾತಿ ಎನ್ನುವುದು ಕ್ಯಾನ್ಸರ್ ರೋಗವಿದ್ದಂತೆ. ಎಷ್ಟೇ ಚಿಕಿತ್ಸೆ ಕೊಟ್ಟರೂ ಫಲಿಸುತ್ತಿಲ್ಲ, ದೇಶದ ಪ್ರಜಾಪ್ರಭುತ್ವ ಸತ್ತುಹೋಗಿ ತಾಂತ್ರಿಕತೆ ಮೇಲೆ ನಡೆಯುತ್ತಿದೆ ಎಂದು ಮಾಜಿ ಸ್ಪೀಕರ್, ಶಾಸಕ ಕೆ.ಆರ್. ರಮೇಶ್‌ಕುಮಾರ್ ಅಭಿಪ್ರಾಯಿಸಿದರು.

    ನಗರ ಹೊರವಲಯದ ತೇರಹಳ್ಳಿ ಬೆಟ್ಟದ ಆದಿಮ ಸಾಂಸ್ಕೃತಿಕ ಕೇಂದ್ರದಲ್ಲಿ ಬೆಂಗಳೂರಿನ ಸಂಸ ಥಿಯೇಟರ್ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಲಂಕೇಶ್ ಸಪ್ತಾಹದ ಉದ್ಘಾಟನಾ ಸಮಾರಂಭದಲ್ಲಿ ಸೋಮವಾರ ಭಾಗವಹಿಸಿ ಮಾತನಾಡಿ, ವರ್ಗಗಳಿಗೆ ಇರುವ ಪ್ರಾಧಾನ್ಯತೆ ಜಾತಿಗಿಲ್ಲ. ಶರಣರ ವಿಚಾರ ಧಾರೆಗಳಿಂದ ಶುರುವಾದ ಅಭಿಯಾನಕ್ಕೂ ಜಾತಿ ಎನ್ನುವ ಗೋಡೆ ಕಟ್ಟಲಾಗಿದೆ. ಒಂದು ಕಡೆ ಕೂಡಲಸಂಗಮ ಅಭಿವೃದ್ಧಿಗೆ ಹಣ ನೀಡಿ ಮತ್ತೊಂದು ಕಡೆ ಬಸವೇಶ್ವರರಿಗೇ ಟಾಂಗ್ ನೀಡುತ್ತಾರೆ. ಇಂತಹ ಅನೇಕ ವಿಚಾರಗಳಿಂದ ಪ್ರಜಾಪ್ರಭುತ್ವ ಸತ್ತುಹೋಗಿದೆ ಎಂದು ಬೇಸರಿಸಿದರು.

    ರಾಜಕಾರಣ ವ್ಯವಸಾಯವಿದ್ದಂತೆ. ಅದರಲ್ಲಿ ಅನೇಕ ಕಾರ್ಯಕ್ರಮ ಬರುತ್ತವೆ. ಶ್ವೇತ ಪತ್ರದಂತೆ ಇರುವ ರಾಜಕಾರಣಿ ಯಾರಿಗೂ ಭಯಪಡಬೇಕಿಲ್ಲ. ಆದರೆ ಇಂದು ರಾಜಕಾರಣದಲ್ಲಿರುವ ಬಹುತೇಕರು ಕಾಲಕ್ಕೆ ತಕ್ಕಂತೆ ನಡೆದುಕೊಳ್ಳುವ ಜನ. ತತ್ವ, ಸಿದ್ಧಾಂತಗಳು ಬೇಕಿಲ್ಲ ಎಂದು ಇಂದಿನ ರಾಜಕೀಯ ಸ್ಥಿತಿಗತಿಯನ್ನು ಸೂಕ್ಷ್ಮ ಮಾತುಗಳಲ್ಲಿ ವಿಂಡಂಬನೆ ಮಾಡಿದರು.

    ಲಂಕೇಶ್ ಅವರು ಮಡಿವಂತಿಕೆಯಿಂದ ದೂರ ಹೋಗಿ ಆಡು ಭಾಷೆಗೆ ಅರ್ಥಪೂರ್ಣವಾಗಿ ಜೀವ ತುಂಬಿದ್ದರಿಂದಾಗಿ ಅವರು ಹೆಚ್ಚು ಜನಪ್ರಿಯತೆ ಗಳಿಸಲು ಸಾಧ್ಯವಾಯಿತು ಎಂದರು. ಸಾಹಿತಿ ಕೋಟಿಗಾನಹಳ್ಳಿ ರಾಮಯ್ಯ ಮಾತನಾಡಿ, ಲಂಕೇಶ್ ಸಪ್ತಾಹದ ಜತೆಗೆ ರಾಗಿ ಲಕ್ಷ್ಮಣಯ್ಯರ ಸ್ಮರಣೆಯೂ ಮುಖ್ಯವಾಗಿದ್ದು, ಈ ಅಂಗಳದಲ್ಲಿ ಅವರ ಸ್ಮಾರಕ ನಿರ್ಮಾಣವಾಗಬೇಕು. ಲಂಕೇಶ್ ಜತೆಗಿದ್ದ ನಾನು ತಾತ್ವಿಕವಾಗಿ ವಿರೋಧ ಮಾಡಿಕೊಂಡು ಹೊರಗೆ ಬಂದೆ. ಅವರು ಅದ್ಬುತ ಬರಹಗಾರರು. ಚಿಲುಮೆಯ ನೀರನ್ನು ಕುಡಿದಷ್ಟೇ ಸಂತಸವು ಬರವಣಿಗೆಯಲ್ಲಿ ಸಿಕ್ಕಿದೆ ಎಂದರು.

    ಕವಿ, ಚಿಂತಕ ಡಾ.ಸಿದ್ದಲಿಂಗಯ್ಯ ಮಾತನಾಡಿ, ಇಂದು ಮೇಲ್ವರ್ಗದವರು ಮೀಸಲಾತಿಗೆ ಹೋರಾಡುತ್ತಿರುವುದನ್ನು ನೋಡಿದರೆ ಮಂಟೇಸ್ವಾಮಿ ಹೇಳಿದಂತೆ ಮೇಲು ಕೆಳಗೆ ಹೋಗುತ್ತದೆ, ಕೀಳು ಮೇಲೆ ಹೋಗುತ್ತದೆ ಎನ್ನುವುದು ನಿಜ. ದಲಿತ ವರ್ಗದವರಿಗೆ ಬಾಂಬ್ ಮಾಡುವುದು ಗೊತ್ತಿದೆ ಎನ್ನುವುದು ಮಾದೇಶ್ವರಸ್ವಾಮಿಯಿಂದ ತಿಳಿದುಬಂದಿದೆ. ದಲಿತರೇ ದೇವರನ್ನು ಜೀತದಿಂದ ಬಿಡುಗಡೆ ಮಾಡಿದ್ದಾರೆ. ನೆಲ ಮೂಲ ಸಂಸ್ಕೃತಿ ಇರುವುದೇ ದಲಿತ ಸಂಸ್ಕೃತಿಯಲ್ಲಿ ಎಂದರು. ರಾಮಮಂದಿರಗಳು ಎಲ್ಲ ಊರಲ್ಲೂ ಇವೆ. ಸಂಜೆ ವೇಳೆ ಎಲ್ಲರೂ ಭಜನೆ ಮಾಡುತ್ತಾರೆ. ಈ ಕಾರಣದಿಂದಲಾದರೂ ಯುವಕರು ದುರಭ್ಯಾಸಗಳಿಂದ ದೂರವಾದರೆ ಸಾಕು. ಭಜನೆ, ದೇವರ ಮಹತ್ವ ಈಗ ಅರಿವಾಗಿದೆ ಎಂದರು.

    ಗ್ರಾಮೀಣ ಭಾಗದ ಬಡವರು, ಯುವಕರಿಗೆ ಆತ್ಮವಿಶ್ವಾಸ ಕಲ್ಪಿಸಿದವರೇ ಲಂಕೇಶ್. ಅಂತಹ ವ್ಯಕ್ತಿಯ ಸ್ಮರಣೆ, ಸಪ್ತಾಹ ಮಾಡುತ್ತಿರುವುದು ಶ್ಲಾಘನೀಯ. ಕೃತಿಗಳ ಮೂಲಕ ಅನೇಕರಿಗೆ ಮಾರ್ಗದರ್ಶನವಾಗಿದ್ದಾರೆ ಎಂದರು. ಆದಿಮ ಸಾಂಸ್ಕೃತಿಕ ಕೇಂದ್ರದ ಅಧ್ಯಕ್ಷ ಮುನಿಸ್ವಾಮಿ, ಖಜಾಂಚಿ ಹ.ಮಾ.ರಾಮಚಂದ್ರಪ್ಪ ಉಪಸ್ಥಿತರಿದ್ದರು.

    ಪಂಚೇಂದ್ರಿಯ ಸದಾ ಚಟುವಟಿಕೆಯಿಂದ ಇದ್ದುದರಿಂದಲೇ ಡಾ.ಬಿ.ಆರ್. ಅಂಬೇಡ್ಕರ್ ಎಲ್ಲ ವಿಚಾರಗಳಲ್ಲೂ ಸಫಲರಾಗಲು ಸಾಧ್ಯವಾಯಿತು. ಗಾಂಧಿಯನ್ನು ಮಹಾತ್ಮರೆಂದು ಒಪ್ಪಿಕೊಳ್ಳದೆ ನೇರವಾಗಿ ಉತ್ತರ ನೀಡಿದ ಮಹಾತ್ಮರು ಅಂಬೇಡ್ಕರ್. ಅವರ ವಿಚಾರಗಳನ್ನು ನಾನು ಮಾತನಾಡಿದರೆ ಅನಾಮಧೇಯ ಪತ್ರ ಬರೆದು, ನನ್ನ ಹುಟ್ಟಿನ ಮೂಲ ಕೇಳುತ್ತಾರೆ.
    ಕೆ.ಆರ್.ರಮೇಶ್‌ಕುಮಾರ್, ಶಾಸಕ

    ನಾನು ಬಿಪಿಎಲ್ ಕಾರ್ಡ್ ಶಾಸಕ : ಊಳಿಗಮಾನ್ಯ ಪದ್ಧತಿಯ ಕೋಲಾರ ಭಾಗದಲ್ಲಿ ದಲಿತರಿಗೆ ಚೈತನ್ಯ ತಂದು ಕೊಟ್ಟವರು ರಮೇಶ್‌ಕುಮಾರ್. ರಾಜ್ಯದ ಮುಖ್ಯಮಂತ್ರಿಯಾಗುವ ಅವಕಾಶ ಸಿಕ್ಕರೆ ಸಾಕಷ್ಟು ಸಮಸ್ಯೆ ಬಗೆಹರಿಯುತ್ತವೆ ಎಂದು ಡಾ.ಸಿದ್ದಲಿಂಗಯ್ಯ ಹೇಳಿದರು.ಇದಕ್ಕೆ ಪ್ರತಿಕ್ರಿಯಿಸಿದ ರಮೇಶ್‌ಕುಮಾರ್, ನಾನು ಬಿಪಿಎಲ್ ಕಾರ್ಡ್ ಶಾಸಕ. ನಮ್ಮ ಜೇಬಲ್ಲಿರುವುದು ನಾಲ್ಕಾಣೆ. ನನಗೆ ಸಿಎಂ ಆಗುವ ಶಕ್ತಿ, ಆಸೆಯೂ ಇಲ್ಲ. ನಮ್ಮ ಮನೆಯವರಿಗೂ ಅದರ ಮೇಲೆ ಆಸಕ್ತಿ ಬಂದಿಲ್ಲ. ಯಾರಾದರೂ ಆಗಿಕೊಳ್ಳಲಿ ಎಂದು ಹಾಸ್ಯವಾಗಿಯೇ ಉತ್ತರಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts