More

    ಎಡಕುಮೇರಿಯಲ್ಲಿ ರೈಲು ಮಾರ್ಗಕ್ಕೆ ಬಂಡೆ ಉರುಳಿ ಒಂದೂವರೆ ಗಂಟೆ ರೈಲು ಸಂಚಾರ ವ್ಯತ್ಯಯ

    ಮಂಗಳೂರು: ನಿರಂತರ ಸುರಿಯುತ್ತಿದ್ದ ಮಳೆಯಿಂದ ಸಕಲೇಶಪುರ- ಸುಬ್ರಹ್ಮಣ್ಯ ರೋಡ್ ಘಾಟ್ ವಿಭಾಗದಲ್ಲಿ ಎಡಕುಮೇರಿ ಮತ್ತು ಕಡಗರವಳ್ಳಿ ನಿಲ್ದಾಣಗಳ ನಡುವೆ ಗುರುವಾರ ಬೆಳಗ್ಗೆ 11.30ರ ವೇಳೆಗೆ ಬಂಡೆಯೊಂದು ಉರುಳಿ ಹಳಿ ಮೇಲೆ ಬಿದ್ದ ಪರಿಣಾಮ ಬೆಂಗಳೂರು/ಹಾಸನ ಮತ್ತು ಮಂಗಳೂರು ನಡುವಿನ ರೈಲು ಸಂಚಾರಕ್ಕೆ ಸ್ವಲ್ಕ ಕಾಲ ಅಡ್ಡಿಯಾಯಿತು.

    ಸುದ್ದಿ ತಿಳಿದ ಕೂಡಲೇ ಸ್ಥಳಕ್ಕೆ ಧಾವಿಸಿದ ಇಲಾಖೆಯ ತುರ್ತು ಕಾಮಗಾರಿ ನಿರ್ವಹಣಾ ವಿಭಾಗ ಹಳಿಯ ಮೇಲಿದ್ದ ಬಂಡೆಯನ್ನು ತೆರವುಗೊಳಿಸಿತು. ಬಂಡೆ ತೆರವುಗೊಳಿಸಿದ ಬಳಿಕ ಮಧ್ಯಾಹ್ನ 12.40ಕ್ಕೆ ಮಾರ್ಗ ರೈಲುಗಳ ಸಂಚಾರ ಪುನರಾರಂಭವಾಯಿತು. ಎಡಕುಮೇರಿ ಮತ್ತು ಕಡಗರವಳ್ಳಿ ನಿಲ್ದಾಣಗಳ ನಡುವೆ ಬಂಡೆ ಬಿದ್ದಿದ್ದ ಪ್ರದೇಶದ ಘಾಟ್ ಸ್ಟ್ರೆಚ್‌ನಲ್ಲಿರುವ ಟ್ರ್ಯಾಕ್‌ಗೆ ಯಾವುದೇ ಹಾನಿಯಾಗಿಲ್ಲ ಎಂದು ತುರ್ತು ನಿರ್ವಹಣೆ ವಿಭಾಗದ ತಂಡ ಖಚಿತಪಡಿಸಿದೆ.

    ಬಂಡೆ ಉರುಳಿ ತುರ್ತು ಕಾಮಗಾರಿ ನಡೆದ ಹಿನ್ನೆಲೆಯಲ್ಲಿ ವಾರದಲ್ಲಿ ಮೂರು ದಿನ ಸಂಚರಿಸುವ ರೈಲು ಸಂಖ್ಯೆ 16575 ಯಶವಂತಪುರ- ಮಂಗಳೂರು ಜಂಕ್ಷನ್ ಗೋಮಟೇಶ್ವರ ಎಕ್ಸ್‌ಪ್ರೆಸ್ ಪ್ರಯಾಣವನ್ನು ದೋಣಿಗಲ್ ನಿಲ್ದಾಣದಲ್ಲಿ ತಡೆಹಿಡಿಯಲಾಯಿತು. ಬಂಡೆ ತೆರವುಗೊಳಿಸಿದ ಬಳಿಕ ಈ ರೈಲು ಪ್ರಯಾಣ ಮುಂದುವರಿಸಿತು. ಬಂಡೆ ಬಿದ್ದಿದ್ದ ಪ್ರದೇಶದಲ್ಲಿ ಗಂಟೆಗೆ 5 ಕಿ.ಮೀ. ಕಡಿಮೆ ವೇಗದಲ್ಲಿ ಚಲಿಸಲು ರೈಲ್ವೆ ಸುರಕ್ಷತಾ ವಿಭಾಗ ಒಪ್ಪಿಗೆ ನೀಡಿದೆ.
    ವಾರದಲ್ಲಿ ಮೂರು ದಿನ ಪ್ರಯಾಣಿಸುವ ರೈಲು ಸಂಖ್ಯೆ 16516 ಕಾರವಾರ- ಯಶವಂತಪುರ ಎಕ್ಸ್‌ಪ್ರೆಸ್ ಮಂಗಳೂರು ಜಂಕ್ಷನ್‌ನಿಂದ 11.30ಕ್ಕೆ ಎಂದಿನಂತೆ ಹೊರಟು ಘಾಟ್ ವಿಭಾಗವನ್ನು ನಿಗದಿತ ಸಮಯದಲ್ಲೇ ದಾಟಿದೆ.
    ವಿಜಯಪುರ- ಮಂಗಳೂರು ಜಂಕ್ಷನ್ ಎಕ್ಸ್‌ಪ್ರೆಸ್ ಸ್ಪೆಷಲ್ (07377) ಬಂಡೆ ಕಲ್ಲು ಬೀಳುವ ಮೊದಲು ಘಾಟ್ ವಿಭಾಗವನ್ನು ದಾಟಿತ್ತು ಎಂದು ಮೂಲಗಳು ತಿಳಿಸಿವೆ.

    ಪಶ್ಚಿಮ ಘಟ್ಟ ಪ್ರದೇಶದ ಘಾಟ್ ವಿಭಾಗದಲ್ಲಿ ದಿನಕ್ಕೆ 200 ಮಿ.ಮೀ. ವರೆಗೆ ಭಾರಿ ಮಳೆಯಾಗುತ್ತಿದೆ ಮತ್ತು ನೈಋತ್ಯ ರೈಲ್ವೆಯು ಹಲವಾರು ರಕ್ಷಣಾ ಕ್ರಮಗಳನ್ನು ಕೈಗೊಂಡಿದ್ದರೂ ಭೂಕುಸಿತ, ಬಂಡೆಗಳ ಕುಸಿತಗಳು ಇತ್ಯಾದಿಗಳು ಸಂಭವಿಸುವ ಸಾಧ್ಯತೆಯಿದೆ. ಎರಡು ವರ್ಷಗಳ ಹಿಂದೆ, ಘಾಟ್‌ನ ಕೆಲವು ಭಾಗಗಳಲ್ಲಿ ಸಂಭವಿಸಿದ ಪ್ರಮುಖ ಭೂಕುಸಿತಗಳು ಒಂದು ತಿಂಗಳ ಕಾಲ ಈ ಮಾರ್ಗ ರೈಲು ಕಾರ್ಯಾಚರಣೆಯನ್ನು ಅಡ್ಡಿಪಡಿಸಿದ್ದವು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts