More

    ಅನಧಿಕೃತ ವಾಸವಿರುವವರನ್ನು ತೆರವುಗೊಳಿಸಲು ಒತ್ತಾಯ: ಕಂಬದ ನರಸಿಂಹಸ್ವಾಮಿ ಭಕ್ತರಿಂದ ಪ್ರತಿಭಟನೆ

    ಮಂಡ್ಯ: ತಾಲೂಕಿನ ಸಾತನೂರು ಗ್ರಾಮದ ಸರ್ವೇ ನಂ.331ರಲ್ಲಿ ಕಂಬದ ನರಸಿಂಹಸ್ವಾಮಿ ದೇವಸ್ಥಾನದ ಹೆಸರಿನಲ್ಲಿರುವ ಜಮೀನಿನಲ್ಲಿ ಅನಧಿಕೃವಾಗಿ ವಾಸವಾಗಿರುವವರನ್ನು ತೆರವುಗೊಳಿಸಬೇಕೆಂದು ಒತ್ತಾಯಿಸಿ ನಗರದಲ್ಲಿ ಭಕ್ತರು ಪ್ರತಿಭಟನೆ ನಡೆಸಿದರು.
    ಕಾಳಿಕಾಂಭ ದೇವಸ್ಥಾನದ ಆವರಣದಲ್ಲಿ ಜಮಾವಣೆಗೊಂಡ ಭಕ್ತರು ಬಳಿಕ ಬೆಂಗಳೂರು-ಮೈಸೂರು ಹೆದ್ದಾರಿ ಮೂಲಕ ಸಾಗಿ ಜಿಲ್ಲಾಧಿಕಾರಿ ಕಚೇರಿ ಎದುರು ಧರಣಿ ನಡೆಸಿ ಮನವಿ ಸಲ್ಲಿಸಿದರು. ದೇವಸ್ಥಾನದ ಹೆಸರಿನಲ್ಲಿರುವ 12 ಎಕರೆ 4 ಗುಂಟೆ ಜಮೀನಿನ ಪೈಕಿ 6 ಎಕರೆಯನ್ನು ರಾಮಕೃಷ್ಣ ತಪೋವನಕ್ಕೆಂದು ಮಂಜೂರಾತಿ ನೀಡಲಾಗಿತ್ತು. ಈ ಜಾಗದಲ್ಲಿ ಪ್ರಾರ್ಥನಾ ಮಂದಿರ, ಅಡುಗೆ ಕೋಣೆ ಮತ್ತು ಊಟದ ಮನೆ, ವಸತಿಗೃಹ, ದೂರದಿಂದ ಬರುವ ಭಕ್ತರು ತಂಗಲು 5 ಪ್ರತ್ಯೇಕ ಕೊಠಡಿ, ಹೂ ತೋಟದ ಅಭಿವೃದ್ಧಿಗೆ ಯೋಜಿಸಲಾಗಿತ್ತು. ಆದರೆ, ಯಾವ ಉದ್ದೇಶವೂ ಈಡೇರದ ಹಿನ್ನೆಲೆಯಲ್ಲಿ ಜಾಗವನ್ನು ದೇವಸ್ಥಾನದ ಹೆಸರಿಗೆ ಮಾಡಿಕೊಡುವಂತೆ ಕಂಬದ ನರಸಿಂಹಸ್ವಾಮಿ ಅಭಿವೃದ್ಧಿ ಸಮಿತಿ ನ್ಯಾಯಾಲಯದ ಮೊರೆ ಹೋಗಿತ್ತು. ಅದರಂತೆ ಮಂಡ್ಯ ಎಸಿ ಪುರಸ್ಕರಿಸಿ ದೇವಸ್ಥಾನದ ಹೆಸರಿಗೆ ಆಸ್ತಿ ಕೊಡುವಂತೆ ಆದೇಶ ಹೊರಡಿಸಿದ್ದರು. ಇದಕ್ಕೆ ಸಂಬಂಧಿಸಿದಂತೆ ಆರ್‌ಟಿಸಿ ಬಂದಿದೆ ಎಂದರು.
    ಆದರೆ, ಆ ಜಾಗದಲ್ಲಿ ಅನಧಿಕೃತವಾಗಿ ಕೆಲವರು ವಾಸವಿದ್ದಾರೆ. ಅವರನ್ನು ತೆರವುಗೊಳಿಸುವಂತೆ ತಹಸೀಲ್ದಾರ್‌ಗೆ ಮನವಿ ಕೊಟ್ಟರೂ ಪ್ರಯೋಜನವಾಗಿಲ್ಲ. ಆದ್ದರಿಂದ ಈ ಬಗ್ಗೆ ತುರ್ತು ಕ್ರಮ ವಹಿಸಿ ಅನಧಿಕೃತ ವ್ಯಕ್ತಿಗಳನ್ನು ಖಾಲಿ ಮಾಡಿಸಿದರೆ ಧಾರ್ಮಿಕ ಚಟುವಟಿಕೆ ಮಾಡಲು ಅನುಕೂಲವಾಗಲಿದೆ ಎಂದು ಒತ್ತಾಯಿಸಿದರು.
    ಸಮಿತಿ ಅಧ್ಯಕ್ಷ ಎಚ್.ಪಿ.ಮಹೇಶ್, ರಾಜ್ಯ ರೈತ ಸಂಘದ ಸಂಘಟನಾ ಕಾರ್ಯದರ್ಶಿ ಎಸ್.ಸಿ.ಮಧುಚಂದನ್, ರಾಜ್ಯ ಒಕ್ಕಲಿಗರ ಸಂಘದ ನಿರ್ದೇಶಕ ಅಶೋಕ್ ಜಯರಾಂ, ಕಾಂಗ್ರೆಸ್ ಮುಖಂಡರಾದ ರವಿಕುಮಾರ್ ಗಣಿಗ, ಡಾ.ಕೃಷ್ಣ, ಜಿಪಂ ಮಾಜಿ ಸದಸ್ಯ ಎಚ್.ಎನ್.ಯೋಗೇಶ್ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts