More

    ಲಕ್ಷದ್ವೀಪದಿಂದ 19 ಕಾರ್ಮಿಕರು ವಾಪಸ್

    ಮಂಗಳೂರು: ಲಾಕ್‌ಡೌನ್‌ನಿಂದಾಗಿ ಲಕ್ಷದ್ವೀಪದಲ್ಲಿ ಸಿಲುಕಿದ್ದ ಮಂಗಳೂರಿನ 19 ಕಾರ್ಮಿಕರು ಇಂಡಿಯನ್ ಕೋಸ್ಟ್ ಗಾರ್ಡ್ ಸಹಕಾರದಲ್ಲಿ ಗುರುವಾರ ‘ಅಮಿನ್‌ದಿವಿ’ ಹಡಗಿನ ಮೂಲಕ ಹಳೇ ಬಂದರಿಗೆ ಬಂದಿಳಿದರು.
    ವ್ಯಾಪಾರ, ಟೈಲ್ಸ್ ಕೆಲಸ, ಗುಜರಿ ಸಂಗ್ರಹ ಇತ್ಯಾದಿ ಕೆಲಸಗಳಿಗೆಂದು ತೆರಳಿದ್ದ ಮೂವರು ಮಹಿಳೆಯರ ಸಹಿತ 19 ಮಂದಿ ಲಕ್ಷದ್ವೀಪದ ಕಿಲ್ತಾನ್, ಕವರತ್ತಿ, ಅಗಟ್ಟಿ ದ್ವೀಪದಲ್ಲಿ ಎರಡು ತಿಂಗಳಿನಿಂದ ಬಾಕಿಯಾಗಿದ್ದರು. ಕರ್ನಾಟಕ ಸರ್ಕಾರದ ಅನುಮತಿಯೊಂದಿಗೆ ಅಲ್ಲಿನ ಆಡಳಿತ ಅಗತ್ಯ ಪ್ರಕ್ರಿಯೆಗಳನ್ನು ಪೂರೈಸಿ ಕಳುಹಿಸಿಕೊಟ್ಟಿದೆ. ಮಂಗಳೂರಿನಲ್ಲಿ ದಡಕ್ಕೆ ಆಗಮಿಸಿದ ಬಳಿಕ ಹಡಗಿನಲ್ಲೇ ಕಾರ್ಮಿಕರ ಆರೋಗ್ಯ ತಪಾಸಣೆ ನಡೆಸಲಾಯಿತು.
    ಶಾಸಕ ವೇದವ್ಯಾಸ ಕಾಮತ್, ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ, ಮೇಯರ್ ದಿವಾಕರ ಪಾಂಡೇಶ್ವರ, ಮಾಜಿ ಮೇಯರ್ ಅಶ್ರಫ್, ಕಾರ್ಪೊರೇಟರ್ ಲತೀಫ್, ಕರೊನಾ ನಿಗ್ರಹದಳ ಅಧಿಕಾರಿಗಳು, ಹಳೇ ಬಂದರಿನ ಲಕ್ಷದ್ವೀಪ ಜೆಟ್ಟಿಯ ಬಂದರು ಸಂರಕ್ಷಣಾಧಿಕಾರಿ ಮುಹಮ್ಮದ್ ಗೌಸ್, ಹಳೇ ಬಂದರು ಬಳಕೆದಾರರ ಸಂಘಟನೆ ಪದಾಧಿಕಾರಿಗಳು, ಕಾರ್ಮಿಕರ ಕುಟುಂಬದ ಸದಸ್ಯರು ಉಪಸ್ಥಿತರಿದ್ದು, ಕಾರ್ಮಿಕರನ್ನು ಹೂ ನೀಡಿ ಬರಮಾಡಿಕೊಂಡರು.

    ಕಾರ್ಮಿಕರನ್ನು ಕರೆತರುವಲ್ಲಿ ಹಳೇ ಬಂದರು ಬಳಕೆದಾರರ ಅಸೋಸಿಯೇಶನ್ ಅಧ್ಯಕ್ಷ ಜೀವನ್ ಕುಮಾರ್, ಕಾರ್ಯದರ್ಶಿ ಲತೀಫ್, ಉಪಾಧ್ಯಕ್ಷ ಡಿ.ಎಂ.ಅಸ್ಲಂ, ಇಸ್ಮಾಯಿಲ್ ಬಾವ, ಕೋಶಾಧಿಕಾರಿ ಎ.ಆರ್.ಇಮ್ರಾನ್, ಸದಸ್ಯರಾದ ಇಮ್ತಿಯಾಜ್, ಮುಸ್ತಫಾ, ಸುರೇಶ್ ಮೊದಲಾದವರು ಸಹಕರಿಸಿದರು.

    ಕ್ರೆಡಿಟ್‌ಗೆ ನೂಕುನುಗ್ಗಲು
    ಕಾರ್ಮಿಕರನ್ನು ಸ್ವಾಗತಿಸಲು ಬಿಜೆಪಿ ಹಾಗೂ ಕಾಂಗ್ರೆಸ್‌ನ 200ರಷ್ಟು ಜನ ದೈಹಿಕ ಅಂತರ ಕಾಯ್ದುಕೊಳ್ಳದೆ ಸೇರಿದ್ದರು. ಹಡಗು ಬರುತ್ತಿದ್ದಂತೆ ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ ಸಹಿತ ಪ್ರಮುಖರು ಕಾರ್ಮಿಕರನ್ನು ಸ್ವಾಗತಿಸಿ, ಕ್ರೆಡಿಟ್‌ಗಾಗಿ ನೂಕುನುಗ್ಗಲು ನಡೆಸಿದರು.

    ಕಾರ್ಮಿಕರನ್ನು ಹೋಂ ಕ್ವಾರಂಟೈನ್‌ಗೆ ಒಳಪಡಿಸಲಾಗುತ್ತಿದ್ದು, ಗಂಟಲು ದ್ರವ ಮಾದರಿ ಪರೀಕ್ಷೆ ನಡೆಸಲಾಗುವುದು. ರಾಜ್ಯ ಹಾಗೂ ಕೇಂದ್ರ ಸರ್ಕಾರ ವಿದೇಶ, ಹೊರ ರಾಜ್ಯಗಳಲ್ಲಿ ಕರೊನಾದಿಂದ ಸಂಕಷ್ಟಕ್ಕೆ ಒಳಗಾಗಿರುವ ಕನ್ನಡಿಗರನ್ನು ಕರೆ ತರಲು ವಿಶೇಷ ವ್ಯವಸ್ಥೆ ಮಾಡಿದೆ. ಅದರಂತೆ ಹಡಗಿನಲ್ಲಿ ಲಕ್ಷದ್ವೀಪದಿಂದ ಮಂಗಳೂರಿನವರು ಆಗಮಿಸಿದ್ದಾರೆ.
    – ವೇದವ್ಯಾಸ ಕಾಮತ್, ಶಾಸಕ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts