More

    ಮಿನಿಕಾಯ್ ದ್ವೀಪದಲ್ಲಿ ಹೊಸ ವಿಮಾನ ನಿಲ್ದಾಣ: ಮಾಲ್ಡೀವ್ಸ್​ಗೆ ಟಕ್ಕರ್​ ಕೊಡಲು ಮುಂದಾದ ಭಾರತ

    ನವದೆಹಲಿ: ಲಕ್ಷದ್ವೀಪಕ್ಕೆ ಪ್ರಧಾನಿ ಮೋದಿ ಭೇಟಿ ನೀಡಿ ಬಂದಾಗಿನಿಂದ ಭಾರತದ ವಿರುದ್ಧ ಕೆಂಡಕಾರುತ್ತಿರುವ ಮಾಲ್ಡೀವ್ಸ್​ಗೆ ಸರಿಯಾದ ಪಾಠ ಕಲಿಸಲು ಕೇಂದ್ರ ಸರ್ಕಾರ ಮಹತ್ವದ ಹೆಜ್ಜೆಯನ್ನಿಟ್ಟಿದೆ.

    ಮಾಲ್ಡೀವ್ಸ್​ಗೆ ಪರ್ಯಾಯವಾಗಿ ಲಕ್ಷದ್ವೀಪವನ್ನು ಪ್ರವಾಸಿಗರ ಹಬ್​​ ಆಗಿ ಪರಿವರ್ತಿಸಲು ಪ್ರಚಾರ ಮಾಡಲು ಮುಂದಾಗಿರುವ ಕೇಂದ್ರ ಸರ್ಕಾರ, ಲಕ್ಷದ್ವೀಪದ ಮಿನಿಕಾಯ್​ ದ್ವೀಪದಲ್ಲಿ ನಾಗರಿಕ ಮತ್ತು ಮಿಲಿಟರಿ ಜಂಟಿ ಬಳಕೆಗಾಗಿ ಹೊಸ ವಿಮಾನ ನಿಲ್ದಾಣವನ್ನು ನಿರ್ಮಾಣ ಮಾಡಲು ಯೋಜನೆ ರೂಪಿಸುತ್ತಿದೆ ಎಂದು ತಿಳಿದುಬಂದಿದೆ.

    ಮಿಲಿಟರಿ ವಿಮಾನ ಮತ್ತು ಫೈಟರ್​ ಜೆಟ್​ಗಳ ಜತೆಗೆ ವಾಣಿಜ್ಯ ವಿಮಾನಗಳು ಕೂಡ ಒಂದೇ ವಾಯುನೆಲೆಯಲ್ಲಿ ಕಾರ್ಯಾಚರಣೆ ನಡೆಸುವಂತೆ ಸರ್ಕಾರ ಪ್ಲ್ಯಾನ್​ ರೂಪಿಸುತ್ತಿದೆ. ಈ ಹಿಂದೆಯೇ ಮಿನಿಕಾಯ್ ದ್ವೀಪದಲ್ಲಿ ಈ ಹೊಸ ಏರ್‌ಫೀಲ್ಡ್ ಅನ್ನು ಅಭಿವೃದ್ಧಿಪಡಿಸಲು ಸರ್ಕಾರಕ್ಕೆ ಪ್ರಸ್ತಾವನೆಗಳನ್ನು ಸಲ್ಲಿಸಲಾಗಿದ್ದರೂ, ಈ ಬಗ್ಗೆ ಹೆಚ್ಚು ಚರ್ಚೆ ಆಗಿರಲಿಲ್ಲ. ಆದರೆ, ಜಂಟಿ ಬಳಕೆಯ ರಕ್ಷಣಾ ವಿಮಾನ ನಿಲ್ದಾಣವನ್ನು ಹೊಂದಿರುವ ಈ ಯೋಜನೆಯು ಇತ್ತೀಚಿನ ದಿನಗಳಲ್ಲಿ ಹೆಚ್ಚು ಚರ್ಚಿತವಾಗಿದ್ದು, ಸಕ್ರಿಯವಾಗಿ ಪ್ರಗತಿಯಲ್ಲಿದೆ ಎಂದು ಕೇಂದ್ರ ಸರ್ಕಾರದ ಮೂಲಗಳು ತಿಳಿಸಿವೆ.

    ಮಿಲಿಟರಿ ದೃಷ್ಟಿಕೋನದಿಂದ ನೋಡುವುದಾದರೆ, ಈ ಏರ್‌ಫೀಲ್ಡ್ ಭಾರತಕ್ಕೆ ರಕ್ಷಣಾ ಸಾಮರ್ಥ್ಯವನ್ನು ನೀಡುತ್ತದೆ. ಏಕೆಂದರೆ ಅರೇಬಿಯನ್ ಸಮುದ್ರ ಮತ್ತು ಹಿಂದು ಮಹಾಸಾಗರ ಪ್ರದೇಶದ ಮೇಲೆ ಕಣ್ಣಿಡಲು ಇದನ್ನು ನೆಲೆಯಾಗಿ ಬಳಸಬಹುದು. ಮಿನಿಕಾಯ್ ದ್ವೀಪದಲ್ಲಿ ಏರ್‌ಸ್ಟ್ರಿಪ್ ಅಭಿವೃದ್ಧಿಪಡಿಸಲು ಭಾರತೀಯ ಕೋಸ್ಟ್ ಗಾರ್ಡ್ ಮೊದಲೇ ಸಲಹೆ ನೀಡಿತ್ತು. ಪ್ರಸ್ತುತ ಪ್ರಸ್ತಾಪದ ಪ್ರಕಾರ ಭಾರತೀಯ ವಾಯುಪಡೆಯು ಮುಂದಾಳತ್ವದಲ್ಲಿ ಮಿನಿಕಾಯ್‌ನಿಂದ ಸೇನಾ ಕಾರ್ಯಾಚರಣೆ ನಡೆಯಲಿದೆ.

    ಸದ್ಯಕ್ಕೆ ಲಕ್ಷದ್ವೀಪದ ಅಗತ್ತಿ ದ್ವೀಪದಲ್ಲಿ ಮಾತ್ರ ಒಂದೇ ಒಂದು ಏರ್​ಸ್ಟ್ರಿಪ್​ ಇದೆ. ಅಲ್ಲದೆ, ಇದು ವಿಮಾನದ ಪ್ರಕಾರಗಳನ್ನು ಸಹ ಮಿತಿಗೊಳಿಸಿದೆ. ಹೀಗಾಗಿ ಹೊಸ ವಿಮಾನ ನಿಲ್ದಾಣದ ಅಭಿವೃದ್ಧಿ ಮತ್ತು ಪ್ರಸ್ತುತ ಸೌಲಭ್ಯಗಳನ್ನು ವಿಸ್ತರಿಸುವ ಪ್ರಸ್ತಾಪವನ್ನು ಇತ್ತೀಚೆಗೆ ಪುನರುಜ್ಜೀವನಗೊಳಿಸಲಾಗಿದೆ.

    ಪ್ರಧಾನಿ ಮೋದಿ ಭೇಟಿ ನೀಡಿ ಬಂದಾಗಿನಿಂದ ಲಕ್ಷದ್ವೀಪ್​ ಪ್ರಮುಖ ಆಕರ್ಷಣೆಯ ಕೇಂದ್ರಬಿಂದುವಾಗಿದೆ. ಆದರೆ, ಈ ಭೇಟಿ ಮಾಲ್ಡೀವ್ಸ್​ ರಾಜಕೀಯ ನಾಯಕರ ಹೊಟ್ಟೆಗೆ ಹುಳ ಬಿಟ್ಟಂತಾಗಿದೆ. ಲಕ್ಷದ್ವೀಪದ ಸೌಂದರ್ಯವನ್ನು ಸವಿದು ಅಲ್ಲಿನ ಪ್ರವಾಸೋದ್ಯಮ ಬಗ್ಗೆ ಮೋದಿ ಪ್ರಚಾರ ಮಾಡಿದ್ದೇ ತಡ ಮಾಲ್ಡೀವ್ಸ್​ನಲ್ಲಿ ಬೆಂಕಿ ಹೊತ್ತಿಕೊಂಡಿದೆ. ಏಕೆಂದರೆ, ಮಾಲ್ಡೀವ್ಸ್​ನ ಇಡೀ ಆದಾಯ ನಿಂತಿರುವುದೇ ಪ್ರವಾಸೋದ್ಯಮದ ಮೇಲೆ. ಅದರಲ್ಲೂ ಭಾರತೀಯರೇ ಹೆಚ್ಚಿನ ಸಂಖ್ಯೆಯಲ್ಲಿ ಅಲ್ಲಿಗೆ ತೆರಳುತ್ತಾರೆ.

    ಏನಿದು ವಿವಾದ?
    ಕಡಲತಡಿಯ ಪ್ರವಾಸೋದ್ಯಮವನ್ನೇ ದೊಡ್ಡ ಆದಾಯವಾಗಿ ಹೊಂದಿರುವ ಮಾಲ್ದೀವ್ಸ್, ಲಕ್ಷದ್ವೀಪಕ್ಕೆ ಸಿಗುತ್ತಿರುವ ಪ್ರಚಾರ-ಮನ್ನಣೆ ಸಹಿಸಿಕೊಳ್ಳಲಾಗದೆ ಅಲ್ಲಿನ ಜನಪ್ರತಿನಿಧಿಗಳು ಭಾರತವನ್ನು ಅವಹೇಳನ ಮಾಡುವಂತೆ ಅಭಿಪ್ರಾಯ ವ್ಯಕ್ತಪಡಿಸಿರುವುದು ಕೋಲು ಕೊಟ್ಟು ಪೆಟ್ಟು ತಿಂದಂಥ ಪರಿಸ್ಥಿತಿ ಸೃಷ್ಟಿಯಾಗಿಸಿದೆ. ಮಾಲ್ದೀವ್ಸ್ ಉಪ ಸಚಿವೆ ಮರಿಯಂ ಶಿಯುನಾ ಮುಂತಾದವರು ಪ್ರವಾಸೋದ್ಯಮದ ವಿಚಾರದಲ್ಲಿ ಭಾರತವನ್ನು ಅವಮಾನಿಸಿ ಸೋಷಿಯಲ್ ಮೀಡಿಯಾ ತಾಣವಾದ ಎಕ್ಸ್​ನಲ್ಲಿ ಪೋಸ್ಟ್ ಮಾಡಿದ್ದರು. ಅಲ್ಲದೆ ಭಾರತ ಮಾಲ್ದೀವ್ಸ್​ನ ಗುರಿಯಾಗಿಸುತ್ತಿದೆ, ಕಡಲತಡಿಯ ಪ್ರವಾಸೋದ್ಯಮದಲ್ಲಿ ಮಾಲ್ದೀವ್ಸ್ ಜತೆ ಸ್ಪರ್ಧೆಗಿಳಿದರೆ ಭಾರತ ಸವಾಲೆದುರಿಸಬೇಕಾಗುತ್ತದೆ ಎಂದಿರುವ ಅವರು ಮೋದಿಯನ್ನೂ ನಿಂದಿಸಿ ಪೋಸ್ಟ್ ಮಾಡಿದ್ದರು. ಮಾಲ್ದೀವ್ಸ್ ಎಂಪಿ ಜಹಿದ್ ರಮೀಜ್ ಎಂಬಾತ, ಶ್ರೀಲಂಕಾದಂಥ ರಾಷ್ಟ್ರದ ಸಣ್ಣ ಆರ್ಥಿಕತೆಯನ್ನು ಭಾರತ ನಕಲು ಮಾಡಿ ಹಣ ಮಾಡುತ್ತಿದೆ ಎಂದು ಟೀಕಿಸಿದ್ದು ಕೂಡ ತೀವ್ರ ಆಕ್ರೋಶಕ್ಕೆ ಒಳಗಾಗಿದೆ.

    ಮೂವರು ಸಚಿವರ ಅಮಾನತು
    ವಿದೇಶಿ ನಾಯಕರು ಮತ್ತು ಉನ್ನತ ಶ್ರೇಣಿಯ ವ್ಯಕ್ತಿಗಳ ವಿರುದ್ಧ ಸಾಮಾಜಿಕ ಮಾಧ್ಯಮಗಳಲ್ಲಿ ಅವಹೇಳನಕಾರಿಯಾಗಿ ಪೋಸ್ಟ್ ಮಾಡಿರುವುದು ಮಾಲ್ದೀವ್ಸ್ ಸರ್ಕಾರದ ಗಮನಕ್ಕೆ ಬಂದಿದೆ. ಅದು ಅವರ ವೈಯಕ್ತಿಕ ಅಭಿಪ್ರಾಯವೇ ಹೊರತು, ಸರ್ಕಾರದ ದೃಷ್ಟಿಕೋನವಲ್ಲ ಎಂದು ಮಾಲ್ದೀವ್ಸ್ ಸರ್ಕಾರ ಬಳಿಕ ಸ್ಪಷ್ಟೀಕರಣ ನೀಡಿದೆ. ಮಾತ್ರವಲ್ಲ, ಇದಾದ ಕೆಲವೇ ಹೊತ್ತಲ್ಲಿ ಭಾರತದ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ್ದ ಮಾಲ್ದೀವ್ಸ್ ಯುವ ಸಬಲೀಕರಣ ಸಚಿವಾಲಯದ ಉಪ ಸಚಿವೆಯರಾದ ಮರಿಯಂ ಶಿಯುನಾ, ಮಾಲ್​ಷಾ, ಸಾರಿಗೆ ಸಚಿವಾಲಯ ಉಪ ಸಚಿವ ಹಸನ್ ಜಿಹಾನ್ ಅವರನ್ನು ಮಾಲ್ದೀವ್ಸ್ ಸರ್ಕಾರ ಅಮಾನತುಗೊಳಿಸಿದೆ. (ಏಜೆನ್ಸೀಸ್​)

    ಯಾವಾಗ ಮೋದಿ ಲಕ್ಷದ್ವೀಪಕ್ಕೆ ಹೊಗಿ ಬಂದರೋ ಇದನ್ನು ಅರಗಿಸಿಕೊಳ್ಳಲಾಗದೇ ಭಾರತ ಮತ್ತು ಮೋದಿ ಬಗ್ಗೆ ಮಾಲ್ಡೀವ್ಸ್ ರಾಜಕೀಯ ನಾಯಕರು ಆಕ್ಷೇಪಾರ್ಹ ಹೇಳಿಕೆಗಳನ್ನು ನೀಡಿದ್ದಾರೆ. ನಮ್ಮ ದೇಶ ಹಾಗೂ ಪ್ರಧಾನಿ ವಿರುದ್ಧ ಹಗುರವಾಗಿ ಮಾತನಾಡಿದ ಮಾಲ್ಡೀವ್ಸ್​ ವಿರುದ್ಧ ಸೆಲೆಬ್ರಿಟಿಗಳು ತಿರುಗಿಬಿದ್ದಿದ್ದು, ಇದರ ಪರಿಣಾಮ ಸಾಮಾಜಿಕ ಜಾಲತಾಣದಲ್ಲಿ ಬಾಯ್ಕಾಟ್​ ಮಾಲ್ಡೀವ್ಸ್​ ಅಭಿಯಾನ ಸಹ ಶುರುವಾಗಿದೆ. ಅಲ್ಲದೆ, ಮಾಲ್ಡೀವ್ಸ್​ಗೂ ಈ ಬೆಳವಣಿಗೆ ಆಘಾತ ಉಂಟು ಮಾಡಿದೆ. ಇದೀಗ ಕೇಂದ್ರ ಸರ್ಕಾರದ ಯೋಜನೆಯಂತೆ ಹೊಸ ವಿಮಾನ ನಿಲ್ದಾಣ ನಿರ್ಮಾಣವಾದರೆ, ಮಾಲ್ಡೀವ್ಸ್​ಗೆ ಭಾರತೀಯ ಬಾಗಿಲು ಮುಚ್ಚಲಿದ್ದು, ಮಾಲ್ಡೀವ್ಸ್​ಗೆ ಆರ್ಥಿಕ ಸಂಕಷ್ಟ ಎದುರಾಗಲಿದೆ. (ಏಜೆನ್ಸೀಸ್​)

    ಮಾಲ್ಡೀವ್ಸ್​ನಲ್ಲಿ 1 ಪಿಜ್ಜಾ ಖರಿದೀಸುವ ದುಡ್ಡಲ್ಲಿ ಭಾರತದಲ್ಲಿ ಚಿನ್ನವನ್ನೇ ಕೊಳ್ಳಬಹುದು!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts