More

    ಲಕ್ಕವ್ವಾದೇವಿ ಮೂರ್ತಿ, ಅಪ್ಪಯ್ಯಸ್ವಾಮಿ ಆಭರಣ ಕಳವು

    ಕೊಕಟನೂರ: ಅಥಣಿ ತಾಲೂಕಿನ ಕೃಷ್ಣಾ ನದಿ ದಡದ ಶಿರಹಟ್ಟಿ ಗ್ರಾಮದ ಪಕ್ಕದ ಝುಂಜರವಾಡ ಗ್ರಾಮದಲ್ಲಿ ಬುಧವಾರ ರಾತ್ರಿಯೂ ಕಳ್ಳರ ಕೈಚಳಕ ಮುಂದುವರಿದಿದೆ. ಮಂಗಳವಾರ ರಾತ್ರಿ ಶಿರಹಟ್ಟಿ ಗ್ರಾಮದಲ್ಲಿ 12 ಮನೆ ಹಾಗೂ ಕೆವಿಜಿ ಬ್ಯಾಂಕ್‌ನಲ್ಲಿ ಸರಣಿ ಕಳ್ಳತನ ಸಂಭವಿಸಿತ್ತು.

    ಬುಧವಾರ ರಾತ್ರಿ ದೇವಸ್ಥಾನದ ಹುಂಡಿಯಲ್ಲಿದ್ದ ಹಣ ದೋಚಲು ಬಂದಿದ್ದ ಖದೀಮರು ದೇವರ ಮೂರ್ತಿ ಕದ್ದೊಯ್ದ ಘಟನೆ ಅಥಣಿ ತಾಲೂಕಿನ ಝುಂಜರವಾಡ ಗ್ರಾಮದಲ್ಲಿ ಸಂಭವಿಸಿದೆ. ಗ್ರಾಮದ ಆರು ಮನೆ, ಎರಡು ದೇವಸ್ಥಾನ ಹಾಗೂ ಒಂದು ಕಿರಾಣಿ ಅಂಗಡಿಗೆ
    ಕನ್ನ ಹಾಕಿದ ಕಳ್ಳರು ಅಪಾರ ನಗದು ಹಾಗೂ ಬಂಗಾರದ ಆಭರಣ ದೋಚಿ ಪರಾರಿಯಾಗಿದ್ದಾರೆ.

    ಲಕ್ಕವ್ವಾದೇವಿ ದೇವಸ್ಥಾನದಲ್ಲಿದ್ದ 210 ಗ್ರಾಂ ತೂಕದ ಬಂಗಾರದ ದೇವಿಯ ಮೂರ್ತಿಯ ಜತೆಗೆ ದೇವಿಯ ಆಭರಣಗಳು, ಅಪ್ಪಯ್ಯಸ್ವಾಮಿ ದೇವಸ್ಥಾನದಲ್ಲಿನ 140 ಗ್ರಾಂ ಬಂಗಾರದ ಆಭರಣ ಹಾಗೂ ಅಪ್ಪಾಸಾಬ ಶೇಡಬಾಳ ಎಂಬುವವರಿಗೆ ಸೇರಿದ ಕಿರಾಣಿ ಅಂಗಡಿಯಲ್ಲಿದ್ದ 6 ಸಾವಿರ ನಗದು ಕಳವು ಮಾಡಲಾಗಿದೆ. ಇನ್ನು, ತೋಟದ ಮನೆಯಲ್ಲಿ ವಾಸವಿದ್ದ ಹಾಗೂ ಗ್ರಾಮದಲ್ಲಿರುವ ಅವರ ಮನೆಗಳ ಬಾಗಿಲು ಕೀಲಿ ಮುರಿದು ಒಳ ನುಗ್ಗಿದ್ದರೂ ಅಲ್ಲಿಯ ಯಾವುದೇ ವಸ್ತುಗಳಾಗಲಿ, ಬಂಗಾರದ ಆಭರಣ ಕಳವಾಗಿಲ್ಲ.

    ಐಗಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸ್ಥಳಕ್ಕೆ ಅಥಣಿ ಸಿಪಿಐ ಶಂಕರಗೌಡ ಬಸನಗೌಡರ, ಕ್ರೈಂ ಪಿಎಸ್‌ಐ ಎಂ.ಡಿ.ಘೋರಿ, ಐಗಳಿ ಪಿಎಸ್‌ಐ ಶಿವರಾಜ ನಾಯಕವಾಡಿ, ಬೆರಳಚ್ಚು ತಜ್ಞರಾದ ರಾಯಪ್ಪ ಒಂಟಗೋಡಿ, ಸೋಮಶೇಖರ ಹಾಕಾರೆ, ಶ್ವಾನದಳದ ಡಿ.ಬಿ.ಗೌಡರ, ಎಸ್.ಪಿ.ರಂಗಣ್ಣಸ್ವಾಮಿ, ಅಣ್ಣಾಸಾಹೇಬ ಈರಕರ, ವಿ.ಜಿ.ಆರೇರ, ಬಿ.ಜೆ. ತಳವಾರ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

    ಕಳ್ಳರ ಬಂಧನಕ್ಕೆ ಆಗ್ರಹ: ಝುಂಜರವಾಡ, ಶಿರಹಟ್ಟಿ ಹಾಗೂ ಕಳೆದ ತಿಂಗಳು ಕೊಕಟನೂರ ಗ್ರಾಮದಲ್ಲಿ ಕಳ್ಳತನ ನಡೆಸಿದ ಕಳ್ಳರ ಕರಾಮತ್ತು ಸಿಸಿ ಕ್ಯಾಮರಾದಲ್ಲಿ ಅಲ್ಲಲ್ಲಿ ಸೆರೆಯಾಗಿದೆ. ಆದರೂ ಕಳ್ಳರ ಪತ್ತೆ ಸಾಧ್ಯವಾಗಿಲ್ಲ. ಕಳೆದ ಒಂದು ತಿಂಗಳಿಂದ ಅಥಣಿ ತಾಲೂಕಿನ ವಿವಿಧ ಗ್ರಾಮಗಳಲ್ಲಿ ರಾತ್ರೋರಾತ್ರಿ ದೇವಸ್ಥಾನ, ಮನೆ, ಆಸ್ಪತ್ರೆ ಹಾಗೂ ಅಂಗಡಿಗಳಿಗೆ ಕಳ್ಳರು ಕನ್ನ ಹಾಕುತ್ತಿರುವುದರಿಂದ ಅಥಣಿ ತಾಲೂಕಿನ ಜನರು ಬೆಚ್ಚಿ ಬೀಳುವಂತಾಗಿದೆ. ಪೊಲೀಸರು ಶೀಘ್ರ ಕಳ್ಳರನ್ನು ಬಂಧಿಸುವ ಮೂಲಕ ಜನರಿಗಿರುವ ಭಯ ದೂರ ಮಾಡಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts