More

    ಜಲ ಬತ್ತಿ ಭಣಗುಡುತ್ತಿವೆ ಕೆರೆಗಳು

    ಕೊಳ್ಳೇಗಾಲ: ತಾಲೂಕಿನಲ್ಲಿರುವ ರೈತರ ಜೀವನಾಡಿಯಾಗಿರುವ ಕೆರೆ, ಕಟ್ಟೆಗಳು ಬತ್ತಿ ಹೋಗಿದ್ದು, ಕೃಷಿ ಹಾಗೂ ಜಾನುವಾರುಗಳಿಗೆ ಕುಡಿಯುವ ನೀರಿಗೂ ಅಭಾವ ಉಂಟಾಗಿ ದಿನದಿಂದ ದಿನಕ್ಕೆ ಪರಿಸ್ಥಿತಿ ಬಿಗಡಾಯಿಸುತ್ತಿದೆ.


    ಗುಂಡಾಲ್ ಜಲಾಶಯ ಹಳೇ ಸ್ಥಿರ ಅಚ್ಚುಕಟ್ಟು ಪ್ರದೇಶ ವ್ಯಾಪ್ತಿಗೆ ಬರುವ ಮಧುವನಹಳ್ಳಿಯ ದೊಡ್ಡರಂಗನಾಥ ಕೆರೆ, ಚಿಕ್ಕರಂಗನಾಥ ಕೆರೆ, ಕೊಂಗರಕೆರೆ, ಮುಡಿಗುಂಡ ಕೆರೆ, ಹಂಪಾಪುರ ಕೆರೆ, ಧನಗೆರೆ ಕೆರೆ, ಪಾಳ್ಯ ಕೆರೆ, ಪಾಪನ ಕೆರೆಗಳಲ್ಲಿ ನೀರಿಲ್ಲದೆ ರೈತರು ವ್ಯವಸಾಯ ಮಾಡಲು ಸಾಧ್ಯವಾಗುತ್ತಿಲ್ಲ. ಪಂಪ್‌ಸೆಟ್‌ಗಳನ್ನು ನಂಬಿ ವ್ಯವಸಾಯ ಮಾಡಿರುವವರು ಅಂತರ್ಜಲ ಮಟ್ಟ ಕುಸಿಯುತ್ತಿರುವುದರಿಂದ ಯಾವ ಸಮಯಕ್ಕೆ ನೀರಿಗೆ ಸಮಸ್ಯೆ ಆಗುವುದೋ ಎಂಬ ಆತಂಕದಲ್ಲಿದ್ದಾರೆ.


    ಕೆರೆ, ಕಟ್ಟೆಗಳಲ್ಲಿ ನೀರಿಲ್ಲದೆ ದನ, ಕರುಗಳಿಗೆ ಕುಡಿಯುವ ನೀರಿಗೂ ತೊಂದರೆಯಾಗಿದೆ. ಜನ ವಸತಿ ಪ್ರದೇಶಗಳಿಗೆ ಬಿಡುವ ಕುಡಿಯುವ ನೀರನ್ನೇ ಜಾನುವಾರುಗಳು ಆಶ್ರಯಿಸಿಕೊಳ್ಳುವ ಪರಿಸ್ಥಿತಿ ಎದುರಾಗಿದೆ. ಆದ್ದರಿಂದ ಗುಂಡಾಲ್ ಜಲಾಶಯದ ಹಳೇ ಸ್ಥಿರ ಅಚ್ಚುಕಟ್ಟು ಪ್ರದೇಶದ ಹಿತರಕ್ಷಣಾ ಸಮಿತಿಯ ರೈತರು ಗುಂಡಾಲ್ ಜಲಾಶಯದಿಂದ ಕೆರೆ, ಕಟ್ಟೆಗಳನ್ನು ತುಂಬಿಸುವಂತೆ ಆಗ್ರಹಿಸಿದ್ದಾರೆ.


    ಮತದಾನದಿಂದ ದೂರ ಉಳಿಯುವುದಾಗಿ ಎಚ್ಚರಿಕೆ: ಈಗಾಗಲೇ ಮಾ.23ರಲ್ಲಿ ಗುಂಡಾಲ್ ಜಲಾಶಯದಡಿಯಲ್ಲಿ ಬರುವ ಕಾಯಂ ಖಾತ್ರಿ ಪೂರ್ಣ ನೀರಾವರಿಗೆ ಒಳಪಟ್ಟ ಹಳೇ ಸ್ಥಿರ ಅಚ್ಚುಕಟ್ಟಾದ 5100 ಎಕರೆ ಜಮೀನುಗಳಿಗೆ ಜಲಾಶಯದ ವರದಿಯಂತೆಯೂ ಅಂತಾರಾಜ್ಯ ಕಾವೇರಿ ನ್ಯಾಯ ಮಂಡಳಿ ತೀರ್ಮಾನದಂತೆಯೂ, ಮಾನವ ಹಕ್ಕುಗಳ ಆಯೋಗದ ಬೆಂಗಳೂರು ಆದೇಶದಂತೆಯೂ ಗುಂಡಾಲ್ ಜಲಾಶಯದ ಕೃಷಿ ಉದ್ದೇಶಕ್ಕಾಗಿ ನೀರನ್ನು ಸರಬರಾಜು ಮಾಡಿ ಕೊಡಬೇಕಾಗಿ ಆದೇಶವಿದ್ದರೂ ನೀರು ಬಿಡದಿರುವುದರಿಂದ ಈ ಭಾಗದ ರೈತರಿಗೆ ಕಷ್ಟವಾಗಿದೆ. ಈ ಹಿನ್ನೆಲೆ ಗುಂಡಾಲ್ ಜಲಾಶಯದ ನೀರನ್ನು ಕೃಷಿ ಉದ್ದೇಶಕ್ಕೆ ಸರಬರಾಜು ಮಾಡುವವರೆಗೂ ಮುಂಬರುವ ಚುನಾವಣೆಯಿಂದ ದೂರ ಉಳಿಯುವುದಾಗಿ ಗುಂಡಾಲ್ ಜಲಾಶಯ ಹಳೇ ಸ್ಥಿರ ಅಚ್ಚುಕಟ್ಟು ಪ್ರದೇಶ ಸಂಘದ ಅಧ್ಯಕ್ಷ ದಶರಥ್ ಹಾಗೂ ಪದಾಧಿಕಾರಿಗಳು ಬೆಂಗಳೂರಿನ ಮುಖ್ಯ ಚುನಾವಣಾಧಿಕಾರಿಗೆ ಅಂಚೆ ಮೂಲಕ ಪತ್ರ ರವಾನಿಸಿ ಮನವಿ ಮಾಡಿದ್ದಾರೆ.


    1 ತಿಂಗಳಲ್ಲಿ ಮಳೆ ಬೀಳದಿದ್ದರೆ ನೀರಿಗೆ ಹಾಹಾಕಾರ: ಬಿಸಿಲಿನ ತೀವ್ರ ತಾಪಕ್ಕೆ ಜಲ ಮೂಲಗಳಾದ ಕೆರೆ, ಕಟ್ಟೆ ಗಳು ಸಂಪೂರ್ಣವಾಗಿ ಬತ್ತಿ ಹೋಗಿವೆ. ಕಾವೇರಿ ನದಿಯಲ್ಲಿ ನೀರಿನ ಪ್ರಮಾಣವೂ ಕಡಿಮೆಯಾಗುತ್ತಿದೆ. ಈಗಾಗಲೆ ತಾಲೂಕು ವ್ಯಾಪ್ತಿಯಲ್ಲಿ ಅಂತರ್ಜಲ ಕುಸಿದಿದ್ದು ಪಂಪ್‌ಸೆಟ್‌ಗಳಲ್ಲಿ ಬರುವ ನೀರಿನ ಪ್ರಮಾಣ ಕಡಿಮೆ ಆಗಿದೆ. ಇನ್ನು 1 ತಿಂಗಳೊಳಗೆ ಮಳೆ ಬೀಳದಿದ್ದರೆ ಕೊಳ್ಳೇಗಾಲ ಪಟ್ಟಣ ಸೇರಿದಂತೆ ಗ್ರಾಮಾಂತರ ಪ್ರದೇಶದಲ್ಲೂ ನೀರಿಗೆ ಹಾಹಾಕಾರ ಉಂಟಾಗುತ್ತದೆ ಎಂದು ರೈತರು ಆತಂಕ ವ್ಯಕ್ತಪಡಿಸುತ್ತಿದ್ದಾರೆ.


    ಕೈ ಕೊಡುವ ವಿದ್ಯುತ್: ಕೆರೆ, ಕಟ್ಟೆಯಲ್ಲಿ ನೀರಿಲ್ಲದೆ ಅಂತರ್ಜಲ ಕುಸಿದು ಪಂಪ್‌ಸೆಟ್‌ಗಳಲ್ಲಿ ನೀರಿನ ಪ್ರಮಾಣ ಕಡಿಮೆ ಆಗಿದೆ. ಈ ಹಿನ್ನೆಲೆಯಲ್ಲಿ ಹಲವು ರೈತರು ಕೃಷಿ ಮಾಡುವ ಸಾಹಸಕ್ಕೆ ಹೋಗಿಲ್ಲ. ಇವೆಲ್ಲದರ ನಡುವೆಯೂ ವ್ಯವಸಾಯ ಮಾಡಲು ತೊಡಗಿರುವ ರೈತರಿಗೆ ವಿದ್ಯುತ್ ಕೈ ಕೊಡುತ್ತಿದೆ. ದಿನದ 7 ಗಂಟೆ ವಿದ್ಯುತ್ ನೀಡಬೇಕೆಂದು ಸೂಚನೆ ಇದ್ದರೂ ಸಮರ್ಪಕವಾಗಿ ವಿದ್ಯುತ್ ಸರಬರಾಜು ಆಗುತ್ತಿಲ್ಲ. ಸಿಂಗಲ್ ಫೇಸ್‌ಗಳಾಗಿ ತೊಂದರೆ ಆಗುತ್ತಿದೆ.
    ಸಭೆ ಕರೆದಿಲ್ಲ: ಗುಂಡಾಲ್ ಜಲಾಶಯದ ಅಚ್ಚುಕಟ್ಟು ಪ್ರದೇಶಗಳಿಗೆ ಮತ್ತು ಜನ, ಜಾನುವಾರುಗಳಿಗೆ ಕುಡಿಯುವ ನೀರು ಬಿಡುವ ಸಂಬಂಧ ಚರ್ಚಿಸಲು ಮಾ.12ರಂದು ಗುಂಡಾಲ್ ಜಲಾಶಯದ ಆವರಣದಲ್ಲಿ ಕಬಿನಿ ನಾಲಾ ವಿಭಾಗ ನಂ.2 ಕಾರ್ಯಾಪಾಲಕ ಅಭಿಯಂತರರು ಏರ್ಪಡಿಸಿದ್ದ ಸಭೆಯು ನಡೆಯದಿರುವುದರಿಂದ ರೈತರು ಅಸಮಾಧಾನ ಹೊರಹಾಕಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts