More

    ಕೆರೆಗಳ ಅಭಿವೃದ್ಧಿಗೆ ಜಿಪಂ ನೀಲಿನಕ್ಷೆ

    ಪರಿಶೀಲನಾ ಹಂತದಲ್ಲಿ ಯೋಜನೆ

    ಅಂತರ್ಜಲ ಸುಧಾರಣೆಗೆ ಒಲವು


    ವಿಜಯವಾಣಿ ಸುದ್ದಿಜಾಲ ಬೆಂಗಳೂರು ಗ್ರಾಮಾಂತರ
    ಯಾವುದೇ ನದಿ ಮೂಲವಿಲ್ಲದ ಗ್ರಾಮಾಂತರ ಜಿಲ್ಲೆಯಲ್ಲಿ ಅಂತರ್ಜಲಕ್ಕೆ ಇಲ್ಲಿನ ಕೆರೆಕಟ್ಟೆಗಳೇ ಮೂಲವಾಗಿದ್ದು, ಜಿಲ್ಲೆಯ ನಾಲ್ಕೂ ತಾಲೂಕುಗಳಲ್ಲಿನ ಕೆರೆಗಳ ಅಭಿವೃದ್ಧಿಗೆ ಚಿಂತನೆ ನಡೆಸಿರುವ ಗ್ರಾಮಾಂತರ ಜಿಲ್ಲಾಪಂಚಾಯಿತಿ ಪ್ರಮುಖ ಯೋಜನೆ ಜಾರಿಗೆ ನೀಲಿನಕ್ಷೆ ತಯಾರಿಸುತ್ತಿದೆ.
    ಮಳೆಯ ತೀವ್ರ ಕೊರತೆಯಿಂದ ಈಗಾಗಲೇ ಅಂತರ್ಜಲ ಮಟ್ಟ ಗಣನೀಯವಾಗಿ ಕುಸಿದಿದ್ದು, ಕೊಳವೆಬಾವಿಗಳಲ್ಲಿ ನೀರಿನ ಲಭ್ಯತೆ ದೊಡ್ಡ ಪ್ರಮಾಣದಲ್ಲೇ ಕುಗ್ಗಿದೆ. ಕೊಳವೆಬಾವಿಗಳಿಗೆ ಆಸರೆಯಾಗಿರುವ ಕೆರೆಗಳ ಅಭಿವೃದ್ಧಿ ಇದೀಗ ಜಿಪಂನ ಆದ್ಯತೆಯಾಗಿದ್ದು, ಈ ಬಗ್ಗೆ ಶೀಘ್ರದಲ್ಲೇ ಪ್ರಮುಖ ಯೋಜನೆಯೊಂದಕ್ಕೆ ಗ್ರೀನ್ ಸಿಗ್ನಲ್ ಸಿಗಲಿದೆ ಎಂದು ಜಿಪಂ ತಿಳಿಸಿದೆ.
    ಖಾಸಗಿಯವರಿಗೆ ಸ್ವಾಗತ, ಕಂಡಿಷನ್ ಅಪ್ಲೈ! ಈಗಾಗಲೆ ಜಿಲ್ಲೆಯ ಕೆಲವು ಕಡೆಗಳಲ್ಲಿ ಸಿಎಸ್‌ಆರ್ ಅನುದಾನದಡಿ ಕೆಲವು ಖಾಸಗಿ ಕಂಪನಿಯವರು ಕೆರೆಗಳ ಅಭಿವೃದ್ಧಿಗೆ ಮುಂದೆ ಬಂದಿದ್ದಾರೆ. ಕೆರೆಗಳಲ್ಲಿ ಹೂಳು ತೆಗೆಯುವ ಸಂಬಂಧ ಜಿಪಂಗೆ ಮನವಿ ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ಇಂಥ ಕಂಪನಿಗಳಿಗೆ ಸಹಕಾರ ನೀಡಲು ಜಿಪಂ ಸಿದ್ದವಿದೆ ಆದರೆ ಕೆಲವೊಂದು ಷರತ್ತುಗಳನ್ನು ವಿಧಿಸಿದ್ದು ಇದರ ಅನ್ವಯ ಕೆರೆಗಳ ಅಭಿವೃದ್ಧಿಗೆ ಅವಕಾಶ ನೀಡಲಾಗುವುದು ಎಂದು ಜಿಪಂ ಅಧಿಕಾರಿಗಳು ತಿಳಿಸಿದ್ದಾರೆ. ಮುಖ್ಯವಾಗಿ ಕೆರೆಗಳ ಹೂಳು ತೆಗೆಯುವಾಗ ಯಾವುದೇ ಕಾರಣಕ್ಕೂ ಕೆರೆಯ ಮೂಲಸ್ವರೂಪ ಬದಲಿಸಬಾರದು, ಎಷ್ಟು ಅಡಿ ಮಣ್ಣು ಹೊರತೆಗೆಯಬೇಕು ಎಂಬ ನಿಯಮದನ್ವಯವೇ ಹೂಳು ತೆಗೆಯಬೇಕು, ಜತೆಗೆ ಯಾವುದೇ ಕಾರಣಕ್ಕೂ ಇದನ್ನು ಕಮರ್ಷಿಯಲ್ ಆಗಿ ಬಳಸುವಂತಿಲ್ಲ ಎಂದು ಜಿಪಂ ಕಂಡಿಷನ್ ಮಾಡಿದೆ. ಖಾಸಗಿ ಸಹಭಾಗಿತ್ವದಲ್ಲಿ ಕೆರೆಗಳ ಅಭಿವೃದ್ಧಿ ನಡೆದರೂ ಇದರ ಸಂಪೂರ್ಣ ಮಾಲೀಕತ್ವ ಜಿಪಂಗೆ ಸೇರಿರುತ್ತದೆ ಜಿಪಂನ ಮಾರ್ಗಸೂಚಿಯಂತೆ ಕಾರ್ಯನಿರ್ವಹಿಸಬೇಕು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
    ಬದುಗಳ ನಿರ್ಮಾಣಕ್ಕೆ ಪ್ರೋತ್ಸಾಹ: ಕಳೆದ ಕೆಲವು ದಿನಗಳಿಂದ ಜಿಲ್ಲೆಯ ಹಲವಡೆ ಮಳೆಯಾಗುತ್ತಿದ್ದು, ಮಳೆ ನೀರು ಸಂರಕ್ಷಣೆಗೆ ಜಮೀನುಗಳಲ್ಲಿ ಬದುಗಳ ನಿರ್ಮಾಣಕ್ಕೆ ಜಿಪಂ ಸಹಾಯಧನ ನೀಡುತ್ತಿದೆ. ಒಂದು ಎಕರೆ ಸುಮಾರು 10 ಸಾವಿರ ರೂವರೆಗೆ ಹಣ ನೀಡಲಿದ್ದು ಇದರ ಸದ್ಭಳಕೆ ಮಾಡಿಕೊಳ್ಳುವುದರಿಂದ ಮಳೆ ನೀರು ಕೊಚ್ಚಿ ಹೋಗದಂತೆ ತಡೆಯುವುದು ಹಾಗೂ ಜಮೀನಿನಲ್ಲೇ ಮಳೆ ನೀರು ಹಿಂಗಿ ಅಲ್ಲಿನ ಕೊಳವೆಬಾವಿಗಳ ಪುನಶ್ಚೇತನಕ್ಕೆ ಅನುವು ಮಾಡಿಕೊಡುವುದು ಸೇರಿ ಮಣ್ಣಿನ ಸವಕಳಿ ತಪ್ಪಿಸಿ ಜಮೀನಿನಲ್ಲಿ ಮಣ್ಣಿನ ಲವತ್ತೆ ಕಾಪಾಡುವುದು ಈ ಯೋಜನೆಯ ಪ್ರಮುಖ ಉದ್ದೇಶವಾಗಿದೆ.
    ಕಾಲುವೆಗಳ ಸ್ವಚ್ಛತೆ: ಕೆರೆಗಳಿಗೆ ನೀರು ಹರಿದು ಹೋಗುವ ಮಳೆನೀರು ಕಾಲುವೆಗಳ ಸ್ವಚ್ಛತೆ ಜಿಪಂ ಚಾಲನೆ ನೀಡಲಿದೆ, ಮಳೆ ನೀರು ನೀರುಗಾಲುವೆಗಳ ಮೂಲಕ ಸರಾಗವಾಗಿ ಕೆರೆ ಒಡಲು ಸೇರುವಂತೆ ಮಾಡಲು ಜಿಲ್ಲೆಯಲ್ಲಿನ ಪ್ರಮುಖ ನೀರುಗಾಲುವೆಗಳಲ್ಲಿ ಹೂಳು ಹೊರತೆಗೆದು ಕಸಕಡ್ಡಿಗಳನ್ನು ಸ್ವಚ್ಛಗೊಳಿಸುವ ಕಾರ್ಯಕ್ಕೆ ಜಿಪಂ ಮುಂದಾಗಿದೆ. ಚೆಕ್‌ಡ್ಯಾಂ ನಿರ್ಮಾಣ, ಗೋಕಟ್ಟೆ, ಕಲ್ಯಾಣಿಗಳ ಅಭಿವೃದ್ಧಿ ಸೇರಿ ಜಿಲ್ಲೆಯಲ್ಲಿನ ಜಲಮೂಲಗಳ ರಕ್ಷಣೆಗೆ ದೊಡ್ಡಮಟ್ಟದ ಯೋಜನೆ ರೂಪಿಸಲು ಜಿಪಂ ಸಿದ್ದತೆ ನಡೆಸಿದೆ.
    ಪೌಷ್ಟಿಕ ಕೈತೋಟ ಪ್ರಚಾರ:ಮಳೆಗಾಲ ಆರಂಭವಾಗಲಿದ್ದು, ಗ್ರಾಮೀಣ ಪ್ರದೇಶಗಳಲ್ಲಿ ರೈತಾಪಿ ಜನರು ಮನೆಯ ಅಂಗಳದಲ್ಲಿ ಪೌಷ್ಟಿಕ ಕೈತೋಟ ನಿರ್ಮಾಣ ಮಾಡಿಕೊಳ್ಳಲು ಜಿಪಂ ಹೆಚ್ಚು ಪ್ರಚಾರ ನಡೆಸುತ್ತಿದೆ. ಸೀಬೆ, ದಾಳಿಂಬೆ, ನಿಂಬೆ, ಪಪ್ಪಾಯ, ನಲ್ಲಿ ಸೇರಿ ಸುಮಾರು 14 ಮಾದರಿಯ ಸಸಿಗಳನ್ನು ನೀಡುವ ಜತೆಗೆ ತೋಟ ನಿರ್ವಹಣೆಗೆ ಸಹಾಯಧನ ನೀಡುತ್ತಿದೆ. ಇದನ್ನು ಸದ್ಭಳಕೆ ಮಾಡಿಕೊಂಡು ಪ್ರತಿಯೊಬ್ಬರು ಪೌಷ್ಟಿಕ ಕೈತೋಟ ನಿರ್ಮಾಣ ಮಾಡಿಕೊಳ್ಳುವಂತೆ ಅಧಿಕಾರಿಗಳು ಮನವಿ ಮಾಡಿದ್ದಾರೆ.

    ಜಿಲ್ಲೆಯಲ್ಲಿ ಅಂತರ್ಜಲ ಸಂರಕ್ಷಣೆಗೆ ಜಿಲ್ಲಾ ಪಂಚಾಯಿತಿ ಆದ್ಯತೆ ನೀಡಿದ್ದು, ಜಲಮೂಲಗಳಾದ ಕೆರೆ, ಕಟ್ಟೆ, ಕಲ್ಯಾಣಿಗಳನ್ನು ಅಭಿವೃದ್ಧಿಪಡಿಸಲು ಯೋಜನೆ ರೂಪಿಸಲಾಗುತ್ತಿದೆ. ಈಗಾಗಲೇ ಜಿಲ್ಲೆಯ ನಾಲ್ಕೂ ತಾಲೂಕುಗಳಲ್ಲಿ ಕೆರೆಗಳ ಅಭಿವೃದ್ಧಿ ಅಂತರ್ಜಲ ರಕ್ಷಣೆಗೆ ಸಂಬಂಧಪಟ್ಟಂತೆ ಪ್ರಮುಖ ಯೋಜನೆಯನ್ನು ರೂಪಿಸಲಾಗುತ್ತಿದ್ದು ಇದು ಪರಿಶೀಲನಾ ಹಂತದಲ್ಲಿದೆ. ಶೀಘ್ರದಲ್ಲೇ ಇದು ೈನಲ್ ಆಗಲಿದ್ದು, ಯೋಜನೆ ಚಾಲನೆಗೊಳ್ಳಲಿದೆ.
    ಕೆ.ಎನ್.ಅನುರಾಧಾ, ಜಿಪಂ ಸಿಇಒ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts