More

  ಅಪೂರ್ವ ಸಸ್ಯಪ್ರಭೇದ ಸಂರಕ್ಷಣೆ: ಸಂಸ್ಕೃತಿ ರಕ್ಷಣೆಗೆ ವಿನೂತನ ಪ್ರಯೋಗ

  ಮನೋಹರ್ ಬಳಂಜ ಬೆಳ್ತಂಗಡಿ

  ಹಿಂದು ಧಾರ್ಮಿಕ ವಿಧಿ ವಿಧಾನಗಳಲ್ಲ ಹೂ-ಹಣ್ಣು-ಅಕ್ಷತೆಗಳಿರುವಷ್ಟೇ ಪ್ರಾಮುಖ್ಯ ಸಸ್ಯ, ಎಲೆಗಳಿಗೂ ಇದೆ. ಹೂ-ಹಣ್ಣುಗಳಾದರೂ ಅಪೂರ್ವವೇನಲ್ಲ. ಆದರೆ ಕೆಲ ಸಸ್ಯಪ್ರಭೇದಗಳು, ಅದರ ಎಲೆಗಳು ನೋಡಲು ಸಿಗುವುದು ವಿರಳ. ಇಂದು ಪೂಜೆಗಾಗಿ ಕೆಲ ಎಲೆಗಳನ್ನು, ಸಮಿಧೆಗಳನ್ನು ಸಂಗ್ರಹಿಸುವುದು ಒಂದು ಸಾಹಸವೇ. ಅಲ್ಲದೆ ಬೇಕಾದ ಎಲ್ಲ ಸಸ್ಯಗಳು ಒಂದೆಡೆ ಸಿಗುವಂತಹ ಜಾಗಗಳು ಇಲ್ಲ. ಹೀಗಿರುವಾಗ ಇದಕ್ಕೊಂದು ಪರಿಹಾರ ಕಾಣಿಸಬೇಕು ಎಂಬ ಉದ್ದೇಶದಿಂದ ಉಜಿರೆ-ಬೆಳ್ತಂಗಡಿ ಚಿತ್ಪಾವನ ಬ್ರಾಹ್ಮಣ ಬಳಗ ಸಂಸ್ಕೃತಿ ರಕ್ಷಣೆಯ ಒಂದು ಭಾಗವಾಗಿ ವಿನೂತನ ಪ್ರಯೋಗಕ್ಕೆ ಮುಂದಾಗಿದೆ.

  ಸಸ್ಯಶಾಸ್ತ್ರದ ಸಹಪ್ರಾಧ್ಯಾಪಕ, ಬಳಗದ ಕಾರ್ಯದರ್ಶಿ ಗಣೇಶ್ ಶೆಂಡ್ಯೆ ಪರಿಕಲ್ಪನೆಯ ಚಿತ್ಪಾವನ- ವೇದವನ ಬೆಳ್ತಂಗಡಿ ಪೇಟೆ ಸನಿಹದ ಲಾಯಿಲ ಗ್ರಾಮದ ಬಜಕ್ಕಿರೆ ಸಾಲು ಯೋಗೀಶ್ ಭಿಡೆ ಅವರ ಜಾಗದಲ್ಲಿ ಸಾಕಾರಗೊಂಡಿದೆ. ಶೆಂಡ್ಯೆ ಅವರಿಗೆ ಸುಮಾರು 1,008ಕ್ಕೂ ಹೆಚ್ಚು ವಿಧದ ಸಸ್ಯಪ್ರಬೇಧಗಳನ್ನು ಗುರುತಿಸಿ ವಿವರಿಸುವ ಸಾಮರ್ಥ್ಯವಿದೆ. ಅದರಲ್ಲಿ ಸಿಗುವ ಕೆಲವನ್ನಾದರೂ ನೆಟ್ಟು ಬೆಳೆಸುವ ಕಲ್ಪನೆ ಅವರದ್ದು. ಅವರ ದೂರದೃಷ್ಟಿಯ ಕ್ರಮಕ್ಕೆ ಬಳಗವೂ ಸಾಥ್ ನೀಡಿದೆ. ಹೀಗಾಗಿ ಪ್ರಕ್ರಿಯೆಗೆ ಚಾಲನೆ ನೀಡಲಾಗಿದೆ. ಇಲ್ಲಿ ನೆಟ್ಟಿರುವ ಎಲ್ಲ ಸಸ್ಯಗಳು ನಮ್ಮ ಹಿಂದು ಧಾರ್ಮಿಕ ಕಾರ್ಯಗಳಲ್ಲಿ ಉಪಯೋಗಿಸುವಂತಹದ್ದಾಗಿದೆ. ವೇದಗಳಲ್ಲಿ ಏನೆಲ್ಲ ಪ್ರಭೇದಗಳ ಉಲ್ಲೇಖವಿದೆಯೋ ಸಾಧ್ಯವಾದಷ್ಟನ್ನು ಇಲ್ಲಿ ತಂದು ಪೋಷಿಸುವ ಕಾರ್ಯ ಮಾಡಲಾಗುತ್ತಿದೆ. ಹೀಗಾಗಿ ಇದನ್ನು ‘ವೇದವನ’ ಎಂದು ಕರೆಯಲಾಗುತ್ತದೆ ಎನ್ನುತ್ತಾರೆ ಗಣೇಶ ಶೆಂಡ್ಯೆ.

  ಸಂರಕ್ಷಿಸಲ್ಪಡುವ ಸಸ್ಯಗಳು: ಅಗರು, ಅಗಸೆ, ಅಡಕೆ, ಅತ್ತಿ, ಅಡ್ಕಬಾಳೆ, ಅವರೆ, ಅರಸಿನ, ಅರ್ಜುನ, ಅಶೋಕ, ಅಶ್ವತ್ಥ, ಅಳಲೆ, ಆನೆಮುಂಗು, ಆಲ, ಉತ್ತರಣೆ, ಉದ್ದು, ಎಕ್ಕಮಾಲೆ, ಎಳ್ಳು, ಏಲಕ್ಕಿ, ಉಯ್ಯೇರ್, ಕಂಚುಹುಳಿ, ಕಚೂರಗಂಧ, ಕಡ್ಲೇಗಿಡ, ಕದಂಗ, ಕಬ್ಬು, ಕಮಲ, ಕರವೀರ, ಕಲ್ಲಾರ, ಕಹಿಬೇವು, ಕಾಮಕಸ್ತೂರಿ, ಕಾಸರಕ, ಕಾಳುಮೆಣಸು, ಕಿತ್ತಳೆ, ಕಿನ್ನಿಗೋಳಿ, ಕುಂಬಳಕಾಯಿ, ಲಿಂಗತೊಂಡೆ, ಕೇದಗೆ, ಕೇಪಳ ಹೂವು, ಕೊಟ್ಟೆ ಹಣ್ಣು, ಕದಿರ, ಗಟ್ಟದತುಂಬೆ, ಗಿರಿಕರ್ಣಿಕ, ಶಂಖಪುಷ್ಪ, ಗುಲಾಬಿ, ಗೆಣಸು, ಗೇರುಬೀಜ, ಗೋದಿ, ಗೋರಟೆ, ಗೋಸಂಪಿಗೆ, ಚಕೋತ, ಜಂಬುನೇರಳೆ, ಜಾಜಿಮಲ್ಲಿಗೆ, ಜಾಯಿಕಾಯಿ ಮತ್ತು ಪತ್ರೆ, ಜೀರಿಗೆ, ಜೊಂಡು ಹುಲ್ಲು, ತಮಾಲ ಹೊಂಗೆ, ತುಂಬೇಗಿಡ, ತುಳಸಿ, ತೆಂಗು, ತಿಲ್‌ಫುಲ್ಲ, ತ್ರಿಗುಣಾತ್ಮಕ, ತೊಗರಿ, ದರ್ಬೆ, ದಡ್ಡಾಲ, ದಾಸವಾಳ, ದಾಳಿಂಬೆ, ದುಂಡುಮಲ್ಲಿಗೆ, ದೂರ್ವೆ, ಉಮ್ಮತ್ತಿ, ನಂದಿಬಟ್ಟಲು, ನಾಗಸಂಪಿಗೆ, ನಾಣೀಲು, ನಾಮದಬೇರು, ನಿತ್ಯಮಲ್ಲಿಗೆ, ನೆಲ್ಲಿ, ನೇರಳೆ, ಪಡುವಲ, ಪಲಾಶ, ಪಾದರಿ, ಪಾರಿಜಾತ, ಪುನ್ನಾಗ, ಬಕುಲ, ಕದಳಿ, ಬಿದಿರು, ಬಿಲ್ವ, ಬಿಳಿಕಡ್ವಿ, ಬೀಟೆ, ಬೇಲ, ಬೋರೆಹಣ್ಣು, ಭತ್ತ, ಭೃಂಗರಾಜ, ಮದನಪತ್ರ, ಮಂದಾರ, ಮಲ್ಲಿಗೆ, ಮಾಚಿಪತ್ರೆ, ಮಾದಿಫಲ, ಮಾವು, ಮುಳ್ಳುಸೌತೆ, ಮುತ್ತುಮಲ್ಲಿಗೆ, ಮೆಣಸಿನಕಾಯಿ, ಮೈಸೂರು ಗೋರಟೆ, ಜವೆಗೋಧಿ, ಯೂಥಿಕಾ, ರಕ್ತಚಂದನ, ರತ್ನಮಲ್ಲಿಗೆ, ಲವಂಗ, ಲಾವಂಚ, ಲಾವುದ ಮರ, ಲಿಂಬೆ, ಲಿಲ್ಲಿಹೂವು, ವಿಷ್ಣುಕ್ರಾಂತಿ, ವೀಳ್ಯದೆಲೆ, ಶಮಿ, ಶುಂಠಿ, ಶ್ರೀಗಂಧ, ಸಂಪಿಗೆ, ಸಪ್ತಪರ್ಣಿ, ಸಾಮೆಅಕ್ಕಿ, ಸಾಸಿವೆ(ಕಪ್ಪು ಮತ್ತು ಬಿಳಿ), ಸುರುಳಿ,ಸುರಗೆ, ಸೇವಂತಿಗೆ, ಸೋರೆಕಾಯಿ, ಹತ್ತಿ, ಹಲಸು, ಹಿಪ್ಪಲಿ, ಹುರುಳಿ, ಹೆಸರು ಸಸ್ಯಗಳನ್ನು ವೇದವನದಲ್ಲಿ ಸಂರಕ್ಷಿಸಲಾಗುತ್ತಿದೆ.

  See also  45 ಸಾವಿರಕ್ಕೂ ಅಧಿಕ ಅಕ್ರಮ ‘ಎ’ ಖಾತಾ ಆಸ್ತಿ ಪ್ರಮಾಣ ಪತ್ರ ರದ್ದುಪಡಿಸಿದ ಬಿಬಿಎಂಪಿ

  126 ಪ್ರಭೇದದ 450 ಗಿಡ:

  ಇಂಥ ವೈಶಿಷ್ಟೃಪೂರ್ಣ ಕಾರ್ಯ ಮಾಡಲು ಅಪಾರ ತಯಾರಿ, ತಾಳ್ಮೆ, ವಿಷಯ ಸಂಗ್ರಹ, ಮಾಹಿತಿ ಬೇಕು. ಶೆಂಡ್ಯೆ ಅವರು ತಮ್ಮ ಕಲ್ಪನೆಯನ್ನು ಬಳಗದ ಮುಂದಿಟ್ಟಾಗ ಎಲ್ಲರೂ ಒಕ್ಕೂರಲಿನಿಂದ ಇದನ್ನು ಮಾಡಲೇಬೇಕು ಎಂದು ಸಮ್ಮತಿಸಿದರು. ಪೂರಕವಾಗಿ ಇದಕ್ಕೆ ಬೇಕಾಗುವ 10 ಸೆಂಟ್ಸ್ ತಮ್ಮದೇ ಜಾಗವನ್ನು ಬಳಗದ ಅಧ್ಯಕ್ಷ ಯೋಗೀಶ ಭಿಡೆ ಒದಗಿಸಿಕೊಟ್ಟಿದ್ದಾರೆ. ಸುಮಾರು 50 ಸಾವಿರ ರೂ. ವೆಚ್ಚದಲ್ಲಿ ವೇದವನ ನಿರ್ಮಾಣಗೊಂಡಿದೆ. 2.5 ಅಡಿ ಅಂತರದಲ್ಲಿ 126 ಪ್ರಭೇದದ 450 ಗಿಡಗಳನ್ನು ನೆಡಲಾಗಿದೆ. ಎಲೆ, ಪುಷ್ಪ, ಹಣ್ಣು, ಸಮಿಧೆಗಳ ಉದ್ಯಾನವನ ಇದಾಗಿದ್ದು, ಅಳಿವಿನಂಚಿನಲ್ಲಿರುವ ಸಸ್ಯಗಳ ಸಂರಕ್ಷಣೆಯೊಂದಿಗೆ ಅಧ್ಯಯನಕ್ಕೂ ಅವಕಾಶವಿದೆ. ನೀರು ಪೂರೈಕೆ, ಅದಕ್ಕೆ ಬೇಕಾದ ಪೋಷಕಾಂಶಗಳ ವ್ಯವಸ್ಥೆಯನ್ನು, ಆರೈಕೆಯನ್ನು ಭಿಡೆಯವರು ಆಸಕ್ತಿಯಿಂದ ನಿರ್ವಹಿಸುತ್ತಾ ಬರುತ್ತಿದ್ದಾರೆ.

  ಸಸಿಗಳಿಗೆ ಕ್ಯೂಆರ್ ಕೋಡ್

  ಚಿತ್ಪಾವನ-ವೇದವನದಲ್ಲಿ ಪೋಷಣೆಯಾಗುತ್ತಿರುವ ಎಲ್ಲ ಸಸ್ಯಗಳಿಗೂ ಕ್ಯೂಆರ್ ಕೋಡ್ ಅಳವಡಿಸಲಾಗಿದೆ. ಅದರ ಮೂಲಕ ಬೆಳೆಯುತ್ತಿರುವ ಸಸ್ಯದ ಉಪಯೋಗವನ್ನೊಳಗೊಂಡಂತೆ ಎಲ್ಲ ಮಾಹಿತಿಗಳನ್ನು ಭೇಟಿ ನೀಡುವವರು ಪಡೆದುಕೊಳ್ಳಬಹುದಾಗಿದೆ.

  ಇಂತಹ ಯೋಜನೆ ಮತ್ತು ಯೋಚನೆಯನ್ನು ಪ್ರತಿ ದೇವಸ್ಥಾನ, ದೈವಸ್ಥಾನಗಳಲ್ಲಿ ಮಾಡಿದರೆ ಉಪಯೋಗ. ಅಳಿಯುತ್ತಿರುವ ಸಸ್ಯಪ್ರಭೇದಗಳನ್ನು ಮತ್ತೆ ಮುನ್ನೆಲೆಗೆ ತರಬೇಕೆಂಬ ಉದ್ದೇಶ ನಮ್ಮದು. ಇಲ್ಲವಾದಲ್ಲಿ ಅವುಗಳು ಪುಸ್ತಕಕಕ್ಕೋ, ಗೂಗಲ್‌ಗಷ್ಟೇ ಸೀಮಿತವಾಗುತ್ತವೆ. ಪರಸ್ಪರ ಸಹಕಾರ ತತ್ವದಿಂದ ಎಲ್ಲರೂ ಇಂತಹ ಯೋಚನೆಗೆ ಅದರಲ್ಲೂ ಯುವಕರು ಕೈಜೋಡಿಸುವ ಅಗತ್ಯವಿದೆ.
  ಗಣೇಶ್ ಶೆಂಡ್ಯೆ, ವೇದವನ ನಿರ್ಮಾತೃ

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts