More

    ಕಿಮ್ಸ್​ನಲ್ಲಿ ತಜ್ಞ ವೈದ್ಯರ ಕೊರತೆ

    ಮರಿದೇವ ಹೂಗಾರ ಹುಬ್ಬಳ್ಳಿ

    ‘ಆಯುಷ್ಮಾನ್ ಭಾರತ ಆರೋಗ್ಯ ಕರ್ನಾಟಕ’ದಲ್ಲಿ ನಂ. 1 ಸ್ಥಾನಕ್ಕೆ ಜಿಗಿಯಬೇಕೆಂದುಕೊಂಡಿರುವ ಇಲ್ಲಿನ ಕರ್ನಾಟಕ ವೈದ್ಯಕೀಯ ವಿಜ್ಞಾನ ಸಂಸ್ಥೆಗೆ (ಕಿಮ್್ಸ) ವೈದ್ಯರ ಕೊರತೆ ಸವಾಲಾಗಿ ಪರಿಣಮಿಸಿದೆ. ಸರ್ಕಾರ ಆಯಾ ಕಾಲಕ್ಕೆ ವೈದ್ಯರು, ಶಸ್ತ್ರ ಚಿಕಿತ್ಸಕರನ್ನು ನೇಮಿಸದೇ ಇರುವುದರಿಂದ ರಾಜ್ಯದ ಭೂಪಟದಲ್ಲಿ ಕಿಮ್್ಸ 4 ಅಥವಾ 5ನೇ ಸ್ಥಾನಕ್ಕೆ ತೃಪ್ತಿ ಪಡುತ್ತಿದೆ.

    ಬಡವರ ಸಂಜೀವಿನಿ ಕಿಮ್ಸ್​ಗೆ ಬರುವ ರೋಗಿಗಳ ಸಂಖ್ಯೆಯಲ್ಲೇನೂ ಕಡಿಮೆ ಇಲ್ಲ. ಆರೋಗ್ಯ ಕರ್ನಾಟಕದ ಕಾರ್ಡ್ ರೋಗಿಗಳ ಕೈಗೆ ಸಿಗಲೆಂದು ಪ್ರತಿ ಮಹಡಿಯಲ್ಲಿ ನೋಂದಣಿ ಕೇಂದ್ರಗಳನ್ನು ತೆರೆಯಲಾಗಿದೆ. ಸಮಗ್ರ ಮಾಹಿತಿಯೇನೋ ಸಿಗುತ್ತಿದೆ. ಆದರೆ, ಶಸ್ತ್ರ ಚಿಕಿತ್ಸೆ ನೀಡುವ ಪ್ರಮುಖ ಮೂರು ವಿಭಾಗದಲ್ಲಿ ವೈದ್ಯರ ಕೊರತೆ ಎದುರಾಗಿದೆ.

    ನರರೋಗ ಶಸ್ತ್ರ ಚಿಕಿತ್ಸೆ ವಿಭಾಗದಲ್ಲಿ ಇಬ್ಬರು, ಹೃದ್ರೋಗ ವಿಭಾಗದಲ್ಲಿ ಕಾರ್ಡಿಯೋ ವೆಸ್ಕ್ಯೂಲರ್ ಥೋರಸಿಕ್ ಸರ್ಜರಿ ಮೂರು, ಕ್ಯಾನ್ಸರ್ ವಿಭಾಗದಲ್ಲಿ ರೇಡಿಯೊಲಜಿ 3 ಮತ್ತು ಮೆಡಿಕಲ್ ಅಂಕಾಲಜಿ ಒಬ್ಬರು, ರೇಡಿಯೋಥೆರಪಿಯ ಇಬ್ಬರು ವೈದ್ಯರು ಅತ್ಯಗತ್ಯವಾಗಿ ಬೇಕು. ಹಾಗಾಗಿಯೇ ‘ಆಯುಷ್ಮಾನ್ ಭಾರತ ಆರೋಗ್ಯ ಕರ್ನಾಟಕ’ ಯೋಜನೆ ಅಡಿ ಇದುವರೆಗೆ 1027 ರೋಗಿಗಳು ‘ರೆಫೆರಲ್’ ಪತ್ರ ಪಡೆದು ಬೇರೆಡೆ ಶಸ್ತ್ರ ಚಿಕಿತ್ಸೆ ಪಡೆದಿದ್ದಾರೆ. ಈ ತಜ್ಞರೆಲ್ಲ ಇಲ್ಲಿ ಸಿಗುವಂತಿದ್ದರೆ ಯಾವೊಬ್ಬ ರೋಗಿಯೂ ಖಾಸಗಿ ಅಥವಾ ಬೇರೆ ಸರ್ಕಾರಿ ಆಸ್ಪತ್ರೆಯ ಕದ ತಟ್ಟುತ್ತಿರಲಿಲ್ಲ ಎಂಬ ಆರೋಪವಿದೆ.

    ಕಿಮ್ಸ್​ಗೆ ಒಟ್ಟಾರೆಯಾಗಿ ಇಬ್ಬರು ಪ್ರಾಧ್ಯಾಪಕರು, 6 ಸಹ ಪ್ರಾಧ್ಯಾಪಕರು, 30 ಸಹಾಯಕ ಪ್ರಾಧ್ಯಾಪಕರ ನೇಮಕ ಆಗಲೇಬೇಕು. ಆದರೆ, ಹಣಕಾಸು ಇಲಾಖೆಯ ಅನುಮೋದನೆಗಾಗಿ ಕಾಯಲಾಗುತ್ತಿದೆ. ಇದು ಒಂದು ವರ್ಷದ ಸಮಸ್ಯೆಯಲ್ಲ. ಸತತ ಐದು ವರ್ಷಗಳಿಂದ ಹಣಕಾಸು ಇಲಾಖೆ ಅಸ್ತು ಎನ್ನಲು ಕಾಯಲಾಗುತ್ತಿದೆ. ಈಗಾಗಲೇ ಹಣಕಾಸು ಇಲಾಖೆ ವೈದ್ಯರು, ಶಸ್ತ್ರ ಚಿಕಿತ್ಸಕರ ಹುದ್ದೆ ನೇಮಕಕ್ಕೆ ಅನುಮೋದನೆ ನೀಡಿದ್ದರೆ ‘ಆಯುಷ್ಮಾನ್ ಭಾರತ ಆರೋಗ್ಯ ಕರ್ನಾಟಕ’(ಎಬಿಎಕೆ) ನಂ. 1 ಆಗುತ್ತಿತ್ತು. ಆದರೂ 2019ರ ಜ. 1ರಿಂದ ಡಿ. 31ರವರೆಗೆ ಒಟ್ಟು 6,141 ರೋಗಿಗಳು ಶಸ್ತ್ರ ಚಿಕಿತ್ಸೆ ಪಡೆದಿದ್ದು, 4-5ನೇ ಸ್ಥಾನದ ಆಸುಪಾಸಿನಲ್ಲಿದೆ. ಕಿಮ್್ಸ ಆಡಳಿತ ಮಂಡಳಿ ಪ್ರತಿ ತಿಂಗಳು 2 ಸಾವಿರ ಜನರಿಗೆ ಶಸ್ತ್ರ ಚಿಕಿತ್ಸೆ ನೀಡಲು ಉದ್ದೇಶಿಸಿದ್ದು, ಶಸ್ತ್ರ ಚಿಕಿತ್ಸಕರ ನೇಮಕಕ್ಕೆ ಸರ್ಕಾರ ಮುಂದಾಗಬೇಕಿದೆ.

    ಸೂಪರ್ ಸ್ಪೆಷಾಲಿಟಿ ಆರಂಭಕ್ಕೂ ವಿಘ್ನ: ಹೊಸದಾಗಿ ಆರಂಭವಾಗಿರುವ ‘ಸೂಪರ್ ಸ್ಪೆಷಾಲಿಟಿ’ ಆಸ್ಪತ್ರೆಗೆ ವೈದ್ಯರು ಹಾಗೂ ಹಣಕಾಸಿನ ಬಿಕ್ಕಟ್ಟು ಎದುರಾಗಿದೆ. ಕಿಮ್್ಸ ಆಡಳಿತ ಮಂಡಳಿ, ಜ. 3ರಂದು ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ ಶೆಟ್ಟರ್ ಅವರನ್ನು ಭೇಟಿಯಾಗಿದ್ದು, ಬಜೆಟ್​ನಲ್ಲಿ ವಿಶೇಷ ಅನುದಾನ ಮೀಸಲಿಡುವ ಭರವಸೆ ಸಿಕ್ಕಿದೆ. ಆದರೂ ಸಿಬ್ಬಂದಿ ನೇಮಕ, ಹಣಕಾಸು ದುಸ್ಥಿತಿ ನಿಭಾಯಿಸಲು ಹೆಣಗಾಡುತ್ತಿದೆ.

    ವೈದ್ಯರ ನೇಮಕಕ್ಕೆ ಅನುಮತಿ ನೀಡುವಂತೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಹಣಕಾಸು ಇಲಾಖೆಯ ಅನುಮೋದನೆ ಬಾಕಿ ಇದೆ. ವೈದ್ಯರು ಇದ್ದರೆ ಎಲ್ಲ ಸಮಸ್ಯೆ ಬಗೆಹರಿಯುತ್ತದೆ. ‘ಆಯುಷ್ಮಾನ್ ಭಾರತ ಆರೋಗ್ಯ ಕರ್ನಾಟಕ’ದಲ್ಲಿ ಕಿಮ್್ಸ ನಂ. 1 ಸ್ಥಾನ ತಲುಪಿಸುವ ಉಮೇದಿಯಲ್ಲಿದ್ದೇವೆ.

    | ಡಾ. ರಾಮಲಿಂಗಪ್ಪ ಅಂಟರತಾನಿ ಕಿಮ್್ಸ ನಿರ್ದೇಶಕ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts