More

    ಕುವೆಂಪು ವಿವಿಯಲ್ಲಿ ಮುಷ್ಕರ ನಿರಂತರ

    ಶಿವಮೊಗ್ಗ: ಬಡ್ತಿ ನೀಡಿದವರಿಗೆ ವೇತನ ನಿಗದೀಕರಣ, ಆಂತರಿಕ ಬದಲಾವಣೆಗೆ ಅವಕಾಶ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಕುವೆಂಪು ವಿವಿ ಅಧ್ಯಾಪಕೇತರ ಸಿಬ್ಬಂದಿ ನಡೆಸುತ್ತಿರುವ ಅನಿರ್ಧಿಷ್ಟಾವಧಿ ಮುಷ್ಕರ 6ನೇ ದಿನಕ್ಕೆ ಕಾಲಿಟ್ಟಿದೆ. ಶುಕ್ರವಾರ ವರಮಹಾಲಕ್ಷ್ಮೀ ಹಬ್ಬದ ಸಂದರ್ಭದಲ್ಲೂ ಸಿಬ್ಬಂದಿ ಪ್ರತಿಭಟನೆ ನಡೆಸುವ ಮೂಲಕ ಯಾವುದೇ ಕಾರಣಕ್ಕೂ ಮಣಿಯುವ ಪ್ರಶ್ನೆಯೇ ಇಲ್ಲ ಎಂಬ ಸಂದೇಶ ರವಾನಿಸಿದ್ದಾರೆ.
    ಜನವರಿ 2020 ರಂದು ಪ್ರಕಟಿಸಿರುವ ಅಂತಿಮ ಜ್ಯೇಷ್ಠತಾ ಪಟ್ಟಿಯನ್ನು ಸಂಪೂರ್ಣವಾಗಿ ಅನುಷ್ಠಾನ ಮಾಡಬೇಕು. 2020ರ ಜುಲೈ ಹಾಗೂ ಅಕ್ಟೋಬರ್‌ನಲ್ಲಿ ನಡೆದ ಸಿಂಡಿಕೆಟ್ ಸಭೆಯ ನಿರ್ಣಯಗಳನ್ನು ಜಾರಿಗೆ ತರಬೇಕೆಂದು ಪ್ರತಿಭಟನಾಕಾರರು ಪಟ್ಟು ಹಿಡಿದಿದ್ದಾರೆ. ಸತತ ಐದು ದಿನಗಳ ಪ್ರತಿಭಟನೆಯಿಂದ ವಿವಿಯ ಕಚೇರಿ ಕಾರ್ಯಗಳಿಗೂ ಹಿನ್ನಡೆಯಾಗಿದೆ.
    2019ರ ಜೂನ್‌ನಲ್ಲಿ ತಾತ್ಕಾಲಿಕ ಜ್ಯೇಷ್ಠ ತಾ ಪಟ್ಟಿ ಪ್ರಕಟವಾದಗಿನಿಂದಲೂ ಅದು ಅನುಷ್ಠಾನವಾಗದಂತೆ ಕೆಲವರು ತಡೆಯೊಡ್ಡುತ್ತಿದ್ದಾರೆ. ಹೈಕೋರ್ಟ್ ಮತ್ತು ಸುಪ್ರಿಂ ಕೋರ್ಟ್‌ನ ಆದೇಶದ ಪ್ರಕಾರ 2020ರ ಫೆಬ್ರವರಿಯಲ್ಲೇ ಅಂತಿಮ ಜ್ಯೇಷ್ಠತಾ ಪಟ್ಟಿಯನ್ನು ಅನುಷ್ಠಾನ ಮಾಡಬೇಕಿತ್ತು. ಇದು ನ್ಯಾಯಾಲಯದ ಆದೇಶದ ಸ್ಪಷ್ಟ ಉಲ್ಲಂಘನೆಯಾಗಿದೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.
    ಆಗಸ್ಟ್ 1ರೊಳಗೆ ಬೇಡಿಕೆ ಈಡೇರಿಸುವುದಾಗಿ ವಿವಿ ಆಡಳಿತ ಮಂಡಳಿ ಭರವಸೆ ನೀಡಿದ್ದ ಹಿನ್ನೆಲೆಯಲ್ಲಿ ತಾತ್ಕಲಿಕವಾಗಿ ಹೋರಾಟ ಕೈ ಬಿಡಲಾಗಿತ್ತು. ಆದರೆ ಆಡಳಿತ ಮಂಡಳಿ ಸ್ಪಂದಿಸದ ಕಾರಣ ಆಗಸ್ಟ್ 1ರಿಂದ ಅನಿರ್ಧಿಷ್ಟಾವಧಿ ಪ್ರತಿಭಟನೆ ಕೈಗೊಂಡಿದ್ದೇವೆ. ಈ ಬಾರಿ ಬೇಡಿಕೆ ಈಡೇರುವವರೆಗೂ ಹೋರಾಟ ಕೈ ಬಿಡುವ ಪ್ರಶ್ನೆಯೇ ಇಲ್ಲ ಪ್ರತಿಭಟನಾಕಾರರು ಎಚ್ಚರಿಸಿದರು.
    ಕುವೆಂಪು ವಿವಿ ಅಧ್ಯಾಪಕೇತರ ನೌಕರರ ಸಂಘದ ಅಧ್ಯಕ್ಷ ಶ್ರೀನಿವಾಸ, ಉಪಾಧ್ಯಕ್ಷ ಪಿ.ಮಹೇಶ್, ಕಾರ್ಯದರ್ಶಿ ಅಬ್ದುಲ್ ಅಲಿ, ಖಜಾಂಚಿ ಚಂದ್ರಶೇಖರ್, ಸಹಕಾರ್ಯದರ್ಶಿ ಎಂ.ಸಿದ್ದರಾಮ, ನಿರ್ದೇಶಕರಾದ ಬಿ.ಎಂ.ಅಮೀರ್, ಕೆಂಪರಾಜ್, ಎಸ್.ಸುಶೀಲಾ, ಎಚ್.ಎಸ್.ರೇಖಾ ಮುಂತಾದವರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts