More

    ರಾಗಿ ಬೆಳೆಗೆ ನೀರು ಹರಿಸಲು ತೀರ್ಮಾನ ; ಮಾರ್ಕೋನಹಳ್ಳಿಯಲ್ಲಿ ನೀರಾವರಿ ಸಲಹಾ ಸಮಿತಿ ಸಭೆ

    ಕುಣಿಗಲ್ : ಮಾರ್ಕೋನಹಳ್ಳಿ ಜಲಾಶಯದ ಅಚ್ಚುಕಟ್ಟು ಪ್ರದೇಶದ ರಾಗಿ ಬೆಳೆಗೆ ಮತ್ತು ಸಾಲು ಕೆರೆ ತುಂಬಿಸಲು ಆ.27ರಂದು ನೀರು ಹರಿಸಲು ನೀರಾವರಿ ಸಲಹಾ ಸಮಿತಿ ತೀರ್ಮಾನಿಸಿತು. ಮಾರ್ಕೋನಹಳ್ಳಿ ಜಲಾಶಯದ ಪ್ರವಾಸಿ ಮಂದಿರದಲ್ಲಿ ಮಂಗಳವಾರ ಉಪವಿಭಾಗಾಧಿಕಾರಿ ಅಜಯ್ ಅಧ್ಯಕ್ಷತೆಯಲ್ಲಿ ಹಮ್ಮಿಕೊಂಡಿದ್ದ ಸಭೆಯಲ್ಲಿ ತೀರ್ಮಾನಕೈಗೊಳ್ಳಲಾಗಿದೆ, ಜತೆಗೆ ಭತ್ತದ ಬದಲು ಅರೆ ನೀರಾವರಿ ಬೆಳೆ ಇಡಲು ನಿರ್ಣಯಿಸಲಾಯಿತು.

    ಅಮೃತೂರು ಹೋಬಳಿ ವ್ಯಾಪ್ತಿಯಲ್ಲಿ ಕೆರೆ ಕಟ್ಟೆಗಳಲ್ಲಿ ನೀರಿಲ್ಲದೆ ಅಂತರ್ಜಲ ಕುಸಿದು, ನೀರಿನ ಸಮಸ್ಯೆ ಬಂದಿದೆ. ಮಾರ್ಕೋನಹಳ್ಳಿ ಜಲಾಶಯದ ಅಚ್ಚು ಕಟ್ಟು ಪ್ರದೇಶದ ವ್ಯಾಪ್ತಿಯಲ್ಲಿನ ಕೃಷಿಗೆ ನೀರಿಲ್ಲದೆ, ರೈತರು ಕಂಗಾಲಾಗಿದ್ದಾರೆ. ಜಲಾಶಯದಲ್ಲಿನ ನೀರಿನ ಪ್ರಮಾಣ ಯಾವ ಬೆಳೆ ಬೆಳೆಯಬಹುದು ಹಾಗೂ ಕುಡಿಯುವ ನೀರಿಗೆ ಏನು ಕ್ರಮಕೈಗೊಳ್ಳಬೇಕು ಎಂಬುದರ ಬಗ್ಗೆ ಮಾಹಿತಿ ನೀಡುವಂತೆ ಹೇಮಾವತಿ ನಾಲಾ ಉಪ ವಿಭಾಗದ ಪ್ರಭಾರ ಇಇಗೆ ಶಾಸಕ ಡಾ.ಎಚ್.ಡಿ.ರಂಗನಾಥ್ ಸೂಚಿಸಿದರು.

    ಭತ್ತಕ್ಕೆ ನೀರು ಹರಿಸಿ: ಹಲವು ವರ್ಷಗಳಿಂದ ಭತ್ತದ ಬೆಳೆಗೆ ನೀರು ಕೊಟ್ಟಿಲ್ಲ. ಇದರಿಂದ್ದಾಗಿ ರೈತರು ಭತ್ತ ಬೆಳೆಯಲು ಸಾಧ್ಯವಾಗದೆ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ. ಈ ಬಾರಿ ಭತ್ತದ ಬೆಳೆಗೆ ನೀರು ಕೊಡುವಂತೆ ಸಭೆಯಲ್ಲಿದ್ದ ರೈತರು ಶಾಸಕರು ಹಾಗೂ ಅಧಿಕಾರಿಗಳ ಗಮನಕ್ಕೆ ತಂದರು. ಇದಕ್ಕೆ ಪ್ರತಿಕ್ರಿಯಿಸಿದ ಹೇಮಾವತಿ ನಾಲಾ ವಲಯದ ಪ್ರಭಾರ ಇಇ ಜಯರಾಮ್, ಭತ್ತದ ಬೆಳೆಗೆ 3471.55 ಎಂಸಿಎಫ್‌ಟಿ ನೀರಿನ ಅವಶ್ಯಕತೆ ಇದೆ, ಆದರೆ ಡ್ಯಾಂನಲ್ಲಿ ಈಗಿರುವ ನೀರು ಭತ್ತದ ಬೆಳೆಗೆ ಸಾಕಾಗುವುದಿಲ್ಲ, ರಾಗಿ ಬೆಳೆಗೆ ಈಗಿರುವ ನೀರು ಸೂಕ್ತವಾಗಿದೆ ಎಂದರು.
    ಪ್ರತಿ ವರ್ಷ ಮಾರ್ಕೋನಹಳ್ಳಿ ಜಲಾಶಯಕ್ಕೆ ನೀರು ಹರಿಸಲು ಬೀದಿಗಿಳಿದು ಹೋರಾಟ ಮಾಡಬೇಕಾಗಿತ್ತು. ಆದರೆ ಎರಡು ವರ್ಷದಿಂದ ಯಾವುದೇ ಗಲಾಟೆ ಇಲ್ಲದೆ ಜಲಾಶಯಕ್ಕೆ ನೀರು ಹರಿಸಲಾಗುತ್ತಿದೆ ಎಂದು ಶಾಸಕರು ತಿಳಿಸಿದರು. ತಹಸೀಲ್ದಾರ್ ಮಹಭಲೇಶ್ವರ, ಹೇಮಾವತಿ ಎಇ ಜಯರಾಜು ಇದ್ದರು.

    ಬೆದರಿಕೆ ಎದುರಿಸಲು ಸಿದ್ಧ : ನಾಗಮಂಗಲ ತಾಲೂಕಿಗೆ ಮಾರ್ಕೋನಹಳ್ಳಿ ಜಲಾಶಯದಿಂದ ನೀರು ಹರಿಸುವಂತೆ ಸ್ವಾಮೀಜಿಯೊಬ್ಬರು ಸಲಹೆ ನೀಡಿದರು ಹಾಗೂ ಇತರ ವ್ಯಕ್ತಿಗಳು ಬೆದರಿಕೆ ಹಾಕಿದ್ದರು. ಆದರೆ ಇದ್ಯಾವುದಕ್ಕೂ ನಾನು ಬಗ್ಗುವುದಿಲ್ಲ. ನನ್ನ ತಾಲೂಕಿನ ಜನರ ಹಿತ ಮುಖ್ಯ, ರಾಜಕೀಯದಿಂದ ಅವರನ್ನು ಬಲಿಕೊಡುವುದಿಲ್ಲ. ಡಿ.ಕೆ.ಶಿವಕುಮಾರ್ ಜಲಸಂಪನ್ಮೂಲ ಸಚಿವರಾದ ವೇಳೆ ಹೇಮಾವತಿಯಿಂದ ಒಂದು ಟಿಎಂಸಿ ನೀರನ್ನು ಮಾರ್ಕೋನಹಳ್ಳಿ ಜಲಾಶಯಕ್ಕೆ ನಿಗದಿಪಡಿಸಿ ಆದೇಶ ಮಾಡಿಸಿದರು. ಆದರೆ, ಅದನ್ನು ಈಗಿನ ಸರ್ಕಾರ ತಡೆ ಹಿಡಿದಿದೆ, ಕೂಡಲೇ ಇದರ ಬಗ್ಗೆ ಸರ್ಕಾರ ಕ್ರಮಕೈಗೊಳ್ಳಬೇಕೆಂದು ಒತ್ತಡ ತರಲಾಗಿದೆ, ವಾರದ ಒಳಗೆ ಈ ಸಂಬಂಧ ಸರ್ಕಾರ ಕ್ರಮಕೈಗೊಳ್ಳುವ ಸಾಧ್ಯತೆ ಇದೆ. ಇದು ತೀರ್ಮಾನವಾದ ಬಳಿಕ ನಾಗಮಂಗಲಕ್ಕೆ ನೀರು ಹರಿಸುವ ಬಗ್ಗೆ ರೈತರೊಂದಿಗೆ ಚರ್ಚೆಸಿ ಕ್ರಮಕೈಗೊಳ್ಳಲಾಗುವುದೆಂದು ಶಾಸಕ ಡಾ.ರಂಗನಾಥ್ ತಿಳಿಸಿದರು.

    ಭತ್ತ ಬೆಳೆಯಲು ನೀರಿನ ಪ್ರಮಾಣ ಕಡಿಮೆ ಇದೆ : ಮಾರ್ಕೋನಹಳ್ಳಿ ಜಲಾಶಯದ ನೀರಿನ ಮಟ್ಟ 88.50 ಅಡಿ, ಪ್ರಸ್ತುತ 85.60 ಅಡಿ ನೀರಿದೆ, ಎಕ್ಟೇರ್ ಭತ್ತದ ಬೆಳೆಗೆ 3471.55 ಎಂಸಿಎಫ್‌ಟಿ ನೀರು, 196 ಎಕ್ಟೇರ್ ಕಬ್ಬು ಬೆಳೆಗೆ 124.41 ಎಂಸಿಎಫ್‌ಟಿ ನೀರು, 37 ಎಕ್ಟೇರ್ ಪ್ರದೇಶದ ತೋಟಕ್ಕೆ 13.70 ಎಂಸಿಎಫ್‌ಟಿ ನೀರು, ರಾಗಿ 180 ಎಕ್ಟೇರ್ ಪ್ರದೇಶಕ್ಕೆ 41.79 ಎಂಸಿಎಫ್‌ಟಿ ನೀರು ಹಾಗೂ 60 ಹೆಕ್ಟೇರ್ ಪ್ರದೇಶದಲ್ಲಿ ಇತರ ಧಾನ್ಯ ಬೆಳೆಯಲು 13.93 ಎಂಸಿಎಫ್‌ಟಿ ನೀರು ಅಗತ್ಯವಾಗಿದ್ದು, ಒಟ್ಟು 5942 ಎಕ್ಟೇರ್ ಪ್ರದೇಶದ ಜಮೀನಿಗೆ 3665.38 ಎಂಸಿಎಫ್‌ಟಿ ನೀರು ಅಗತ್ಯವಿದೆ ಭತ್ತ ಬೆಳೆಯಲು ನೀರಿನ ಪ್ರಮಾಣ ಕಡಿಮೆ ಇದೆ ಎಂದು ಎಡಿಯೂರು ಹೇಮಾವತಿ ನಾಲಾ ವಲಯದ ಪ್ರಭಾರ ಇಇ ಜಯರಾಮ್ ಹೇಳಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts