More

    ಬಂಗಾರಪ್ಪ ಮೇಲೆ ಕುವೆಂಪು ಪ್ರಭಾವ ಅಪಾರ

    ಶಿವಮೊಗ್ಗ: ಕುವೆಂಪು ಅವರ ಸಾಹಿತ್ಯ ಹಾಗೂ ವಿಚಾರಧಾರೆಗಳಿಂದ ನನ್ನ ತಂದೆ ಎಸ್.ಬಂಗಾರಪ್ಪ ಅತ್ಯಂತ ಪ್ರಭಾವಿತರಾಗಿದ್ದರು. ಅವರು ಗೌರವಿಸುವ ಕೆಲವೇ ಸಾಹಿತಿಗಳ ಪೈಕಿ ಕುವೆಂಪು ಅಗ್ರಗಣ್ಯರಾಗಿದ್ದರು. ತಮ್ಮ ನಿಷ್ಠುರ ಸ್ವಭಾವದ ಕಾರಣಕ್ಕೆ ಇವರಿಬ್ಬರೂ ಅನೇಕ ಅವಕಾಶಗಳಿಂದ ವಂಚಿತರಾದರು ಎಂದು ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಹೇಳಿದರು.

    ಕುಪ್ಪಳಿಯ ಹೇಮಾಂಗಣದಲ್ಲಿ ಶುಕ್ರವಾರ ಏರ್ಪಡಿಸಿದ್ದ ವಿಶ್ವಮಾನವ ದಿನಾಚರಣೆಯಲ್ಲಿ ಕುವೆಂಪು ರಾಷ್ಟ್ರೀಯ ಪುರಸ್ಕಾರ ಪ್ರದಾನ ಮಾಡಿ ಮಾತನಾಡಿ, ನಿಷ್ಠುರ ಸ್ವಭಾವದ ಪರಿಣಾಮ ಕುವೆಂಪು ಅನೇಕ ಅವಕಾಶಗಳನ್ನು ಕಳೆದುಕೊಂಡರು. ನನ್ನ ತಂದೆ ಬಂಗಾರಪ್ಪ ಅವರೂ ರಾಜಕೀಯದಲ್ಲಿ ಅವಕಾಶ ವಂಚಿತರಾಗಲು ಅವರ ನಿಷ್ಠುರ ಗುಣವೇ ಕಾರಣವಾಯಿತು ಎಂದರು.
    ಬಂಗಾರಪ್ಪ ಸಿಎಂ ಆಗಿದ್ದ ಸಂದರ್ಭದಲ್ಲಿ ವರನಟ ಡಾ. ರಾಜ್‌ಕುಮಾರ್ ಹಾಗೂ ರಾಷ್ಟ್ರಕವಿ ಕುವೆಂಪು ಅವರಿಗೆ ಕರ್ನಾಟಕ ರತ್ನ ಪುರಸ್ಕಾರ ಘೋಷಣೆ ಮಾಡಿದ್ದರು. ವಿಧಾನಸೌಧದ ಎದುರು ಭವ್ಯ ಸಮಾರಂಭ ಏರ್ಪಡಿಸಿ ಡಾ.ರಾಜ್ ಅವರಿಗೆ ಪುರಸ್ಕಾರ ಪ್ರದಾನ ಮಾಡಲಾಯಿತು. ವಯೋಸಹಜ ಸಮಸ್ಯೆಯಿಂದ ಕುವೆಂಪು ಆ ಸಮಾರಂಭದಲ್ಲಿ ಭಾಗವಹಿಸಲಿಲ್ಲ. ಹೀಗಾಗಿ ಸ್ವತಃ ಬಂಗಾರಪ್ಪ ಅವರೇ ಮೈಸೂರಿನ ಕುವೆಂಪು ನಿವಾಸಕ್ಕೆ ತೆರಳಿ ಪುರಸ್ಕಾರ ಪ್ರದಾನ ಮಾಡಿದ್ದರು ಎಂದು ನೆನಪಿಸಿಕೊಂಡರು.
    ಇಳಿವಯಸ್ಸಿನಲ್ಲಿದ್ದ ಕುವೆಂಪು ಅವರಿಗೆ ಕುಪ್ಪಳಿಯ ಪರಿಸರದಲ್ಲಿ ಸ್ವಲ್ಪ ಸಮಯ ಕಳೆಯಬೇಕೆಂಬ ಬಯಕೆಯಿತ್ತು. ಆದರೆ ಆರೋಗ್ಯ ಸ್ಪಂದಿಸುತ್ತಿರಲಿಲ್ಲ. ಈ ವಿಷಯ ಬಂಗಾರಪ್ಪ ಅವರಿಗೆ ತಿಳಿದ ಬಳಿಕ ಹೆಲಿಕಾಪ್ಟರ್ ವ್ಯವಸ್ಥೆ ಕಲ್ಪಿಸಿ ಮೈಸೂರಿನಿಂದ ಕುಪ್ಪಳಿಗೆ ಬರುವಂತೆ ಮಾಡಿದ್ದರು. ಇದು ಕುವೆಂಪು ಅವರ ಬಗ್ಗೆ ನನ್ನ ತಂದೆಗೆ ಇದ್ದ ಗೌರವಕ್ಕೆ ನಿದರ್ಶನವಾಗಿದೆ ಎಂದರು.
    ಕುವೆಂಪು ಅವರ ಜನ್ಮದಿನೋತ್ಸವದಲ್ಲಿ ಲಕ್ಷಾಂತರ ಜನರು ಭಾಗವಹಿಸದಿದ್ದರೂ ಪರವಾಗಿಲ್ಲ. ಎಲ್ಲ ಸರ್ಕಾರಿ ಕಾರ್ಯಕ್ರಮಗಳ ಆರಂಭದಲ್ಲೂ ಕುವೆಂಪು ರಚನೆಯ ನಾಡಗೀತೆ ಹೇಳುವ ಸಂದರ್ಭದಲ್ಲಿ ಎಲ್ಲರೂ ಎದ್ದು ನಿಂತು ಗೌರವ ಸೂಚಿಸುತ್ತಾರೆ. ಬೇರೆ ಯಾವ ಸಾಹಿತ್ಯ ರಚನೆಗೂ ಈ ಗೌರವ ಸಿಗುವುದಿಲ್ಲ ಎಂದು ಹೇಳಿದರು.
    ಬಂಗಾಳಿ ಸಾಹಿತಿ ಶೀರ್ಷೇಂಧು ಮುಖ್ಯೋಪಾಧ್ಯಾಯ ಅವರಿಗೆ ಈ ಸಾಲಿನ ಕುವೆಂಪು ರಾಷ್ಟ್ರೀಯ ಪುರಸ್ಕಾರ ಪ್ರದಾನ ಮಾಡಲಾಯಿತು. ಶಾಸಕ ಆರಗ ಜ್ಞಾನೇಂದ್ರ ಅಧ್ಯಕ್ಷತೆ ವಹಿಸಿದ್ದರು. ಕುವೆಂಪು ಪ್ರತಿಷ್ಠಾನದ ಅಧ್ಯಕ್ಷ ಬಿ.ಎಲ್.ಶಂಕರ್, ಸಮಕಾರ್ಯದರ್ಶಿ ಕಡಿದಾಳು ಪ್ರಕಾಶ್, ಬೆಂಗಳೂರು ನೆಫ್ರೋ ಯೂರೋಲಜಿ ಸಂಸ್ಥೆ ಸ್ಥಾಪಕ ನಿರ್ದೇಶಕ ಡಾ. ಜಿ.ಕೆ.ವೆಂಕಟೇಶ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕಿ ಡಾ. ಧರಣಿದೇವಿ ಮಾಲಗತ್ತಿ, ಜಿಪಂ ಸಿಇಒ ಸ್ನೇಹಲ್ ಲೋಖಂಡೆ, ದೇವಂಗಿ ಗ್ರಾಪಂ ಅಧ್ಯಕ್ಷೆ ಗಿರಿಜಾ ಕುಮಾರ್, ಸದಸ್ಯೆ ಎಚ್.ಸಿ.ಸರೋಜಾ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts