More

    ಕುವಂಪು ಎಂದಿಗೂ ದೇವರನ್ನು ನಿರಾಕರಿಸಲಿಲ್ಲ

    ಕೊಪ್ಪ: ಧರ್ಮ, ದೇವರ ಹೆಸರಿನಲ್ಲಿ ಸಮಾಜದಲ್ಲಿ ನಡೆಯುತ್ತಿದ್ದ ಮೌಢ್ಯವನ್ನು ಕುವೆಂಪು ವಿರೋಧಿಸಿದ್ದರು. ಆದರೆ, ದೇವರನ್ನು ನಿರಾಕರಿಸಲಿಲ್ಲ ಎಂಬ ಸತ್ಯವನ್ನು ನಾವು ಸ್ವೀಕರಿಸಬೇಕು ಎಂದು ಮೂಡುಬಿದಿರೆ ಜೈನ ಪದವಿ ಪೂರ್ವ ಕಾಲೇಜು ನಿವೃತ್ತ ಪ್ರಾಚಾರ್ಯ ಮುನಿರಾಜ ರಂಜಾಳ ಹೇಳಿದರು.
    ಹಿರೇಕೊಡಿಗೆಯ ಸಂದೇಶ ಭವನದಲ್ಲಿ ತಾಲೂಕು ಆಡಳಿತ ಆಯೋಜಿಸಿದ್ದ ವಿಶ್ವ ಮಾನವ ದಿನಾಚರಣೆ ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸ ನೀಡಿ, ಕುವೆಂಪು ಮಾನವ ಧರ್ಮದ ಸಿದ್ದಾಂತ ಪ್ರತಿಪಾದಿಸಿದರು. ಕುವೆಂಪು ತಾವು ಹೇಳುವುದನ್ನು ಪಾಲಿಸುತ್ತಿದ್ದರು. ಸರಳ ಜೀವನ ನಡೆಸುತ್ತಿದ್ದ ಅವರು ಮಂತ್ರಮಾಂಗಲ್ಯ ಎಂಬ ಅದ್ಭುತ ಕ್ರಾಂತಿಗೆ ನಾಂದಿ ಹಾಡಿದರು. ಸರಳ ವಿವಾಹದ ಭಾಗವಾಗಿ ಮಂತ್ರ ಮಾಂಗಲ್ಯವನ್ನು ತಮ್ಮ ಪುತ್ರ ಪೂರ್ಣಚಂದ್ರ ತೇಜಸ್ವಿ ಅವರ ಮೂಲಕ ಅನುಷ್ಠಾನಕ್ಕೆ ತಂದರು ಎಂದು ತಿಳಿಸಿದರು.
    ನಾವು ಯಾರನ್ನು ಪೂಜಿಸುತ್ತೀರೋ ಅವರಂತೆಯೇ ಆಗುತ್ತೇವೆ ಎಂಬುದನ್ನು ಕುವೆಂಪು ತಿಳಿಸಿದ್ದರು. ನಾವು ಯಾರನ್ನು ಆಧರಿಸುತ್ತೇವೆ, ಆರಾಧಿಸುತ್ತೇವೆ ಅವರ ಪ್ರಭಾವ ನಾವು ಪಡೆಯುತ್ತೇವೆ. ಸಾತ್ವಿಕ ಗುಣವನ್ನು ನಾವು ಅನುಸರಿಸಬೇಕು, ಆರಾಧಿಸಬೇಕು. ಕುವೆಂಪು ಮೇಲಿನ ಅಭಿಮಾನವೆಂದರೆ ಈ ನೆಲದ ಮೇಲಿನ ಅಭಿಮಾನ ಎಂದರು.
    ಶಾಸಕ ಟಿ.ಡಿ.ರಾಜೇಗೌಡ ಮಾತನಾಡಿ, ಕುವೆಂಪು 20ನೇ ಶತಮಾನದ ಅಗ್ರಮಾನ್ಯ ಕವಿ, ಕಾದಂಬರಿಕಾರ, ನಾಟಕಕಾರ, ವಿಮರ್ಶಕ ಹಾಗೂ ಚಿಂತಕರಾಗಿದ್ದರು. ನಮ್ಮ ಮಲೆನಾಡಿನ ಆಚಾರ, ವಿಚಾರ, ಉಡುಗೆ ತೊಡುಗೆ, ಆಹಾರ ಪದ್ಧತಿ, ಸಂಸ್ಕೃತಿಯನ್ನು ಕಾದಂಬರಿಗಳ ಮೂಲಕ ದಾಖಲಸಿದ್ದಾರೆ ಎಂದು ತಿಳಿಸಿದರು.
    ನಾಡು ನಾಡು, ನುಡಿ, ಪ್ರೇಮ, ಪ್ರಕೃತಿ ಕುವೆಂಪು ಅವರ ಕಾವ್ಯಗಳ ವಿಚಾರಗಳಾಗಿದ್ದವು. 1955ರಲ್ಲಿ ಕೇಂದ್ರ ಸಾಹಿತ್ಯ ಅಕಾಡೆಮಿ ಮತ್ತು 1968ರಲ್ಲಿ ಜ್ಞಾನಪೀಠ ಪ್ರಶಸ್ತಿಯನ್ನು ಕನ್ನಡಕ್ಕೆ ತಂದುಕೊಟ್ಟ ಮಹಾನ್ ಕವಿ ಕುವೆಂಪು. ಸಾಮಾಜಿಕ ಕಳಕಳಿಯಿಂದ ಕುವೆಂಪು ಮಂತ್ರಮಾಂಗಲ್ಯ ಎಂಬ ಸರಳವಿವಾಹ ಪದ್ಧತಿ ರೂಢಿಗೆ ತಂದರು. ಕುವೆಂಪು ಹುಟ್ಟಿದ ದಿನವನ್ನು ವಿಶ್ವಮಾನವ ದಿನಾಚರಣೆಯನ್ನಾಗಿ ಆಚರಿಸಲು ಧರ್ಮಸಿಂಗ್ ನೇತೃತ್ವದ ಸರ್ಕಾರ 2005 ಡಿಸೆಂಬರ್‌ನಲ್ಲಿ ಘೋಷಣೆ ಮಾಡಿತು ಎಂದು ತಿಳಿಸಿದರು.
    ವೇದಿಕೆ ಕಾರ್ಯಕ್ರಮಕ್ಕೂ ಮುನ್ನ ಕುವೆಂಪು ಪುತ್ಥಳಿಗೆ ಶಾಸಕ ಟಿ.ಡಿ.ರಾಜೇಗೌಡ ಮಾಲಾರ್ಪಣೆ ಮಾಡಿದರು. ಸೂರ್ಯದೇವಸ್ಥಾನ ಶಾಲಾ ಮಕ್ಕಳು ಕುವೆಂಪು ರಚಿಸಿದ ಗೀತೆಗಳನ್ನು ಹಾಡಿದರು. ತಹಸೀಲ್ದಾರ್ ಮಂಜುಳಾ ಬಿ.ಹೆಗಡಾಳ, ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಘಟಕದ ಅಧ್ಯಕ್ಷೆ ಎಸ್.ಎನ್.ಚಂದ್ರಕಲಾ, ಕೆಡಿಪಿ ಸದಸ್ಯರಾದ ರಾಜಶಂಕರ್, ಬಿ.ಪಿ.ಚಿಂತನ್, ಪಿಕಾರ್ಡ್ ಬ್ಯಾಂಕ್ ಅಧ್ಯಕ್ಷ ಎಚ್.ಎಸ್.ಇನೇಶ್, ಹಿರೇಕೊಡಿಗೆ ಗ್ರಾಪಂ ಅಧ್ಯಕ್ಷೆ ಜಯಲಕ್ಷ್ಮಿ, ಉಪಾಧ್ಯಕ್ಷೆ ಮಂಗಳಾ, ಸದಸ್ಯರಾದ ಬಿ.ಜಿ.ರವೀಂದ್ರ, ಬಿ.ಎಸ್.ತ್ರಿಪುರೇಂದ್ರ, ರಾಜೀವಿ, ಕೃಷ್ಣಪ್ಪ ಸಂಜೋಗ, ರೇಖಾ, ರಾಘವೇಂದ್ರ ಭಟ್ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts