More

    ಕಲ್ಪತರು ನಾಡಲ್ಲಿ ಎಚ್ಡಿಕೆ- ಬಿವೈವಿ ಜುಗಲ್‌ಬಂಧಿ

    ತುಮಕೂರು: ಬಿಜೆಪಿ-ಜೆಡಿಎಸ್ ಸಮನ್ವಯತೆ ಹಿನ್ನೆಲೆಯಲ್ಲಿ ಲೋಕ ಸಮರದಲ್ಲಿ ಒಕ್ಕಲಿಗ-ಲಿಂಗಾಯತ ಮತ ಬ್ಯಾಂಕ್ ಇನ್ನಷ್ಟು ಗಟ್ಟಿಗೊಳಿಸಲು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಶನಿವಾರ ಅಖಾಡಕ್ಕೆ ಧುಮುಕಿದರು. ಬಿಜೆಪಿ-ಜೆಡಿಎಸ್ ಭದ್ರ ನೆಲೆಯ ಕ್ಷೇತ್ರಗಳಾದ ತಿಪಟೂರು, ತುರುವೇಕೆರೆ, ಚಿಕ್ಕನಾಯಕನಹಳ್ಳಿ, ಗುಬ್ಬಿ ಹಾಗೂ ತುಮಕೂರು ಗ್ರಾಮಾಂತರ ಕ್ಷೇತ್ರಗಳಲ್ಲಿ ಇಡೀ ದಿನ ಎಚ್ಡಿಕೆ-ಬಿವೈವೈ ಒಗ್ಗೂಡಿ ರೋಡ್ ಶೋ, ಬಹಿರಂಗ ಸಭೆ ನಡೆಸಿದರಲ್ಲದೆ, ಭಾಷಣದುದ್ದಕ್ಕೂ ಉಭಯ ನಾಯಕರು ರಾಜ್ಯ ಕಾಂಗ್ರೆಸ್ ಸರ್ಕಾರವನ್ನು ‘ಟಾರ್ಗೆಟ್’ ಮಾಡಿ ವಾಗ್ಧಾಳಿ ನಡೆಸಿದರು.

    ಎನ್‌ಡಿಎ ಅಭ್ಯರ್ಥಿ ವಿ.ಸೋಮಣ್ಣ ಪರ ತಿಪಟೂರು ತಾಲೂಕು ನೊಣವಿನಕೆರೆಯಲ್ಲಿ ಆರಂಭವಾದ ದೋಸ್ತಿಗಳ ರೋಡ್ ಶೋ ತುರುವೇಕೆರೆ ಮೂಲಕ ಚಿಕ್ಕನಾಯಕಹಳ್ಳಿ ಹಾಗೂ ಗುಬ್ಬಿ ಬಹಿರಂಗ ಸಭೆಯೊಂದಿಗೆ ತುಮಕೂರು ಗ್ರಾಮಾಂತರ ಕ್ಷೇತ್ರದ ಹೆಬ್ಬೂರಿನಲ್ಲಿ ಸಂಪನ್ನಗೊಂಡಿತು. ಈ ದಟ್ಟ ದರಿದ್ರ ಕಾಂಗ್ರೆಸ್ ಸರ್ಕಾರ ಬರಗಾಲ ಆವರಿಸಿ ರೈತರು ಆತ್ಮಹತ್ಯೆ ಮಾಡಿಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗಿದೆ. ಕಳೆದ 7 ತಿಂಗಳಿನಿಂದ ಹಾಲಿನ ಪ್ರೋತ್ಸಾಹಧನ ನೀಡಿಲ್ಲ. ಇನ್ನಾರು ತಿಂಗಳೊಳಗೆ ನಿಮ್ಮ ಬದುಕನ್ನು ಬದಲಿಸುವ ಸರ್ಕಾರ ನಿಮ್ಮಿಂದಲೇ ರಚನೆ ಆಗಲಿದೆ ಎನ್ನುವ ಮೂಲಕ ತುರುವೇಕೆರೆಯಲ್ಲಿ ರಾಜ್ಯ ಸರ್ಕಾರ ಪತನಗೊಳ್ಳಲಿದೆ ಎಂದು ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಭವಿಷ್ಯ ನುಡಿದರು.

    ಕಾಂಗ್ರೆಸ್ ಸರ್ಕಾರ ಬಂದ ಮೇಲೆ ರಾಜ್ಯಕ್ಕೆ ಶಾಪ ತಟ್ಟಿದೆ. ಬರಗಾಲ ವಕ್ಕರಿಸಿದೆ. ನಾಡಿನ ರೈತರಿಗೆ ಬರ ಪರಿಹಾರ ಕೊಡದ ರಾಜ್ಯ ಸರ್ಕಾರಕ್ಕೆ ಧಿಕ್ಕಾರ. ಈ ಸರ್ಕಾರ ಬಂದ ಮೇಲೆ ಅಭಿವೃದ್ಧಿ ಕೆಲಸಗಳು ಮರೀಚಿಕೆಯಾಗಿವೆ. ಇಡೀ ದೇಶದಲ್ಲಿ ಇಷ್ಟೊಂದು ಕಡಿಮೆ ಅವಧಿಯಲ್ಲಿ ಜನಪ್ರಿಯತೆ ಕಳೆದುಕೊಂಡಿರುವ ಸರ್ಕಾರ ಮತ್ತೊಂದಿಲ್ಲ. ಜಾತಿ ಜಾತಿ ನಡುವೆ ವಿಷಬೀಜ ಬಿತ್ತುವ ಮುಖ್ಯಮಂತ್ರಿ, ಗ್ಯಾರೆಂಟಿ ಗ್ಯಾರೆಂಟಿ ಅಂತಾ ಹೇಳಿಕೊಂಡು ಜನರ ನೆಮ್ಮದಿಯ ಬದುಕಿಗೆ ಕೊಳ್ಳಿ ಇಟ್ಟಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ವಾಗ್ಧಾಳಿ ನಡೆಸಿದರು.

    ರೋಡ್‌ಶೋನಲ್ಲಿ ಜನಸಾಗರ: ತಿಪಟೂರು ನೊಣವಿನೆಕೆರೆ, ತುರುವೇಕೆರೆಯಲ್ಲಿ ಬಿಜೆಪಿ-ಜೆಡಿಎಸ್ ರೋಡ್ ಶೋನಲ್ಲಿ ಜನಸಾಗರ ಕಂಡುಬಂತು. ಚುನಾವಣಾ ರಥದಲ್ಲು ಉಭಯ ಪಕ್ಷಗಳ ನಾಯಕರು ಹಾಜರಿರುವಂತೆ ನೋಡಿಕೊಂಡು ಸಮನ್ವಯತೆ ಸಾಧಿಸಲಾಯಿತು. ಬಿಜೆಪಿ-ಜೆಡಿಎಸ್ ಬಾವುಟಗಳು ರಾರಾಜಿಸಿದವು. ನೊಣವಿನಕೆರೆಯಲ್ಲಿ ಬಿಜೆಪಿ-ಜೆಡಿಎಸ್ ಕಾರ್ಯಕರ್ತರ ನಡುವೆ ರೋಡ್ ಶೋ ನೇತೃತ್ವವಹಿಸಿಕೊಳ್ಳುವ ವಿಚಾರದಲ್ಲಿ ಗಲಾಟೆಯು ನಡೆಯಿತು. ಕೊನೆಗೆ ಪೊಲೀಸರು ಬೆತ್ತದ ರುಚಿ ತೋರಿಸಿ ಕಾರ್ಯಕರ್ತರನ್ನು ತಣ್ಣಗಾಗಿಸಿದರು.

    ಇನ್ನೂ ಚಿಕ್ಕನಾಯಕನಹಳ್ಳಿ ಸಭೆಯಲ್ಲಿ ಬಿಜೆಪಿ ಮಾಜಿ ಸಚಿವ ಜೆ.ಸಿ.ಮಾಧುಸ್ವಾಮಿ ಗೈರು ಎದ್ದುಕಾಣುತ್ತಿದ್ದರೂ ಅವರ ಆಪ್ತರಾದ ಬಿಜೆಪಿ ಮಂಡಲ ಅಧ್ಯಕ್ಷ ಕೇಶವಮೂರ್ತಿ, ಕಾರ್ಯದರ್ಶಿ ನಿರಂಜನ್ ಹಾಜರಿದ್ದದ್ದು ಗಮನಸೆಳೆಯಿತು. ಶಾಸಕ ಸಿ.ಬಿ.ಸುರೇಶ್‌ಬಾಬು ಸಾಥ್ ನೀಡಿದರು.

    ಗುಬ್ಬಿಯಲ್ಲಿ ಬಿಜೆಪಿ-ಜೆಡಿಎಸ್ ರಾಜ್ಯ ನಾಯಕರ ಆಗಮನವು ಸಂಚಲನ ಸೃಷ್ಟಿಸಿತು. ಸಹಸ್ರಾರು ಸಂಖ್ಯೆಯಲ್ಲಿ ಸೇರಿದ್ದ ಜನಸ್ತೋಮ ಕಂಡು ಉಭಯ ನಾಯಕರು ಅಬ್ಬರಿಸಿದರು. ಬಿಜೆಪಿಯ ಎಸ್.ಡಿ.ದಿಲೀಪ್ ಕುಮಾರ್, ಜೆಡಿಎಸ್ ಬಿ.ಎಸ್.ನಾಗರಾಜು ನೇತೃತ್ವದಲ್ಲಿ ಸಮಾವೇಶ ನಿರೀಕ್ಷೆಗು ಮೀರಿ ಯಶಕಂಡಿತು.

    ಜೆಡಿಎಸ್ ಉಳಿಯಲ್ಲ ಬಾಗಿಲೇ ಮುಚ್ಚಿಬಿಡ್ತಾರೆ ಅಂತಾ ಲಘುವಾಗಿ ಮಾತನಾಡಿದ್ದರು. ಈ ಹಿಂದೆ ನಾವು ಬಿಎಸ್ವೈ ಸರ್ಕಾರ ರಚಿಸಿದ್ದಾಗ, ಇನ್ನು 20 ತಿಂಗಳ ಮುಂದುವರೆದಿದ್ದರೆ ಅವತ್ತೆ ಕಾಂಗ್ರೆಸ್ ಬಾಗಿಲು ಮುಚ್ಚಬೇಕಿತ್ತು. ಆಗ ನಾನು ಸಿಎಂ ಸ್ಥಾನ ಬಿಟ್ಟುಕೊಡದಿದ್ದಕ್ಕೆ ಒಂದು ರೀತಿ ವನವಾಸ ಅನುಭವಿಸಿದ್ದೇನೆ. ಆ ನಂತರ ಬಿಜೆಪಿಯ ಬಿ ಟೀಂ ಅನ್ನುವ ಅಪಪ್ರಚಾರದ ಮೂಲಕ ಜೆಡಿಎಸ್ ಮುಗಿಸುವ ಪ್ರಯತ್ನ ನಡೆಸಿದ್ದರು. ಇನ್ನೂ 10, 20 ವರ್ಷ ಇರುತ್ತೀವಿ ಅನ್ನುವ ಭ್ರಮೆಯಲ್ಲಿದ್ದಾಗ ಜನರು 79 ಸ್ಥಾನಕ್ಕೆ ಇಳಿಸಿದರು.
    ಎಚ್.ಡಿ.ಕುಮಾರಸ್ವಾಮಿ
    ಮಾಜಿ ಸಿಎಂ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts