More

    ಕುಕ್ಕೆ ಕ್ಷೇತ್ರದಲ್ಲಿ ಮೂಲ ಮೃತ್ತಿಕಾ ಪ್ರಸಾದ ವಿತರಣೆ

    ಸುಬ್ರಹ್ಮಣ್ಯ: ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ವಾರ್ಷಿಕ ಜಾತ್ರೆ ಚಂಪಾ ಷಷ್ಠಿ ಮಹೋತ್ಸವ ಅಂಗವಾಗಿ ಏಕಾದಶಿ ದಿನವಾದ ಶುಕ್ರವಾರ ದೇವಸ್ಥಾನದ ಗರ್ಭಗುಡಿಯಿಂದ ಪ್ರಧಾನ ಅರ್ಚಕ ಸೀತಾರಾಮ ಎಡಪಡಿತ್ತಾಯ ಮೂಲ ಮೃತ್ತಿಕೆಯನ್ನು ವೈದಿಕ ವಿಧಾನಗಳನ್ನು ನೆರವೇರಿಸಿ ತೆಗೆದರು.

    ಮೊದಲಿಗೆ ಅರ್ಚಕ ರಾಜೇಶ್ ನಡ್ಯಂತಿಲ್ಲಾಯ ಹಾಗೂ ಸತ್ಯನಾರಾಯಣ ನೂರಿತ್ತಾಯರಿಗೆ ಪ್ರಸಾದ ವಿತರಿಸಲಾಯಿತು. ಬಳಿಕ ಪುರೋಹಿತರಿಗೆ, ಅಭಿವೃದ್ಧಿ ಸಮಿತಿ ಅಧ್ಯಕ್ಷರಿಗೆ, ಸದಸ್ಯರಿಗೆ, ಅಧಿಕಾರಿಗಳಿಗೆ ಮತ್ತು ಸಿಬ್ಬಂದಿಗೆ ಪ್ರಸಾದ ನೀಡಿ ಭಕ್ತರಿಗೆ ವಿತರಿಸಲಾಯಿತು.
    ಮೃತ್ತಿಕಾ ಪ್ರಸಾದ ಮೂಲಸ್ಥಾನ ಕುಕ್ಕೆ ಸುಬ್ರಹ್ಮಣ್ಯ ದೇವಳದ ಗರ್ಭಗುಡಿಯಿಂದ ತೆಗೆಯುವ ಪವಿತ್ರ ಮಹಾಪ್ರಸಾದ. ವರ್ಷದಲ್ಲಿ ಒಂದೇ ಬಾರಿ ಇದನ್ನು ತೆಗೆಯುತ್ತಾರೆ. ಸಹಸ್ರಾರು ಭಕ್ತರು ಬೆಳಗ್ಗೆ 10ರಿಂದಲೇ ಮೃತ್ತಿಕಾ ಪ್ರಸಾದ ಪಡೆಯಲು ಸಾಲಿನಲ್ಲಿ ನಿಂತಿದ್ದರು. ಭಕ್ತರಿಗೆ ಮಧ್ಯಾಹ್ನ 2 ಗಂಟೆ ನಂತರ ಶ್ರೀ ದೇವರ ದರ್ಶನಕ್ಕೆ ಅವಕಾಶ ನೀಡಲಾಯಿತು.

    ದೇವಳ ಅಭಿವದ್ಧಿ ಸಮಿತಿ ಅಧ್ಯಕ್ಷ ಶಾಸಕ ಎಸ್.ಅಂಗಾರ, ಕಾರ್ಯನಿರ್ವಹಣಾಧಿಕಾರಿ ರವೀಂದ್ರ ಎಂ.ಎಚ್, ಸಹಾಯಕ ಕಾರ್ಯನಿರ್ವಹಣಾಧಿಕಾರಿ ಪುಷ್ಪಲತಾ, ಅಭಿವೃದ್ಧಿ ಸಮಿತಿ ಸದಸ್ಯರಾದ ಮೋಹನರಾಮ್ ಸುಳ್ಳಿ, ಪಿ.ಜಿ.ಎಸ್.ಎನ್.ಪ್ರಸಾದ್, ಮನೋಹರ ರೈ, ಪ್ರಸನ್ನ ದರ್ಬೆ, ವನಜಾ ವಿ.ಭಟ್, ಕಚೇರಿ ಅಧೀಕ್ಷಕ ಬಾಲಸುಬ್ರಹ್ಮಣ್ಯ ಭಟ್, ಅಭಿಯಂತ ಉದಯ ಕುಮಾರ್, ಕ್ಷೇತ್ರದ ಭಕ್ತರು ಉಪಸ್ಥಿತರಿದ್ದರು.

    ಷಷ್ಠಿ ರಥೋತ್ಸವ ಬಳಿಕ ಮೂಲ ಮೃತ್ತಿಕೆ
    ಮೂಲ ಮೃತ್ತಿಕೆ ತೆಗೆದು ಭಕ್ತರಿಗೆ ವಿತರಿಸಿ ಮೇಲೆದ್ದ ಬಳಿಕ ಮತ್ತೆ ದೇವಳದಲ್ಲಿ ಮೂಲ ಮೃತ್ತಿಕಾ ಪ್ರಸಾದ ವಿತರಣೆಯಾಗುವುದಿಲ್ಲ. ಇನ್ನು ಡಿ.20ರಂದು ಚಂಪಾ ಷಷ್ಠಿ ಮಹಾರಥೋತ್ಸವ ಬಳಿಕ ಮೂಲ ಮೃತ್ತಿಕೆಯನ್ನು ಮತ್ತೆ ದೇವಳದಲ್ಲಿ ಭಕ್ತರಿಗೆ ನೀಡಲು ಆರಂಭಿಸಲಾಗುವುದು. ಹರಕೆ ಸೇವೆಗಳ ಪ್ರಸಾದ ಹಾಗೂ ಮಹಾ ಪ್ರಸಾದದಲ್ಲಿ ಮೂಲ ಮೃತ್ತಿಕೆ ನೀಡಲಾಗುತ್ತಿತ್ತು. ಆದರೆ ಇನ್ನು ಷಷ್ಠಿ ರಥೋತ್ಸವ ನಂತರವೇ ಮೂಲ ಮೃತ್ತಿಕೆಯನ್ನು ಈ ಸೇವೆಗಳ ಪ್ರಸಾದದಲ್ಲಿ ಸೇರಿಸಿ ನೀಡಲಾಗುವುದು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts