ಕುಕನೂರು: ಕಾಂಗ್ರೆಸ್ ಹಣೆಬರಹ ಮುಗಿದಿದ್ದು, ಬಿಜೆಪಿಯಿಂದ ಮಾತ್ರ ಅಭಿವೃದ್ಧಿ ಸಾಧ್ಯ ಎನ್ನುವುದು ಜನರಿಗೆ ತಿಳಿದಿದೆ ಎಂದು ಸಚಿವ ಹಾಲಪ್ಪ ಆಚಾರ ಹೇಳಿದರು.
ಮಂಡಲಗೇರಿ ಗ್ರಾಮದಲ್ಲಿ ರಸ್ತೆ ಕಾಮಗಾರಿಗೆ ಚಾಲನೆ, ಪಶು ಚಿಕಿತ್ಸಾಲಯ ಕಟ್ಟಡ ಉದ್ಘಾಟನೆ ಹಾಗೂ ವಾಲ್ಮೀಕಿ ಭವನ ಶುಕ್ರವಾರ ಉದ್ಘಾಟಿಸಿ ಮಾತನಾಡಿದರು. ನಾನು ರೈತನ ಮಗನಾಗಿದ್ದು, ಅವರ ಕಷ್ಟ ಗೊತ್ತಿದೆ. ಈ ಹಿನ್ನಲೆಯಲ್ಲಿ ತಾಲೂಕಿಗೆ ಕೃಷ್ಣೆಯ ನೀರು ತರಲಾಗುತ್ತಿದೆ. ಸದ್ಯ ಶೇ.95 ಕಾಮಗಾರಿ ಪೂರ್ಣಗೊಂಡಿದ್ದು, ಕೆಲವೇ ದಿನಗಳಲ್ಲಿ ಸಿಎಂ ಬಸವರಾಜ ಬೊಮ್ಮಯಿರಿಂದ ಚಾಲನೆ ಕೊಡಿಸಿ ಕೆರೆಗಳಿಗೆ ಹರಿಸಲಾಗುವುದು. ಹಿಂದೆ ಹೇಳಿದಂತೆ ಮೊದಲು ನೀರಾವರಿ, ಶಿಕ್ಷಣಕ್ಕೆ ಆದ್ಯತೆ ನೀಡಿದ್ದೇನೆ ಎಂದರು.
ಯಾವುದೇ ಕಾಮಗಾರಿಗೆ ಅನುದಾನ ಬಂದ ತಕ್ಷಣ ಆರಂಭಿಸುವಂತೆ ಸೂಚನೆ ನೀಡುತ್ತೇನೆ. ಅದರಂತೆ ಮಂಡಲಗೇರಿ-ಯರೇಹಂಚಿನಾಳ ಗ್ರಾಮದ ರಸ್ತೆ ಸುಧಾರಣೆ ಕಾಮಗಾರಿಗೆ ಚಾಲನೆ ನೀಡಿದ್ದೇನೆ. ನನಗೆ ಕ್ಷೇತ್ರದ ಅಭಿವೃದ್ಧಿಯೇ ಮುಖ್ಯ ಎಂದ ಹಾಲಪ್ಪ, ತಳಕಲ್ ಗ್ರಾಮದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರ ಹಾಗೂ ವಸತಿ ಗೃಹ ಕಟ್ಟಡ ನಿರ್ಮಾಣ ಸೇರಿದಂತೆ ಹಲವು ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದೆ. ಗುತ್ತಿಗೆದಾರರು ಗುಣಮಟ್ಟದ ಕಾಮಗಾರಿ ಕೈಗೊಳ್ಳಬೇಕು ಎಂದು ಸೂಚಿಸಿದರು. ಗ್ರಾಪಂ ಅಧ್ಯಕ್ಷ ಮಹೇಶ ದೊಡ್ಮನಿ, ಪ್ರಮುಖರಾದ ಹಂಚಾಳಪ್ಪ ತಳವಾರ, ಕಳಕಪ್ಪ ಕಂಬಳಿ, ಸಿ.ಎಚ್.ಪೊಲೀಸ್ ಪಾಟೀಲ್, ಬಸನಗೌಡ ತೊಂಡಿಹಾಳ, ನಾಗರಾಜ ವೆಂಕಟಾಪುರ, ಶಿವಣ್ಣ ಮುತ್ತಾಳ, ಶಂಭಣ್ಣ ಜೋಳದ, ವೀರಯ್ಯ ಸ್ವಾಮಿ, ಮಂಗಳೇಶ್ ಮಂಗಳೂರು, ಶಿವಲಿಲಾ ದಳವಾಯಿ, ತಾಪಂ ಇಒ ರಾಮಣ್ಣ ದೊಡ್ಮನಿ, ತಹಸೀಲ್ದಾರ್ ಚಿದಾನಂದ ಗುರುಸ್ವಾಮಿ ಇತರರಿದ್ದರು.