More

    ಲಾಕ್‌ಡೌನ್ ಅವಧಿಯಲ್ಲಿ ಕುಸುರಿ ಕೆಲಸ: ಕುಡುಪು ಪದ್ಮರಾಜ ತಂತ್ರಿ ಕೈಚಳಕದಲ್ಲಿ ಮೂಡಿಬಂದ ಕಲಾಕೃತಿ

    ಧನಂಜಯ ಗುರುಪುರ
    ಲಾಕ್‌ಡೌನ್ ಬಿಡುವಿನ ಕಾಲದಲ್ಲಿ ಕುಡುಪು ಅನಂತಪದ್ಮನಾಭ ದೇವಸ್ಥಾನದ ತಂತ್ರಿ ನರಸಿಂಹ ತಂತ್ರಿ ಅವರ ಪುತ್ರ ಪದ್ಮರಾಜ ತಂತ್ರಿ ಕುಸುರಿ ಕೆಲಸದಲ್ಲಿ ತೊಡಗಿಸಿಕೊಂಡು ವಿವಿಧ ಕಲಾಕೃತಿಗಳನ್ನು ತಯಾರಿಸಿ ಮೆಚ್ಚುಗೆ ಪಡೆದಿದ್ದಾರೆ.

    ಕುಡುಪು ದೇವಸ್ಥಾನದ ನರಸಿಂಹ ತಂತ್ರಿಯವರ ಇಬ್ಬರು ಪುತ್ರರಲ್ಲಿ ಒಬ್ಬರಾದ ಪದ್ಮರಾಜ ತಂತ್ರಿ ತನ್ನ ಮುತ್ತಜ್ಜನಿಂದ ಬಳುವಳಿಯಾಗಿ ಬಂದಿರುವ ಕುಸುರಿ ಕೆಲಸಕ್ಕೆ ಕೈ ಹಾಕಿ ಸೈ ಎನಿಸಿಕೊಂಡಿದ್ದಾರೆ.

    ಕಾಲೇಜು ಶಿಕ್ಷಣದ ಬಳಿಕ ಕೇರಳದಲ್ಲಿ ಆಗಮಶಾಸ್ತ್ರ ಅಧ್ಯಯನ ಮಾಡಿರುವ ಪದ್ಮರಾಜ ತಂತ್ರಿ, ಧಾರ್ಮಿಕ ಕಾರ್ಯಗಳಲ್ಲಿ ಸಕ್ರಿಯರಾಗಿದ್ದಾರೆ. ಇವರ ಮುತ್ತಜ್ಜ ಕೇಶವ ತಂತ್ರಿ ಬಿಡುವಿನ ವೇಳೆ ಗೆರಟೆ ಹಾಗೂ ಮರದ ಕಲಾಕೃತಿ ಮಾಡುತ್ತಿದ್ದರು. ಸುಮಾರು 90 ವರ್ಷಗಳ ಹಿಂದೆ ಅವರು ರಚಿಸಿರುವ ಗಂಧದ ಬಟ್ಟಲು ಈಗಲೂ ನರಸಿಂಹ ತಂತ್ರಿಗಳ ಮನೆಯಲ್ಲಿದೆ. ಬೆಳ್ಳಿ ಹೊದಿಕೆಯ ಈ ಕಲಾಕೃತಿ ಕಳೆದ ವರ್ಷದ ಲಾಕ್‌ಡೌನ್ ವೇಳೆ ಪದ್ಮರಾಜ ತಂತ್ರಿಯವರ ಗಮನ ಸೆಳೆಯಿತು. ಮುತ್ತಜ್ಜನವರು ಗೆರಟೆ, ಮರದಿಂದ ಕಲಾಕೃತಿ ಮಾಡಿ ಆಸಕ್ತರಿಗೆ ಕೊಡುಗೆಯಾಗಿ ನೀಡುತ್ತಿದ್ದರು. ತಂದೆ ನರಸಿಂಹರಿಂದ ಈ ವಿಷಯ ತಿಳಿದುಕೊಂಡ ಇವರು ಗೆರಟೆ ಕಲಾಕೃತಿಗೆ ಮುಂದಾದರು.

    35ರಷ್ಟು ಕಲಾಕೃತಿ ರಚನೆ: ಲಾಕ್‌ಡೌನ್ ವೇಳೆ ಸುಮ್ಮನೆ ಮನೆಯಲ್ಲಿ ಕುಳಿತು ಬೋರ್ ಹೊಡೆಯುತ್ತಿತ್ತು. ಆಗ ನನ್ನ ಮನಸ್ಸಿಗೆ ಮುತ್ತಜ್ಜ ಮಾಡುತ್ತಿದ್ದ ಕುಸುರಿ ಕೆಲಸದ ಬಗ್ಗೆ ಆಸಕ್ತಿ ಹುಟ್ಟಿತು. ಗೆರಟೆಯಿಂದ ಈಗಾಗಲೇ ಸುಮಾರು 35ರಷ್ಟು ಕಲಾಕೃತಿ ಮಾಡಿದ್ದೇನೆ. ಅವುಗಳಲ್ಲಿ ಕೆಲವನ್ನು ಆಸಕ್ತರಿಗೆ ಕೊಡುಗೆಯಾಗಿ ನೀಡಿದ್ದೇನೆ. ಮಾರಾಟಕ್ಕಾಗಿ ಕಲಾಕೃತಿ ಮಾಡುತ್ತಿಲ್ಲ ಎಂದು ಪದ್ಮರಾಜ ತಂತ್ರಿ ಹೇಳಿದ್ದಾರೆ.

    ಅವರು ಶಾಲಾ ದಿನಗಳಲ್ಲಿ ಒಂದೆರಡು ಗೆರಟೆ ಕಲಾಕೃತಿ ಮಾಡಿದ್ದನ್ನು ನೆನಪಿಸಿಕೊಳ್ಳುತ್ತಾರೆ. ವಿದ್ಯಾಭ್ಯಾಸ ಮತ್ತು ಬಿಡುವಿಲ್ಲದ ಕಾರಣ ಅವರಿಗೆ ಈ ಹವ್ಯಾಸ ಮುಂದುವರಿಸಲು ಸಾಧ್ಯವಾಗಿಲ್ಲ. ಇವರು ಮದ್ದಳೆಗಾರರೂ ಆಗಿದ್ದಾರೆ. ಜತೆಗೆ ತೆಂಗಿನ ಗರಿಯಿಂದ ಅತ್ಯಾಕರ್ಷಕ ಬುಟ್ಟಿ, ಟೋಪಿ ಹಾಗೂ ಇತರ ಸೊತ್ತು ತಯಾರಿಸುವಂತಹ ಕೈಚಳಕ ಹೊಂದಿದ್ದಾರೆ. ಪದ್ಮರಾಜ ಅವರು ಗೆರಟೆಯಿಂದ ನೀರಿನ ಕುಂಡಲ, ಬಳೆ, ಸಣ್ಣ ಪಾತ್ರೆ, ಶ್ರೀಗಂಧ ಹಾಕುವ ಪಾತ್ರೆ ಮಾಡಿದ್ದಾರೆ. ಕಲಾಕೃತಿಗಳು ಕುಡುಪು ದೇವಸ್ಥಾನದ ಬಳಿಯ ರಥಬೀದಿ ರಸ್ತೆಯಲ್ಲಿರುವ ತಂತ್ರಿ ನಿವಾಸದಲ್ಲಿವೆ ಎಂದಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts