More

    ಗಣಿತ ಸ್ಪರ್ಧೆ ವಿಜೇತ ವಿದ್ಯಾರ್ಥಿಗಳಿಗೆ ಸಿಗದ ಬಹುಮಾನ..!

    ಕೊಟ್ಟೂರು: ತಾಲೂಕಿನ ಸರ್ಕಾರಿ ಕಿರಿಯ ಮತ್ತು ಹಿರಿಯ ಪ್ರಾಥಮಿಕ ಶಾಲಾ ಮಕ್ಕಳಿಗೆ ಫೆ.14ರಂದು ನಡೆಸಿದ ಗಣಿತ ಕಲಿಕಾ ಆಂದೋಲನ ಸ್ಪರ್ಧಾ ಪರೀಕ್ಷೆಯಲ್ಲಿ ವಿಜೇತರಾದ ನಾಲ್ಕು ಗ್ರಾಪಂಗಳ ವಿದ್ಯಾರ್ಥಿಗಳಿಗೆ ಈವರೆಗೆ ಬಹುಮಾನವೇ ಸಿಕ್ಕಿಲ್ಲ.

    ಗ್ರಾಮೀಣ ವಿದ್ಯಾರ್ಥಿಗಳಿಗೆ ಗಣಿತ ಕಬ್ಬಿಣದ ಕಡಲೆಯಾಗಿದ್ದು, ಕಲಿಕೆ ಸುಲಭಗೊಳಿಸಲು ಗಣಿತ ಕಲಿತಾ ಆಂದೋಲನ ಮೂಲಕ 4,5 ಮತ್ತು 6ನೇ ತರಗತಿ ವಿದ್ಯಾರ್ಥಿಗಳಿಗೆ ಗ್ರಾಪಂ ವ್ಯಾಪ್ತಿಯಲ್ಲಿ ಕಳೆದ ಫೆ.14ರಂದು ಜಿಲ್ಲಾ ಅಕ್ಷರ ಫೌಂಡೇಷನ್, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ, ಶಾಲಾ ಶಿಕ್ಷಣ ಮತ್ತು ಸಾಕ್ಷತಾ ಇಲಾಖೆ ಸಂಯುಕ್ತಾಶ್ರಯದಲ್ಲಿ ಗಣಿತ ಸ್ಪರ್ಧಾ ಪರೀಕ್ಷೆ ನಡೆಸಲಾಗಿತ್ತು. ಇದರಲ್ಲಿ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗೆ ಪ್ರಥಮ ಬಹುಮಾನ 1 ಸಾವಿರ ರೂ, ದ್ವಿತೀಯ ಆರುನೂರು ರೂ, ತೃತೀಯ ಬಹುಮಾನ ನಾಲ್ಕುನೂರು ರೂ. ನೀಡಲು ಆಯಾ ಗ್ರಾಪಂ ಪಿಡಿಒಗಳಿಗೆ ತಾಪಂ ಇಒ ಆದೇಶಿಸಿದ್ದರು.

    ಪರೀಕ್ಷೆಗೆ ಹಾಜರಾದ ವಿದ್ಯಾರ್ಥಿಗಳಿಗೆ ಮಧ್ಯಾಹ್ನದ ಊಟಕ್ಕೆ ಗ್ರಾಮಾಡಳಿತವೇ ವ್ಯವಸ್ಥೆ ಮಾಡುವಂತೆ ಸೂಚಿಸಲಾಗಿತ್ತು. ಪರೀಕ್ಷೆ ನಡೆದು ಐದು ತಿಂಗಳಾದರೂ ಗ್ರಾಮೀಣ ವಿದ್ಯಾರ್ಥಿಗಳಿಗೆ ಬರಬೇಕಾದ ಬಹುಮಾನ ಕನ್ನಡಿಯೊಳಗಿನ ಗಂಟೆಯಾಗಿದೆ.

    ಪೆನ್-ಪೆನ್‌ಸಿಲ್ ವಿತರಣೆ

    ಕೊಟ್ಟೂರು ಮತ್ತು ಕೂಡ್ಲಿಗಿ ತಾಲೂಕಿನ 36 ಗ್ರಾಪಂಗಳಲ್ಲಿ ಜರ್ಮಲಿ, ರಾಂಪುರ, ಚಿರಬಿ, ಕೆ. ಅಯ್ಯನಹಳ್ಳಿ, ಗುಂಡುಮುಣಗು ಪಂಚಾಯಿತಿ ವ್ಯಾಪ್ತಿಯ ವಿದ್ಯಾರ್ಥಿಗಳಿಗೆ ಇಂದಿಗೂ ಬಹುಮಾನ ಧನ ಸಿಕ್ಕಿಲ್ಲ. ಹದಿನೈದು ಗ್ರಾಪಂಗಳ ಪಿಡಿಒಗಳು ವಿದ್ಯಾರ್ಥಿಗಳಿಗೆ ಚೆಕ್ ವಿತರಿಸಿದರೆ, ಉಳಿದ ಪಂಚಾಯಿತಿ ಪಿಡಿಒಗಳು 10ರಿಂದ 20 ರೂ. ಬೆಲೆ ಪೆನ್ಸಿಲ್, ಪೆನ್, ಜಾಮಿಟ್ರಿ ಬಾಕ್ಸ್ ವಿತರಿಸಿ ಕೈತೊಳಿದುಕೊಂಡಿದ್ದಾರೆ. ಒಟ್ಟಾರೆ ಗ್ರಾಮೀಣ ವಿದ್ಯಾರ್ಥಿಗಳಲ್ಲಿ ಗಣಿತ ವಿಷಯದಲ್ಲಿ ಹೆಚ್ಚು ಆಸಕ್ತಿ ಮೂಡಿಸಲು ಶಿಕ್ಷಣ ಇಲಾಖೆ, ಗ್ರಾಪಂ, ಅಕ್ಷರ ಫೌಂಡೇಷನ್ ಆಯೋಜಿಸಿದ್ದ ಈ ಸ್ಪರ್ಧಾ ಪರೀಕ್ಷೆಯ ಸದುದ್ದೇಶ ಈಡೇರುವಲ್ಲಿ ವಿಫಲವಾಗಿದೆ.

    ಕೊಟ್ಟೂರು ಮತ್ತು ಕೂಡ್ಲಿಗಿ ತಾಲೂಕಿನ 36 ಗ್ರಾಪಂ ವ್ಯಾಪ್ತಿಯಲ್ಲಿ ಗಣಿತ ಸ್ಪರ್ಧಾ ಪರೀಕ್ಷೆ ನಡೆದಿದ್ದು, ಒಂದೊಂದು ಪಂಚಾಯಿತಿ ವ್ಯಾಪ್ತಿಯಲ್ಲಿ ಕನಿಷ್ಠ ಮೂರರಿಂದ ನಾಲ್ಕು ಶಾಲೆಗಳಿವೆ. ಇಲಾಖೆಗೆ ಬಂದ ವರದಿಯಂತೆ ಐದು ಪಂಚಾಯಿತಿಗಳಲ್ಲಿ ಪರೀಕ್ಷೆ ನಡೆದು ಐದು ತಿಂಗಳಾದರೂ ವಿದ್ಯಾರ್ಥಿಗಳಿಗೆ ಬಹುಮಾನ ವಿತರಣೆಯಾಗಿಲ್ಲ. ಕೆಲ ಪಂಚಾಯಿತಿಗಳ ಪಿಡಿಒಗಳು ಚೆಕ್ ನೀಡಿದ್ದಾರೆ. ಉಳಿದವರು ಬಹುಮಾನಕ್ಕಿಂತ ಕನಿಷ್ಠ ಬೆಲೆಯ ವಸ್ತುಗಳನ್ನು ನೀಡಿದ್ದಾರೆಂಬ ವರದಿ ಬಂದಿದೆ. ಹಳ್ಳಿ ವಿದ್ಯಾರ್ಥಿಗೆ ಒಂದು ಸಾವಿರ ರೂ, ಆರುನೂರು ಮತ್ತು ನಾಲ್ಕು ನೂರು ದೊಡ್ಡಮೊತ್ತ. ಇದು ಆತನಿಗೆ ಸೇರಿದ್ದರೆ ಶಿಕ್ಷಣಕ್ಕೆ ಉತ್ತೇಜನ ನೀಡಿದಂತಾಗುತ್ತಿತ್ತು.
    ಕೆ. ಬಸವರಾಜ್

    ಶಿಕ್ಷಣ ಸಂಯೋಕರು, ಕೂಡ್ಲಿಗಿ

    ನನ್ನ ಮಗಳು ಗಣಿತ ಸ್ಪರ್ಧಾ ಪರೀಕ್ಷೆಯಲ್ಲಿ ಫಸ್ಟ್ ಬಂದಿದ್ದಾಳೆ. ಶಿಕ್ಷಕರು, ನಿಮ್ಮ ಮಗಳ ಬಹುಮಾನ ಒಂದು ಸಾವಿರ ರೂ. ಬಂದಿದ್ದು, ರಾಂಪುರ ಪಿಡಿಒ ಅವರಿಂದ ಬಹುಮಾನದ ಚೆಕ್ ಪಡೆಯಿರಿ ಎಂದರು. ಅವರನ್ನು ವಿಚಾರಿಸಿದರೆ ಚೆಕ್ ಬುಕ್ ಖಾಲಿಯಾಗಿದೆ. ಪರೀಕ್ಷೆಯಲ್ಲಿ ಫಸ್ಟ್, ಸೆಕೆಂಡ್, ಥರ್ಡ್ ಬಂದವರನ್ನ ನಾವೇ ಪಂಚಾಯಿತಿಗೆ ಕರೆಸಿ ಬಹುಮಾನದ ಚೆಕ್ ವಿತರಿಸುತ್ತೇವೆ. ನಾಳೆ ಬನ್ನಿ, ನಾಡಿದ್ದು ಬನ್ನಿ ಎಂದು ಐದು ತಿಂಗಳಿಂದ ಹೇಳುತ್ತಲೇ ಬರುತ್ತಿದ್ದಾರೆ. ಜನಪ್ರತಿನಿಧಿ, ಗಣ್ಯರಿಂದ ಹೇಳಿಸಿದರೂ, ಅವರದು ಒಂದೇ ಉತ್ತರ ಚೆಕ್ ಪುಸ್ತಕವಿಲ್ಲ ಎಂಬುದಾಗಿದೆ.
    ಅಣಜಿ ಉಮೇಶ
    ಸುಟ್ಟಕೋಡಿಹಳ್ಳಿ, ಕೊಟ್ಟೂರು ತಾಲೂಕು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts