More

    ತ್ರಿವೇಣಿ ಸಂಗಮದಲ್ಲಿ ನಾರಿಯರ ಜಲಸತ್ಯಾಗ್ರಹ

    ಅಶೋಕ ಶೆಟ್ಟರ
    ಕೂಡಲಸಂಗಮ: ಬಡಕುಟುಂಬಗಳನ್ನು ಬೀದಿಗೆ ತಂದು ನಿಲ್ಲಿಸಿ ಮಕ್ಕಳು ಮಡದಿಯರನ್ನು ಅನಾಥರನ್ನಾಗಿಸುವ ಮದ್ಯವನ್ನು ರಾಜ್ಯದಲ್ಲಿ ಸಂಪೂರ್ಣ ನಿಷೇಧ ಮಾಡಬೇಕು ಎಂದು ಆಗ್ರಹಿಸಿ ರಾಜ್ಯದ 15 ಜಿಲ್ಲೆಗಳ ಒಂದು ಸಾವಿರಕ್ಕೂ ಅಧಿಕ ಮಹಿಳೆಯರು ವಿನೂತನ ಜಲಸತ್ಯಾಗ್ರಹ ನಡೆಸುವ ಮೂಲಕ ಸರ್ಕಾರದ ಕಣ್ಣು ತೆರೆಸಲು ಮುಂದಾಗಿದ್ದಾರೆ.

    ಕೃಷ್ಣಾ ಮತ್ತು ಮಲಪ್ರಭಾ ನದಿಗಳ ಸಂಗಮವಾಗಿರುವ ಬಾಗಲಕೋಟೆ ಜಿಲ್ಲೆ ಹುನಗುಂದ ತಾಲೂಕಿನ ಕ್ರಾಂತಿಯೋಗಿ ಅಣ್ಣ ಬಸವಣ್ಣನ ಐಕ್ಯಸ್ಥಳ ಕೂಡಲಸಂಗಮದಲ್ಲಿ ನಾರಿಮಣಿಗಳು ಕ್ರಾಂತಿಕಾರಕ ಹೆಜ್ಜೆ ಇಟ್ಟಿದ್ದಾರೆ. ಮಂಗಳವಾರ ಎದೆ ಎತ್ತರದವರೆಗೂ ನೀರಲ್ಲಿ ನಿಂತು ಮದ್ಯಪಾನ ಮತ್ತು ಮದ್ಯ ಮಾರಾಟ ನಿಷೇಧಕ್ಕೆ ಆಗ್ರಹಿಸಿದ್ದಾರೆ.

    ಮದ್ಯ ನಿಷೇಧ ಆಂದೋಲನದ ಭಾಗವಾಗಿ ಉತ್ತರ ಕರ್ನಾಟಕದ ಎಲ್ಲ ಜಿಲ್ಲೆಗಳಿಂದಲೂ ಅಂದಾಜು ಒಂದು ಸಾವಿರ ಮಹಿಳೆಯರು ಹೋರಾಟ ಬೆಂಬಲಿಸಿ ಆಗಮಿಸಿದ್ದಾರೆ. ನೂರಕ್ಕೂ ಅಧಿಕ ಮಹಿಳೆಯರು ನದಿಯಲ್ಲಿ ನಿಂತುಕೊಂಡು ಜಲಸತ್ಯಾಗ್ರಹ ನಡೆಸುತ್ತಿದ್ದಾರೆ. ಬೆಳಗ್ಗೆ 11 ಗಂಟೆಯಿಂದ ಸಂಜೆ 4ಗಂಟೆವರೆಗೂ ಮಕ್ಕಳಾದಿಯಾಗಿ ವೃದ್ಧರವರೆಗೂ ನೂರಾರು ಮಹಿಳೆಯರು ನದಿಯಲ್ಲಿ ನಿಂತಿದ್ದರು. ಬುಧವಾರ ಸಹ ಈ ಜಲಸತ್ಯಾಗ್ರಹ ಮುಂದುವರಿಸಲಿದ್ದಾರೆ. ಮೊದಲ ದಿನ ಧರಣಿಗೆ 500 ರಷ್ಟು ಇದ್ದ ಮಹಿಳೆಯರ ಸಂಖ್ಯೆ ಮಂಗಳವಾರ ಜಲಸತ್ಯಾಗ್ರಹದ ವೇಳೆ ದುಪ್ಪಟ್ಟು ಆಗಿತ್ತು.

    ನಾಲ್ಕು ದಿನಗಳ ಹೋರಾಟ
    ಮದ್ಯ ನಿಷೇಧಕ್ಕೆ ಆಗ್ರಹಿಸಿ ಕೂಡಲಸಂಗಮದಲ್ಲಿ ನಾಲ್ಕು ದಿನಗಳ ಹೋರಾಟವನ್ನು ಮಹಿಳೆಯರು ಹಮ್ಮಿಕೊಂಡಿದ್ದಾರೆ. ಸೋಮವಾರ ಧರಣಿ ಆರಂಭಿಸಿದ್ದು, ರಾಯಚೂರಿನ ರಂಜಾನಬಿ, ರೇಣುಕಮ್ಮ, ಅಭಯ, ಬಳ್ಳಾರಿಯ ಕೊಟ್ರಮ್ಮ ಮತ್ತು ಶಂಕ್ರಮ್ಮ ಉಪವಾಸ ಕುಳಿತಿದ್ದಾರೆ.
    ಮಂಗಳವಾರ ಮತ್ತು ಬುಧವಾರ ಜಲಸತ್ಯಾಗ್ರಹ ನಡೆಸಿ ಜ.30ರಂದು ರಾಷ್ಟ್ರಪಿತ ಮಹಾತ್ಮ ಗಾಂಧಿ ಪುಣ್ಯತಿಥಿ ದಿನದಂದು ಮದ್ಯಪಾನ ನಿಷೇಧ ಮಾಡುವಂತೆ ಆಗ್ರಹಿಸಿ ಸಮಾವೇಶ ನಡೆಸಲಿದ್ದಾರೆ. ಅಂದು ವಿವಿಧ ಮಠಾಧೀಶರು ಭಾಗವಹಿಸಲಿದ್ದಾರೆ ಎಂದು ಸಂಘಟಕರು ಹೇಳಿದ್ದಾರೆ.

    ನದಿಯಲ್ಲಿ ಮೊಳಗಿದ ಘೋಷಣೆಗಳು
    ನದಿಯಲ್ಲಿ ನಿಂತುಕೊಂಡಿರುವ ಮಹಿಳೆಯರು ಹಲಿಗೆ ಬಾರಿಸಿ ಹಾಡು ಹೇಳಿ ಘೋಷಣೆ ಕೂಗಿದರು. ಬೀರು ಬೇಡ ನೀರು ಬೇಕು… ಸಾರಾಯಿ ಬೇಡ ಶಿಕ್ಷಣ ಬೇಕು… ಹೆಂಡ ಸಾರಾಯಿ ಸಹವಾಸ ಹೆಂಡತಿ ಮಕ್ಕಳು ಉಪವಾಸ ಎನ್ನುವ ನಾಮಫಲಕ ಹಿಡಿದು ಮದ್ಯಪಾನ ನಿಷೇಧ ಮಾಡಲೇಬೇಕು ಎಂದು ಒತ್ತಾಯಿಸಿದರು.

    ರಾಜ್ಯದಲ್ಲಿ ಮದ್ಯ ನಿಷೇಧ ಆಗಬೇಕು ಎನ್ನುವ ಬೇಡಿಕೆ ಇದೆ ವಿನಾ ನಮಗೆ ದುಡ್ಡು, ಹೊಲ ಕೊಡುವಂತೆ ಕೇಳುತ್ತಿಲ್ಲ. ಮದ್ಯ ಎನ್ನುವ ವಿಷದಿಂದ ಇವತ್ತು ರಾಜ್ಯದಲ್ಲಿ ಕೊಲೆ, ಸುಲಿಗೆ, ಅತ್ಯಾಚಾರಗಳು ಹೆಚ್ಚುತ್ತಿವೆ. ಕುಟುಂಬಗಳು ಬೀದಿಗೆ ಬಂದಿವೆ. ಇದನ್ನು ತಡೆಗಟ್ಟಿ ಹೆಣ್ಣುಮಕ್ಕಳು ನೆಮ್ಮದಿಯಿಂದ ಬದುಕಲು ಮದ್ಯ ನಿಷೇಧ ಮಾಡಲೇಬೇಕು. ಅಲ್ಲಿವರೆಗೂ ಹೋರಾಟದಿಂದ ಹಿಂದೆ ಸರಿಯಲ್ಲ.
    -ವಿದ್ಯಾ ಪಾಟೀಲ ಮದ್ಯ ನಿಷೇಧ ಆಂದೋಲನದ ಕಾರ್ಯಕರ್ತೆ

    ಮದ್ಯ ನಿಷೇಧಕ್ಕೆ ಆಗ್ರಹಿಸಿ ಐದು ವರ್ಷಗಳಿಂದ ಹೋರಾಟ ಮಾಡುತ್ತಿದ್ದೇವೆ. ಕಳೆದ ನವಂಬರ್‌ನಲ್ಲಿ ಬೆಂಗಳೂರಲ್ಲಿ ಹೋರಾಟ ಮಾಡಿದ್ದ ವೇಳೆ ಡಿಸಿಎಂ ಅಶ್ವತ್ಥ ನಾರಾಯಣ ಅವರು ಉಪ ಚುನಾವಣೆ ಬಳಿಕ ಸಿಎಂ ಜತೆ ಮಾತುಕತೆ ಮಾಡಿಸುವುದಾಗಿ ಭರವಸೆ ನೀಡಿದ್ದರು. ಆದರೆ, ಅದು ಈವರೆಗೂ ಆಗಿಲ್ಲ. ಈಗ ಮದ್ಯ ನಿಷೇಧಕ್ಕೆ ಸರ್ಕಾರ ಮುಂದಾಗಬೇಕು. ಮುಖ್ಯಮಂತ್ರಿಗಳು ಈ ಬಗ್ಗೆ ಚರ್ಚಿಸಲು ಸಭೆ ಕರೆಯಬೇಕು.
    -ಸ್ವರ್ಣ ಭಟ್, ಮದ್ಯ ನಿಷೇಧ ಆಂದೋಲನದ ಕಾರ್ಯಕರ್ತೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts