More

    ಕುಡಚಿ ಪುರಸಭೆ ಕಾರ್ಯಕ್ಕೆ ಮೆಚ್ಚುಗೆ

    ಕುಡಚಿ: ಬೆಳಗಾವಿ ಜಿಲ್ಲೆಯಲ್ಲಿ ಹೆಚ್ಚು ಕರೊನಾ ವೈರಸ್ ಸೋಂಕಿತ ಪ್ರಕರಣಗಳು ಕಂಡುಬಂದ ಕುಡಚಿ ಪಟ್ಟಣದಲ್ಲಿ ಪೌರ ಕಾರ್ಮಿಕರೊಂದಿಗೆ ಮುಖ್ಯಾಧಿಕಾರಿ ಎಸ್.ಎ.ಮಹಾಜನ ಹಗಲಿರುಳು ಶ್ರಮಿಸುತ್ತಿದ್ದಾರೆ. ಕರೊನಾ ಮಹಾಮಾರಿ ನಿಯಂತ್ರಣ ಸಂಬಂಧ ಅವರು ಕೈಗೊಂಡಿರುವ ಕಾರ್ಯಗಳಿಗೆ ಪಟ್ಟಣದ ಜನರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

    ಚಿಕ್ಕೋಡಿ ಉಪವಿಭಾಗಾಧಿಕಾರಿ ರವೀಂದ್ರ ಕರಲಿಂಗಣ್ಣವರ ಮಾರ್ಗದರ್ಶನ ಮಾಡುತ್ತಿದ್ದಾರೆ. ಕುಡಚಿ ಪುರಸಭೆ ಮುಖ್ಯಾಧಿಕಾರಿ ಎಸ್.ಎ. ಮಹಾಜನ ನೇತೃತ್ವದಲ್ಲಿ ಪಟ್ಟಣದ 23 ವಾರ್ಡ್‌ಗಳಲ್ಲಿ ಪುರಸಭೆ ಸಿಬ್ಬಂದಿ ಹಾಗೂ ಪೌರಕಾರ್ಮಿಕರು ಸೇರಿ ಒಟ್ಟು 40 ಜನರು 26 ದಿನಗಳಿಂದ ಪಟ್ಟಣದಲ್ಲಿ ವಾಸ್ತವ್ಯ ಹೂಡಿದ್ದು, ಸ್ವಚ್ಛತೆ ಹಾಗೂ ಜನರ ಆರೋಗ್ಯ ಕಾಪಾಡಲು ಶ್ರಮಿಸುತ್ತಿದ್ದಾರೆ. ಮಡದಿ, ಮಕ್ಕಳ ಮುಖ ನೋಡಲಾಗದಿದ್ದರೂ ಅಧಿಕಾರಿಗಳು ಕೈಗೊಂಡಿರುವ ಸೇವಾ ಕಾರ್ಯ ಪ್ರಶಂಸೆಗೆ ಒಳಗಾಗಿದೆ.

    ವಿಡಿಯೋ ಕಾಲ್‌ನಲ್ಲಿ ಕುಶಲೋಪರಿ: ಕುಡಚಿಯಲ್ಲಿ ಮಹಾಮಾರಿ ಕರೊನಾ ಸೋಂಕಿತ ಪ್ರಕರಣ ಪತ್ತೆಯಾದ ದಿನದಿಂದಲೂ ಅಧಿಕಾರಿಗಳು ಬೆಂಬಿಡದೆ ಕೆಲಸ ಮಾಡುತ್ತಿದ್ದಾರೆ. ತಮ್ಮ ಮನೆಗಳಿಗೂ ಹೋಗುವುದಕ್ಕೆ ಸಾಧ್ಯವಾಗದ ಹಿನ್ನೆಲೆಯಲ್ಲಿ ಪುರಸಭೆ ಅಧಿಕಾರಿಗಳು ವಿಡಿಯೋ ಕಾಲ್ ಮಾಡಿ ಉಭಯ ಕುಶಲೋಪರಿ ವಿಚಾರಿಸಿಕೊಳ್ಳುತ್ತಿದ್ದಾರೆ.
    ತಮ್ಮ ಕುಟುಂಬಸ್ಥರಿಗೆ ಧೈರ್ಯ ತುಂಬುವ ಕೆಲಸವನ್ನೂ ಅಧಿಕಾರಿಗಳು, ಪೌರ ಕಾರ್ಮಿಕರು ಮಾಡುತ್ತಿದ್ದಾರೆ.

    ಬಡವರಿಗೆ, ನಿರ್ಗತಿಕರಿಗೆ ನೀಡಲು ತಯಾರಿಸುವ ಊಟವನ್ನೇ ಪುರಸಭೆ ಅಧಿಕಾರಿಗಳು ಹಾಗೂ ಸಿಬ್ಬಂದಿ ಸೇವಿಸುತ್ತಿದ್ದಾರೆ. ಕುಡಚಿ ಪಟ್ಟಣ ಸಂಪೂರ್ಣ ಸೀಲ್‌ಡೌನ್ ಆಗಿದ್ದು, ಪುರಸಭೆ ಅಧಿಕಾರಿಗಳು ಜನರ ಸೇವೆಗೆ ಕಟಿಬದ್ಧರಾಗಿರುವುದು ಕರ್ತವ್ಯ ನಿಷ್ಠೆ ಹಾಗೂ ಬದ್ಧತೆಗೆ ಸಾಕ್ಷಿಯಾಗಿದೆ.

    ಗರ್ಭಿಣಿಯರಿಗೆ ಹೆರಿಗೆಗಾಗಿ ಹಾಗೂ ತುರ್ತು ಚಿಕಿತ್ಸೆ ಅಗತ್ಯ ಇರುವ ರೋಗಿಗಳಿಗೆ ಪಾಸ್ ನೀಡಿ ಸಂಬಂಧಿತ ಆಸ್ಪತ್ರೆಗೆ ಕಳುಹಿಸುವ ವ್ಯವಸ್ಥೆಯನ್ನು ಪುರಸಭೆ ವತಿಯಿಂದ ಮಾಡುತಿದ್ದೇವೆ. ನಾಲ್ಕು ದಿನಗಳಿಂದ ಪಟ್ಟಣದಲ್ಲಿ ಕರೊನಾ ಪೀಡಿತರ ಹೊಸ ಪ್ರಕರಣ ಪತ್ತೆಯಾಗಿಲ್ಲ. ಪಟ್ಟಣದಲ್ಲಿ ಹೈ ಅಲರ್ಟ್ ಮುಂದುವರಿದಿದ್ದು, ಸಾರ್ವಜನಿಕರು ಮನೆಯಲ್ಲಿ ಇರಬೇಕು. ಜನರಿಗೆ ಅಗತ್ಯ ವಸ್ತು ಪೂರೈಸಲು ಕ್ರಮ ಕೈಗೊಳ್ಳಲಾಗಿದೆ.
    | ಎಸ್.ಎ.ಮಹಾಜನ, ಪುರಸಭೆ ಮುಖ್ಯಾಧಿಕಾರಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts