More

    ಬಾಣಸಿಗರಾದ ಸಾರಿಗೆ ನೌಕರರು 

    ಬೆಳ್ತಂಗಡಿ: ಸಾರಿಗೆ ನೌಕರರನ್ನು ಸರ್ಕಾರಿ ನೌಕರರೆಂದು ಪರಿಗಣಿಸಬೇಕೆಂಬ ಆಗ್ರಹ ಮುಂದಿಟ್ಟು ರಾಜ್ಯಾದ್ಯಂತ ಹಮ್ಮಿಕೊಂಡ ಮುಷ್ಕರದ ಹಿನ್ನೆಲೆಯಲ್ಲಿ ಶನಿವಾರ ಧರ್ಮಸ್ಥಳ ಡಿಪೋದಿಂದ ಯಾವುದೇ ಬಸ್ ಓಡಾಟ ನಡೆಸಲಿಲ್ಲ. ಇದರಿಂದ ಧರ್ಮಸ್ಥಳ ಲಕ್ಷದೀಪೋತ್ಸವಕ್ಕೆ ನಾನಾ ಕಡೆಯಿಂದ ಬಂದ ಭಕ್ತರು ಹಿಂದೆ ತೆರಳಲು ಸಾರಿಗೆ ವ್ಯವಸ್ಥೆ ಇಲ್ಲದೆ ಕಷ್ಟಪಟ್ಟರು.

    ಮುಷ್ಕರದಿಂದ ನೂರಾರು ಸಾರಿಗೆ ಸಿಬ್ಬಂದಿ ಧರ್ಮಸ್ಥಳ ಬಸ್ ನಿಲ್ದಾಣದಲ್ಲಿ ಉಪಾಹಾರ ವ್ಯವಸ್ಥೆ ಮಾಡಿಕೊಂಡರು. ಚಾಲಕರು, ನಿರ್ವಾಹಕರು ಸೌಟು ಹಿಡಿದು ಅಡುಗೆ ಸಿದ್ಧಪಡಿಸಿದರು. ನಿಲ್ದಾಣದಲ್ಲೇ ಪ್ರಯಾಣಿಕರಿಗೂ ಉಪಾಹಾರ ವ್ಯವಸ್ಥೆ ಮಾಡಿದರು. ಎರಡನೇ ಶನಿವಾರ ಆದ್ದರಿಂದ ಧರ್ಮಸ್ಥಳಕ್ಕೆ ಬರುವ ಭಕ್ತರಿಗೆ ಅಡಚಣೆಯಾಗಿದೆ. ವಿಶೇಷ ಬಸ್‌ಗಳ ವ್ಯವಸ್ಥೆಯೂ ಸ್ಥಗಿತವಾಗಿತ್ತು. ಶುಕ್ರವಾರ ಸಹಜಸ್ಥಿತಿಯಲ್ಲಿದ್ದ ಕೆಎಸ್‌ಆರ್‌ಟಿಸಿ ಬಸ್ ಓಡಾಟ ಶನಿವಾರ ನೌಕರರ ಮುಷ್ಕರ ಪರಿಣಾಮ ಸ್ಥಗಿತಗೊಂಡಿತು.

    ಪುತ್ತೂರು ವಿಭಾಗಕ್ಕೂ ತಟ್ಟಿದ ಬಿಸಿ
    ಪುತ್ತೂರು: ಕೆಎಸ್‌ಆರ್‌ಟಿಸಿ ಬಸ್ ನೌಕರರ ಮುಷ್ಕರದ ಬಿಸಿ ಪುತ್ತೂರು ವಿಭಾಗಕ್ಕೂ ತಟ್ಟಿದೆ. ಪುತ್ತೂರು ಕೆಎಸ್‌ಆರ್‌ಟಿಸಿ ವಿಭಾಗ ವ್ಯಾಪ್ತಿಯಲ್ಲಿ ಶನಿವಾರ ಯಾವುದೇ ಬಸ್ ಓಡಾಟ ಮಾಡಿಲ್ಲ. ಗ್ರಾಮಾಂತರ ಪ್ರದೇಶಗಳಲ್ಲಿ ಶುಕ್ರವಾರ ತಂಗಿದ್ದ ಬಸ್‌ಗಳು ಶನಿವಾರ ಬೆಳಗ್ಗೆ ಪುತ್ತೂರು ಬಸ್ ನಿಲ್ದಾಣಕ್ಕೆ ಬಂದು ಪ್ರಯಾಣ ಮೊಟಕುಗೊಳಿಸಿದವು. ಚಾಲಕ ಮತ್ತು ನಿರ್ವಾಹಕರು ಮುಷ್ಕರದಲ್ಲಿ ಭಾಗವಹಿಸಿದರು. ವಿಭಾಗ ವ್ಯಾಪ್ತಿಯ ಮಡಿಕೇರಿ, ಸುಳ್ಯ, ಪುತ್ತೂರು, ಧರ್ಮಸ್ಥಳ, ಬಿ.ಸಿ.ರೋಡ್ ಘಟಕಗಳೂ ಪಾಲ್ಗೊಂಡವು. ಮುಷ್ಕರದಿಂದ ಪ್ರಯಾಣಿಕರಿಗೆ ತೊಂದರೆ ಉಂಟಾಯಿತು. ಪುತ್ತೂರಿನ ಸೀಮಿತ ಮಾರ್ಗಸೂಚಿಯಲ್ಲಿ ಖಾಸಗಿ ಬಸ್‌ಗಳು, ಖಾಸಗಿ ಸಿ.ಸಿ. ಬಸ್‌ಗಳು, ಕೇರಳ ಸಾರಿಗೆ ಮಲಬಾರ್ ಬಸ್‌ಗಳು, ಟೂರಿಸ್ಟ್ ಟೆಂಪೋಗಳು ಓಡಾಟ ನಡೆಸಿವೆ. ಕೆಎಸ್‌ಆರ್‌ಟಿಸಿ ಪುತ್ತೂರು ಘಟಕದಿಂದ ಶನಿವಾರ ಮಧ್ಯಾಹ್ನ ನಗರದ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಲ್ಲಿ ನೌಕರರು ಶಾಂತಿಯುತವಾಗಿ ಧರಣಿ ಕೈಗೊಂಡರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts