More

    ಬಾರದ ಕೆಎಸ್‌ಆರ್‌ಟಿಸಿ ಬಸ್, ಗ್ರಾಮೀಣ ಪ್ರದೇಶಕ್ಕೆ ಸಮಸ್ಯೆ

    ಬಿ.ರಾಘವೇಂದ್ರ ಪೈ ಗಂಗೊಳ್ಳಿ

    ಕರೊನಾ ನಂತರ ಅನೇಕ ಕಡೆ ರಾಜ್ಯ ಸಾರಿಗೆ ಬಸ್‌ಗಳು ಸಂಚಾರ ಆರಂಭಿಸಿದ್ದರೂ ಕುಂದಾಪುರ ಕೆಎಸ್‌ಆರ್‌ಟಿಸಿ ಅಧಿಕಾರಿಗಳು ಈ ನಿಟ್ಟಿನಲ್ಲಿ ಇನ್ನೂ ಜಡ ಬಿಟ್ಟಿಲ್ಲ.
    ಲಾಕ್‌ಡೌನ್ ತೆರವಾದ ಬಳಿಕ ಬಳಿಕ ಹಂತಹಂತವಾಗಿ ಸಾರಿಗೆ ಕ್ಷೇತ್ರ ಹಳಿಗೆ ಬರುತ್ತಿದ್ದರೆ, ಕೆಎಸ್‌ಆರ್‌ಟಿಸಿ ಎಲ್ಲ ಬಸ್‌ಗಳನ್ನು ರಸ್ತೆಗೆ ಇಳಿಸಿಲ್ಲ. ಬಹುತೇಕ ಎಲ್ಲ ಖಾಸಗಿ ಬಸ್‌ಗಳು ಸಂಚಾರ ಆರಂಭಿಸಿದ್ದರೂ ಕೆಎಸ್‌ಆರ್‌ಟಿಸಿ ಬಸ್‌ಗಳು ಗ್ರಾಮೀಣ ಭಾಗದಲ್ಲಿ ಸಂಚರಿಸಲು ಮುಂದಾಗಿಲ್ಲ. ಉಡುಪಿ ಜಿಲ್ಲೆಯಲ್ಲಿ ಹೆಚ್ಚು ಗ್ರಾಮಾಂತರ ಸಾರಿಗೆ ಅವಲಂಬಿಸಿರುವುದು ಕುಂದಾಪುರ ಹಾಗೂ ಬೈಂದೂರು ತಾಲೂಕಿನ ಜನ. ಈ ಎರಡು ತಾಲೂಕಿನ ಗ್ರಾಮೀಣ ಪ್ರದೇಶಗಳ ಜನರು ಕೆಎಸ್‌ಆರ್‌ಟಿಸಿ ಬಸ್ಸನ್ನೇ ಹೆಚ್ಚು ನಂಬಿಕೊಂಡಿದ್ದಾರೆ. ಹಿಂದಿನ ಸರ್ಕಾರದ ಅವಧಿಯಲ್ಲಿ ಈ ಎರಡೂ ತಾಲೂಕಿನ ಗ್ರಾಮೀಣ ಪ್ರದೇಶಗಳಿಗೆ ಕೆಎಸ್‌ಆರ್‌ಟಿಸಿ ಬಸ್ ಸೌಲಭ್ಯ ಸಿಕ್ಕಿತ್ತು. ಆದರೆ ಲಾಕ್‌ಡೌನ್ ಸಂದರ್ಭ ನಿಂತ ಬಸ್ ಸಂಚಾರ ಮತ್ತೆ ಆರಂಭವಾಗಿಯೇ ಇಲ್ಲ. ಕೆಎಸ್‌ಆರ್‌ಟಿಸಿ ಅಧಿಕಾರಿಗಳಿಗೆ ಹಿಡಿದ ಜಡ ಬಿಡಿಸುವವರು ಯಾರು ಎಂಬ ಪ್ರಶ್ನೆ ಎಲ್ಲೆಡೆ ಕೇಳಿಬರುತ್ತಿವೆ.

    ಗ್ರಾಮೀಣ ಪ್ರದೇಶಕ್ಕೆ ಕೆಎಸ್‌ಆರ್‌ಟಿಸಿ ಬಸ್ ಸಂಚಾರ ಪ್ರಾರಂಭಿಸುವಲ್ಲಿ ವಿಳಂಬವಾಗಲು ಖಾಸಗಿ ಬಸ್ ಮಾಲೀಕರ ಲಾಬಿ ಇದೆ ಎಂದು ಕೆಲವೆಡೆ ಸಾರ್ವಜನಿಕರು ಆರೋಪಿಸಿದ್ದಾರೆ. ಇನ್ನೊಂದೆಡೆ ಕೆಎಸ್‌ಆರ್‌ಟಿಸಿ ಹಿರಿಯ ಅಧಿಕಾರಿಗಳು ಕೂಡ ಬಸ್ ಸಂಚಾರ ಪುನರಾರಂಭದ ವಿಷಯದಲ್ಲಿ ಸಮರ್ಪಕ ಉತ್ತರ ನೀಡುತ್ತಿಲ್ಲ. ಶಾಲಾ -ಕಾಲೇಜುಗಳು ಪೂರ್ಣ ಪ್ರಮಾಣದಲ್ಲಿ ಪ್ರಾರಂಭವಾದ ಬಳಿಕವೇ ಬಸ್ ಸಂಚಾರ ಆರಂಭಿಸುವುದಾಗಿ ಹೇಳುತ್ತಿದ್ದಾರೆ. ಆದರೆ ಗ್ರಾಮೀಣ ಪ್ರದೇಶದ ಜನ ಬಸ್ ಇಲ್ಲದೆ ತೊಂದರೆ ಅನುಭವಿಸುತ್ತಿರುವ ಬಗ್ಗೆ ಅಧಿಕಾರಿಗಳ ಬಳಿ ಉತ್ತರವಿಲ್ಲ.
    ಖಾಸಗಿ ಬಸ್‌ಗಳು ಎಲ್ಲ ಕಡೆಯಲ್ಲೂ ಸಂಚಾರ ಆರಂಭಿಸಿದ್ದರೂ ಕೆಎಸ್‌ಆರ್‌ಟಿಸಿ ಸಂಚಾರ ಪುನರಾರಂಭ ವಿಳಂಬವಾಗಲು ವಿವಿಧ ಕಾರಣ ನೀಡುತ್ತಿದೆ. ಜನರಿಗೆ ಬಸ್ ಸೌಲಭ್ಯ ಒದಗಿಸಲು ಕ್ರಮ ಕೈಗೊಳ್ಳಬೇಕಾದ ಜನಪ್ರತಿನಿಧಿಗಳೂ ಸುಮ್ಮನಿದ್ದಾರೆ. ಹಾಗಾದರೆ ಕೆಎಸ್‌ಆರ್‌ಟಿಸಿ ಅಧಿಕಾರಿಗಳ ಚಳಿ ಬಿಡಿಸುವವರು ಯಾರು ಎಂಬ ಪ್ರಶ್ನೆ ಜನರದ್ದು.

    97ರಲ್ಲಿ 78 ಬಸ್ ಓಡಾಟ
    ಕುಂದಾಪುರ ಕೆಎಸ್‌ಆರ್‌ಟಿಸಿ ಡಿಪೋದಿಂದ 97 ಬಸ್‌ಗಳು ಸಂಚರಿಸುತ್ತಿದ್ದವು. ಲಾಕ್‌ಡೌನ್ ಕಳೆದ ಬಳಿಕ 78 ಬಸ್‌ಗಳು ಸಂಚರಿಸುತ್ತಿದ್ದು, ಗ್ರಾಮೀಣ ಭಾಗದ 19 ಬಸ್‌ಗಳ ಓಡಾಟ ಸ್ಥಗಿತಗೊಂಡಿವೆ.

    ವಿದ್ಯಾರ್ಥಿಗಳಿಗೆ ತೊಂದರೆ
    ಅಮಾಸೆಬೈಲು, ಸಿದ್ದಾಪುರ, ಕೊಲ್ಲೂರು, ತಾರಾಪತಿ, ಬೋಳಂಬಳ್ಳಿ, ದೊಂಬೆ, ಶಂಕರನಾರಾಯಣ, ಜಡ್ಕಲ್, ವಂಡ್ಸೆ ಭಾಗಗಳಿಂದ ಕುಂದಾಪುರ, ಬೈಂದೂರು ಹಾಗೂ ಉಡುಪಿಯ ಕಾಲೇಜಿಗೆ ಬರುವ ವಿದ್ಯಾರ್ಥಿಗಳಿಗೆ ಬಸ್ ಇಲ್ಲದೆ ಸಮಸ್ಯೆ ಆಗುತ್ತಿದೆ. ಅಲ್ಲದೆ ಕೆಲವು ಗ್ರಾಮೀಣ ಪ್ರದೇಶಗಳಿಂದ ಕೆಲಸಕ್ಕೆಂದು ನಗರ ಭಾಗಕ್ಕೆ ತೆರಳುವ ಜನರಿಗೂ ಸಮಸ್ಯೆ ಉಂಟಾಗುತ್ತಿದೆ.

    ಖಾಸಗಿ ಬಸ್ಸೂ ಇಲ್ಲ!
    ಬೈಂದೂರು ಮತ್ತು ಕುಂದಾಪುರ ತಾಲೂಕಿನ ಒಳಭಾಗದಲ್ಲಿ ಖಾಸಗಿ ಬಸ್‌ಗಳ ಓಡಾಟವೂ ತುಂಬ ಕಡಿಮೆ. ಕೆಲವೆಡೆ ಖಾಸಗಿ ಬಸ್ ಸಂಚಾರವೇ ಇಲ್ಲ. ಈ ಭಾಗದಲ್ಲಿ ಸರ್ಕಾರಿ ಬಸ್ ಸೌಲಭ್ಯವನ್ನೇ ಇಲ್ಲಿನ ಜನ ನೆಚ್ಚಿಕೊಂಡಿದ್ದರು. ಈಗ ಕೆಲವು ತಿಂಗಳಿನಿಂದ ಹಲವಾರು ಪ್ರದೇಶಗಳಿಗೆ ಖಾಸಗಿ ಬಸ್ ಸಂಚಾರವೂ ಇಲ್ಲ. ಸರ್ಕಾರಿ ಬಸ್ ಸಂಚಾರವೂ ಇಲ್ಲ. ಇದರಿಂದ ಜನ ಅನಿವಾರ್ಯವಾಗಿ ಆಟೋರಿಕ್ಷಾ ಆಶ್ರಯಿಸಬೇಕಾಗಿದ್ದು, ನೂರಾರು ರೂ. ಖರ್ಚು ಮಾಡಿ ಕುಂದಾಪುರ, ಬೈಂದೂರು ಮತ್ತಿತರ ಕಡೆಗಳಿಗೆ ಬರಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.

    ಸದ್ಯದ ಪರಿಸ್ಥಿತಿಯಲ್ಲಿ ಕೆಎಸ್‌ಆರ್‌ಟಿಸಿ ಬಸ್ ಓಡಿಸುವ ಸ್ಥಿತಿಯಲ್ಲಿ ಇಲ್ಲ. ಆರ್ಥಿಕ ಮುಗ್ಗಟ್ಟಿನಲ್ಲಿದೆ. ಶಾಲಾ ಕಾಲೇಜುಗಳು ಪೂರ್ಣ ಪ್ರಮಾಣದಲ್ಲಿ ಪ್ರಾರಂಭವಾದ ಬಳಿಕ ಬಸ್ ಓಡಿಸುವ ಬಗ್ಗೆ ಚಿಂತನೆ ನಡೆಸಲಾಗುವುದು. ಪರಿಸ್ಥಿತಿ ನೋಡಿ ಬಸ್ ಸಂಚಾರ ಪುನರಾರಂಭದ ಬಗ್ಗೆ ನಿರ್ಧಾರ ಕೈಗೊಳ್ಳಲಾಗುವುದು.
    ಕಮಲ್, ವಿಭಾಗೀಯ ಸಂಚಲನಾಧಿಕಾರಿ, ಕೆಎಸ್‌ಆರ್‌ಟಿಸಿ ಮಂಗಳೂರು ವಿಭಾಗ

    ಗ್ರಾಮೀಣ ಭಾಗಕ್ಕೆ ಕೆಸ್‌ಆರ್‌ಟಿಸಿ ಬಸ್ ಸಂಚಾರ ಪುನರಾರಂಭಿಸುವ ಬಗ್ಗೆ ಜಿಲ್ಲಾಧಿಕಾರಿ ಜತೆ ಚರ್ಚೆ ನಡೆಸಿದ್ದೇನೆ. ಸಚಿವರೊಂದಿಗೆ ನೇರವಾಗಿ ಚರ್ಚಿಸಿ, ಆದಷ್ಟು ಬೇಗ ಊರಿನ ಜನರಿಗೆ ಬಸ್ ಸೌಲಭ್ಯ ಸಿಗುವಂತೆ ಮಾಡಲಾಗುವುದು.
    ಬಿ.ಎಂ.ಸುಕುಮಾರ ಶೆಟ್ಟಿ, ಬೈಂದೂರು ಶಾಸಕ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts